ಹುಬ್ಬಳ್ಳಿ ಗಣೇಶೋತ್ಸವ: ಈದ್ಗಾ ಮೈದಾನದಲ್ಲಿ ಸಿಂಹಾಸನಾರೂಢ ಗಣಪತಿ ಪ್ರತಿಷ್ಠಾಪನೆ

| Updated By: Rakesh Nayak Manchi

Updated on: Aug 31, 2022 | 11:08 AM

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಹಿಂದೂ ಪರ ಸಂಘಟನೆಗಳಿಂದ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಲು ಸಿದ್ಧತೆಗಳನ್ನು ನಡೆಸಿದ್ದು, ಮಧ್ಯಾಹ್ನ 1 ಗಂಟೆಗೆ ಮೆರವಣಿಗೆ ಮೂಲಕ ಗಣೇಶನ ವಿಗ್ರಹವನ್ನು ತಂದು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಹುಬ್ಬಳ್ಳಿ ಗಣೇಶೋತ್ಸವ: ಈದ್ಗಾ ಮೈದಾನದಲ್ಲಿ ಸಿಂಹಾಸನಾರೂಢ ಗಣಪತಿ ಪ್ರತಿಷ್ಠಾಪನೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣಪತಿಯ ಪ್ರತಿಷ್ಠಾಪನೆ
Follow us on

ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆ ಹಿಂದೂ ಪರ ಸಂಘಟನೆಗಳಿಂದ ಗಣೇಶ ಹಬ್ಬವನ್ನು ಆಚರಿಸಲು ಸಿದ್ಧತೆಗಳನ್ನು ನಡೆಸಿದ್ದು, ಈಗಾಗಲೇ ಪೆಂಡಾಲ್ ಹಾಕಿ ಗಣೇಶನನ್ನು ಕೂರಿಸಲು ತಯಾರಿ ನಡೆಸಿದ್ದಾರೆ. ಅದರಂತೆ ಗಣೇಶನ ಮೂರ್ತಿಯನ್ನು ತಂದು ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಗೆ ನಿಗದಿಯಾಗಿದ್ದ ಮೆರವಣಿಗೆ ಕೈಬಿಟ್ಟು ಸರಳವಾಗಿ ಗಣೇಶನ ಮೂರ್ತಿಯನ್ನು ತಂದು ಬೆಳಗ್ಗೆ 7.30ಕ್ಕೆ ಪ್ರತಿಷ್ಠಾಪನೆ ಮಾಡಲಾಗಿದೆ.

ಇನ್ನೊಂದೆಡೆ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ವಿವಾದವನ್ನು ಇತ್ಯರ್ಥಪಡಿಸಿದ ಕೋರ್ಟ್, ರಾಣಿ ಚೆನ್ನಮ್ಮ ಗಣೇಶೋತ್ಸವ ಮಹಾಮಂಡಳಿ ಸಮಿತಿಗೆ ಗಣೇಶೋತ್ಸವದ ಜವಾಬ್ದಾರಿಯನ್ನು ನೀಡಿದೆ. ಈ ನಿಟ್ಟಿನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೈದಾನದಲ್ಲಿ ಗಣೇಶನನ್ನು ಪ್ರತಿಷ್ಠಾನ ಮಾಡಲಿರುವ ಮಹಾಮಂಡಳಿ ಸಮಿತಿಯು ಎಲ್ಲ ಸಿದ್ಧತೆಗಳನ್ನು ನಡೆಸಿಕೊಂಡಿದೆ. ಅಲ್ಲದೆ ಗಣೇಶನ ಪ್ರತಿಷ್ಠಾಪನೆ ವೇಳೆ ಕೇಂದ್ರ ಸಚಿವ ಪ್ತಹ್ಲಾದ್ ಜೋಶಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಾಗಿಯಾಗುವ ಸಾಧ್ಯತೆ ಇದೆ. ಅಲ್ಲದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೈದಾನದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ತೀರ್ಪು ಹೊರಬೀಳುತ್ತಿದ್ದಂತೆ ಜೋಶಿ ‘ಖುಷಿ’, ನಿವಾಸದಲ್ಲಿ ಸಭೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್​ ಅಸ್ತು ಎಂದ ಹಿನ್ನೆಲೆ ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲಿ ರಾತ್ರೋರಾತ್ರಿ ಸಭೆ ನಡೆಸಲಾಗಿದ್ದು, ಗಣೇಶೋತ್ಸವದ ಚಟುವಟಿಕೆ ಗರಿಗೆದರಿದೆ. ಮೇಯರ್ ಈರೇಶ ಅಂಚಟಗೇರಿ ಬಿಜೆಪಿ ಕಾಪೋರೇಟರ್​ಗಳ ಜೊತೆ ಕೇಂದ್ರ ಸಚಿವರು ಸಭೆ ನಡೆಸಿದರು. ಈ ಸಭೆಯಲ್ಲಿ ಪಕ್ಷದ ಮುಖಂಡರು ಕೂಡ ಭಾಗಿಯಾಗಿದ್ದರು.

ಅನಗತ್ಯ ವಿವಾದಕ್ಕೆ ಯತ್ನ

ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ ಪ್ರಹ್ಲಾದ್ ಜೋಶಿ, ವರ್ಷಕ್ಕೆ ಕೇವಲ 2 ಬಾರಿ ನಮಾಜ್​ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಹುಬ್ಬಳ್ಳಿಯ ಈದ್ಗಾ ಮೈದಾನ ಒಂದು ಸಾರ್ವಜನಿಕ ಸ್ವತ್ತು ಆಗಿದೆ. ಆದರೆ ಅನಗತ್ಯವಾಗಿ ವಿವಾದ ಮಾಡಲು ಪ್ರಯತ್ನ ಮಾಡಿದ್ದರು ಎಂದರು. ಅಲ್ಲದೆ ಮೈದಾನದಲ್ಲಿ ನಮಾಜ್ ಮಾಡಲು ಯಾರೂ ವಿರೋಧ ಮಾಡಿಲ್ಲ. ಹೀಗಾಗಿ ಮೂರು ದಿನಗಳ ಗಣೇಶೋತ್ಸವದ ಸಂದರ್ಭದಲ್ಲಿ ಯಾರು ಕೂಡ ವಿರೋಧ ಮಾಡಬಾರದು ಎಂದರು.

ಈದ್ಗಾ ಮೈದಾನ ಶುದ್ಧಿಕರಣ

ಹೈಕೋರ್ಟ್ ತೀರ್ಪು ನೀಡುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಹರ್ಷಗೊಂಡು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅಲ್ಲದೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸ್ಥಳವನ್ನು ಗೋ ಮೂತ್ರದಿಂದ ಶುದ್ಧೀರಕಿಸಿದರು.

ಬಾಂಬ್ ಪತ್ತೆ ದಳದಿಂದ ಪರಿಶೀಲನೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆ ಮೈದಾನದಲ್ಲಿ ಬಾಂಬ್ ಪತ್ತೆ ದಳದಿಂದ ಪರಿಶೀಲನೆ ನಡೆಸಲಾಯಿತು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಶ್ವಾನ ದಳದಿಂದಲೂ ಮೈದಾನದ ಇಂಚಿಂಚೂ ಪರಿಶೀಲನೆ ಮಾಡಲಾಯಿತು. ಅಲ್ಲದೆ 2 ಡ್ರೋನ್​ಗಳ ಮೂಲಕ ಮೈದಾನದ ಸುತ್ತು ನಿಗಾ ಇಡಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 am, Wed, 31 August 22