ಹಸುಗೂಸು ಮಾರಾಟ ದಂಧೆ: ಡಾಕ್ಟರ್​ಗಳೇ ದಂಧೆಕೋರರ ಇನ್ಫಾರ್ಮರ್ಸ್​, ಈ ಗ್ಯಾಂಗ್ ಕೆಲಸ ಮಾಡ್ತಿದ್ದದ್ದು ಹೇಗೆ ಗೊತ್ತಾ?

| Updated By: ಆಯೇಷಾ ಬಾನು

Updated on: Nov 29, 2023 | 9:48 AM

ಭ್ರೂಣ ಹತ್ಯೆ ಮತ್ತು‌ ಪತ್ತೆ ಪ್ರಕರಣದ ಬಳಿಕ ಮತ್ತೊಂದು ದಂಧೆ ಬೆಳಕಿಗೆ ಬಂದಿದೆ. ನಗರದಲ್ಲಿ ಹಸುಗೂಸುಗಳನ್ನು ಮಾರಾಟ ಮಾಡೋ ಕರಾಳ ದಂಧೆಯನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ದಂಧೆಕೋರರು ಮೂರು ವರ್ಷದಲ್ಲಿ 60 ಮಕ್ಕಳನ್ನು‌ ಮಾರಾಟ ಮಾಡಿದ್ದು, ಜನರಲ್ಲಿ ಆತಂಕ‌ ಹೆಚ್ಚಾಗುವಂತೆ ಮಾಡಿದೆ. ತನಿಖೆ ವೇಳೆ ಕೆಲವು ಸತ್ಯ ಬಯಲಾಗಿದ್ದು ಕೆಲ ಆಸ್ಪತ್ರೆಗಳ ಡಾಕ್ಟರ್ ಗಳೇ ಈ ದಂಧಕೋರರ ಇನ್ಫಾರ್ಮರ್ಸ್ ಎಂದು ತಿಳಿದುಬಂದಿದೆ.

ಹಸುಗೂಸು ಮಾರಾಟ ದಂಧೆ: ಡಾಕ್ಟರ್​ಗಳೇ ದಂಧೆಕೋರರ ಇನ್ಫಾರ್ಮರ್ಸ್​, ಈ ಗ್ಯಾಂಗ್ ಕೆಲಸ ಮಾಡ್ತಿದ್ದದ್ದು ಹೇಗೆ ಗೊತ್ತಾ?
ಮಗು
Image Credit source: Alamy
Follow us on

ಬೆಂಗಳೂರು, ನ.29: ನ. 24ರಂದು ಕಣ್ಣನ್ ರಾಮಸ್ವಾಮಿ, ಹೇಮಲತಾ, ಮುರುಗೇಶ್ವರಿ, ಶರಣ್ಯ ಈ ನಾಲ್ವರು ಸ್ವಿಫ್ಟ್ ಕಾರಿನಲ್ಲಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ರು. ಬಂದವರೇ ಜೊತೆಯಲ್ಲಿ 20 ದಿನಗಳ ಹಸುಗೂಸನ್ನು ಸಹ ತಂದಿದ್ರು (Infant Trafficking Racket). ಇನ್ನು ಆ ಮಗುವನ್ನು ಆರ್.ಆರ್. ನಗರದ ರಾಜರಾಜೇಶ್ವರಿ ದೇವಸ್ಥಾನದ ಮುಂದೆ ಮಾರಾಟ ಮಾಡಲು ಮುಂದಾಗಿದ್ರು. ಈ ವೇಳೆ ಸಿಸಿಬಿ ಪೊಲೀಸರು (CCB Police) ದಿಢೀರನೆ ದಾಳಿ ಮಾಡಿದ್ದು ಮಗುವನ್ನು ರಕ್ಷಿಸಿ ಐವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆಯಲ್ಲಿ ಇವರು ಹಸುಗೂಸುಗಳ ಮಾರಾಟ ಜಾಲ ಅನ್ನೋದು ಬಯಲಾಗಿದೆ. ಜೊತೆಗೆ 60 ಮಕ್ಕಳನ್ನು ಇದೇ ತರ ಮಾರಾಟ ಮಾಡಿರೋದಾಗಿಯೂ ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ.

2021ರಿಂದಲೂ ದಂಧೆಯನ್ನು ಮಾಡ್ತಾ ಇದ್ದ ಆರೋಪಿಗಳು

ಬಂಧಿತರನ್ನು ತೀವ್ರ ವಿಚಾರಣೆ ಮಾಡಿದಾಗ ಮತ್ತೆ ಮೂವರ ಹೆಸರನ್ನು ಬಾಯಿಬಿಟ್ಟಿದ್ದಾರೆ.‌ ಇವರೆಲ್ಲರೂ 2021 ರಿಂದಲೂ ಇದೇ ದಂಧೆ ಮಾಡ್ತಾ ಇರೋದು ಬಯಲಾಗಿದೆ. ಮೊದಲಿಗೆ ಬಾಡಿಗೆ ತಾಯಿಯಾಗಿ ಮಕ್ಕಳನ್ನು ಕೊಡಿಸೋ ಏಜೆಂಟ್ ಗಳಾಗಿ ಕೆಲಸ ಮಾಡ್ತಾ ಇದ್ದು, 2021 ರ ಬಳಿಕ ಯಾರು ಅಬಾರ್ಷನ್ ಮಾಡಿಸೋಕೆ ಅಂತ ಆಸ್ಪತ್ರೆಗೆ ಬರ್ತಾರೆ ಅವರನ್ನ ಸಂಪರ್ಕ ಮಾಡ್ತಾ ಇದ್ರು. ನಂತರ ಅವರಿಗೆ ಅಬಾರ್ಷನ್ ಮಾಡಿಸಬೇಡಿ, ನಾವು ನೋಡಿಕೊಳ್ತೀವಿ, ಮಗು ಆಗೋವರೆಗೂ ಖರ್ಚು ವೆಚ್ಚ ಎಲ್ಲವೂ ನಮ್ಮದೆ ಡಿಲವರಿ ಆದ ಬಳಿಕ ಮಗುವನ್ನು ನಮಗೆ ಕೊಡಿ ಅಂತ ಮನವೊಲಿಕೆ ಮಾಡ್ತಿದ್ರು. ಹೆಣ್ಣು‌ ಮಗು ಆದ್ರೆ 2 ಲಕ್ಷ, ಗಂಡು ಮಗು ಆದ್ರೆ ತಾಯಿಗೆ 3 ಲಕ್ಷ ಕೊಡ್ತಿದ್ದು, ಆ ಮಕ್ಕಳನ್ನು ಹೊರಗಡೆ 8-10 ಲಕ್ಷಕ್ಕೆ ಮಾರಾಟ ಮಾಡ್ತಾ ಇದ್ದರು.

