ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಪರಿಸ್ಥಿತಿ ಗಂಭೀರಾವಸ್ಥೆಗೆ ತಲುಪಿದ್ದರೂ ಕೆಲ ಆಸ್ಪತ್ರೆಗಳು ಮಾತ್ರ ರೋಗಿಗಳಿಂದ ಹಣ ದೋಚುವುದರಲ್ಲಿ ಮಗ್ನರಾಗಿದ್ದಾರೆ. ಬೆಂಗಳೂರಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಮೇಲೆ ಈ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದ್ದು ನಿನ್ನೆ (ಮೇ.4) ಬೆಡ್ ಬ್ಲಾಕಿಂಗ್ ದಂಧೆ ಬಯಲಾದ ಮೇಲೆ ಅನುಮಾನ ಇನ್ನಷ್ಟು ಬಲವಾಗಿದೆ. ಇದೀಗ ಬೆಂಗಳೂರು ಆಸ್ಪತ್ರೆಗಳ ಧನದಾಹದಿಂದಾಗಿ 63ವರ್ಷದ ತಂದೆಯನ್ನು ಕಳೆದುಕೊಂಡ ಮಕ್ಕಳು ವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಂದೆಯನ್ನು ಕರೆದುಕೊಂಡು 100 ಆಸ್ಪತ್ರೆಗಳನ್ನು ಸುತ್ತಿದರೂ ಆಕ್ಸಿಜನ್ ಸಿಕ್ಕಿಲ್ಲ. ಪ್ರೈವೇಟ್ ಆಸ್ಪತ್ರೆಯವರು ಒಳಗಡೆ ಬಿಟ್ಟಿಕೊಳ್ಳಲು ಹಿಂದೇಟು ಹಾಕಿದರು. ಎಲ್ಲಿ ಹೋದರೂ BU ನಂಬರ್ ಅಂತ ಕೇಳ್ತಾರೆ. ಆದ್ರೆ, 4 ದಿನ ಕಳೆದ್ರೂ ನಂಬರ್ ಜನರೇಟ್ ಆಗಿಲ್ಲ. ನೈಸರ್ಗಿಕ ಗಾಳಿ ಸಿಕ್ಕು ಅದರಿಂದಾದರೂ ತಂದೆ ಉಳಿಯಬಹುದು ಎಂದು ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಡಿದ್ದೀವಿ. ಅಂತೂ ಕೊನೆಗೆ ಸರ್ಕಾರಿ ಆಸ್ಪತ್ರೆ ಬೌರಿಂಗ್ನಲ್ಲಿ ಬೆಡ್ ಸಿಕ್ಕಿತು. ಆದ್ರೆ ಅವರುಆಕ್ಸಿಜನ್ ಕೊಡದೇ ನಮ್ಮ ತಂದೆಯನ್ನು ಸಾಯಿಸಿಯೇ ಬಿಟ್ಟರು ಎಂದು ಮೃತ ವ್ಯಕ್ತಿಯ ಮಗ ಹಾಗೂ ಮಗಳು ಆಕ್ರೋಶ ಹೊರಹಾಕಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಒಂದು ರೀತಿಯಾದ್ರೆ ಸರ್ಕಾರಿ ಆಸ್ಪತ್ರೆಗಳದ್ದು ಇನ್ನೊಂದು ರೀತಿಯ ಅವಸ್ಥೆ. ಎಲ್ಲಿ ಹೋದ್ರೂ, ಎಲ್ಲದಕ್ಕೂ ದುಡ್ಡು ದುಡ್ಡು ಅಂತ ಸಾಯ್ತಾರೆ. ಮೊಬೈಲ್ ಚಾರ್ಜ್ ಹಾಕ್ಬೇಕು ಅಂದ್ರೂ, ರೋಗಿನಾ ನೋಡ್ಬೇಕಂದ್ರೂ ದುಡ್ಡು ಕೇಳ್ತಾರೆ. ಈಗ ದುಡ್ಡು ಕೊಡ್ತೇನೆ ನಮ್ಮ ತಂದೆಯನ್ನ ವಾಪಾಸ್ ಕೊಡ್ತಾರಾ? ಕುಡಿಯೋಕೆ ನೀರು ಕೇಳಿದ್ರೆ ಕೊಡಲ್ವಂತೆ. ಡೈಪರ್ ಹಾಕಿ ಅಂತ ತಂದು ಕೊಟ್ರೆ ಅದನ್ನೂ ಹಾಕಿಲ್ಲ. ಆಸ್ಪತ್ರೆಯಲ್ಲಿ ಎಲ್ಲವನ್ನೂ ಮಾರಿಕೊಳ್ತಿದ್ದಾರೆ. ನಮ್ಮ ತಂದೆ ಮೈ ಮೇಲಿನ ಒಡವೆಗಳನ್ನೆಲ್ಲಾ ಕೊಟ್ರೂ ಅವರನ್ನ ಶವವಾಗಿ ಕೊಟ್ಟಿದ್ದಾರೆ ಅಂತ ಮೃತರ ಮಗಳು ಕಣ್ಣೀರಿಟ್ಟಿದ್ದಾರೆ.
ತಂದೆಯನ್ನ ಉಳಿಸಿಕೊಳ್ಳಲು ಹರಸಾಹಸಪಟ್ಟರೂ ಪ್ರಯೋಜನವಾಗಿಲ್ಲ. ಆಕ್ಸಿಜನ್ ಸಿಗದೇ ನಮ್ಮ ತಂದೆ ತೀರಿಕೊಂಡಿದ್ದಾರೆ. ಅವರ ಸಾವಿಗೆ ಈ ಸರ್ಕಾರವೇ ಕಾರಣ. ನಾವು ಇಬ್ಬರು ಮಕ್ಕಳಿದ್ದರೂ ತಂದೆಯನ್ನ ಉಳಿಸಿಕೊಳ್ಳಲಾಗಲಿಲ್ಲ. ಈ ರೀತಿ ವ್ಯವಸ್ಥೆ ಇದ್ದರೆ ಏನು ಮಾಡ್ಬೇಕು? ಬರೀ ಹಣಕ್ಕಾಗಿ ಆಸ್ಪತ್ರೆಗಳು ಕೆಲಸ ಮಾಡ್ತಾವಾ? ಅಲ್ಲಿ ಇರುವವರಿಗೆ ಹಣ ಕೊಟ್ಟರೆ ಸತ್ತವರನ್ನೂ ಬದುಕಿಸ್ತಾರಾ? ಎಂದು ದುಃಖ ಹೊರಹಾಕಿದ್ದಾರೆ.
ಕರ್ನಾಟಕದಿಂದ ಮಹಾರಾಷ್ಟ್ರ, ತೆಲಂಗಾಣಕ್ಕೆ ಆಕ್ಸಿಜನ್ ಕಳ್ಳ ಸಾಗಣೆ; ಕಲಬುರಗಿ ಜಿಲ್ಲಾಡಳಿತದಿಂದ ತಡರಾತ್ರಿ ಕಾರ್ಯಾಚರಣೆ