ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 9-01-2021

| Updated By: preethi shettigar

Updated on: Jan 10, 2021 | 8:36 AM

LIVE NEWS & UPDATES 09 Jan 2021 08:59 PM (IST) ರಾಜ್ಯದಲ್ಲಿಂದು ಹೊಸದಾಗಿ 899 ಜನರಿಗೆ ಕೊರೊನಾ ದೃಢ 08:59 pm ರಾಜ್ಯದಲ್ಲಿಂದು ಹೊಸದಾಗಿ 899 ಜನರಿಗೆ ಕೊರೊನಾ ದೃಢವಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,26,767ಕ್ಕೆ ಏರಿಕೆ ಆಗಿದೆ.  ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ.  ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,138 ಜನರ ಸಾವನಪ್ಪಿದ್ದಾರೆ. 09 Jan 2021 06:51 PM (IST) ಸಿಎಂಗೆ ಇಂದಿನ ಸಭೆಯ ವಿಚಾರ ತಿಳಿಸುವೆ, ಪಾದಯಾತ್ರೆ ಕೈಬಿಡಿ […]

ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 9-01-2021
ಟಿವಿ9 ಕನ್ನಡ ಡಿಜಿಟಲ್

LIVE NEWS & UPDATES

  • 09 Jan 2021 08:59 PM (IST)

    ರಾಜ್ಯದಲ್ಲಿಂದು ಹೊಸದಾಗಿ 899 ಜನರಿಗೆ ಕೊರೊನಾ ದೃಢ

    08:59 pm ರಾಜ್ಯದಲ್ಲಿಂದು ಹೊಸದಾಗಿ 899 ಜನರಿಗೆ ಕೊರೊನಾ ದೃಢವಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9,26,767ಕ್ಕೆ ಏರಿಕೆ ಆಗಿದೆ.  ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ನಾಲ್ವರು ಮೃತಪಟ್ಟಿದ್ದಾರೆ.  ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,138 ಜನರ ಸಾವನಪ್ಪಿದ್ದಾರೆ.

  • 09 Jan 2021 06:51 PM (IST)

    ಸಿಎಂಗೆ ಇಂದಿನ ಸಭೆಯ ವಿಚಾರ ತಿಳಿಸುವೆ, ಪಾದಯಾತ್ರೆ ಕೈಬಿಡಿ

    ಸಚಿವ ಸಿ.ಸಿ.ಪಾಟೀಲ್ ಮನವಿ

    ನಾನು ಸಮುದಾಯದ ವ್ಯಕ್ತಿ, ಸರ್ಕಾರದ ಮಂತ್ರಿ. ಪಾದಯಾತ್ರೆ ಕೈಬಿಡಲು ಶ್ರೀಗಳಿಗೆ ಮನವಿ ಮಾಡಿದ್ದೇನೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.
    ಸಿಎಂ ಬಿ.ಎಸ್. ಯಡಿಯೂರಪ್ಪ ಈ ಹಿಂದೆ ಮೀಸಲಾತಿ ಕುರಿತು ಪ್ರಸ್ತಾಪಿಸಿದ್ದರು. ಆದರೆ, ತಾಂತ್ರಿಕ ಕಾರಣಗಳಿಂದ ಹಿಂಪಡೆಯಲಾಗಿತ್ತು. ಇಂದಿನ ಸಭೆಯ ವಿಚಾರಗಳನ್ನ ಸಿಎಂ ಗಮನಕ್ಕೆ ತರುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.


  • 09 Jan 2021 06:47 PM (IST)

    ಕೊವ್ಯಾಕ್ಸಿನ್ ಲಸಿಕೆ ಪಡೆದ ಸ್ವಯಂಸೇವಕ ಸಾವು

    ಮಧ್ಯಪ್ರದೇಶದಲ್ಲಿ ಕೊರನಾ ಲಸಿಕೆ ಪ್ರಯೋಗದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿದ್ದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಲಸಿಕೆ ಪಡೆದ 10 ದಿನಕ್ಕೆ ಅವರು ಮೃತರಾಗಿದ್ದು, ಅವರ ಸಾವಿಗೆ ವಿಷ ಸೇವನೆ ಕಾರಣ ಎಂದು ತಿಳಿದು ಬಂದಿದೆ.

  • 09 Jan 2021 06:28 PM (IST)

    ಯುವ ಕಾಂಗ್ರೆಸ್ ಚುನಾವಣೆ : ಡಿ.ಕೆ.ಶಿವಕುಮಾರ್ ಮಾತಿಗೆ ಸಮ್ಮತಿಸಿದ ಮಿಥುನ್ ರೈ

    ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಮಿಥುನ್ ರೈಗೆ ಕಣದಿಂದ ಹಿಂದೆ ಸರಿಯುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚಿಸಿದ್ದು, ಅವರ ಮಾತಿಗೆ ಓಗೊಟ್ಟು ಮಿಥುನ್ ರೈ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆತ್ಮೀಯ ಎಂಬ ಕಾರಣಕ್ಕೆ ಪಕ್ಷದಲ್ಲಿ ತಪ್ಪು ಸಂದೇಶ ರವಾನೆ ಆಗಬಾರದು.ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಮಿಥುನ್ ರೈ ಜತೆ ಮಹಮ್ಮದ್ ನಲಪ್ಪಾಡ್ ಮತ್ತು ಇನ್ನೂ ಇಬ್ಬರು ಸಹ ಸ್ಪರ್ಧೆಯಲ್ಲಿದ್ದು, ಚುನಾವಣಾ ಕಣ ಕಾವೇರುತ್ತಿದೆ.

  • 09 Jan 2021 06:19 PM (IST)

    ಪಶ್ಚಿಮ ಬಂಗಾಳದಲ್ಲಿ ವಾಸಿಸುವ ಎಲ್ಲರೂ ನಮ್ಮವರೇ : ರಾಜ್ಯಪಾಲ ಜಗ್ದೀಪ್ ಧಂಕರ್

    ಪಶ್ಚಿಮ ಬಂಗಾಳದಲ್ಲಿ ವಾಸಿಸುವ ಎಲ್ಲರನ್ನೂ ನಮ್ಮವರೆಂದೇ ಭಾವಿಸಬೇಕಿದೆ. ಸದ್ಯ ಹೊರ ರಾಜ್ಯದವರನ್ನು ದೂರವಿರಿಸುವ ಸಂಸ್ಕೃತಿಯಿದ್ದು ಎಲ್ಲರೂ ತಾಯಿ ಭಾರತಿಯ ಮಕ್ಕಳೇ ಆಗಿದ್ದಾರೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗ್ದೀಪ್ ಧಂಕರ್ ಹೇಳಿದ್ದಾರೆ. ಎಲ್ಲರನ್ನೂ ನಮ್ಮವರೆಂದೇ ಭಾವಿಸಲಿದ್ದೇವೆ.ನಾವೆಲ್ಲರೂ ಏಕತೆಯನ್ನು ಸಾರಬೇಕಿದೆ ಎಂದು ಅವರು ಗೃಹ ಸಚಿವ ಅಮಿತ್ ಶಾ ಭೇಟಿಯ ನಂತರ ಹೇಳಿದರು.


  • 09 Jan 2021 06:05 PM (IST)

    7 ರಾಜ್ಯಗಳಲ್ಲಿ ಹಕ್ಕಿಜ್ವರ ದೃಢ

    ಕೇರಳ, ತಮಿಳುನಾಡು, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿರುವುದನ್ನು ಕೇಂದ್ರ ಮೀನುಗಾರಿಕೆ ಮತ್ತು ಪಶುಪಾಲನೆ ಸಚಿವಾಲಯ ಖಾತ್ರಿಪಡಿಸಿದೆ.

  • 09 Jan 2021 06:00 PM (IST)

    ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಪಶ್ಚಿಮ ಬಂಗಾಳ ರಾಜ್ಯಪಾಲ

    ಗೃಹ ಸಚಿವ ಅಮಿತ್ ಶಾರನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗ್ದೀಪ್ ಧಂಕರ್ ಭೇಟಿಯಾಗಿ ಚರ್ಚಿಸಿದ್ದಾರೆ. ಭೇಟಿಯಲ್ಲಿ ಇತ್ತೀಚಿಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ನಾಯಕರ ಮೇಲೆ ಹಲ್ಲೆಯ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೇ ಬಿಜೆಪಿ ನಾಯಕರ ಮೇಲಿನ ದಾಳಿ ನಂತರ ಗೃಹ ಸಚಿವಾಲಯ ಬಂಗಾಳದ ಕಾನೂನು ಸುವ್ಯವಸ್ಥೆಯ ಕುರಿತು ವರದಿ ಕೇಳಿತ್ತು.

  • 09 Jan 2021 05:55 PM (IST)

    ಆಟಿಕೆ ಕ್ಲಸ್ಟರ್ ಯೋಜನೆ ರೂಪಿಸಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಾ?

    ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ ಆಟಿಕೆ ಕ್ಲಸ್ಟರ್ ಯೋಜನೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ‘ತಮ್ಮ ಸರ್ಕಾರದ ಯೋಜನೆಗೆ ಬಿಜೆಪಿ ಸರ್ಕಾರ ಮರು ಚಾಲನೆ ನೀಡಿದೆ’ ಎಂದಿದ್ದಾರೆ. ‘ಚೀನಾ ಹಿಡಿತದಲ್ಲಿರುವ ಜಾಗತಿಕ ಉತ್ಪಾದನೆ ಮಾರುಕಟ್ಟೆಯಲ್ಲಿ ಭಾರತವೂ ಪಾಲು ಪಡೆಯಬೇಕೆಂಬ ಉದ್ದೇಶದಿಂದ ನಾನು ಸಿಎಂ ಆಗಿದ್ದಾಗ ‘Compete With China’ ರೂಪಿಸಲಾಗಿತ್ತು. ಇದಕ್ಕಾಗಿ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ರಚಿಸಿ, ₹500 ಕೋಟಿ ಹಣ ನೀಡಲಾಗಿತ್ತು. ಸಿಎಂ ಯಡಿಯೂರಪ್ಪ ಅವರು ಆ ಕ್ಲಸ್ಟರ್‌ಗೆ ಇಂದು ಮರು ಚಾಲನೆ ನೀಡುತ್ತಿದ್ದಾರೆ!’ ಎಂದು ಅವರು ವ್ಯಂಗ್ಯವಾಡಿದ್ದಾರೆ.

