ದಾವಣಗೆರೆ: ಕಳೆದ ಐದು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ ಶಾಸಕ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಶವ ಪತ್ತೆಯಾಗಿದೆ. ಕಡದಕಟ್ಟೆ ಬಳಿ ತುಂಗಾ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಮೊದಲಿಗೆ ಕಡದಕಟ್ಟೆಯ ತುಂಗಾ ಕಾಲುವೆ ಬಳಿ ಕಾರು ಸಂಚರಿಸಿರುವ ಕುರುಹುಗಳು ಪತ್ತೆಯಾಗಿದ್ದವು,. ಇದನ್ನು ಪೊಲೀಸರು ಪರಿಶೀಲನೆ ಮಾಡಿದ ಬಳಿಕ ಕಾರು ಸಹ ತುಂಗ ಕಾಲುವೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಕಾರಿನಲ್ಲಿ ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಮೃತದೇಹ ಸಿಕ್ಕಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿ ಇರುವ ತುಂಗಾ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ಪತ್ತೆಯಾಗಿದ್ದು, ಕ್ರೇನ್ ಬಳಸಿ ಕಾರನ್ನು ಮೇಲೆತ್ತಿದ್ದಾರೆ. ಬಳಿಕ ಕಾರಿನಲ್ಲಿ ಚಂದ್ರಶೇಖರ್ ಶವ ಸಹ ಪತ್ತೆಯಾಗಿದೆ. ಕಾರನ್ನು ಕಾಲುವೆಯಿಂದ ಮೇಲೆತ್ತಿದಾಗ ಏರ್‌ಬ್ಯಾಗ್ ಓಪನ್ ಆಗಿರುವುದು ಕಂಡುಬಂದಿದೆ.ಇನ್ನು ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಸೋದರನ ಪುತ್ರನ ಶವ ಕಂಡು ರೇಣುಕಾಚಾರ್ಯ ಅವರ ಆಕ್ರಂದನ ಮುಗಿಲುಮುಟ್ಟಿದೆ.
ಇನ್ನು ಘಟನಾ ಸ್ಥಳಕ್ಕೆ ದಾವಣಗೆರೆ ಎಸ್‌ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿದ್ದು, ಚಂದ್ರಶೇಖರ್ ಮೃತದೇಹವನ್ನು ಪೊಲೀಸರು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾರೆ. ಆದ್ರೆ, ಚಂದ್ರಶೇಖರ್ ಕಾರು ಕಾಲುವೆಗೆ ಹೇಗೆ ಬಿತ್ತು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಅಕ್ಟೋಬರ್ 30ರಂದು ನಾಪತ್ತೆಯಾಗಿದ್ದ ಚಂದ್ರು
ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರ್ ಭಾನುವಾರ (ಅಕ್ಟೋಬರ್ 30) ರಾತ್ರಿ 11.30 ರಿಂದ ನಾಪತ್ತೆಯಾಗಿದ್ದರು. ಭಾನುವಾರ ಸಂಜೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದ ಚಂದ್ರು ರಾತ್ರಿ ಊರಿಗೆ ವಾಪಸ್ ಆಗಿದ್ದ. ರಾತ್ರಿ 11 ಗಂಟೆ ಸುಮಾರಿಗೆ ದೆಹಲಿಯ ಸ್ನೇಹಿತರ ಜೊತೆ ಕೊನೆಯದಾಗಿ ಮಾತಾಡಿದ್ದಾನೆ. 11.30 ಕ್ಕೆ ಹೊನ್ನಾಳಿ ಪಟ್ಟಣದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಸಿಗ್ನಲ್ ಟ್ರೇಸ್ ಆಗಿಲ್ಲ. ಅಲ್ಲದೆ ಶಿವಮೊಗ್ಗ ದಿಂದ ನ್ಯಾಮತಿ ತಾಲ್ಲೂಕಿನ ಸುರಹೊನ್ನೆಗೆ ಬಂದ ಸಿಸಿ ಕ್ಯಾಮರಾ ಪುಟೇಜ್ ಮಾತ್ರ ಸಿಕ್ಕಿತ್ತು.. ಆದರೆ ಸುರಹೊನ್ನೆಯಿಂದ ಹೊನ್ನಾಳಿ ಗೆ ಬಂದ ಮಾಹಿತಿ ಸಿಕ್ಕಿರಲಿಲ್ಲ.. ಆದರೆ ಚಂದ್ರಶೇಖರ್ ಮೊಬೈಲ್ ಮಾತ್ರ ಹೊನ್ನಾಳಿ ಪಟ್ಟಣದ ಸರ್ಕಲ್ ನಲ್ಲಿ ಸ್ವಿಚ್ ಆಫ್ ಆಗಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Thu, 3 November 22