ಲೋಕಾಯುಕ್ತ ದಾಳಿ ಪ್ರಕರಣ: ಅಜಿತ್ ರೈಗೆ ಮತ್ತೊಂದು ಸಂಕಷ್ಟ, ವರದಿ ಕೇಳಿದ ಇಡಿ
ಕೆಆರ್ ಪುರಂ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಮನೆ ಮೇಲೆ ನಡೆದಿದ್ದ ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದ್ದು, ಆಸ್ತಿ-ಪಾಸ್ತಿ ದಾಖಲೆಗಳ ವಿಂಗಡಿಸುವ ಕೆಲಸ ಮಾಡಲಾಗುತ್ತಿದೆ. ಇನ್ನೊಂದೆಡೆ, ಲೋಕಾಯುಕ್ತದಿಂದ ಜಾರಿ ನಿರ್ದೇಶನಾಲಯವು ವರದಿ ಕೇಳಿದೆ.
ಬೆಂಗಳೂರು: ಕೆ.ಆರ್ ಪುರಂ ತಹಶೀಲ್ದಾರ್ ಆಗಿದ್ದ ಅಜಿತ್ ರೈ ಮನೆ ಮೇಲೆ ನಡೆದಿದ್ದ ಲೋಕಾಯುಕ್ತ ದಾಳಿ (Lokayukta Raid) ಪ್ರಕರಣ ಸಂಬಂಧ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ದಿನದಿಂದ ದಿನಕ್ಕೆ ಅಜಿತ್ ರೈ ಮತ್ತು ಬೇನಾಮಿ ಅಕ್ರಮ ಆಸ್ತಿ-ಪಾಸ್ತಿಗಳ ಒಳಸುಳಿಗಳು ಬಿಚ್ಚಿಕೊಳ್ಳುತ್ತಿದ್ದು, ದಾಳಿ ವೇಳೆ ಲಭ್ಯವಾದ ಕೋಟ್ಯಂತರ ಮೌಲ್ಯದ ಆಸ್ತಿ-ಪಾಸ್ತಿ ದಾಖಲೆಗಳ ವಿಂಗಡಿಸುವ ಕೆಲಸವನ್ನು ಲೋಕಾಯುಕ್ತ ಅಧಿಕಾರಿಗಳು ಮುಂದುವರೆಸಿದ್ದಾರೆ. ಇನ್ನೊಂದೆಡೆ, ಹವಲಾ, ಮನಿಲ್ಯಾಂಡರಿಂಗ್ ನಡೆದಿರುವ ಸಾಧ್ಯತೆ ಹಿನ್ನೆಲೆ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಲೋಕಾಯುಕ್ತದಿಂದ ವರದಿ ಕೇಳಿದೆ.
ಅಜಿತ್ ರೈ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ ವೇಳೆ ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಅಜಿತ್ ರೈ ದಾಳಿ ಸಂಬಂಧ ವಶಪಡಿಸಿಕೊಳ್ಳಲಾದ ದಸ್ತಾವೇಜು ದಾಖಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ ಸುತ್ತಮುತ್ತಲಲ್ಲಿ ಬರೋಬ್ಬರಿ 250 ಎಕರೆಗೂ ಹೆಚ್ಚು ಜಮೀನಿನ ದಾಖಲೆಗಳು ಪತ್ತೆಯಾಗಿದ್ದು, ಇವುಗಳ ಮೌಲ್ಯ ಕೋಟ್ಯಂತರ ರೂಪಾಯಿಯದ್ದು ಎಂದು ಅಂದಾಜಿಸಲಾಗಿದೆ. ಇಷ್ಟು ಪ್ರಮಾಣದ ಜಮೀನಿನ ದಾಖಲೆಗಳು ತಹಶೀಲ್ದಾರ್ ಆಗಿದ್ದ ಅಜಿತ್ ರೈ ಬಳಿ ಪತ್ತೆಯಾಗಿರುವುದು ಅಜಿತ್ ರೈ ಕಾರ್ಯಶೈಲಿಯನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ.
