ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು? ಪೊಲೀಸರಿಗೆ ಮಾರ್ಗಸೂಚಿ ಬಿಡುಗಡೆ

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಿಂದ ಪೊಲೀಸರ ಮೇಲೆ ಸಾಕಷ್ಟು ಆರೋಪಗಳು ಕೇಳಿಬರುತ್ತಿರುವುದು ವರದಿಯಾಗಿವೆ. ಹೀಗಾಗಿ ರಾಜ್ಯದ ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಎಂಎ ಸಲೀಂ ಮಹತ್ವದ ಸೂಚನೆ ನೀಡಿದ್ದಾರೆ. ಪೊಲೀಸರು ಜನರ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು? ಪೊಲೀಸರಿಗೆ ಮಾರ್ಗಸೂಚಿ ಬಿಡುಗಡೆ
ಪ್ರಾತಿನಿಧಿಕ ಚಿತ್ರ

Updated on: Oct 24, 2025 | 8:31 PM

ಬೆಂಗಳೂರು, ಅಕ್ಟೋಬರ್​ 24: ಸಾರ್ವಜನಿಕರ ಭದ್ರತೆಗಾಗಿಯೇ ಪೊಲೀಸ್ (police) ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ. ಆದರೆ ಇದೇ ಪೊಲೀಸರು ಕೆಲ ಸಂದರ್ಭಗಳಲ್ಲಿ ಸಾರ್ವಜನಿಕರನ್ನು ಭಯ ಬೀಳಿಸುವಂತಹ ಘಟನೆಗಳು ವರದಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಪೊಲೀಸರು ಸಾರ್ವಜನಿಕರ ಮೇಲೆ ದರ್ಪ, ಹಲ್ಲೆ ಮಾಡಿರುವುದೂ ವರದಿ ಆಗಿವೆ. ಈ ನಿಟ್ಟಿನಲ್ಲಿ ರಾಜ್ಯದ ಪೊಲೀಸರಿಗೆ ಡಿಜಿ ಮತ್ತು ಐಜಿಪಿ ಎಂಎ ಸಲೀಂ (ma salim) ಮಹತ್ವದ ಸೂಚನೆ ನೀಡಿದ್ದು, ಜನರ ಜೊತೆಗೆ ಸೌಜನ್ಯದಿಂದ ವರ್ತಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ.

ಸುತ್ತೋಲೆಯಲ್ಲಿ ಏನಿದೆ?

  • ಕಾರ್ಯವಿಧಾನಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪೊಲೀಸ್ ಠಾಣೆಗೆ ಭೇಟಿ ನೀಡುವ ಯಾವುದೇ ವ್ಯಕ್ತಿಯ ಹಿನ್ನೆಲೆಯನ್ನು ಗಮನಿಸಬಾರದು. ಎಲ್ಲರನ್ನೂ ಸಮಾನವಾಗಿ ಪರಿಗಣಿಸಬೇಕು.
  • ಸಾರ್ವಜನಿಕರ ಕುಂದುಕೊರತೆ ತಾಳ್ಮೆಯಿಂದ ಆಲಿಸಿಸಬೇಕು. ಕಾನೂನಿನ ಪ್ರಕಾರ ಕಾಲವಿಳಂಬವಿಲ್ಲದೇ ದೂರು ದಾಖಲಿಸಬೇಕು.
  • ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾವಾಗಲೂ ಸೌಜನ್ಯ ಮತ್ತು ಘನತೆಯಿಂದ ವರ್ತಿಸಬೇಕು.

ಇದನ್ನೂ ಓದಿ: ಪೊಲೀಸ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ನೀಡಿದ ಪರಮೇಶ್ವರ್

