ಅವತ್ತು ಈಶ್ವರಪ್ಪ ರಾಜೀನಾಮೆ ಕೊಡುವಂತೆ ಮಾಡಿದ್ದಿರಿ, ಇವತ್ತೂ ಅದೇ ಪರಿಸ್ಥಿತಿ ಅಲ್ಲವಾ? ಚಲುವರಾಯಸ್ವಾಮಿನೂ ರಿಸೈನ್ ಮಾಡಲಿ: ಕುಮಾರಸ್ವಾಮಿ
ವರ್ಗಾವಣೆ ವಿಚಾರವಾಗಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಇಂದು ವಿಧಾನಸಭೆ ಅಧಿವೇಶನದಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮತ್ತು ಸಚಿವ ಎನ್ ಚಲುವರಾಯಸ್ವಾಮಿ ನಡುವೆ ವಾಗ್ವಾದ ನಡೆದಿದೆ.
ವಿಧಾನಸಭೆ: ವರ್ಗಾವಣೆ ವಿಚಾರವಾಗಿ ಕೆಎಸ್‌ಆರ್‌ಟಿಸಿ (KSRTC) ಬಸ್ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಸಂಬಂಧ ಇಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದನದ ಬಾವಿಗಿಳಿದು ಧರಣಿ ಮಾಡಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಮತ್ತು ಸಚಿವ ಎನ್ ಚಲುವರಾಯಸ್ವಾಮಿ (Chaluvarayaswamy) ನಡುವೆ ಮಾತಿನ ಚಕಮಕಿಯೂ ನಡೆದಿದೆ. ಅಂದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಕೆಎಸ್ ಈಶ್ವರಪ್ಪ (KS Eshwarappa) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಮಾಡಿತ್ತು. ಇದೀಗ ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನಿಸಿರುವುದು ವಿಪಕ್ಷಗಳಿಗೆ ಅಸ್ತ್ರವೊಂದು ಸಿಕ್ಕಿದಂತಾಗಿದ್ದು, ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನದ ಬಗ್ಗೆ ಸದನದಲ್ಲಿ ಪ್ರಸ್ತಾಪವಾಗುತ್ತಿದ್ದಂತೆ ಇಷ್ಟೊಂದು ಹತಾಶರಾಗಬೇಡಿ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಇವರ ಮಾತಿಗೆ ಸಿಟ್ಟಾದ ಕುಮಾರಸ್ವಾಮಿ, ಯಾರು ಹತಾಶರಾಗಿರುವುದು ಎಂದಾಗ ನಿಮಗೆ ನಾಚಿಕೆಯಾಗಬೇಕು ಅಂತಾ ಚಲುವರಾಯಸ್ವಾಮಿ ಹೇಳಿದರು. ಈ ವೇಳೆ ಆಕ್ರೋಶಗೊಂಡ ಕುಮಾರಸ್ವಾಮಿ, ನಿಮ್ಮದು ಗೊತ್ತಿದೆ ಕುಳಿತುಕೊಳ್ಳಿ, ಕಡತದಿಂದ ಪದ ತೆಗೆಸಿ ಎಂದರು.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಚಲುವರಾಯಸ್ವಾಮಿ, ಪಂಚಾಯಿತಿ ಲೆವೆಲ್ನಲ್ಲಿ ರಾಜಕೀಯ ಮಾಡುತ್ತಿರುವವರು ನೀವು. ನಾಚಿಕೆ ಆಗಬೇಕು ನಿಮಗೆ ಎಂದರು. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಾಚಿಕೆ ಆಗಬೇಕಿರುವುದು ನನಗಲ್ಲ ನಿಮಗೆ, ಕೂರಯ್ಯ ಸಾಕು, ನಾಚಿಕೆ ಆಗುವಂಥದ್ದು ನಾನೇನು ಮಾಡಿಲ್ಲ, ಮಾಡಿಕೊಂಡಿದ್ದು ನೀವು ಎಂದರು. ಬಿಸಿಬಿಸಿ ಚರ್ಚೆ ವೇಳೆ ‘ಬಾಡಿ’ ಎಂಬ ಪದ ಬಳಸಿದ ಬಗ್ಗೆ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಸದಸ್ಯರು ಆಕ್ರೋಶ ಹೊರಹಾಕಿದರು. ಈ ವೇಳೆ, ಆಯ್ತು ಪದ ಬಳಕೆಯಲ್ಲಿ ತಪ್ಪಾಗಿದೆ, ಜೀವ ಇರುವ ಬಾಡಿ ಎಂದು ಕುಮಾರಸ್ವಾಮಿ ಹೇಳಿದರು.