  • 09 Jan 2021 05:45 PM (IST)

    ರಾಷ್ಟ್ರಪತಿ ರಾಮನಾಥ್ ಕೋವಿಂದ್​ರಿಂದ ಅನಿವಾಸಿ ಭಾರತೀಯರ ಸ್ಮರಣೆ

    16ನೇ ಪ್ರವಾಸಿ ಭಾರತೀಯ ದಿನ

    ರಾಷ್ಟ್ರಪತಿ ರಾಮನಾಥ್ ಕೋವಿಂದ್ 16 ನೇ ಪ್ರವಾಸಿ ಭಾರತೀಯ ದಿನ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಅನಿವಾಸಿ ಭಾರತೀಯರು ದೇಶಕ್ಕೆ ನೀಡಿದ ಕೊಡುಗೆ ಅಪಾರ. ತಾವು ವಾಸಿಸುವ ದೇಶ ಮತ್ತು ಭಾರತದ ಜೊತೆ ಸಾಂಸ್ಕೃತಿಕ ಸಂಬಂಧ ಬೆಳೆಯಲು ಅನಿವಾಸಿ ಭಾರತೀಯರು ಕಾರಣರಾಗಿದ್ದಾರೆ ಎಂದು ಅವರು ಸ್ಮರಿಸಿದ್ದಾರೆ.

  • 09 Jan 2021 05:39 PM (IST)

    ವಿದೇಶಿ ಕೊರೊನಾ ಲಸಿಕೆ ಪ್ರಯೋಗ ನಿಷೇಧಿಸಿದ ಇರಾನ್

    ವಿದೇಶಗಳಿಂದ ಕೊರೊನಾ ಲಸಿಕೆ ಆಮದು ನಿಷೇಧಿಸಿದ್ದ ಇರಾನ್ ಇದೀಗ ತನ್ನ ಪ್ರಜೆಗಳ ಮೇಲೆ ವಿದೇಶಿ ಕೊರೊನಾ ಲಸಿಕೆ ಪ್ರಯೋಗ ನಡೆಸುವುದನ್ನು ಸಹ ನಿಷೇಧಿಸಿದೆ. ಆದರೆ ವಿದೇಶಗಳಿಂದ ಕೊರೊನಾ ಲಸಿಕೆಯನ್ನು ತರಿಸಿಕೊಳ್ಳುವುದೇ ಇಲ್ಲ ಎಂದರ್ಥವಲ್ಲ. ಸುರಕ್ಷಿತ ಲಸಿಕೆಯನ್ನಷ್ಟೇ ಆಮದು ಮಾಡಿಕೊಳ್ಳುತ್ತೇವೆ. ಇರಾನ್ ಪ್ರಜೆಗಳು ಲಸಿಕೆ ಪ್ರಯೋಗಕ್ಕೆ ಬಲಿಪಶುಗಳಾಗದಂತೆ ಸದ್ಯ ಲಸಿಕೆ ಆಮದು ಮಾಡಿಕೊಳ್ಳುವುದಿಲ್ಲ ಎಂದು ಇರಾನ್ ತಿಳಿಸಿದೆ.

  • 09 Jan 2021 05:26 PM (IST)

    ಹಿಂದೂ ದೇಗುಲ ಧ್ವಂಸ; ಪ್ರಮುಖ ಆರೋಪಿ ಬಂಧನ

    ಪಾಕಿಸ್ತಾನದ ಹಿಂದೂ ದೇಗುಲ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಫೈಜುಲ್ಲಾ ಎಂದು ಗುರುತಿಸಲಾಗಿದ್ದು, ಈತ ದೇಗುಲ ಧ್ವಂಸಕ್ಕೆ ಪ್ರಚೋದನೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಈ ಪ್ರಕರಣದಡಿ 110 ಆರೋಪಿಗಳನ್ನು ಸಹ ಬಂಧಿಸಲಾಗಿದೆ. ಹಿಂದೂ ದೇಗುಲದ ನವೀಕರಣಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಉದ್ರಿಕ್ತ ಗುಂಪು ದೇಗುಲ ನಾಶಗೊಳಿಸಿತ್ತು.

  • 09 Jan 2021 05:20 PM (IST)

    ಹರಿಯಾಣದಲ್ಲೂ ರೈತರ ಪ್ರತಿಭಟನೆ

    ಹರಿಯಾನದ ಅಂಬಾಲಾ-ಹಿಸ್ಸಾರ್ ಹೆದ್ದಾರಿ ಬಳಿ ರೈತರು ಟ್ರ್ಯಾಕ್ಟರ್​ಗಳೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಘೋಷಣೆ ಕೂಗಿದ ರೈತರನ್ನು ನಿಯಂತ್ರಿಸಲು ಸಾಕಷ್ಟು ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿತ್ತು.

  • 09 Jan 2021 05:15 PM (IST)

    ಸಚಿವರ ಆಗಮನಕ್ಕೂ ಮುಂಚೆ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರ ಸಭೆ

    ಜನವರಿ 14 ರಿಂದ ಕೂಡಲಸಂಗಮದಿಂದ ಬೆಂಗಳೂರಿನ ವಿಧಾನಸೌಧವರೆಗೆ ಪಾದಯಾತ್ರೆ ನಡೆಸುವುದಾಗಿ ಘೋಷಿಸಿರುವ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರನ್ನು ಮನವೊಲಿಸಲು ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸಿ ಸಿ ಪಾಟೀಲ್ ಆಗಮಿಸುತ್ತಿದ್ದಾರೆ. ಹೀಗಾಗಿ ಸಚಿವರ ಭೇಟಿಗೂ ಮುನ್ನ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರ ಸಭೆ ನಡೆಸುತ್ತಿದ್ದಾರೆ. ಈಗಾಗಲೇ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಪಾದಯಾತ್ರೆ ನಡೆಸುವುದಾಗಿ ಸ್ವಾಮೀಜಿ ಘೋಷಿಸಿದ್ದಾರೆ.

  • 09 Jan 2021 05:01 PM (IST)

    ಕೊವಿಶೀಲ್ಡ್ ಲಸಿಕೆ ನೀಡುವಂತೆ ಬ್ರೆಜಿಲ್ ಅಧ್ಯಕ್ಷರ ಮನವಿ

    20 ಲಕ್ಷ ಡೋಸ್​ ಕೊವಿಶೀಲ್ಡ್​ ಲಸಿಕೆ ನೀಡುವಂತೆ ಬ್ರೆಜಿಲ್​ ಅಧ್ಯಕ್ಷ ಜೈರ್ ಬಲಸನೋರ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ. ಭಾರತದಲ್ಲಿ ಲಸಿಕೆ ನೀಡಿಕೆಗೆ ತೊಂದರೆಯಾಗದಂತೆ ನಮಗೂ 20 ಲಕ್ಷ ಡೋಸ್​ ಲಸಿಕೆ ನೀಡಿ ಎಂದು ಅವರು ಮನವಿ ಮಾಡಿದ್ದಾರೆ. ಸೆರಮ್ ಇನ್ಸ್​​ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶಿಲ್ಡ್​ ಲಸಿಕೆ ಉತ್ಪಾದಿಸಿದೆ.

  • 09 Jan 2021 04:55 PM (IST)

    ಪ್ರಧಾನಿ ನೇತೃತ್ವದ ಸಭೆಯಲ್ಲಿ ಭಾಗವಹಿಸಿದವರಾರು?

    ಉನ್ನತ ಮಟ್ಟದ ಕೊರೊನಾ ಲಸಿಕೆ ವಿತರಣೆ ಸಭೆ

    ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೊರೊನಾ ಲಸಿಕೆ ಸಂಬಂಧದ ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಆರೋಗ್ಯ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.ಅಲ್ಲದೇ, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

  • 09 Jan 2021 04:51 PM (IST)

    ಹಿರಿಯ ಸಂಗೀತ ನಿರ್ದೇಶಕ ಆರ್​.ರತ್ನ ನಿಧನ

    ಹಿರಿಯ ಸಂಗೀತ ನಿರ್ದೇಶಕ ಆರ್​.ರತ್ನ ನಿಧನ ಚೆನ್ನೈನಲ್ಲಿ ನಿಧನರಾಗಿದ್ದಾತರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಆರ್​​.ರತ್ನರ ಅಂತ್ಯಕ್ರಿಯೆ
    ನಾಳೆ ಬೆಂಗಳೂರಿನಲ್ಲಿ ನಡೆಯಲಿದೆ. ಸಂಗೀತ ನಿರ್ದೇಶಕ ಆರ್.ರತ್ನ ಊರ್ವಶಿ, ಕಾಣದ ಕೈ,ನಾನೂ ಬಾಳಬೇಕು ಸೇರಿದಂತೆ ಕನ್ನಡದ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು.