  • ಯಾವ ಸಂದರ್ಭದಲ್ಲೂ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಂದ, ಯಾವುದೇ ರೀತಿಯ ಬೇಡಿಕೆ ಇಡುವುದರಿಂದ ಅಥವಾ ಯಾವುದೇ ಅಕ್ರಮ ಸಹಾಯ, ಲಾಭವನ್ನು ಸ್ವೀಕರಿಸುವುದರಿಂದ ಸಂಪೂರ್ಣವಾಗಿ ದೂರವಿರಬೇಕು.
  • ಕರ್ತವ್ಯದ ಸಮಯದಲ್ಲಿ, ಕರ್ತವ್ಯ ಮುಗಿದ ನಂತರವೂ ನೈತಿಕವಾಗಿ ಇತರರಿಗೆ ಮಾದರಿಯಾಗುವಂತೆ ಇದ್ದು ಇಲಾಖೆಯ ನೀತಿ ನಿಯಮಗಳನ್ನು ಎತ್ತಿಹಿಡಿಯಬೇಕು.
  • ಸ್ಟೇಷನ್ ಹೌಸ್ ಡೈರಿಗಳು ಮತ್ತು ಕೇಸ್ ಫೈಲ್​ಗಳಲ್ಲಿ ನಿಖರ ಮತ್ತು ಕೇಂದ್ರೀಕರಿಸಿದ ದಾಖಲೆಗಳನ್ನು ಕಾಯ್ದುಕೊಳ್ಳಬೇಕು ಮತ್ತು ಸಮಗ್ರವಾಗಿ ನಿರ್ವಹಿಸಬೇಕು.
  • ತನಿಖಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಮತ್ತು ಪ್ರತಿ ಹಂತದಲ್ಲೂ ಜವಾಬ್ದಾರಿಯಿಂದ ಕಾರ್ಯನಿರ್ವಹಣೆ ಮಾಡಬೇಕು. ಯಾವುದೇ ನಾಗರಿಕರಿಗೆ ಅನಗತ್ಯವಾಗಿ ತೊಂದರೆ ನೀಡಬಾರದು.
  • ಸಂತ್ರಸ್ಥರು, ಮಹಿಳೆಯರು, ಹಿರಿಯ ನಾಗರಿಕರಿಗೆ ಮತ್ತು ಮಕ್ಕಳೊಂದಿಗೆ ವಿಶೇಷ ಕಾಳಜಿಯಿಂದ ಮತ್ತು ಸೂಕ್ಷತೆಯಿಂದ ವರ್ತಿಸಬೇಕು.
  • ಸಾರ್ವಜನಿಕರ ದೂರುಗಳ ಸ್ಥಿತಿ ಮತ್ತು ಬಾಕಿ ಇರುವ ಪ್ರಕರಣಗಳ ಕುರಿತು ನಾಗರಿಕರಿಗೆ ಮಾಹಿತಿ ನೀಡಬೇಕು. ಕರ್ತವ್ಯಕ್ಕೆ ಹಾಜರಾಗುವುದು ಮತ್ತು ಅಧಿಕೃತ ಕಾರ್ಯಗಳನ್ನು ನಿರ್ವಹಿಸುವಲ್ಲಿ ಶಿಸ್ತಿನಿಂದ ಸಮಯ ಪಾಲನೆ ಮಾಡಬೇಕು.
  • ಪೊಲೀಸ್-ಸಾರ್ವಜನಿಕ ಸಂವಹನದಲ್ಲಿ ನ್ಯಾಯಸಮ್ಮತೆಯನ್ನು ಎತ್ತಿಹಿಡಿಯಲು ಸಮವಸ್ತ್ರದ ಮೇಲೆ ಧರಿಸುವ ಕ್ಯಾಮೆರಾಗಳನ್ನು ಮತ್ತು ಲಭ್ಯವಿರುವ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಬೇಕು.
  • ಎಲ್ಲಾ ಅಧಿಕೃತ ವಿಷಯಗಳಲ್ಲಿ ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರಿಗಳಿಗೆ ಪೂರ್ಣ ಸಹಕಾರವನ್ನು ನೀಡಿ, ಶೋಧ, ಬಂಧನ ಅಥವಾ ವಿಚಾರಣೆಯ ಸಮಯದಲ್ಲಿ ಸಾರ್ವಜನಿಕರ ಖಾಸಗಿತನ ಮತ್ತು ಘನತೆಯನ್ನು ಗೌರವಿಸಿ, ಅಧಿಕಾರದ ದುರುಪಯೋಗ ಅಥವಾ ದೌರ್ಜನ್ಯದಿಂದ ದೂರವಿರಿ ಮತ್ತು ಸದ್ವರ್ತನೆಗೆ ಮಾದರಿಯಾಗಿರಿ.
  • ಸಮುದಾಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಪಾರದರ್ಶಕ, ಕಾನೂನುಬದ್ಧ ಮತ್ತು ಸಹಾನುಭೂತಿಯ ಪೊಲೀಸಿಂಗ್ ಅಭ್ಯಾಸಗಳ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವುದು.
  • ಪೊಲೀಸ್ ಕಾರ್ಯಗಳ ಮೇಲೆ ಪ್ರಭಾವ ಬೀರುವ ಅಥವಾ ಭ್ರಷ್ಟಗೊಳಿಸುವ ಯಾವುದೇ ಪ್ರಯತ್ನಗಳು ಕಂಡುಬಂದಲ್ಲಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿರಿ.
  • ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಲ್ಲಿ ದೂರುದಾರರನ್ನು ಸಂಬಂಧಿಸಿದ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳದೇ, ಠಾಣೆಯಲ್ಲಿ ಶೂನ್ಯ ಪ್ರವ. ವರದಿಯನ್ನು ದಾಖಲಿಸಿ ಆ ನಂತರ ವ್ಯಾಪ್ತಿಯ ಆಧಾರದ ಮೇಲೆ ಸಂಬಂಧಪಟ್ಟ ಠಾಣೆಗ ದೂರನ್ನು ವರ್ಗಾಯಿಸುವುದು.
  • ಮಹಿಳೆಯರನ್ನು ಸಂಜೆ 6 ಗಂಟೆಯ ನಂತರ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಅಥವಾ ಹೇಳಿಕೆಯನ್ನು ನೀಡಲು ಕರೆತರಬಾರದು.