ಪ್ರಕರಣದ ಬಗ್ಗೆ ಸಚಿವ ಚಲುವರಾಯಸ್ವಾಮಿ ವಿರುದ್ಧ ಗುಡುಗಿದ ಕುಮಾರಸ್ವಾಮಿ, ಉಡುಪಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡ ಎಂಬ ಕಾರಣಕ್ಕೆ ಕೆಎಸ್ ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ಸಿಗರು ಮಾಡಿದ್ದರು. ಇಂತಹ ಕಾಂಗ್ರೆಸ್ಸಿಗರಿಗೆ ನನ್ನ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಖಾರವಾಗಿ ಪ್ರಶ್ನಿಸಿದರು.
ಇಷ್ಟು ಲಘುವಾಗಿ ಉತ್ತರ ಕೊಟ್ಟು ಚರ್ಚೆಗೆ ಅವಕಾಶ ಕೊಟ್ಟಿದ್ದಾರಾ? ದೇವೇಗೌಡರ ಕುಟುಂಬದ ಬಗ್ಗೆ ಚರ್ಚೆ ಮಾಡಲು ಅವಕಾಶ ಕೊಟ್ಟಿದ್ದೀರಾ? ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ ಕುಮಾರಸ್ವಾಮಿ, ಓಹೋ ಸಿಎಂ ಶೇಕ್ಹ್ಯಾಂಡ್ ಬೇರೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರನ್ನು ಕೆಣಕಿದರು. ಯಾರಿಗೆ ಹೆದರಲ್ಲ ನಾವು, ನಿಮಗೆ ಹೆದರುತ್ತೀವಾ, ಇದಕ್ಕೂ ನನಗೂ ಸಂಬಂಧ ಇಲ್ಲ, ಹೋಗ್ರೀ ಎಂದು ಸಿಎಂ ಸಿಟ್ಟಿನಲ್ಲಿ ಹೇಳಿದರು.
ಸಿದ್ದರಾಮಯ್ಯ ಪ್ರತಿಕ್ರಿಯೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನಾನು ಕಾಂಗ್ರೆಸ್ ಬಗ್ಗೆಯೇ ಮಾತಾಡುತ್ತಿರುವುದು, ಸೆಕ್ಯುಲರ್ ಅಂತಾ ಹೇಳಿ ದೇವೇಗೌಡರ ಕುತ್ತಿಗೆ ಕುಯ್ದಿರಲ್ಲಾ, ನಾವೂ ಹೆದರಿಕೊಂಡು ರಾಜಕೀಯ ಮಾಡಿಲ್ಲ. ಒಂದು ಸಣ್ಣ ವಿಷಯಕ್ಕೆ ಈಶ್ವರಪ್ಪ ರಾಜೀನಾಮೆ ಪಡೆದಿದ್ದೀರಲ್ವಾ ಅಂತ ಕುಮಾರಸ್ವಾಮಿ ಪ್ರಶ್ನಿಸಿದರು.
ಇದನ್ನೂ ಓದಿ: ವಿಪಕ್ಷ ನಾಯಕನ ಜೊತೆಗೆ ಹೊಸ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ: ಸಂಚಲನ ಮೂಡಿಸಿದ ಯಡಿಯೂರಪ್ಪ ಮಾತು
ಚಾಲಕ ಜಗದೀಶ್ ಕುಟುಂಬದ ಜತೆ ನಾನು ಏನು ಮಾತಾಡಿದ್ದೇನೆ. ವೈದ್ಯರ ಜತೆ ಏನು ಮಾತಾಡಿದ್ದೇನೆಂಬ ವಾಯ್ಸ್ ರೆಕಾರ್ಡ್ ಇದೆ. ನಾನು ಲಕ್ಷಾಂತರ ಬಡ ಕುಟುಂಬಗಳ ಜೀವ ಉಳಿಸಿದವನು. ಇವರ ರೀತಿ ಕೊಲೆಗಡುಕ ಅಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಸಚಿವ ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೆ, ತನಿಖೆ ಆಗುವವರಗೆ ಸಚಿವರು ರಾಜೀನಾಮೆ ಕೊಟ್ಟು ಹೊರಗಿರಲಿ ಎಂದು ಒತ್ತಾಯಿಸಿದರು.
ಕೊಲೆಗಡುಕ ಪದಕ್ಕೆ ಶಾಸಕ ಹೆಚ್.ಸಿ.ಬಾಲಕೃಷ್ಣ ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಚಲುವರಾಯಸ್ವಾಮಿ, ನಮ್ಮ ಹಂಗಿನಲ್ಲಿ ಸಿಎಂ ಆದವನು ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದರು. ಈ ವೇಳೆ ನಾನು, ದೇವೇಗೌಡರು ಕಾಂಗ್ರೆಸ್ನಿಂದ ಸಿಎಂ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿದಾಗ, ಕಾಂಗ್ರೆಸ್ ಬಗ್ಗೆ ಮಾತಾಡುವಾಗ ಎಚ್ಚರಿಕೆ ಇರಲಿ ಎಂದು ನರೇಂದ್ರಸ್ವಾಮಿ ಹೇಳಿದರು. ಈ ವೇಳೆ ಎದ್ದು ನಿಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕುಮಾರಸ್ವಾಮಿ ಅವರಿಗೆ ಮಾತಾಡಲು ಅವಕಾಶ ಕೊಡಿ ಎಂದರು.