  • 09 Jan 2021 04:47 PM (IST)

    ಜನವರಿ 16ರಿಂದ ಕೊರೊನಾ ಲಸಿಕೆ ನೀಡಲು ತೀರ್ಮಾನ

    ಭಾರತದಲ್ಲಿ ಜನವರಿ 16 ರಿಂದ ಕೊರೊನಾ ಸೇನಾನಿಗಳಿಗೆ ಮೊದಲ ಹಂತದ ಕೊರೊನಾ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. 3 ಕೋಟಿ ಕೊರೊನಾ ಸೇನಾನಿಗಳಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ಜತೆಗೆ, 50 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುವುದು. ಒಟ್ಟು 27 ಕೋಟಿ ಡೋಸ್​ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

  • 09 Jan 2021 04:24 PM (IST)

    ಬಂಗಾಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರ ಭರ್ಜರಿ ಮೆರವಣಿಗೆ

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭರ್ಜರಿ ರಸ್ತೆ ಮೆರವಣಿಗೆ ನಡೆಸುತ್ತಿದ್ದಾರೆ. ಬರ್ಧಮಾನ್ ಜಿಲ್ಲೆಯ ಪುರ್ಬಾದಲ್ಲಿ ನಡೆಯುತ್ತಿರುವ ಜೆ.ಪಿ.ನಡ್ಡಾ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಸೇರಿದ್ದಾರೆ.

  • 09 Jan 2021 04:20 PM (IST)

    ಸಂಪರ್ಕ ಕಳೆದುಕೊಂಡ ಇಂಡೋನೇಷ್ಯಾದ ಡೊಮೆಸ್ಟಿಕ್ ವಿಮಾನ

    ಜಕಾರ್ತದಿಂದ ಟೇಕ್​ಆಫ್ ಆದ ಕೆಲ ಹೊತ್ತಿನಲ್ಲಿ ಇಂಡೋನೇಷ್ಯಾದ ಡೊಮೆಸ್ಟಿಕ್ ವಿಮಾನ ಸಂಪರ್ಕ ಕಳೆದುಕೊಂಡಿದೆ. ಶ್ರೀವಿಜಯ ಏರ್ SJ 182 ಡೊಮೆಸ್ಟಿಕ್ ವಿಮಾನ ಸಂಪರ್ಕ ಕಳೆದುಕೊಂಡಿದ್ದು, ಸಂಪರ್ಕಕ್ಕಾಗಿ ಪ್ರಯತ್ನಿಸಲಾಗುತ್ತಿದೆ.

  • 09 Jan 2021 04:16 PM (IST)

    ದೆಹಲಿಗೆ ಜೀವಂತ ಹಕ್ಕಿಗಳ ಆಮದು ನಿಷೇಧ

    ಹಕ್ಕಿಜ್ವರದ ಭೀತಿಯ ಬೆನ್ನಲ್ಲೇ ದೆಹಲಿಗೆ ಜೀವಂತ ಹಕ್ಕಿಗಳ ಆಮದು ಮಾಡುವುದನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಜತೆಗೆ, 10 ದಿನಗಳ ಕಾಲ ಘಾಜಿಪುರದ ಕೋಳಿ ಮಾರುಕಟ್ಟೆಯನ್ನು ಮುಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ.

  • 09 Jan 2021 04:12 PM (IST)

    ಧನುರ್ಮಾಸ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ TV9 ನೆಟ್​ವರ್ಕ್​ ಅಧ್ಯಕ್ಷ ‌ರಾಮೇಶ್ವರರಾವ್

    ಆಂಧ್ರಪ್ರದೇಶದ ವಿಜಯವಾಡದ‌‌ ವಿಜಯಕೀಲಾದ್ರಿ ಕ್ಷೇತ್ರದಲ್ಲಿ ಶ್ರೀ ತ್ರಿದಂಡಿ ಚಿನ ಜಿಯರಸ್ವಾಮಿ‌, ತ್ರಿದಂಡಿ ಅಹೋಬಿಲ‌ ಜಿಯರಸ್ವಾಮಿ ನೇತೃತ್ವದಲ್ಲಿ‌ ನಡೆಯುತ್ತಿರುವ 24 ದಿನಗಳ ಧನುರ್ಮಾಸ ವಿಶೇಷ ಕಾರ್ಯಕ್ರಮಕ್ಕೆ TV9 ನೆಟ್​ವರ್ಕ್​ನ ಚೇರ್​ಮನ್‌ ‌ರಾಮೇಶ್ವರರಾವ್ ಭೇಟಿ ನೀಡಿದರು. ಜತೆಗೆ ವಿಶೇಷ ಪೂಜೆ ನಡೆಸಿ‌, ಚಿನ ಜಿಯರಸ್ವಾಮಿಯವರ ಆಶೀರ್ವಾದ ಪಡೆದರು.

  • 09 Jan 2021 03:42 PM (IST)

    ಆಸ್ಟ್ರೇಲಿಯಾದಲ್ಲಿ ಭಾರತದ ಆಟಗಾರರಿಗೆ ಜನಾಂಗೀಯ ನಿಂದನೆ

    ಆಸ್ಟ್ರೇಲಿಯಾ ಪ್ರವಾದಲ್ಲಿರುವ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಜನಾಂಗೀಯ ನಿಂದನೆ ಎದುರಾಗಿದೆ. ಭಾರತದ ಜಸ್​ಪ್ರೀತ್ ಬೂಮ್ರಾ ಮತ್ತು ಮೊಹಮದ್ ಸಿರಾಜ್​ಗೆ ಜನಾಂಗೀಯ ನಿಂದನೆಗೊಳಗಾಗಿದ್ದು, ಭಾರತ ತಂಡ ಪ್ರಕರಣ ದಾಖಲಿಸಿದೆ.

  • 09 Jan 2021 03:33 PM (IST)

    ಚೀನಾ ಸೈನಿಕನ ಬಂಧನ

    ಭಾರತೀಯ ಸೈನಿಕರು ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್​ನ (LAC) ಭಾರತೀಯ ಪ್ರದೇಶಕ್ಕೆ ಪ್ರವೇಶಿಸಿದ್ದ ಚೀನಾದ ಓರ್ವ ಸೈನಿಕನನ್ನು ಲಡಾಕ್​ನ ಪಾಂಗೊಂಗ್​ ಸರೋವರದ ಬಳಿ ಬಂಧಿಸಿದ್ದಾರೆ. ಬಂಧನದ ಮಾಹಿತಿಯನ್ನು ಚೀನಾ ಸೇನೆಗೆ ತಲುಪಿಸಿದ್ದು, ಈ ಕುರಿತು ಎರಡೂ ಸೈನ್ಯದ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

  • 09 Jan 2021 03:25 PM (IST)

    ಮಂಗಳೂರು: 6 ಕಾಗೆಗಳ ಸಾವಿಗೆ ಹಕ್ಕಿಜ್ವರ ಕಾರಣವಲ್ಲ

    ಮಂಗಳೂರಿನಲ್ಲಿ ಕಾಗೆಗಳ ನಿಗೂಢ ಸಾವು ಪ್ರಕರಣದ ವರದಿ ಜಿಲ್ಲಾಡಳಿತದ ಕೈ ಸೇರಿದೆ. ವರದಿಯಲ್ಲಿ ಕಾಗೆಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ ಎಂದು ದೃಢಪಡಿಸಲಾಗಿದೆ. ಮಂಗಳೂರಿನ ಮಂಜನಾಡಿ ಗ್ರಾಮದ ಅರಂತಾಡಿ ಬಳಿ ಪತ್ತೆಯಾಗಿದ್ದ 6 ಕಾಗೆಗಳ ಮೃತದೇಹ ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು. ಮರಣೋತ್ತರ ಪರೀಕ್ಷೆಯನ್ನು ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ನಡೆಸಲಾಗಿತ್ತು.

  • 09 Jan 2021 03:20 PM (IST)

    ತನ್ನ ಕಂಪನಿಗಳ ರಕ್ಷಣೆಗೆ ಹೊಸ ನೀತಿ ರೂಪಿಸಿದ ಚೀನಾ

    ತನ್ನ ಕಂಪನಿ ಮತ್ತು ನಾಗರಿಕರಿಗೆ ಇತರ ದೇಶಗಳಿಂದ ಆಗಬಹುದಾದ ತೊಂದರೆಯಿಂದ ರಕ್ಷಣೆ ಒದಗಿಸಬಲ್ಲ ನೀತಿಯೊಂದನ್ನು ಚೀನಾ ಜಾರಿಗೊಳಿಸಿದೆ. ಈ ನೀತಿಯ ಪ್ರಕಾರ ಯಾವುದೇ ದೇಶ ಚೀನಾದ ಕಂಪನಿಗಳಿಗೆ ನ್ಯಾಯಸಮ್ಮತವಲ್ಲದ ಕ್ರಮಕ್ಕೆ ಮುಂದಾದರೆ ಚೀನಾ ಸಹಾಯಕ್ಕೆ ಬರಲಿದೆ. ತನ್ನ ಪ್ರಜೆಗಳ ಮತ್ತು ಕಂಪನಿಗಳ ಕಾನೂನುಬದ್ಧ ಹಕ್ಕು, ಹಿತಾಸಕ್ತಿಗಳನ್ನು ರಕ್ಷಿಸುವುದು ಚೀನಾದ ಈ ನೀತಿಯ ಉದ್ದೇಶವಾಗಿದೆ.

