ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ; ಕೆಆರ್​ ಪುರ ತಹಶೀಲ್ದಾರ್ ಅಜಿತ್ ಆಗಿದ್ದ ರೈಗೆ ಜಾಮೀನು

| Updated By: ಗಣಪತಿ ಶರ್ಮ

Updated on: Aug 14, 2023 | 10:53 PM

ಜೂನ್​​ನಲ್ಲಿ ನ್ಯಾಯಾಲಯವು ಅಜಿತ್ ರೈಯನ್ನು ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿತ್ತು.ಲೋಕಾಯುಕ್ತ ಕಸ್ಟಡಿ ಅವಧಿ ಜುಲೈ 6ಕ್ಕೆ ಮುಕ್ತಾಯವಾಗಿತ್ತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು. ಇದೀಗ ಪತ್ನಿಯ ಅನಾರೋಗ್ಯದ ಕಾರಣ ನೀಡಿ ಅವರು ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ; ಕೆಆರ್​ ಪುರ ತಹಶೀಲ್ದಾರ್ ಅಜಿತ್ ಆಗಿದ್ದ ರೈಗೆ ಜಾಮೀನು
ಅಜಿತ್ ರೈ
Follow us on

ಬೆಂಗಳೂರು, ಆಗಸ್ಟ್ 14: ಕೆಆರ್​ ಪುರ ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈಗೆ (Ajit Rai) ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಸೋಮವಾರ ಜಾಮೀನು (Bail) ದೊರೆತಿದೆ. ಅರ್ಜಿದಾರರ ಪತ್ನಿಯ ಅನಾರೋಗ್ಯ ಕಾರಣ ನೀಡಿ ವಾದ ಮಂಡನೆ ಮಾಡಿದ್ದನ್ನು ಆಲಿಸಿದ ನ್ಯಾಯಾಧೀಶ ಕೆಎಂ ರಾಧಾಕೃಷ್ಣ ಅವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ಎಂಎಸ್ ಶ್ಯಾಮಸುಂದರ್ ವಾದ ಮಂಡಿಸಿದ್ದರು. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೂನ್ 29 ರಂದು ಲೋಕಾಯುಕ್ತ ಪೊಲೀಸರು ಅಜಿತ್ ರೈಯನ್ನು ಬಂಧಿಸಿದ್ದರು.

ಜೂನ್​ 28ರಂದು ಅಜಿತ್ ರೈ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಸತತ 30 ಗಂಟೆಗಳಿಗೂ ಹೆಚ್ಚು ಕಾಲ ಶೋಧ ನಡೆಸಿದ್ದ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ನಗದು, ಆಸ್ತಿ ದಾಖಲೆ ಪತ್ರಗಳು ಹಾಗೂ ಸಂಪತ್ತನ್ನು ಪತ್ತೆಮಾಡಿದ್ದರು. ನಂತರ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿರುವ ಆರೋಪದಲ್ಲಿ ಅವರನ್ನು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅಜಿತ್ ರೈಯನ್ನು ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿತ್ತು.

ಅಜಿತ್ ರೈ ಲೋಕಾಯುಕ್ತ ಕಸ್ಟಡಿ ಅವಧಿ ಜುಲೈ 6ಕ್ಕೆ ಮುಕ್ತಾಯವಾಗಿತ್ತು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತ್ತು.

ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಲಭ್ಯವಾಗಿದ್ದವು. ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿದ್ದವು. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ಅಜಿತ್ ರೈ ಲೋಕಾಯುಕ್ತ ಕಸ್ಟಡಿ ಅವಧಿ ಮುಕ್ತಾಯ: ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಶೇಷ ಕೋರ್ಟ್‌

ಅಜಿತ್ ರೈ ಮನೆಯಲ್ಲಿ ಏನೇನು ಸಿಕ್ಕಿತ್ತು?

ಎಸಿ, ಟಿವಿ, ಬಟ್ಟೆ ಬರೆ ಬ್ಯಾಗ್​​ಗಳು ಸೇರಿದಂತೆ ಅಜಿತ್ ರೈ ಮನೆಯ ಬೆಡ್ ರೂಂನಲ್ಲಿ 4.28 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದವು. ಡೈನಿಂಗ್ ಹಾಲ್ ಮತ್ತು ಅಡುಗೆ ಕೋಣೆಯಲ್ಲಿ 5.83 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಪತ್ತೆಯಾಗಿದ್ದವು. 50 ಸಾವಿರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸಿಕ್ಕಿದ್ದವು. 100 ಗ್ರಾಂನ ಒಂದು ಕಡ, 183 ಗ್ರಾಂ ತೂಕದ ಚೈನ್, 108 ಗ್ರಾಂ ಲಾಂಗ್ ಚೈನ್, ಮುತ್ತಿನ ಹಾರ, ಉಂಗುರ, ಬ್ರಾಸ್ ಲೇಟ್ ಸೇರಿ 795 ಗ್ರಾಂ ಚಿನ್ನಾಭರಣ ಹಾಗೂ ಅದೇ ರೀತಿ 7ಕೆಜಿ 520 ಗ್ರಾಂ ಬೆಳ್ಳಿ ವಸ್ತುಗಳು ಪತ್ತೆಯಾಗಿದ್ದವು. ಮೂರು ರ್ಯಾಡೋ, ಮೆಸಾರಿಟಿ, ಟೈಟಾನ್, ಟೆಸ್ಲಾಟ್, ಸಿಕೋ ಕಂಪನಿಯ ಒಟ್ಟು 7.63 ಲಕ್ಷ ಮೌಲ್ಯದ 27 ವಾಚ್​ಗಳು ಪತ್ತೆಯಾಗಿದ್ದವು. ಅಜಿತ್ ರೈ ಹಾಗೂ ಪತ್ನಿ ಹೆಸರಲ್ಲಿ ಮೂರು ಬ್ಯಾಂಕ್ ಖಾತೆಗಳಿದ್ದು ಒಟ್ಟು 16 ಮೊಬೈಲ್ ಫೋನ್ ಪತ್ತೆಯಾಗಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