ಬೆಂಗಳೂರು: ರಾಜ್ಯದಲ್ಲಿ ಸುರಿದ ನಿರಂತರ ಮಳೆಯಿಂದ ಆದ ನಷ್ಟ ಅಷ್ಟಿಷ್ಟಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಹಾನಿಯಾದ ರಸ್ತೆ ದುರಸ್ತಿಗೆ 500 ಕೋಟಿ ರೂ. ನೀಡಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ತಕ್ಷಣವೇ 1 ಲಕ್ಷ ರೂ. ಬಿಡುಗಡೆ ಮಾಡಲು ಸೂಚಿಸಿದ್ದೇವೆ. ಭಾಗಶಃ ಮನೆ ಹಾನಿಗೆ ಹಣ ಬಿಡುಗಡೆಗೆ ಆದೇಶಿಸಿದ್ದೇನೆ ಅಂತ ತಿಳಿಸಿದ್ದಾರೆ.
ಬೆಳೆ ಸಮೀಕ್ಷೆ ಪರಿಹಾರ ಆ್ಯಪ್ನಲ್ಲಿ ಎಂಟ್ರಿಯಾಗಬೇಕು. ಅದರಂತೆ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಹಾಸನ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದೆ. ರಾಜ್ಯದಲ್ಲಿ ಡಿಸಿಗಳ ಖಾತೆಯಲ್ಲಿ 689 ಕೋಟಿ ರೂ. ಇದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಪರಿಹಾರ ಬಿಡುಗಡೆ ಮಾಡಲು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚಿಸಿದ್ದಾರೆ. ಕೃಷಿ, ಕಂದಾಯ, ತೋಟಗಾರಿಕೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿರುವ ಸಿಎಂ, ಬೆಳೆ ನಷ್ಟ ಪರಿಹಾರ ವಿತರಣೆಯೂ ತ್ವರಿತವಾಗಿ ಆಗಬೇಕು. 15ರಿಂದ 20 ದಿನ ಬೆಳೆ ಹಾನಿ ಸಮೀಕ್ಷೆ ನಡೆಸಲು ತಿಳಿಸಿದ್ದಾರೆ.
ಆಗಸ್ಟ್, ಸೆಪ್ಟೆಂಬರ್ನಲ್ಲಾದ ಬೆಳೆ ಹಾನಿಗೆ 1.5 ಲಕ್ಷ ರೈತರಿಗೆ 130 ಕೋಟಿ ರೂ. ಬಿಡುಗಡೆಯಾಗಿದೆ. ಉಳಿದ 79,000 ರೈತರಿಗೆ ₹52 ಕೋಟಿ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಬೊಮ್ಮಾಯಿಂದ ಮಳೆ ಹಾನಿ ವೀಕ್ಷಣೆ
ಕೋಲಾರ ಜಿಲ್ಲೆಯಲ್ಲಿಂದು ಮಳೆ ಹಾನಿ ಬಗ್ಗೆ ಸಿಎಂ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕೋಲಾರ ಜಿಲ್ಲೆಗೆ ಸಿಎಂ ಭೇಟಿ ನೀಡಲಿದ್ದು, ಬೊಮ್ಮಾಯಿಗೆ ಉಸ್ತುವಾರಿ ಸಚಿವ, ಸಂಸದ ಸಾಥ್ ನೀಡಲಿದ್ದಾರೆ. ಕೋಲಾರ ತಾಲೂಕಿನ ನರಸಾಪುರ, ಚೌಡದೇನಹಳ್ಳಿ, ಮುದುವಾಡಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಜಿಲ್ಲೆಯಲ್ಲಿ 35 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. 6,965 ಹೆಕ್ಟೇರ್‌ನಲ್ಲಿದ್ದ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಅಲ್ಲದೇ ಭಾರಿ ಮಳೆಗೆ ಮೂವರ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮನೆಗಳು ಕುಸಿದಿವೆ.
ಇದನ್ನೂ ಓದಿ
ಪಠಾಣ್‌ಕೋಟ್‌ನ ಸೇನಾ ಶಿಬಿರದ ಬಳಿ ಗ್ರೆನೇಡ್ ದಾಳಿ; ಮುಂದುವರಿದ ತನಿಖೆ
Bengaluru Rain: ಬೆಂಳೂರಿನಲ್ಲಿ ಮಳೆ ಅವಾಂತರ; ಅಪಾರ್ಟ್ಮೆಂಟ್ಗಳಿಗೆ ನುಗ್ಗಿದ ನೀರು
Published On - 11:06 am, Mon, 22 November 21