ಅಜಿತ್ ರೈ ಲೋಕಾಯುಕ್ತ ಕಸ್ಟಡಿ ಅವಧಿ ಮುಕ್ತಾಯ: ಹೆಚ್ಚಿನ ತನಿಖೆಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ವಿಶೇಷ ಕೋರ್ಟ್
ಲೋಕಾಯುಕ್ತ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆ ಕೆಆರ್ ಪುರಂ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಅವರನ್ನು ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬೆಂಗಳೂರು: ಲೋಕಾಯುಕ್ತ (Lokayukta) ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆ ಹೆಚ್ಚಿನ ತನಿಖೆಗಾಗಿ ಕೆಆರ್ ಪುರಂ ತಹಶೀಲ್ದಾರ್ ಆಗಿದ್ದ ಅಜಿತ್ ರೈ (Ajit Rai) ಅವರನ್ನು ನ್ಯಾಯಾಂಗ ಬಂಧನಕ್ಕೆ (Judicial custody) ಒಪ್ಪಿಸಿ ಲೋಕಾಯುಕ್ತ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಕಸ್ಟಡಿ ಅವಧಿ ಮುಕ್ತಾಯ ಹಿನ್ನೆಲೆ ಅಜಿತ್ ರೈ ಅವರನ್ನು ಇಂದು ಕೋರ್ಟ್ಗೆ ಹಾಜರುಪಡಿಸಿದ ಲೋಕಾ ಅಧಿಕಾರಿಗಳು, ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಅಜಿತ್ ರೈ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಂತೆ ಅಜಿತ್ ರೈ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ ವಿಶೇಷ ನ್ಯಾಯಾಲಯವು, ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತು.
ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಲೋಕಾಯುಕ್ತರಿಂದ ಬಂಧಿತರಾಗಿದ್ದ ಅಜೀತ್ ರೈ ಅವರಿಗೆ ಹಿಂಬಡ್ತಿ ನೀಡಿ ರಾಯಚೂರಿಗೆ ವರ್ಗಾವಣೆಯಾಗಿದೆ. ಸಿರವಾರ ತಾಲೂಕಿಗೆ ತಹಶೀಲ್ದಾರ್ ಗ್ರೇಡ್-1 ನಿಂದ ತಹಶಿಲ್ದಾರ್ ಗ್ರೇಡ್-2 ಹುದ್ದೆಗೆ ಹಿಂಬಡ್ತಿಯಾಗಿ ಅಜಿತ್ ರೈ ವರ್ಗಾವಣೆ ಮಾಡಲಾಗಿತ್ತು. ಇದಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣ ಸೇರಿ ಎಲ್ಲೆಡೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಜಿತ್ ರೈ ಅಮಾನತ್ತಿನಲ್ಲಿದ್ದರೂ ಜೂನ್ 30 ರಂದು ನೇಮಕಾತಿ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸುವಂತೆ ಜನರು ಒತ್ತಾಯಿಸುತ್ತಿದ್ದರು.
ಇದನ್ನೂ ಓದಿ: ಲೋಕಾಯುಕ್ತ ದಾಳಿ ಪ್ರಕರಣ: ಅಜಿತ್ ರೈಗೆ ಮತ್ತೊಂದು ಸಂಕಷ್ಟ, ವರದಿ ಕೇಳಿದ ಇಡಿ
ಕೋಟ್ಯಂತರ ರೂಪಾಯಿ ಒಡೆಯ ಅಜಿತ್ ರೈ ಮನೆ ಸೇರಿದಂತೆ ಇವರಿಗೆ ಸೇರಿದ 10 ಕಡೆಗಳಿಗೆ ಜೂನ್ 28 ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ 40 ಲಕ್ಷ ನಗದು, 3.5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳು, ಐಷಾರಾಮಿ ವಾಹಾನಗಳು ಪತ್ತೆಯಾಗಿದ್ದು, ನೂರಾರು ಕೋಟಿ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದ್ದವು. ಇವರ ಸಹೋದರ ಹಾಗೂ ಸ್ನೇಹಿತನ ಹೆಸರಿನಲ್ಲೂ ದಾಖಲಿಸಿದ್ದ ಆಸ್ತಿ ಪತ್ರಗಳು ಲಭ್ಯವಾಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 pm, Thu, 6 July 23