ನಾನು ಕೊಲೆ ಮಾಡಲು ಹೊರಟಿದ್ದೇನೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ಆಗಲಿ, ನಿನ್ನೆ ನಾನೇನು ಮಾತಾಡಿದ್ದೇನೆ, ಆ ಮಹಾನುಭಾವ ಏನೇನು ಮಾಡಿದ್ದಾರೆ ಎಲ್ಲವೂ ತನಿಖೆ ಆಗಲಿ. ಅಲ್ಲಿಯವರೆಗೂ ಸಚಿವ ಚಲುವರಾಯಸ್ವಾಮಿ ರಾಜೀನಾಮೆ ಕೊಟ್ಟು ಹೊರಗೆ ಇರಲಿ. ಅಲ್ಲಿಯವರಗೂ ನಾವು ಧರಣಿ ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಧರಣಿ ವಾಪಸ್ ಪಡೆಯಲ್ಲ ಎಂದು ಸದನದಲ್ಲಿ ಕುಮಾರಸ್ವಾಮಿ ಘೋಷಿಸಿದರು. ನಂತರದ ಬೆಳವಣಿಗೆಯಲ್ಲಿ ಸ್ಪೀಕರ್ ಯುಟಿ ಖಾದರ್ ಮನವಿ ಮೇರೆಗೆ ಧರಣಿಯನ್ನು ಹಿಂಪಡೆದರು.
ನಿನ್ನೆ ನಡೆದ ಘಟನೆಯಲ್ಲಿ ನನ್ನ ಪಾತ್ರ ಇಲ್ಲ: ಚಲುವರಾಯಸ್ವಾಮಿ
ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ ಪ್ರಕರಣದಲ್ಲಿ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡಿದ ಚಲುವರಾಯಸ್ವಾಮಿ, ನಿನ್ನೆ ನಡೆದ ಘಟನೆಯಲ್ಲಿ ನನ್ನ ಪಾತ್ರ ಇಲ್ಲ. ನೌಕರನನ್ನು ಶಿಫ್ಟ್ ಮಾಡಲು ತಡೆ ಹಾಕಿರುವುದು ಅಪರಾಧ. ಕುಮಾರಸ್ವಾಮಿ ಅವರೇ ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಸಾಮಾನ್ಯ. ಪೆನ್ ಡ್ರೈವ್ ಇಟ್ಟುಕೊಳ್ಳುವುದು, ವಿಡಿಯೋ ಮಾಡಿಸಿದ್ದೇನೆ ಅನ್ನೋದು ಎಲ್ಲವನ್ನೂ ಬಿಡಬೇಕು ಎಂದರು.
ಅಲ್ಲದೆ, ವರ್ಗಾವಣೆ ವಿಚಾರವಾಗಿ ನಮ್ಮ ಕಚೇರಿಯಿಂದ ಯಾವ ಪತ್ರ ಹೋಗಿಲ್ಲ. ಚಾಲಕ ಜಗದೀಶ್ ಸಂಬಂಧಿಕರು ವರ್ಗಾವಣೆ ವಾಪಸ್ಗೆ ಮನವಿ ಮಾಡಿದ್ದರು. ನಾನು ಕರೆ ಮಾಡಿ ಏನಾಗಿದೆ ಎಂದು ಮಾಹಿತಿ ಪಡೆದಿದ್ದೇನೆ. ತನಿಖೆ ಮಾಡಿ ವರದಿ ಕೊಡುವಂತೆ ಹೇಳಿದ್ದೆ. ನಂತರ ಜಗದೀಶ್ ಮಾವ ಮತ್ತೆ ಕರೆ ಮಾಡಿದ್ದರು. ಎರಡು ದಿನ ಬಿಡಿ ಎಂದು ನಾನೇ ತಿಳಿಸಿದ್ದೆ. ಬಳಿಕ ವರ್ಗಾವಣೆ ಹಿಂಪಡೆಯದಿದ್ದರೆ ವಿಷ ಕುಡಿಯುತ್ತೇನೆ ಎಂದಿದ್ದಾನೆ ಎಂದು ಹೇಳಿದ್ದಾಗಿ ತಿಳಿದುಬಂದಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಆತ್ಮಹತ್ಯೆ ಯತ್ನದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಮೈಸೂರಿಗೆ ಶಿಫ್ಟ್ ಮಾಡಬೇಕಿತ್ತು. ಆಗ ಮಾಜಿ ಸಿಎಂ ಕರೆಮಾಡಿ ಬರುವವರೆಗೂ ಸ್ಥಳಾಂತರಿಸಬೇಡಿ ಎಂದಿದ್ದಾರೆ. ನಂತರ ಮಾಜಿ ಶಾಸಕ ಸುರೇಶ್ ಗೌಡ, ಅವರ ಪತ್ನಿ ಹೋಗಿ ತಡೆದು ಪೊಲೀಸರ ರಕ್ಷಣೆಯಲ್ಲಿ ಜಗದೀಶ್ನನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತಾರೆ ಎಂದರು.