ಇದನ್ನೂ ಓದಿ: ಸಾರ್ವಜನಿಕವಾಗಿ ಕ್ಯಾಬ್​ ಡ್ರೈವರ್​​ಗೆ​​​ ಕಪಾಳಮೋಕ್ಷ ಮಾಡಿದ ಟ್ರಾಫಿಕ್​​​ ಪೊಲೀಸ್

  • ಮಹಿಳೆಯು ಒಂದು ವೇಳೆ ಆರೋಪಿಯಾಗಿದ್ದಲ್ಲಿ ಅಥವಾ ಸಂತ್ರಸ್ಥೆಯಾಗಿದ್ದಲ್ಲಿ ಆಕೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ನೆರವಿನೊಂದಿಗೆ, ಮಹಿಳೆಯ ವಾಸದ ಸ್ಥಳ, ಮನೆಯಲ್ಲಿಯೇ ವಿಚಾರಣೆ ಮಾಡಬೇಕು.
  • ಕ್ರಿಮಿನಲ್ ಪ್ರಕರಣಗಳಲ್ಲಿ ಮಹಿಳೆಯರು ಭಾಗಿಯಾದಾಗ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರಿಗೆ ಯಾವುದೇ ಅವಮಾನಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಮತ್ತು ಅವರನ್ನು ಪೊಲೀಸ್ ಠಾಣೆಯಲ್ಲಿ ಇರಿಸಬಾರದು. ಬದಲಿಗೆ ಅವರನ್ನು ರಾಜ್ಯ ಗೃಹ (ಸ್ಟೇಟ್ ಹೋಮ್) ಆಶ್ರಯ ತಾಣಗಳಲ್ಲಿ ಇರಿಸಬೇಕು.
  • ಉತ್ತಮವಾಗಿ ನೀಟಾದ ಸಮವಸ್ತ, ಮಫ್ತಿ ಬಟ್ಟೆಗಳನ್ನು ಧರಿಸುವ ಪೊಲೀಸ್ ಅಧಿಕಾರಿಯೂ ಸಾರ್ವಜನಿಕರಿಂದ ಉತ್ತಮ ಗೌರವವನ್ನು ಪಡೆಯುತ್ತಾನೆ. ಅಧಿಕಾರಿ ಮತ್ತು ಸಿಬ್ಬಂದಿಗಳು ನೀಟಾದ Turn out ಹೊಂದಿರಬೇಕು. ಇದು ಪೊಲೀಸ್ ಅಧಿಕಾರಿಯ ವ್ಯಕ್ತಿತ್ವ ಹಾಗೂ ಕಾರ್ಯದಕ್ಷತೆಗಳನ್ನು ಉತ್ತೇಜಿಸುತ್ತದೆ. ನೀಟಾದ ಸಮವಸ್ತ್ರವು ವೃತ್ತಿಪರತೆ ಮತ್ತು ಶಿಸ್ತಿನ ಪ್ರತಿಬಿಂಬ ಅಷ್ಟೇ ಅಲ್ಲ ಪರಿಣಾಮಕಾರಿ ಪೊಲೀಸ್ ಕಾರ್ಯನಿರ್ವಹಣೆಗೆ ಅತ್ಯಗತ್ಯ.
  • ಸಮಾಜದಲ್ಲಿ ಪೊಲೀಸ್ ಇಲಾಖೆ ಬಗ್ಗೆ ಉತ್ತಮ ಅಭಿಪ್ರಾಯ ಮೂಡಬೇಕು.
  • ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯಿಂದ ಕೆಲಸ ಮಾಡುವುದು.
  • ಪೊಲೀಸರ ನಡವಳಿಕೆಯಲ್ಲಿ ಸೌಜನ್ಯ ಮತ್ತು ಘನತೆ ಎದ್ದು ಕಾಣಬೇಕು.
  • ಸಾರ್ವಜನಿಕರ ಮೇಲೆ ಬಲ ಪ್ರಯೋಗ ಮಾಡುವುದು ಅಥವಾ ದರ್ಪದಿಂದ ವರ್ತಿಸುವುದು ಇಲಾಖೆಯ ಘನತೆಗೆ ತಕ್ಕುದಾದ ನಡವಳಿಕೆಯಲ್ಲ.
  • ಹಕ್ಕುಗಳಿಗೆ ಗೌರವ ನೀಡುವುದು ಮತ್ತು ಸಂಯಮದಿಂದ ವರ್ತಿಸಬೇಕು. ಇದು ಇಲಾಖೆಯ ಘನತೆ ಹೆಚ್ಚಿಸಿ ಜನರಲ್ಲಿ ಬಗ್ಗೆ ಗೌರವ ಮೂಡುವಂತೆ ಮಾಡುತ್ತದೆ.

ವರದಿ: ವಿಕಾಸ್​ ಟಿವಿ9 ಕ್ರೈಂ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:29 pm, Fri, 24 October 25