ಕೊಪ್ಪಳ: ಹನುಮ ಹುಟ್ಟಿದ ಸ್ಥಳ ಎಂಬ ಪ್ರತೀತಿ ಇರುವ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯ ಅಂಜನಾದ್ರಿ ಬೆಟ್ಟಕ್ಕೆ ದೇಶ ವಿದೇಶಿಗಳಿಂದ ಹನುಮನ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ. ದರ್ಶನ ಪಡೆಯಲು ಬರುವವರು 576 ಮೆಟ್ಟಿಲುಗಳನ್ನು ಹತ್ತಲು ಭಕ್ತರು ಪರದಾಡುತ್ತಾರೆ. ಆದರೆ ಇನ್ನು ಮುಂದೆ ಮೆಟ್ಟಿಲುಗಳನ್ನು ಹತ್ತಲು ಕಷ್ಟಪಡುವ ಭಕ್ತರಿಗಾಗಿ ಖಾಸಗಿ ಸಹಭಾಗಿತ್ವದಲ್ಲಿ ರೋಪ್ ವೇ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಿರ್ಮಾಣದ ಬಗ್ಗೆ ಚಿಂತನೆ ನಡೆದಿದೆ.
ಆಂಜನೇಯ ದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದ ಮೇಲೆ ಆದಾಯದಲ್ಲಿ ಏರಿಕೆ ಕಂಡಿದೆ. ದೇವಾಲಯದ ಅಭಿವೃದ್ದಿ ಕಡೆಗೆ ಗಮನ ಹರಿಸುತ್ತಿದೆ. ದೇವಾಲಯದ ಕೆಳಭಾಗದ ಜಮೀನನ್ನು ಭೂಸ್ವಾಧೀನ ಮಾಡಿಕೊಂಡು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ.
18 ಕೋಟಿ ರೂ. ಬಿಡುಗಡೆ: ದರ್ಶನ ಪಡೆಯಲು ಸುಮಾರು 576 ಮೆಟ್ಟಿಲುಗಳನ್ನು ಹತ್ತಲು ವಯೋವೃದ್ದರು ಹಾಗೂ ಮಕ್ಕಳು ಕಷ್ಟಪಡುತ್ತಿದ್ದಾರೆ. ಈ ಕುರಿತು ಚಿಂತನೆ ನಡೆಸಿದ ನಂತರ ಜಿಲ್ಲಾಡಳಿತ ಮುಜರಾಯಿ ಇಲಾಖೆಗೆ ಸುಮಾರು 7-8 ತಿಂಗಳ ಹಿಂದೆ ರೋಪ್ವೇ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿತ್ತು. ನಂತರ ರೋಪ್ ವೇ ನಿರ್ಮಾಣಕ್ಕಾಗಿ ದೇವಾಲಯದ ಸಂಸ್ಕೃತ ಪಾಠ ಶಾಲೆಯ ಬಳಿಯ ಸುಮಾರು 10 ಎಕರೆ ಜಮೀನು ಗುರುತಿಸಿ ಸುಮಾರು ₹ 18 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ನಿರ್ಮಾಣಕ್ಕಾಗಿ ಮುಂದೆ ಬಂದ ಕಂಪನಿಗಳು: ರೋಪ್ ವೇ ನಿರ್ಮಾಣಕ್ಕಾಗಿ ಈಗಾಗಲೇ ಕೊಲ್ಕತ್ತಾ, ಮುಂಬಯಿ ಸೇರಿದಂತೆ ಹಲವೆಡೆಯ ಮೂರ್ನಾಲ್ಕು ಕಂಪನಿಗಳು ಮುಂದೆ ಬಂದಿದ್ದು, ಸದ್ಯಕ್ಕೆ ಯಾವ ಕಂಪನಿಗೆ ನೀಡಬೇಕೆಂದು ನಿರ್ಧರಿಸಿಲ್ಲ. ರೋಪ್ ವೇ ನಿರ್ಮಾಣದ ನಂತರ ದೇವರ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾದರೆ ಬರುವ ಆದಾಯದಲ್ಲಿ ಶೇಕಡವಾರು ಪ್ರಮಾಣ ದೇವಾಲಯಕ್ಕೆ ನೀಡಬೇಕು ಎನ್ನುವ ಷರತ್ತು ಕಂಪನಿಗೆ ವಿಧಿಸಲು ಚಿಂತನೆ ನಡೆದಿದೆ.
ಸೇತುವೆ ನಿರ್ಮಾಣದ ಸಾಧ್ಯತೆ: ರೋಪ್ ವೇ ಅಳವಡಿಸಿರುವ ರಾಜ್ಯದ ಕೆಲವೆಡೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ರೋಪ್ ವೇ ಬದಲಾಗಿ ಸೇತುವೆ ನಿರ್ಮಾಣದ ಪ್ರಸ್ತಾವನೆ ಜಿಲ್ಲಾಡಳಿತದ ಮುಂದಿದೆ. ಸೇತುವೆ ನಿರ್ಮಾಣ ಮಾಡಿದರೆ ಖರ್ಚು ಕಡಿಮೆಯಾಗಲಿದೆ ಎನ್ನುವ ಚರ್ಚೆ ನಡೆದಿದೆ. ಆದರೆ ಸೇತುವೆ ನಿರ್ಮಾಣ ಮಾಡಿದರೂ ಭಕ್ತರು ನಡೆದುಕೊಂಡು ಹೋಗಬೇಕಾಗುತ್ತದೆ. ಆದ್ದರಿಂದ ರೋಪ್ ವೇ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಶೀಘ್ರದಲ್ಲೇ ನಿರ್ಧಾರವಾಗಲಿದೆ.
ಪ್ರವಾಸೋದ್ಯಮ ಇಲಾಖೆಗೆ ಪತ್ರ: ಅಂಜನಾದ್ರಿಯಲ್ಲಿ ರೋಪ್ ವೇ ನಿರ್ಮಾಣಕ್ಕೆ ಸರ್ಕಾರವು ಬಜೆಟ್ನಲ್ಲಿ ಅನುದಾನ ನೀಡಿದೆ. ಈ ಕಾಮಗಾರಿಯನ್ನು ಸರ್ಕಾರ ನಿರ್ವಹಿಸಬೇಕೆ ಅಥವಾ ಖಾಸಗಿಯವರಿಗೆ ವಹಿಸಬೇಕೆ ಎನ್ನುವುದರ ಬಗ್ಗೆ ಚಿಂತನೆ ನಡೆದಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
– ಶಿವಕುಮಾರ್ ಪತ್ತಾರ್
ಕೊರೊನಾದಿಂದ ಭಕ್ತರನ್ನು ‘ಗ್ಯಾರಂಟಿ’ಯಾಗಿ ರಕ್ಷಿಸ್ತಾನಂತೆ ಈ ‘ಕೋರಂಟಿ’ ಹನುಮ!
Published On - 2:07 pm, Sun, 6 December 20