  • 09 Jan 2021 03:01 PM (IST)

    ತೆಲಂಗಾಣದಲ್ಲೂ ರೈತರ ಪ್ರತಿಭಟನೆ: ಸಂಚಾರ ಅಸ್ತವ್ಯಸ್ತ

    ತೆಲಂಗಾಣದ ನಿಜಾಮಬಾದ್ ಜಿಲ್ಲೆಯ ಆರಮೂರನಲ್ಲಿನ ಮಾಮಿಡಿಪಲ್ಲಿ ಹೆದ್ದಾರಿ ಮೇಲೆ ರೈತರು ಪ್ರತಿಭಟನೆ ನೀಡುತ್ತಿದ್ದಾರೆ. ಅರಿಷಿಣ ಸೇರಿ ಹಲವು ಬೆಳೆಗಳಿಗೆ ಬೆಂಬಲ ಬೆಲೆ, ಮಂಡಳಿ ರಚನೆ ಸೇರಿದಂತೆ ಇನ್ನಿತರ ಬೇಡಿಕೆಗಳಿಗಾಗಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ನಿಜಾಮಾಬಾದ್ – ನಾಗಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

  • 09 Jan 2021 02:57 PM (IST)

    ಶತಮಾನದ ಸಾಂಕ್ರಾಮಿಕ ಸೋಂಕಿಗೆ ಉಚಿತ ಲಸಿಕೆ ಒದಗಿಸಬೇಕು: ದೆಹಲಿ ಸಿಎಂ ಆಗ್ರಹ

    ಕೊರೊನಾ ಈ ಶತಮಾನದ ಸಾಂಕ್ರಾಮಿಕ ಸೋಂಕಾಗಿದ್ದು ಸರ್ಕಾರ ದೇಶದ ಜನರಿಗೆ ಉಚಿತವಾಗಿ ಲಸಿಕೆ ವಿತರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಹೇಳಿದ್ದಾರೆ. ದೆಹಲಿಯ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿರುವ ಅರವಿಂದ್ ಕೇಜ್ರಿವಾಲ್ ಸರ್ಕಾರ, ಇದೀಗ ಕೇಂದ್ರ ಸರ್ಕಾರದ ಮೇಲೆ ಉಚಿತ ಲಸಿಕೆ ಒದಗಿಸುವಂತೆ ಒತ್ತಡ ಹಾಕುತ್ತಿದೆ.

  • 09 Jan 2021 02:44 PM (IST)

    ಚೀನಾದಿಂದ ತಾಯ್ನಾಡಿಗೆ ಮರಳಲಿರುವ ಹಡಗು ಸಿಬ್ಬಂದಿ

    ಚೀನಾದಲ್ಲಿ ಸಿಲುಕಿದ್ದ ಭಾರತೀಯ ಹಡಗುಗಳ 23 ಸಿಬ್ಬಂದಿಗಳು ತಾಯ್ನಾಡಿಗೆ ಮರಳುವ ಕಾಲ ಸನಿಹವಾಗಿದೆ. ಎಂ.ವಿ.ಜಗ್ ಆನಂದ್​ ಹಡಗಿನಲ್ಲಿದ್ದ 23 ಸಿಬ್ಬಂದಿ ಜ.14ರಂದು ಚೀನಾದಿಂದ ಜಪಾನ್​ ಮೂಲಕ ಭಾರತಕ್ಕೆ ಮರಳುವ ಕುರಿತು ಕೇಂದ್ರ ಬಂದರು, ಹಡಗು ಖಾತೆ ಸಚಿವ ಮನ​ಸುಖ್ ಎಲ್.ಮಾಂಡವೀಯ ಮಾಹಿತಿ ನೀಡಿದ್ದಾರೆ.

  • 09 Jan 2021 02:38 PM (IST)

    ರೈತರ ಜೊತೆ ಊಟ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ

    ಪಶ್ಚಿಮ ಬಂಗಾಳ ವಿಧಾನಸಭೆ ಮತ್ತು ಕೃಷಿ ಕಾಯ್ದೆ ಪರ ಒಲವು ಮೂಡಿಸುವ ಉದ್ದೇಶದಿಂದ ಪಶ್ಚಿಮ ಬಂಗಾಳಕ್ಕೆ ತೆರಳಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜಿ.ಪಿ.ನಡ್ಡಾ ರೈತರ ಮನೆಯಲ್ಲಿ ನೆಲಕ್ಕೆ ಕುಳಿತು ಬಾಳೆಲೆಯಲ್ಲಿ ಊಟ ಮಾಡುತ್ತಿದ್ದಾರೆ. ಊಟದ ನಂತರ ಅವರು ರೋಡ್​ಶೋ ಕೈಗೊಳ್ಳಲಿದ್ದಾರೆ.

  • 09 Jan 2021 02:31 PM (IST)

    ವಿಜ್ಞಾನಿ ಎಸ್.ಎಸ್.ಮಿಶ್ರಾ ನಿಧನ

    DRDO ನ ಪ್ರಮುಖ ವಿಜ್ಞಾನಿ ಎಸ್.ಎಸ್.ಮಿಶ್ರಾ ಇಂದು ಬೆಳಗ್ಗೆ ಹೈದರಾಬಾದ್​ನಲ್ಲಿ ಇಹಲೋಕ ತ್ಯಜಿಸಿದ್ದಾರೆ. 72 ವರ್ಷಗಳ ಅವರು, ಭಾರತದ ಮಹತ್ವಾಕಾಂಕ್ಷಿ ನಾಗ್ ಮಿಸೈಲ್ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

  • 09 Jan 2021 02:20 PM (IST)

    ಉತ್ತರ ಕನ್ನಡ: ಮದುವೆ ಮನೆಯಲ್ಲಿ ಗುಂಡಿನ ದಾಳಿ, ಆರೋಪಿ ಪರಾರಿ

    ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ಭಗ್ನಪ್ರೇಮಿಯೋರ್ವ ವಧುವಿನ ಮನೆಯಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ ನಡೆದಿದೆ. ರೌಡಿಶೀಟರ್ ರಾಜೇಶ್ ಗಣಪತಿ ಗಾಂವ್ಕರ್ ಪರಾರಿ ಗುಂಡು ಹಾರಿಸಿದ ಆಸಾಮಿಯಾಗಿದ್ದು, ದಿವ್ಯಾ ಮತ್ತು ಪ್ರಕಾಶ್ ಅವರ ಮದುವೆ ಇಂದು ನಿಶ್ಚಯವಾಗಿತ್ತು.ದಿವ್ಯಾಳನ್ನ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ರಾಜೇಶ್,ಆಕೆ ಮದುವೆಗೆ ಒಪ್ಪಿಲ್ಲ ಎಂದು ಬೆಳಗಿನ ಜಾವ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ನಂತರ ಪೊಲೀಸ್ ಭದ್ರತೆಯಲ್ಲಿ ಮದುವೆ ಸಾಂಗವಾಗಿದೆ.

  • 09 Jan 2021 02:15 PM (IST)

    ಅಸಾದುದ್ದೀನ್ ಓವೈಸಿಗೆ ಆಘಾತ ನೀಡಿದ ತೃಣಮೂಲ ಕಾಂಗ್ರೆಸ್

    ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿಗೆ ತೃಣಮೂಲ ಕಾಂಗ್ರೆಸ್ ಭಾರಿ ಆಘಾತ ನೀಡಿದೆ. ಪಶ್ಚಿಮ ಬಂಗಾಳದಲ್ಲಿ ಎಐಎಂಐಎಂ ಪಕ್ಷವನ್ನು ಮುನ್ನಡೆಸುತ್ತಿದ್ದ ಎಸ್.ಕೆ.ಅಬ್ದುಲ್ ಕಲಾಂ,ಇತರ ಹಲವು ಸದಸ್ಯರೊಂದಿಗೆ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ.ಹೀಗಾಗಿ, ಬಂಗಾಳದಲ್ಲಿ ಪಕ್ಷದ ಚಟುವಟಿಕೆ ಚುರುಕುಗೊಳಿಸಲು ಅಸಾದುದ್ದೀನ್ ಓವೈಸಿಗೆ ಹಿನ್ನೆಡೆಯಾಗಿದೆ.

  • 09 Jan 2021 02:07 PM (IST)

    ಶಾಸಕ ಎಸ್.ಎ.ರಾಮದಾಸ್​ಗೆ ಜಾಮೀನು ಮಂಜೂರು

    ಶಾಸಕ ಎಸ್.ಎ.ರಾಮದಾಸ್​ರಿಗೆ ಪ್ರೇಮಕುಮಾರಿಗೆ ವಂಚನೆ,ಬೆದರಿಕೆ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನೀಡಿದ್ದು, ಈ ಮುಂಚೆ ಸರಸ್ವತಿಪುರಂ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಇದೀಗ, 50 ಸಾವಿರದ ಬಾಂಡ್ ನೀಡುವಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.

  • 09 Jan 2021 01:23 PM (IST)

    ಪಾಕಿಸ್ತಾನದ ಬಳಿ ಕ್ಷಮೆ ಕೋರಲು ಆಗ್ರಹಿಸಿದ ಬಾಂಗ್ಲಾದೇಶ

    1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧಕ್ಕೆ ಸಂಬಂಧಿಸಿ ಅಧಿಕೃತವಾಗಿ ಕ್ಷಮೇ ಕೋರುವಂತೆ ಬಾಂಗ್ಲಾದೇಶ ಪಾಕಿಸ್ತಾನವನ್ನು ಆಗ್ರಹಿಸಿದೆ. ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧಗಳು ಹೆಚ್ಚಲು ಪಾಕ್ ಕ್ಷಮೆ ಕೋರಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಹ್ರಿಯಾರ್ ಅಲಮ್ ಅಧಿಕೃತ ಪ್ರಕಟನೆ ಬಿಡುಗಡೆಗೊಳಿಸಿ ಹೇಳಿದ್ದಾರೆ.