ಬಸವರಾಜ ಬೊಮ್ಮಾಯಿಯವರೇ ನೀವು ಬೊಮ್ಮಾಯಿಯವರ ಪುತ್ರನಾಗಿ ಅವರು ಹೇಳಿದರು ಅಂತಾ ಹೇಳಿಬಿಡಬಹುದಾ? ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಎಷ್ಟು ವರ್ಗಾವಣೆ ಆಗಿದೆ. ಎಷ್ಟೇ ಕಿರುಕುಳ ಆದರೂ ನಾವು ಸಿದ್ದರಾಮಯ್ಯ ಅವರ ಬಳಿ ಹೋಗಲಿಲ್ಲ. ಕುಮಾರಸ್ವಾಮಿ ಬಳಿ ಯಾವತ್ತಾದರೂ ಅರ್ಜಿ ಹಿಡಿದುಕೊಂಡು ಬಂದಿದ್ದೀವಾ? ಸಿದ್ದರಾಮಯ್ಯ ಪಕ್ಷ ಬಿಟ್ಟು ಹೋಗಲಿಲ್ಲ, ಅವರನ್ನು ಪಕ್ಷದಿಂದ ನೂಕಿದರು ಎಂಬ ಚಲುವರಾಯಸ್ವಾಮಿ ಮಾತಿಗೆ ಜೆಡಿಎಸ್ ಶಾಸಕರು ವಿರೋಧ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಸಚಿವ ಚಲುವರಾಯಸ್ವಾಮಿ ಹಳೆಯ ಚರಿತ್ರೆಯನ್ನು ತೆಗೆದಿದರು. ಇವರನ್ನು ಮಂತ್ರಿ ಮಾಡಲು ನಾನು ಏನು ಮಾಡಬೇಕಾಯಿತು, ಸಿದ್ದರಾಮಯ್ಯ ಉಳಿಸಿಕೊಳ್ಳಲು ಏನು ಮಾಡಿದರು ಅಂತಾ ಚರ್ಚೆ ಮಾಡೋಣ. ಸರ್ಕಾರ ತೆಗೆಯಬೇಡಿ ಉಳಿಸಿ ಎಂದು ನನ್ನ ಕಾಲು ಹಿಡಿದುಕೊಂಡಿದ್ದರು ಎಂದರು.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಆತ್ಮಹತ್ಯೆ ಬಗ್ಗೆ ತನಿಖೆ: ಪರಮೇಶ್ವರ್
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ಪ್ರಕರಣ ಸಂಬಂಧ ಸದನದಲ್ಲಿ ಮಾತನಾಡಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಪ್ರಕರಣದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತನಿಖೆ ಮಾಡಿಸುತ್ತೇವೆ. ಸಾರಿಗೆ ಇಲಾಖೆಯನ್ನೊಳಗೊಂಡಂತೆ ತನಿಖೆ ನಡೆಯುತ್ತದೆ ಎಂದು ಭರವಸೆ ನೀಡಿದರು.
ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ
ಜಗದೀಶ್ ಆತ್ಮಹತ್ಯೆಗೆ ಯತ್ನ ಪ್ರಕರಣ ವಿಚಾರದಲ್ಲಿ ವಿಧಾನಸಭೆಯಲ್ಲಿ ಗದ್ದಲ ಉಂಟಾದ ಹಿನ್ನೆಲೆ ಸ್ಪೀಕರ್ ಯುಟಿ ಖಾದರ್ ಕಚೇರಿಯಲ್ಲಿ ಸಂಧಾನ ಸಭೆ ನಡೆಸಲಾಯಿತು. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಸಚಿವರಾದ ರಾಮಲಿಂಗಾರೆಡ್ಡಿ, ಹೆಚ್.ಕೆ. ಪಾಟೀಲ್, ಪರಮೇಶ್ವರ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಡಾ.ಅಶ್ವಥ್ ನಾರಾಯಣ, ಸುನೀಲ್ ಕುಮಾರ್ ಇದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Thu, 6 July 23