ಬೆಂಗಳೂರು: ಐಎಂಎ ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಶಿವಾಜಿನಗರದ ಐಎಂಎ ಜ್ಯುವೆಲ್ಲರಿ ಶಾಪ್ ಮುಂದೆ ಹೂಡಿಕೆದಾರರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಆದರೆ ಪ್ರತಿಭಟನೆಗೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರೆ. ಪೊಲೀಸರ ಈ ನಡೆಗೆ ಹೂಡಿಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗೆ ಅನುಮತಿ ನೀಡದಿದ್ರೂ ಜನರು ಧರಣಿಗೆ ಮುಂದಾಗಿದ್ದಾರೆ.
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ ನಡೆದಿದೆ. ಗುಂಪು ಚದುರಿಸಲು ಪೊಲೀಸರು ಯತ್ನಿಸಿದ್ದಾರೆ. ಆಕ್ರೋಶಗೊಂಡ ಮಹಿಳೆಯರಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಧರಣಿನಿರತ ಮಹಿಳೆ ಮುಮ್ತಾಜ್ ಬೇಗಂ ತಲೆಗೆ ಕಲ್ಲು ತಾಗಿದೆ. ಶಿವಾಜಿನಗರ ನಿವಾಸಿ ಮುಮ್ತಾಜ್ ಬೇಗಂ ತಲೆಗೆ ಪೆಟ್ಟು ಬಿದ್ದು ರಕ್ತ ಸುರಿದಿದೆ. ಈಕೆ ಐಎಂಎ ಕಂಪನಿಯಲ್ಲಿ ₹5 ಲಕ್ಷ ಹಣ ಹೂಡಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಡಿಸಿಪಿ ಭೇಟಿ:
ಘಟನಾ ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರತಿಭಟನೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗಿದೆ. ಕೆಲ ಕಿಡಿಗೇಡಿಗಳು ವಾಟ್ಸಾಪ್ನಲ್ಲಿ IMA ಕಚೇರಿ ಬಳಿ ಸಭೆ ನಡೆಸೋದಾಗಿ ಸಂದೇಶ ನೀಡಿದ್ದಾರೆ. ಮಿಸ್ ಗೈಡ್ನಿಂದ ಹೂಡಿಕೆದಾರರು ಜಮಾವಣೆಗೊಂಡಿದ್ದಾರೆ.
ಈಗಾಗಲೆ IMA ಪ್ರಕರಣ ಸಿಬಿಐ ತನಿಖೆಗೆ ಹಸ್ತಾಂತರ ಮಾಡಲಾಗಿದೆ. ಹೂಡಿಕೆದಾರರಿಗೆ ನ್ಯಾಯ ಸಮ್ಮತವಾದ ಪರಿಹಾರ ಸಿಗಲಿದೆ ಎಂದು ಸುಳ್ಳು ಮಾಹಿತಿ ಹರಿದಾಡಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ಹೇಳಿದ್ದಾರೆ.
Published On - 6:32 pm, Sun, 17 November 19