  • 09 Jan 2021 01:15 PM (IST)

    ಪ್ರವಾಹಕ್ಕೆ ನಲುಗಿದ ಮಲೇಶಿಯಾ

    ಮಲೇಶಿಯಾದ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಒಟ್ಟು 46 ಸಾವಿರ ಜನರನ್ನು ಸ್ಥಾಳಂತರಿಸಲಾಗಿದ್ದು, 426 ಆಶ್ರಯ ಕೇಂದ್ರಗಳಲ್ಲಿ 12,487 ಕುಟುಂಬಗಳಿಗೆ ರಕ್ಷಣೆ ನೀಡಲಾಗಿದೆ. ದೇಶದ 3 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

  • 09 Jan 2021 01:05 PM (IST)

    ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಿಸಿದ ಎಐಎಡಿಎಂಕೆ

    ತಮಿಳುನಾಡು ವಿಧಾನಸಭಾ ಚುನಾವಣೆಗೆ ಬಿರುಸಿನ ಸಿದ್ಧತೆ

    ಎಐಎಡಿಎಂಕೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಿಸಿದೆ.ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ.ಕೆ.ಪಳನಿಸ್ವಾಮಿಯವರೇ ಸಿಎಂ ಅಭ್ಯರ್ಥಿಯಾಗಿದ್ದು, ಉಪ ಮುಖ್ಯಮಂತ್ರಿಯಾಗಿ ಒ.ಪನ್ನೀರಸೆಲ್ವಂ ಆಯ್ಕೆಯಾಗಿದ್ದಾರೆ.

  • 09 Jan 2021 01:00 PM (IST)

    4.5 ಕೋಟಿ ತಲುಪಿದ ಅಮಿತಾಬ್ ಬಚ್ಚನ್​ ಟ್ವಿಟ್ಟರ್​ ಹಿಂಬಾಲಕರ ಸಂಖ್ಯೆ

    ಇಂದು ಬೆಳಗ್ಗೆ ಹಿರಿಯ ನಟ ಅಮಿತಾಬ್ ಬಚ್ಚನ್​ರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ 4.5 ಕೋಟಿಗೆ ತಲುಪಿದೆ.ತಮ್ಮ ಹಿಂಬಾಲಕರಿಗೆ ಧನ್ಯವಾದ ಅರ್ಪಿಸಿರುವ ಮೆಗಾ ಸ್ಟಾರ್, ಹಳೆಯ ಕಪ್ಪು ಬಿಳುಪು ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೇ ತಮ್ಮ ಪಾಲಕರನ್ನು ಸ್ಮರಿಸಿಕೊಂಡಿದ್ದಾರೆ.

  • 09 Jan 2021 12:44 PM (IST)

    ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ರದ್ದು: ಸಂಸದ ತೇಜಸ್ವಿ ಸೂರ್ಯ ಏನಂದ್ರು?

    ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ರದ್ದು ಘಟನೆಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದಾರೆ. ದೈತ್ಯ ಟೆಕ್ ಕಂಪನಿಗಳು ಯಾರ ಖಾತೆಯನ್ನು ಬೇಕಾದರೂ ಅಳಿಸಬಹುದು. ಪ್ರಜಾಪ್ರಭುತ್ವ ಹೊಂದಿರುವ ದೇಶಗಳು ಈ ಘಟನೆಯನ್ನು ಗಮನಿಸಿ ನೀತಿ ನಿಯಮಗಳಲ್ಲಿ ಬದಲಾವಣೆ ತರುವತ್ತ ಚಿಂತಿಸಬೇಕಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

  • 09 Jan 2021 12:36 PM (IST)

    ಉತ್ತಮ ರನ್ ಪೇರಿಸುತ್ತಿರುವ ಆಸ್ಟ್ರೇಲಿಯಾ

    ಮೂರನೇ ದಿನದಂದು ಭಾರತದ ಸರ್ವಪತನದ ನಂತರ ಆಸ್ಟ್ರೇಲಿಯಾ ಉತ್ತಮ ರನ್ ಗಳಿಸುತ್ತಿದೆ. 103 ರನ್ ಗಳಿಸಿರುವ ಆಸ್ಟ್ರೇಲಿಯಾದ 2 ವಿಕೆಟ್ ಮಾತ್ರ ಪತನಗೊಂಡಿದೆ.ಆಸ್ಟ್ರೇಲಿಯಾ ಒಟ್ಟು 197 ರನ್​ಗಳ ಮುನ್ನಡೆ ಗಳಿಸಿದಂತಾಗಿದೆ.

  • 09 Jan 2021 12:31 PM (IST)

    ಬಾಗಿಲು ತೆರೆಯಲಿವೆ ಕೇರಳದ ಆಯುರ್ವೇದಿಕ್ ರೆಸಾರ್ಟ್​, ಸ್ಪಾ

    ಕೇರಳ ಸರ್ಕಾರ ರಾಜ್ಯದಲ್ಲಿ ಆಯುರ್ವೇದಿಕ್ ರೆಸಾರ್ಟ್​ ಮತ್ತು ಸ್ಪಾಗಳನ್ನು ತೆರೆಯಲು ಅನುಮತಿ ನೀಡಿದೆ. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ಆಯುರ್ವೇದಿಕ್ ರೆಸಾರ್ಟ್ ಮತ್ತು ಸ್ಪಾಗಳು ಮುಚ್ಚಿದ್ದವು. ಆದರೆ ಇದೀಗ ಕೇರಳ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್, ಕೊರೊನಾ ತಡೆ ಮುಂಜಾಗೃತೆ ವಹಿಸಿ ಆಯುರ್ವೇದಿಕ್ ರೆಸಾರ್ಟ್​ ಮತ್ತು ಸ್ಪಾಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ.

  • 09 Jan 2021 12:23 PM (IST)

    ಮೈಸೂರು: 80 ಗ್ರಾ.ಪಂನಲ್ಲಿ ಅಧಿಕಾರ ಪಡೆಯುತ್ತೇವೆ ಎಂದ ಸಚಿವ

    ಮೈಸೂರಿನ 80 ಗ್ರಾ.ಪಂ.ಗಳಲ್ಲಿ ಬಿಜೆಪಿ ಅಧಿಕಾರ ಪಡೆಯಲಿದೆ. ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಗರು ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾದ ಬಳಿಕ ಗ್ರಾಮ ಪಂಚಾಯತ್​ಗಳಲ್ಲಿ ಅಧಿಕಾರ ಹಿಡಿಯುವ ಬಗ್ಗೆ ಕಾರ್ಯತಂತ್ರ ರೂಪಿಸಲಾಗುವುದು ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

  • 09 Jan 2021 12:20 PM (IST)

    ಮಹಾರಾಷ್ಟ್ರ: 900 ಕೋಳಿಗಳ ಸಾವು

    ಮುಂಬೈಯ ಪರ್ಭಾನಿ ಜಿಲ್ಲೆಯ ಕೋಳಿ ಸಾಕಾಣಿಕಾ ಕೇಂದ್ರವೊಂದರಲ್ಲಿ ಎರಡು ದಿನಗಳಲ್ಲಿ 900 ಕೋಳಿಗಳು ಮೃತಪಟ್ಟಿರುವುದು ವರದಿಯಾಗಿದೆ. ಸಾವಿನ ತನಿಖೆಗಾಗಿ ಸ್ಯಾಂಪಲ್​ಗಳನ್ನು ಪ್ರಯೋಗಕ್ಕಾಗಿ ಕಳಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

  • 09 Jan 2021 12:19 PM (IST)

    ಪ್ರಧಾನಿ ನೇತೃತ್ವದಲ್ಲಿ ನೇತಾಜಿ ಸ್ಮರಣೆ

    ನೇತಾಜಿ ಸುಬಾಷ್ ಚಂದ್ರ ಬೋಸ್​ರ 125ನೇ ಜನ್ಮದಿನವನ್ನು ವರ್ಷಾವಧಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ. ಜನವರಿ 23ರಿಂದ ಮುಂದಿನ ಒಂದು ವರ್ಷ ಸುಭಾಷ್ ಚಂದ್ರ ಬೋಸ್​ರ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

  • 09 Jan 2021 12:15 PM (IST)

    ಉತ್ತರಾಖಂಡದಲ್ಲಿ ಭೂಕಂಪನ

    ಉತ್ತರಾಖಂಡದ ಉತ್ತರಕಾಶಿ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪನದಲ್ಲಿ 3.3 ತೀವ್ರತೆ ದಾಖಲಾಗಿದೆ.

  • 09 Jan 2021 12:04 PM (IST)

    ಯುವರಾಜ್ ಜತೆ, ವಂಚನೆಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಭಾಗಿ

    ಮಂಗಳೂರು ಮೂಲದ ನಿವೃತ್ತ ಮಾಜಿ ಪೊಲೀಸ್ ಅಧಿಕಾರಿಯೋರ್ವರು ನ್ಯಾಯಾಧೀಶರಿಗೆ 8 ಕೋಟಿ 80 ಲಕ್ಷ ವಂಚನೆ ಪ್ರಕರಣದಲ್ಲಿ ಯುವರಾಜ್ ಜತೆ ಭಾಗಿಯಾಗಿರುವ ಸುಳಿವು ದೊರೆತಿದೆ.ನ್ಯಾಯಾಧೀಶರು ಹೇಳಿಕೆ ವೇಳೆ ಪಾಪಯ್ಯ ಹೆಸರು ಉಲ್ಲೇಖಿಸಿದ್ದಾರೆ. ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ‌, ಹಾಲಿ ರಾಜ್ಯಸಭಾ ಸದಸ್ಯ ಪುರುಷೋತ್ತಮ ರೂಪಾಲರನ್ನು ಭೇಟಿ ಮಾಡಿಸಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.

  • 09 Jan 2021 11:58 AM (IST)

    ಕೊಪ್ಪಳದ ಆಟಿಕೆ ಕ್ಲಸ್ಟರ್​ನ ವಿಶೇಷವೇನು?

