ಬೆಂಗಳೂರು ಅ.18: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ನಡೆದು ಐದು ತಿಂಗಳು ಕಳೆದರೂ ರಾಜ್ಯ ವಿಧಾನಸಭೆಗೆ ವಿರೋಧ ಪಕ್ಷ (Opposition Leader) ನಾಯಕನ ಆಯ್ಕೆಯಾಗಿಲ್ಲ. 66 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ (BJP) ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕೂಡ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ. ಕಮಲ ಪಾಳಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ವಿರೋಧ ಪಕ್ಷದ ನಾಯಕನ ಆಯ್ಕೆ ಮಾನವ ಹಕ್ಕುಗಳ (Human Rights) ತನಿಖೆಗೂ ಅಡ್ಡಿ ಮಾಡುತ್ತಿದೆ.
ಎಂಟು ತಿಂಗಳಾದರೂ ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರನ್ನು ಆಯ್ಕೆ ಮಾಡಿಲ್ಲ ಎಂದು ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನೊಟೀಸ್ ನೀಡಿದೆ. ವಿರೋಧ ಪಕ್ಷ ನಾಯಕರ ಆಯ್ಕೆ ಆಗದ ಕಾರಣಕ್ಕೆ ಮಾನವಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರ ಆಯ್ಕೆ ತಡವಾಗಿದೆ ಎಂದು ನೊಟೀಸ್ಗೆ ಸರ್ಕಾರಿ ಮುಖ್ಯ ಕಾರ್ಯದರ್ಶಿ ಉತ್ತರ ನೀಡಿದ್ದಾರೆ.
ಮಾನವ ಹಕ್ಕುಗಳ ಆಯೋಗಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿ, ಗೃಹ ಸಚಿವರು, ಕಾನೂನು ಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರ ಮೂಲಕ ಆಯ್ಕೆ ಮಾಡಲಾಗುತ್ತೆ. ಅಧ್ಯಕ್ಷರು ಸದಸ್ಯರ ಆಯ್ಕೆಯಿಲ್ಲದೆ ಅಧಿಕಾರಿಗಳು ಸುಮ್ಮನೇ ಕೂರುವಂತಾಗಿದೆ. ರಾಜ್ಯ ಮಾನವ ಹಕ್ಕು ಆಯೋಗದಲ್ಲಿ ಸಾವಿರಾರು ಪ್ರಕರಣಗಳು ತನಿಖೆ ಆಗದೆ ಬಾಕಿ ಉಳಿದಿವೆ. ಸಾವಿರಾರು ಪ್ರಕರಣಗಳ ಪ್ರಾಥಮಿಕ ತನಿಖೆ ಕೂಡ ಇನ್ನೂ ಶುರುವಾಗಿಲ್ಲ. ಮಾನವ ಹಕ್ಕುಗಳ ಆಯೋಗದಲ್ಲಿ 4925 ಪ್ರಕರಣಗಳು ದಾಖಲಾಗಿದ್ದು, ತನಿಖೆಗೆ ಆಗಿಲ್ಲ.
ಇದನ್ನೂ ಓದಿ: ಒಡಿಶಾ ಮಹಿಳಾ ಹೋಮ್ ಗಾರ್ಡ್ಗೆ ಡಿಐಜಿ ಚಿತ್ರಹಿಂಸೆ ನೀಡಿದ್ದ ಪ್ರಕರಣ; ತನಿಖೆಗೆ ಮುಂದಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
ಕಳೆದ ಎಂಟು ತಿಂಗಳಿನಿಂದ ಪೊಲೀಸ್ ಕಸ್ಟಡಿಯಲ್ಲಿ ಸತ್ತವರ ಸಂಖ್ಯೆಯೂ ಹೆಚ್ಚಳವಾಗಿದೆ. ಎಂಟು ತಿಂಗಳಲ್ಲಿ 58 ಲಾಕಪ್ ಡೆತ್ ಪ್ರಕರಣಗಳು ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾಗಿವೆ. ಇನ್ನು 250 ಲಾಕಪ್ ಡೆತ್ ಪ್ರಕರಣಗಳದ್ದು, ಪ್ರಾಥಮಿಕ ತನಿಖೆ ಮುಗಿದಿದೆ. ಈಗ ಮತ್ತೆ ಹೊಸದಾಗಿ 58 ಲಾಕಪ್ ಡೆತ್ ಪ್ರಕರಣಗಳು ದಾಖಲಾಗಿವೆ. 308 ಪ್ರಕರಣಗಳು ತನಿಖೆ ಆಗದೆ ಟೇಬಲ್ ಮೇಲೆ ಇವೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರಿನಲ್ಲೇ ಹೆಚ್ಚು ಲಾಕಪ್ ಡೆತ್ ಪ್ರಕರಣಗಳು ನಡೆದಿವೆ. ಪ್ರಕರಣ ಜಾಸ್ತಿ ಆಗುತ್ತಿರುವುದಕ್ಕೆ ಕಾರಣ ಏನು..? ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಅಂತ ದೂರು ಕೊಟ್ಟರೆ ಕೇಸ್ ದಾಖಲಿಸಿ ದಾಳಿ ಮಾಡುತ್ತಿದರು. ಆದರೆ ಈಗ ದೂರು ನೀಡಿದರು ರಿಜಿಸ್ಟರ್ ಮಾಡಲು ರಿಜಿಸ್ಟರ್ ಕೂಡ ನಿವೃತ್ತಿಯಾಗಿದ್ದಾರೆ. ಕೇವಲ ದೂರು ಸ್ವೀಕರಿಸಬಹುದು ಅಷ್ಟೇ, ಆಕ್ಷನ್ ಮಾಡಲು ಆಗಲ್ಲ. ರಾಜ್ಯ ಮಾನವ ಹಕ್ಕುಗಳ ಇಲಾಖೆಗೆ ಅಧಿಕಾರ ಇದ್ದರೂ ಇಲ್ಲದಂತಾಗಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Tue, 17 October 23