ಇದನ್ನೂ ಓದಿ: ಲೋಕಾಯುಕ್ತ ಕಸ್ಟಡಿಯಲ್ಲಿರುವ ಅಜಿತ್ ರೈ ರಾಯಚೂರಗೆ ವರ್ಗ: ಸಾರ್ವಜನಿಕರಿಂದ ಭಾರಿ ವಿರೋಧ
ಈ ಹಿನ್ನೆಲೆ ವಶಕ್ಕೆ ಪಡೆದಿದ್ದ ಲೋಕಾಯುಕ್ತ ಪೊಲೀಸರು ಅಜಿತ್ ವಿಚಾರಣೆ ಮುಂದುವರೆಸಿದ್ದು, ದಾಳಿ ವೇಳೆ ಪತ್ತೆಯಾದ ದಾಖಲೆಗಳ ಪೈಕಿ ಅಜಿತ್ ರೈ ಸ್ನೇಹಿತ ಬೇನಾಮಿ ಎಂದು ಹೇಳಲಾಗುತ್ತಿರುವ ಗೌರವ್ ಹೆಸರಿನಲ್ಲಿ ದೊಡ್ಡಬಳ್ಳಾಪುರ ಸಮೀಪ 98 ಎಕರೆ ಆಸ್ತಿ ದಾಖಲೆ ಪತ್ತೆಯಾಗಿದೆ. ಈ ಪೈಕಿ ಪತ್ತೆಯಾದ ಜಮೀನಿನ ದಾಖಲೆಗಳನ್ನು ಅಜಿತ್ ರೈ, ಸ್ನೇಹಿತರು ಮತ್ತು ಸಂಬಂಧಿರಿಗೆ ಸಂಬಂಧಿಸಿದ ದಾಖಲೆಗಳನ್ನ ಪ್ರತ್ಯೇಕವಾಗಿ ವಿಂಗಡಿಸುವ ಕೆಲಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ತೊಡಗಿದ್ದಾರೆ. ಈ ಮಧ್ಯೆ ಇಷ್ಟೊಂದು ಪ್ರಮಾಣದ ಆಸ್ತಿ ದಾಖಲೆ ಪತ್ರಗಳ ಸಂಗ್ರಹಿಸಲಾಗಿದ್ದ ಕಾರಣವೇನು ಅನ್ನೋದರ ಕುರಿತಂತೆ ತನಿಖೆ ಮುಂದುವರೆಸಿದ್ದಾರೆ.
ಅಜಿತ್ ರೈ ಸದ್ಯದಲ್ಲೇ ಇಡಿ ಇಕ್ಕಳ, ಎದುರಾಗಲಿದೆ ಮತ್ತೊಂದು ಸಂಕಷ್ಟ
ಅಜಿತ್ ರೈ ಬಳಿ ಪತ್ತೆಯಾದ ದಸ್ತಾವೇಜು ದಾಖಲೆಗಳ ಪರಿಶೀಲನೆ ವೇಳೆ ಅಪಾರ ಪ್ರಮಾಣದಲ್ಲಿ ಮನಿಲ್ಯಾಂಡರಿಂಗ್, ಹವಾಲಾ ದಂಧೆ ಸೇರಿದಂತೆ ಅಕ್ರಮ ಹಣವರ್ಗಾವಣೆ, ಬೇನಾಮಿ ಆಸ್ತಿ ದಾಖಲೆಗಳ ಬಗ್ಗೆ ಮಹತ್ವದ ಮಾಹಿತಿ ಹೊರಬಂದಿದೆ. ಅಜಿತ್ ರೈ ಅಕ್ರಮ ಸಂಪತ್ತಿನ ವಿಚಾರ ಕುರಿತಂತೆ ಕರ್ನಾಟಕ ಲೋಕಾಯುಕ್ತ ಪೊಲೀಸರ ಸಂಪರ್ಕಿಸಿರುವ ಜಾರಿ ನಿರ್ದೇಶನಲಾದ ಅಧಿಕಾರಿಗಳು, ಅಜಿತ್ ರೈ ಮೇಲಿನ ದಾಳಿಗೆ ಸಂಬಂದಿಸಿದಂತೆ ಪತ್ತೆಯಾದ ಅಕ್ರಮ ಆಸ್ತಿ-ಪಾಸ್ತಿ, ಹವಾಲಾ, ಮನಿ ಲ್ಯಾಂಡರಿಂಗ್ ನಡೆದಿರುವ ಸಾಧ್ಯತೆಗಳಿದ್ದು, ಸಂಪೂರ್ಣ ವರದಿ ನೀಡುವಂತೆ ಕೇಳಿದ್ದಾರೆ. ಲೋಕಾಯುಕ್ತ ಪೊಲೀಸರು ನೀಡುವ ವರದಿ ಆಧರಿಸಿ ಸದ್ಯದಲ್ಲೇ ಇಡಿ ಅಧಿಕಾರಿಗಳು ಅಜಿತ್ ರೈ ವಿರುದ್ಧ ಕ್ರಮಕ್ಕೆ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