    25 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ

    ಕೊಪ್ಪಳದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೂಮಿ ಪೂಜೆ ನೆರವೇರಿಸಿದ ಆಟಿಕೆ ಕ್ಲಸ್ಟರ್​ 400 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ.
    ಏಕಸ್ ಕಂಪನಿ ನಿರ್ಮಾಣ ಮಾಡುತ್ತಿರುವ ಆಟಿಕೆ ಕ್ಲಸ್ಟರ್, ಚೀನಾ ಮಾದರಿಯ ಆಟಿಕೆ ವಸ್ತುಗಳನ್ನು ತಯಾರಿಸಲಿದೆ. ಒಟ್ಟು 5000 ಸಾವಿರ ಕೋಟಿ ರೂ ವೆಚ್ಚದಲ್ಲಿ​ ನಿರ್ಮಾಣವಾಗಲಿರುವ ಕ್ಲಸ್ಟರ್​ನಿಂದ 25 ಸಾವಿರ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆಯಿದೆ.

  • 09 Jan 2021 11:53 AM (IST)

    2 ವಿಕೆಟ್ ನಷ್ಟಕ್ಕೆ 81 ಗಳಿಸಿದ ಆಸ್ಟ್ರೇಲಿಯಾ

    ಭಾರತ ಆಸ್ಟ್ರೇಲಿಆ ನಡುವಿನ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಿದೆ. ಆಸ್ಟ್ರೇಲಿಯಾ ಒಟ್ಟಾರೆ 175 ರನ್ ಮುನ್ನಡೆ ಗಳಿಸಿದಂತಾಗಿದೆ

  • 09 Jan 2021 11:50 AM (IST)

    ಗಾಯಗೊಂಡ ರವೀಂದ್ರ ಜಡೇಜಾ

    ಭಾರತ ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ವೇಳೆ ರವೀಂದ್ರ ಜಡೇಜಾ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

  • 09 Jan 2021 11:47 AM (IST)

    ನಿವೃತ್ತ ನ್ಯಾಯಾಧೀಶರ ಹೇಳಿಕೆ ದಾಖಲು

    ನಿವೃತ್ತ ನ್ಯಾಯಾಧೀಶರಿಗೆ ಯುವರಾಜ್ ವಂಚನೆ ಎಸಗಿದ ಪ್ರಕರಣದಲ್ಲಿ ಸಿಸಿಬಿ ಎಸಿಪಿ ನಾಗರಾಜ್,ಇನ್ಸ್‌ಪೆಕ್ಟರ್ ಕೇಶವಮೂರ್ತಿ ಅವರು ನ್ಯಾಯಾಧೀಶರ ಮನೆಗೆ ತೆರಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಕೇಂದ್ರದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ಮಹಿಳೆಯ ಬಳಿ ಕೋಟಿಗಟ್ಟಲೆ ಹಣ ಪಡೆದಿದ್ದ ಯುವರಾಜ್.
    ಸುಮಾರು 8.8 ಕೋಟಿ ಹಣ ಪಡೆದು ವಂಚನೆ.ಬಿಜೆಪಿ ನಾಯಕರ ಜೊತೆ ಸಂಪರ್ಕ ಇರುವುದಾಗಿ ನಂಬಿಸಿ, ಕೇಂದ್ರ ಸರ್ಕಾರದ ಮೂಲಕ ರಾಜ್ಯಪಾಲರಾಗಿ ಕೆಲಸ ಕೊಡಿಸುವ ಆಮಿಷವೊಡ್ಡಿದ ಬಗ್ಗೆ ನ್ಯಾಯಾಧೀಶರು ಹೇಳಿಕೆ ನೀಡಿದ್ದಾರೆ.

  • 09 Jan 2021 11:43 AM (IST)

    ಕೊರೊನಾ ಲಸಿಕೆ: ಕಾಂಗ್ರೆಸ್ ರಾಜ್ಯಗಳ ಕಳವಳ

    ಕೇಂದ್ರ ಸರ್ಕಾರ ಬಹಳಷ್ಟು ರಾಜ್ಯಗಳಿಗೆ ಲಸಿಕೆ ನೀಡಿಕೆ ದಿನಾಂಕವನ್ನು ತಿಳಿಸಿಲ್ಲ ಎಂದು ಕಾಂಗ್ರೆಸ್ ಆಡಳಿತದ ರಾಜ್ಯಗಳು ಕಳವಳ ವ್ಯಕ್ತಪಡಿಸಿವೆ. ಮಹಾರಾಷ್ಟ್ರ, ಛತ್ತೀಸ್ ಘಡ್, ಹರಿಯಾಣ ರಾಜ್ಯಗಳಿಗೆ ಲಸಿಕೆ ನೀಡಿಕೆ ದಿನಾಂಕ ತಿಳಿದಿಲ್ಲ. ಕೊವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಪರಿಣಾಮದ ಕುರಿತು ಅಂಕಿ ಅಂಶ ನೀಡುವವರೆಗೂ ಲಸಿಕೆ ಸ್ವೀಕರಿಸುವುದಿಲ್ಲ ಎಂದು ಛತ್ತೀಸ್ ಘಡ್ ಆರೋಗ್ಯ ಸಚಿವ ಟಿ.ಎಸ್.ಸಿಂಗ್ ದಿಯೋ ಹೇಳಿದ್ದಾರೆ.

  • 09 Jan 2021 11:39 AM (IST)

    10 ಮಕ್ಕಳ ಸಜೀವ ದಹನ: 48 ಗಂಟೆಯೊಳಗೆ ವರದಿ ನೀಡಲು ಸೂಚನೆ

    ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಸಮಿತಿ ಭಾಂದಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಅಗ್ನಿ ದುರಂತಕ್ಕೆ ಸಂಬಂಧಿಸಿ ತಕ್ಷಣ ತನಿಖೆ ನಡೆಸಿ 48 ಗಂಟೆಗಳ ಒಳಗಾಗಿ ವರದಿ ನೀಡುವಂತೆ ಆದೇಶಿಸಿದೆ. ನಿನ್ನೆ ತಡರಾತ್ರಿ ನಡೆದ ದುರ್ಘಟನೆಯಲ್ಲಿ 10 ಮಕ್ಕಳು ಸಜೀವ ದಹನವಾಗಿದ್ದರು.

  • 09 Jan 2021 11:35 AM (IST)

    ದೇಶ ಸ್ವಾವಲಂಬನೆ ಗಳಿಸಿದೆ: ಪ್ರಧಾನಿ

    16ನೇ ಪ್ರವಾಸಿ ಭಾರತೀಯ ದಿನ

    ಈ ಮೊದಲು ಪಿಪಿಇ ಕಿಟ್,ಮಾಸ್ಕ್,ವೆಂಟಿಲೇಟರ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.ಆದರೆ ಈಗ ನಮ್ಮ ದೇಶ ಸ್ವಾವಲಂಬಿಯಾಗಿದೆ. ಭಾರತದಲ್ಲೇ 2 ಸ್ವದೇಶಿ ಲಸಿಕೆ ತಯಾರಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪ್ರವಾಸಿ ಭಾರತೀಯರ ಕೊಡುಗೆಗಳು ದೇಶಕ್ಕೆ ಅಗತ್ಯವಿದೆ ಎಂದು ಅವರು ತಿಳಿಸಿದರು.

  • 09 Jan 2021 11:29 AM (IST)

    ಕೊರೊನಾ ಲಸಿಕೆ: ಬೆಂಗಳೂರು,ಹುಬ್ಬಳ್ಳಿಯ ಒಂದೊಂದು ಆಸ್ಪತ್ರೆ ಆಯ್ಕೆ

    ಸೋಮವಾರ ೪ ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಲಿದ್ದು, ಲಸಿಕೆ ವಿತರಣೆಗೆ ಅವರು ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಕರ್ನಾಟಕದಲ್ಲಿ ಲಸಿಕೆ ವಿತರಣೆ ಉದ್ಘಾಟನೆಗೆ ಬೆಂಗಳೂರು ಮತ್ತು ಹುಬ್ಬಳ್ಳಿಯ ಒಂದೊಂದು ಆಸ್ಪತ್ರೆಗಳನ್ನು ಆಯ್ಕೆ ಮಾಡಲಾಗಿದೆ. ಒಂದು ಆಸ್ಪತ್ರೆಯಲ್ಲಿ ಲಸಿಕೆ ವಿತರಣೆ ಉದ್ಘಾಟನೆ ನಡೆಯಲಿದೆ. ಸ್ವತಃ ಪ್ರಧಾನಿಗಳೇ ಎರಡು ಕೇಂದ್ರಗಳಲ್ಲಿ ಉದ್ಘಾಟನೆ ಮಾಡಲಿದ್ದಾರೆ. ಉದ್ಘಾಟನೆಯ ದಿನ ರಾಜ್ಯದಲ್ಲಿ ಒಟ್ಟು 235 ಕೇಂದ್ರಗಳಲ್ಲಿ ಏಕಕಾಲಕ್ಕೆ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

  • 09 Jan 2021 11:19 AM (IST)

    ಪ್ರೋ ಟ್ರಂಪ್​ ಪ್ರತಿಭಟನೆಯಲ್ಲಿ ಭಾರತದ ಧ್ವಜ ಪ್ರದರ್ಶಿಸಿದವರ ವಿರುದ್ಧ ದೂರು ದಾಖಲು

    ಅಮೆರಿಕದ ಕ್ಯಾಪಿಟಲ್ ಕಟ್ಟಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾರತದ ಧ್ವಜ ಪ್ರದರ್ಶಿಸಿದ ಕಾರಣ ವಿನ್ಸೆಂಟ್ ಕ್ಸೆವಿಯರ್ ಎಂಬುವವರ ವಿರುದ್ಧ ದೆಹಲಿಯ ಕಾಲ್ಕಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • 09 Jan 2021 11:16 AM (IST)

    ಕೇಂದ್ರ ಹೇಳಿದಾಗ ಸಂಪುಟ ವಿಸ್ತರಣೆ: ಮುಖ್ಯಮಂತ್ರಿ

    ಕೇಂದ್ರ ಸೂಚಿಸಿದಾಗ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಸಿ‌ ಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಕೊಪ್ಪಳದಲ್ಲಿ ಟಾಯ್ಸ್ ಕ್ಲಸ್ಟರ್​ಗೆ ಭೂಮಿ ಪೂಜೆ ನೆರವೇರಿಸಿ ಅವರು ಈ ಹೇಳಿಕೆ ನೀಡಿದರು.

