ಕರಾವಳಿ ಕರ್ನಾಟಕದಲ್ಲಿ ಗುರುವಾರದಿಂದ ಭಾರೀ ಮಳೆ, ಬೆಂಗಳೂರಿನಲ್ಲೂ ಮೂರು ದಿನ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

| Updated By: Ganapathi Sharma

Updated on: Jun 28, 2023 | 4:50 PM

ಗುರುವಾರ ಮತ್ತು ಶನಿವಾರದ ನಡುವೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಕರ್ನಾಟಕದಲ್ಲಿ ಗುರುವಾರದಿಂದ ಭಾರೀ ಮಳೆ, ಬೆಂಗಳೂರಿನಲ್ಲೂ ಮೂರು ದಿನ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರಾವಳಿ ಕರ್ನಾಟಕ (Coastal Karnataka) ಭಾಗದಲ್ಲಿ ಜೂನ್ 29ರಿಂದ ಜುಲೈ 3 ರವರೆಗೆ ಭಾರೀ ಮಳೆಯಾಗುವ (Rain) ಸಾಧ್ಯತೆಯಿದ್ದು, ಬೆಂಗಳೂರಿನಲ್ಲಿ ಶನಿವಾರದ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಜೂನ್ 29, ಗುರುವಾರದಂದು ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಅತಿ ಹೆಚ್ಚು (115.6 ಮಿಮೀ ನಿಂದ 204.4 ಮಿಮೀ) ಮಳೆಯಾಗುವ ನಿರೀಕ್ಷೆಯಿದೆ.

ಗುರುವಾರದಿಂದ ಸೋಮವಾರದವರೆಗೆ, ಈ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ಜೂನ್ 28 ರಿಂದ ಜುಲೈ 2 ರವರೆಗೆ ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 40-45 ಕಿಮೀ ವೇಗದಲ್ಲಿ ಮತ್ತು ಹೊರಗೆ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗುರುವಾರ ಮತ್ತು ಶನಿವಾರದ ನಡುವೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರ ಮತ್ತು ಸೋಮವಾರ ಎರಡು ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಇದನ್ನೂ ಓದಿ: IMD Monsoon Forecast: ಭಾರತದಲ್ಲಿ ಈ ಬಾರಿ ಸಾಧಾರಣ ಮುಂಗಾರು, ವಾಡಿಕೆಗಿಂತ ಕಡಿಮೆ ಮಳೆಯ ನಿರೀಕ್ಷೆ

ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 29 ರಿಂದ 20 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ ಎಂದು ಇಲಾಖೆ ಹೇಳಿದೆ.

ಹವಾಮಾನ ಇಲಾಖೆ ಅಂಕಿಅಂಶಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ 8.30 ರಿಂದ ಬುಧವಾರ ಬೆಳಿಗ್ಗೆ 8.30 ರ ನಡುವೆ ಕಾರವಾರದಲ್ಲಿ ಅತಿ ಹೆಚ್ಚು ಅಂದರೆ 158.3 ಮಿಮೀ, ಮಂಗಳೂರಿನಲ್ಲಿ 141.7 ಮಿಮೀ ಮತ್ತು ಗೋಕರ್ಣದಲ್ಲಿ 114.8 ಮಿಮೀ ಮಳೆಯಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