ದರೋಡೆ, ಕಳ್ಳತನ ಹೆಚ್ಚಳ; ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಗಸ್ತು ಕಾರ್ಯಾಚರಣೆ ಹೆಚ್ಚಿಸಿದ ಪೊಲೀಸರು

| Updated By: ಗಣಪತಿ ಶರ್ಮ

Updated on: Aug 28, 2023 | 2:29 PM

Bengaluru-Mysuru expressway patrolling; ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂರು ಕಾರುಗಳನ್ನು ನಿಲ್ಲಿಸಿ ಜನರನ್ನು ದರೋಡೆ ಮಾಡಲಾಗಿದೆ. ಇದರ ನಂತರ ಮಂಡ್ಯ ಹಾಗೂ ಇತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹೆದ್ದಾರಿ ಗಸ್ತನ್ನು ಪೊಲೀಸರು ಹೆಚ್ಚಿಸಿದ್ದಾರೆ.

ದರೋಡೆ, ಕಳ್ಳತನ ಹೆಚ್ಚಳ; ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ ಗಸ್ತು ಕಾರ್ಯಾಚರಣೆ ಹೆಚ್ಚಿಸಿದ ಪೊಲೀಸರು
ಸಾಂದರ್ಭಿಕ ಚಿತ್ರ
Follow us on

ಮಂಡ್ಯ, ಆಗಸ್ಟ್ 28: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bangalore Mysore Expressway) ದರೋಡೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದ್ದಾರೆ. ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹೆದ್ದಾರಿಯ 55 ಕಿಲೋಮೀಟರ್ ವ್ಯಾಪ್ತಿಯಲ್ಲಿ ಎರಡು ತಿಂಗಳ ಅವಧಿಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಮೂರು ಕಾರುಗಳನ್ನು ನಿಲ್ಲಿಸಿ ಜನರನ್ನು ದರೋಡೆ ಮಾಡಲಾಗಿದೆ. ಘಟನೆಗಳ ಕುರಿತು ಮಂಡ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.`

ಜುಲೈ 1 ರಂದು ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳುತ್ತಿದ್ದ ಮುತ್ತಪ್ಪ ಎಂಬವರನ್ನು ಮದ್ದೂರು ಬಳಿ ದರೋಡೆ ಮಾಡಲಾಗಿತ್ತು. ಅವರು ಬೆಂಗಳೂರಿಗೆ ಪ್ರಯಾಣಿಸುವಾಗ ಮಾರ್ಗಮಧ್ಯೆ ವಿಶ್ರಾಂತಿಗಾಗಿ ಕಾರನ್ನು ನಿಲ್ಲಿಸಿದ್ದಾಗ ಶಸ್ತ್ರಸಜ್ಜಿತ ದರೋಡೆಕೋರರು ಬೆದರಿಸಿ 3.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದರು. ಅವರು ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆಗಸ್ಟ್ 13 ರಂದು ಮಂಡ್ಯ ಜಿಲ್ಲೆಯ ಶೆಟ್ಟಿಹಳ್ಳಿ ಬಳಿ ಕೋಲಾರ ಮೂಲದ ರಕ್ಷಿತ್ ರೆಡ್ಡಿ ಮತ್ತು ಮಾನಸ ರೆಡ್ಡಿ ದಂಪತಿ ಅವರನ್ನು ದರೋಡೆ ಮಾಡಲಾಗಿತ್ತು. ಟೈರ್ ಪಂಕ್ಚರ್ ಆದ ನಂತರ ಅದನ್ನು ಬದಲಾಯಿಸಲು ದಂಪತಿಗಳು ಕಾರನ್ನು ನಿಲ್ಲಿಸಿದ್ದರು. ಬೈಕ್​​ನಲ್ಲಿ ಬಂದ ಶಸ್ತ್ರಧಾರಿ ವ್ಯಕ್ತಿಗಳು ದಂಪತಿಯಿಂದ 1.70 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದರು. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: Mysuru Bengaluru Expressway: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಸಣ್ಣ ವಾಹನಗಳ ನಿಷೇಧ ಸಮರ್ಥಿಸಿದ ಅಲೋಕ್ ಕುಮಾರ್

ಪ್ರವಾಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಉಡುಪಿಯ ಕುಟುಂಬವೊಂದನ್ನು ಶ್ರೀರಂಗಪಟ್ಟಣ ಬಳಿ ದರೋಡೆ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿಯಂತೆ ಕಾಣಿಸಿಕೊಂಡ ಇಬ್ಬರು ವ್ಯಕ್ತಿಗಳು ಕಾರನ್ನು ತಪಾಸಣೆ ಮಾಡಲು ನಿಲ್ಲಿಸಿದ್ದರು. ಬೆದರಿಸಿ ಮನೆಯವರ ಬಳಿ ಇದ್ದ 1.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದರು. ಘಟನೆ ಕುರಿತು ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದರೋಡೆ ಪ್ರಕರಣಗಳು ಹೆಚ್ಚಾದ ನಂತರ ಮಂಡ್ಯ ಪೊಲೀಸರು ಎಕ್ಸ್‌ಪ್ರೆಸ್‌ವೇಯಲ್ಲಿ ಗಸ್ತು ಹೆಚ್ಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