  • 09 Jan 2021 11:13 AM (IST)

    ಪ್ರಧಾನಿ ಉದ್ಘಾಟಿಸಬೇಕೆಂಬ ಅಪೇಕ್ಷೆಯಿದೆ: ಸಿಎಂ ಬಿ ಎಸ್ ಯಡಿಯೂರಪ್ಪ

    ದೇಶದಲ್ಲಿ ಮೊದಲ‌ ಟಾಯ್ಸ್ ಕ್ಲಸ್ಟರ್ ಕಾರ್ಯಕ್ರಮಕ್ಕೆ ಭೂಮಿ ಪೂಜೆ ಮಾಡುತ್ತಿದ್ದೆವೆ. ಕೆಲಸ ಆರಂಭ ಆದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟಿಸಬೇಕೆಂಬ ಆಪೇಕ್ಷೆಯಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೊಪ್ಪಳದಲ್ಲಿ ಹೇಳಿದರು. ಭೂಮಿ ಪೂಜೆಯ ನಂತರ ಅವರು ಕೃಷಿ ಸಂಜೀವಿನಿ ವಾಹನಕ್ಕೆ ಹಸಿರು ನಿಶಾನೆ ತೋರಿದರು.

  • 09 Jan 2021 11:04 AM (IST)

    ನಿರೀಕ್ಷೆಯಂತೆ ನಾವು ಯಾವ ಕೆಲಸವನ್ನೂ ಮಾಡಿಲ್ಲ: ಒಪ್ಪಿಕೊಂಡ ಮುಖ್ಯಮಂತ್ರಿ

    ಟಾಯ್ಸ್ ಕ್ಲಸ್ಟರ್ ಗೆ ಭೂಮಿ ಪೂಜೆ ಮಾಡಿ ಮಾತನಾಡಿದ ಮುಖ್ಯಮಂತ್ರಿ

    ನಿರೀಕ್ಷೆಯಂತೆ ನಾವು ಯಾವ ಕೆಲಸವನ್ನೂ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿಕೊಂಡರು.ಕೊವಿಡ್,ಅತಿವೃಷ್ಟಿ,ಬರಗಾಲದಿಂದ ಕೆಲಸ ಮಾಡಲಾಗಿಲ್ಲ. ಈ ಬಾರಿ ಬಜೆಟ್ ನಲ್ಲಿ 40,50 ಸಾವಿರ ಖೋತಾ ಆಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಅವರು ಹೇಳಿದರು.

  • 09 Jan 2021 10:58 AM (IST)

    ರಾಯಚೂರು: ಸಂಸದ ರಾಜಾ ಅಮರೇಶ್ವರ ನಾಯಕಗೆ ಕೊರೊನಾ

    ಸಂಸದ ರಾಜಾ ಅಮರೇಶ್ವರ ನಾಯಕಗೆ ನಿನ್ನೆ ಕೊರೊನಾ ಸೋಂಕು ತಗುಲಿದ್ದು,ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು, ಯಾದಗಿರ ಮೆಡಿಕಲ್ ಕಾಲೇಜು ಉದ್ಘಾಟನೆ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

  • 09 Jan 2021 10:55 AM (IST)

    ಶಿವಮೊಗ್ಗ: ಗೃಹ ಸಚಿವರ ಭೇಟಿ ನಿಮಿತ್ತ ಪರಿಶೀಲನೆ

    ಜಿಲ್ಲೆಯ ಭದ್ರಾವತಿಯ RAF ಪಡೆಯ ಶಂಕುಸ್ಥಾಪನೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಜ.17 ರಂದು ಭೇಟಿ ನೀಡುವ ಹಿನ್ನೆಲೆಯಲ್ಲಿ ಸಂಸದ ಬಿ ವೈ ರಾಘವೇಂದ್ರ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಎಸ್ಪಿ ಕೆ.ಎಂ.ಶಾಂತರಾಜು ಕಾರ್ಯಕ್ರಮದ ಪೂರ್ವ ಸಿದ್ಧತೆಯನ್ನು ಪರಿಶೀಲಿಸಿದರು.ಭದ್ರಾವತಿಯ 50 ಎಕರೆ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಸ್ಥಾಪನೆಯಾಗಲಿದೆ.

  • 09 Jan 2021 10:52 AM (IST)

    ಆತ್ಮನಿರ್ಭರ ಭಾರತಕ್ಕೆ ಒತ್ತು ನೀಡೋಣ: ಪ್ರಧಾನಿ

    16ನೇ ಪ್ರವಾಸಿ ಭಾರತೀಯ ದಿನ

    ವಿವಿಧ ಕ್ಷೇತ್ರಗಳಲ್ಲಿ ಭಾರತ ಆತ್ಮನಿರ್ಭರತೆ ಸಾಧಿಸಬೇಕು. ನವೋದ್ಯಮ, ಕೊರೊನಾ ಲಸಿಕೆ ಮುಂತಾದ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಪ್ರವಾಸಿ ಭಾರತೀಯರ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

  • 09 Jan 2021 10:49 AM (IST)

    ಆಟಿಕೆ ಕ್ಲಸ್ಟರ್ ಭೂಮಿ ಪೂಜೆಗೆ ಕೊಪ್ಪಳಕ್ಕೆ ಆಗಮಿಸಿ ಸಿಎಂ

    ಸಿಎಂ ಬಿ.ಎಸ್. ಯಡಿಯೂರಪ್ಪ ಆಟಿಕೆ ಕ್ಲಸ್ಟರ್ ಭೂಮಿ ಪೂಜೆಗಾಗಿ ಕೊಪ್ಪಳಕ್ಕೆ ಆಗಮಿಸಿದ್ದಾರೆ. ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಗ್ರಾಮದ ಬಳಿ ಆಟಿಕೆ ಕ್ಲಸ್ಟರ್ ನಿರ್ಮಾಣವಾಗುತ್ತಿದ್ದು. ಮುಖ್ಯಮಂತ್ರಿಗಳನ್ನು ಸಚಿವರಾದ ಬಿ ಸಿ ಪಾಟೀಲ್, ಆನಂದಸಿಂಗ್, ಸಂಸದ ಕರಡಿ ಸಂಗಣ್ಣ ಮತ್ತು ಜಿಲ್ಲೆಯ ಶಾಸಕರು,ಅಧಿಕಾರಿಗಳು ಸ್ವಾಗತಿಸಿದರು.

  • 09 Jan 2021 10:42 AM (IST)

    ‘ಮಾ ಭಾರತಿ‘ಯನ್ನು ಸ್ಮರಿಸಿದ ಪ್ರಧಾನಿ

    16ನೇ ಪ್ರವಾಸಿ ಭಾರತೀಯ ದಿನ ಆಚರಣೆ

    ಜಗತ್ತಿನ ಎಲ್ಲೇ ಇದ್ದರೂ ಅಂತರ್ಜಾಲದಿಂದ ನಮ್ಮನ್ನು ಒಂದೆಡೆ ಜೋಡಿಸುತ್ತದೆ. ಆದರೆ, ನಮ್ಮ ಮನಸ್ಸು ಮತ್ತು ಭಾವನೆ ‘ಮಾ ಭಾರತಿ‘ಯಿಂದ ಸಂಪರ್ಕದಲ್ಲಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  • 09 Jan 2021 10:39 AM (IST)

    ಸರ್ವೋಚ್ಛ ನ್ಯಾಯಾಲಯದತ್ತ ನೆಟ್ಟ ಚಿತ್ತ

    ಪಂಜಾಬ್ ರೈತರ ಜೊತೆ ಕೇಂದ್ರ ಸರ್ಕಾರದ ಸಭೆ ಜನವರಿ 15ರಂದು ನಿಶ್ಚಯವಾಗಿದೆ. ಅದಕ್ಕೂ ಮುನ್ನವೇ ಜನವರಿ 11ರಂದು ಸರ್ವೋಚ್ಛ ನ್ಯಾಯಾಲಯ ಕೃಷಿ ಕಾಯ್ದೆ ವಿರೋಧಿಸಿ ಸಲ್ಲಿಸಲಾದ ಎಂಟು ಅರ್ಜಿಗಳ ವಿಚಾರಣೆ ನಡೆಸಲಿದ್ದು, ದೇಶದ ಕುತೂಹಲ ನ್ಯಾಯಾಲಯದತ್ತ ಜರುಗಿದೆ.

  • 09 Jan 2021 10:35 AM (IST)

    ದೆಹಲಿ,ಜಮ್ಮುವಿನಲ್ಲೂ ಕಾಗೆಗಳ ಸಾವು

    ದೇಶದ ವಿವಿದೆಡೆ ಹಕ್ಕಿ ಜ್ವರದ ಹಾವಳಿ ಹೆಚ್ಚುತ್ತಿದೆ. ದೆಹಲಿಯಲ್ಲಿ 35 ಕಾಗೆಗಳು ಮೃತಪಟ್ಟಿರುವುದು ಪತ್ತೆಯಾಗಿದೆ. ಅಲ್ಲದೇ, ಜಮ್ಮು ಕಾಶ್ಮೀರದಲ್ಲಿ 150 ಕಾಗೆಗಳು ಮೃತಪಟ್ಟಿವೆ.

  • 09 Jan 2021 10:32 AM (IST)

    ಧನಾತ್ಮಕ ಸ್ಪಂದನೆ ನೀಡದ ಚೀನಾ

    ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆಸಿಕೊಳ್ಳಲು ಚೀನಾ ನಿರಾಸಕ್ತಿ

    ಚೀನಾದ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ತೆರಳಲು ಭಾರತ ಪ್ರಯತ್ನ ಆರಂಭಿಸಿದೆ.ಭಾರತ-ಚೀನಾ ವಿಮಾನಗಳನ್ನು ಹಾರಿಸಲು ಅನುಮತಿ ಕೇಳಿದ್ದರೂ ಚೀನಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಚೀನಾದ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

  • 09 Jan 2021 10:25 AM (IST)

    ಗಾಯಗೊಂಡ ರಿಷಭ್ ಪಂತ್​

    ಭಾರತ ಮತ್ತು ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯದಂದು ಶನಿವಾರ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಅವರಿಗೆ ಎಡ ಮೊಣಕೈಗೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

  • 09 Jan 2021 10:16 AM (IST)

    ಭಾರತ: 24 ಗಂಟೆಯಲ್ಲಿ 19,253 ಜನರಿಗೆ ತಗುಲಿದ ಕೊರೊನಾ

    ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 19,253 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕೊರೊನಾ ಪೀಡಿತರ ಸಂಖ್ಯೆ 1,04,31,639ಕ್ಕೇರಿದೆ.
    ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಕೊರೊನಾಗೆ 228 ಜನರು ಬಲಿಯಾಗಿದ್ದಾರೆ. ಈವರೆಗೆ 1,50,798 ಜನರು ಮೃತರಾಗಿದ್ದು, 1,00,56,651 ಜನರು ಗುಣಮುಖರಾಗಿದ್ದಾರೆ.

  • 09 Jan 2021 10:13 AM (IST)

    ಕಾಂಗ್ರೆಸ್​ ಹಿರಿಯ ನಾಯಕರನ್ನು ಭೇಟಿಯಾಗಲಿರುವ ಸೋನಿಯಾ ಗಾಂಧಿ

    ಕೇಂದ್ರ ಸರ್ಕಾರ ಜತೆ ಪಂಜಾಬ್ ರೈತರ 8ನೇ ಸುತ್ತಿನ ಸಭೆಯೂ ವಿಫಲಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧಿನಾಯಕ ಸೋನಿಯಾ ಗಾಂಧಿ ಇಂದು ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ. ನೂತನ ಕೃಷಿ ಕಾಯ್ದೆಗಳ ರದ್ದಿಗೆ ಆಗ್ರಹಿಸಿರುವ ಕಾಂಗ್ರೆಸ್ ಪಂಜಾಬ್ ರೈತರಿಗೆ ಬೆಂಬಲ ವ್ಯಕ್ತಪಡಿಸಿದೆ.

  • 09 Jan 2021 10:09 AM (IST)

    ಪ್ರವಾಸಿ ಭಾರತೀಯ ದಿನ: ಉದ್ಘಾಟಿಸಲಿರುವ ಪ್ರಧಾನಿ

    ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 10:30ಕ್ಕೆ ಪ್ರವಾಸಿ ಭಾರತೀಯ ದಿನವನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ. ಆತ್ಮನಿರ್ಭರ ಭಾರತ ಸಾಕಾರಕ್ಕೆ ಪ್ರವಾಸಿಗಳ ಕೊಡುಗೆಗಳ ಕುರಿತು ಅವರು ಮಾತನಾಡುವ ನಿರೀಕ್ಷೆಯಿದೆ.

  • 09 Jan 2021 10:04 AM (IST)

    ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಹಾಲ್​ ಫುಲ್​ಗೆ ಅನುಮತಿ

    ಚಲನಚಿತ್ರ ಮಂದಿರಗಳಲ್ಲಿ ಎಲ್ಲ ಸೀಟ್​ಗಳ ಭರ್ತಿಗೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಅನುಮತಿ ನೀಡಿದೆ. ನಿನ್ನೆಯಷ್ಟೇ ತಮಿಳುನಾಡು ಸರ್ಕಾರ ನೀಡಿದ್ದ ಇದೇ ಅವಕಾಶವನ್ನು ಕೇಂದ್ರ ಹಿಂಪಡೆದಿತ್ತು. ಇದೀಗ, ಪಶ್ಚಿಮ ಬಂಗಾಳ ಚಿತ್ರ ಮಂದಿರದಲ್ಲಿ ಸಂಪೂರ್ಣ ಅವಕಾಶ ನೀಡಿದೆ.

  • 09 Jan 2021 09:59 AM (IST)

    244ಕ್ಕೆ ಪತನ ಕಂಡ ಭಾರತ

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಭಾರತ 244ಕ್ಕೆ ತನ್ನ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡಿದೆ.ಈಮೂಲಕ ಭಾರತಕ್ಕೆ 94ರನ್​ಗಳ ಹಿನ್ನೆಡೆಯಾಗಿದೆ.

  • 09 Jan 2021 09:58 AM (IST)

    ಸರ್ಕಾರಿ ಆಸ್ಪತ್ರೆಯಲ್ಲಿ 10 ಮಕ್ಕಳ ಸಜೀವ ದಹನ

    ಮಹಾರಾಷ್ಟ್ರದ ಬಾಂದಾರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ 10 ಮಕ್ಕಳು ಮೃತಪಟ್ಟಿದ್ದಾರೆ.7 ಮಕ್ಕಳನ್ನು ರಕ್ಷಿಸಲಾಗಿದ್ದು, ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ವಿವಿಧ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

  • 09 Jan 2021 09:58 AM (IST)

    ಆಸ್ಟ್ರೇಲಿಯಾ ವಿರುದ್ಧ ಸಂಕಷ್ಟಕ್ಕೆ ಸಿಲುಕಿದ ಭಾರತ

    ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟ ಪ್ರಾರಂಭವಾಗಿದ್ದು, ಟೀಂ ಇಂಡಿಯಾ 225 ರನ್​ಗಳಿಗೆ 9 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

  • 09 Jan 2021 09:57 AM (IST)

    ಗುಜರಾತ್​ನ ಮಾಜಿ ಸಿಎಂ ನಿಧನ

    ಗುಜರಾತ್​ನ ಮಾಜಿ ಮುಖ್ಯಮಂತ್ರಿ ಮಾಧವ್​ ಸಿಂಗ್ ಸೋಲಂಕಿ ನಿಧನರಾಗಿದ್ದಾರೆ. 1976ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರವೇರಿದ್ದ ಅವರು ತಮ್ಮ 93ನೇ ವರ್ಷದಲ್ಲಿ ಮೃತಪಟ್ಟಿದ್ದಾರೆ. ಅಲ್ಲದೇ ಅವರು ಗುಜರಾತ್ ಕಾಂಗ್ರೆಸ್​ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

  • 09 Jan 2021 09:57 AM (IST)

    ಟ್ವಿಟ್ಟರ್ ಷೇರು ಮೌಲ್ಯದಲ್ಲಿ ಕುಸಿತ

    ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ವೈಯಕ್ತಿಕ ಟ್ವಿಟ್ಟರ್ ಖಾತೆ ರದ್ದುಗೊಳಿಸಿದ ಬೆನ್ನಲ್ಲೇ ಟ್ವಿಟ್ಟರ್​ನ ಷೇರು ಮೌಲ್ಯದಲ್ಲಿ ಶೇ.13ರಷ್ಟು ಕುಸಿತ ಕಂಡಿದೆ. ಟ್ವಿಟ್ಟರ್​ನಲ್ಲಿ ಡೊನಾಲ್ಡ್ ಟ್ರಂಪ್ ಹಿಂಬಾಲಕರ ಸಂಖ್ಯೆ ಟ್ವಿಟ್ಟರ್​ನ ದಿನನಿತ್ಯದ ಬಳಕೆದಾರರ ಸಂಖ್ಯೆಗೆ ಸರಿಸಮವಿದ್ದು, ಟ್ವಿಟ್ಟರ್ ಷೇರಿನಲ್ಲಿ ಕುಸಿತ ಕಂಡಿದೆ.

  • 09 Jan 2021 09:56 AM (IST)

    ಡೊನಾಲ್ಡ್ ಟ್ರಂಪ್ ವೈಯಕ್ತಿಕ ಟ್ವಿಟ್ಟರ್ ಖಾತೆ ಶಾಶ್ವತ ರದ್ದು

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ವೈಯಕ್ತಿಕ ಖಾತೆಯನ್ನು ಟ್ವಿಟ್ಟರ್ ಶಾಶ್ವತವಾಗಿ ರದ್ದುಗೊಳಿಸಿದೆ. ಡೊನಾಲ್ಡ್ ಟ್ರಂಪ್ ಬೆಂಬಲಿಗರ ಗಲಭೆಯನ್ನ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಟವರ ಟ್ವೀಟ್​ಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಪಾಯವಿದೆ ಎಂದು ಕಾರಣ ನೀಡಿರುವ ಟ್ವಿಟ್ಟರ್ ಅವರ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಿದೆ. ಅಲ್ಲದೇ, ಡೊನಾಲ್ಡ್ ಟ್ರಂಪ್ ಬೆಂಬಲಿಗರ ಖಾತೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಪ್ರಸ್ತುತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ.

Published On - 8:59 pm, Sat, 9 January 21

Follow us on