ಮಗು ಫೋಟೋವನ್ನು ಶೇರ್ ಮಾಡಿ ಗಿರಾಕಿಗಳಿಗೆ ಗಾಳ

ಇನ್ನು ಬಂಧಿತರು ಮಗು ಹುಟ್ಟಿದ ಬಳಿಕ ತಾಯಿಗೆ ಇಂತಿಷ್ಟು ಅಂತ ಹಣ ಕೊಟ್ಟು, ಆ ಮಕ್ಕಳ ಫೋಟೋಗಳನ್ನು ಅವರದ್ದೇ ಗ್ರೂಪಲ್ಲಿ ಹಾಕಿ ಶೇರ್ ಮಾಡುವಂತೆ ಹೇಳಿ ಕಿರಾಕಿಗಳಿಗೆ ಗಾಳ ಹಾಕ್ತಾ ಇದ್ರು. ನಂತರ ಮಗು ಬೇಕಾಗಿರೋರು ಸಂಪರ್ಕ ಮಾಡಿದ್ರೆ ಲಿಂಗ, ಬಣ್ಣದ ಮೇಲೆ ರೇಟ್ ಫಿಕ್ಸ್ ಮಾಡಿ ಡೀಲ್ ಮಾಡ್ತಾ ಇದ್ರು. ಹೆಣ್ಣು ಮಗು ಆದ್ರೆ 4-6 ಲಕ್ಷ, ಗಂಡು ಮಗು ಆದ್ರೆ 8-10 ಲಕ್ಷಕ್ಕೆ ಮಾರಾಟ ಮಾಡ್ತಾ ಇದ್ರು. ಇನ್ನು ಆರೋಪಿಗಳಲ್ಲಿ ಮುರುಗೇಶ್ವರಿ ತನ್ನದೇ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ಳು ಜನನ ಪತ್ರವೂ ಮಾಡಿಕೊಡ್ತಾ ಇದ್ರು ಅನ್ನೋದು ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಹಸುಗೂಸು ಮಾರಾಟ ಮಾಡುತ್ತಿದ್ದಾಗ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗ್ಯಾಂಗ್

ಡಾಕ್ಟರ್​ಗಳೇ ದಂಧೆಕೋರರ ಇನ್ಫಾರ್ಮರ್ಸ್

ಕೆಲ ಆಸ್ಪತ್ರೆಗಳ ಡಾಕ್ಟರ್​ಗಳೇ ಈ ದಂಧೆಕೋರರಿಗೆ ಇನ್ಫಾರ್ಮರ್ಸ್ ಆಗಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಆಸ್ಪತ್ರೆಗೆ ಅಬಾರ್ಷನ್ ಅಂತ ಬಂದೋರ ಮಾಹಿತಿಯನ್ನು ಪಡೀತಾ ಇದ್ದ ವೈದ್ಯರು, ಮಾಹಿತಿ ಜೊತೆಗೆ ವಿಳಾಸ ಹಾಗೂ ಮೊಬೈಲ್ ನಂಬರ್ ಪಡೆದು ನಂತರ ಅದೇ ಮಾಹಿತಿಯನ್ನು ದಂಧೆಕೋರರಿಗೆ ನೀಡುತ್ತಿದ್ದರು.

ಈ ದಂಧೆಕೋರರು ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಎರಡು ತಂಡಗಳಾಗಿ ಕೆಲಸ ಮಾಡ್ತಿದ್ರು. ತಮಿಳುನಾಡಿನಲ್ಲಿ ರಾಧ ಆ್ಯಂಡ್ ಟೀಂ ಇದ್ರೆ, ಕರ್ನಾಟಕದಲ್ಲಿ ಮಹಾಲಕ್ಷ್ಮೀ ಆ್ಯಂಡ್ ಟೀಂ ಇತ್ತು. ತಮಿಳುನಾಡಿನ‌‌ ಮಕ್ಕಳನ್ನು ಕರ್ನಾಟಕದಲ್ಲಿ, ಕರ್ನಾಟಕದ ಮಕ್ಕಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ಆರೋಪಿಗಳಿಗೆ ಯಾರೆಲ್ಲ ಡಾಕ್ಟರ್ಸ್ ಮಾಹಿತಿ ನೀಡ್ತಿದ್ರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ವಿಚಾರಣೆ ಬಳಿಕ ಕೆಲ ಡಾಕ್ಟರ್​ಗಳನ್ನು ಬಂಧಿಸಲು ಸಿಸಿಬಿ ಚಿಂತನೆ ನಡೆಸಿದೆ.

ಯಾರ್ಯಾರಿಗೆ ಯಾವ ಯಾವ ಟಾಸ್ಕ್

ಶರಣ್ಯ : ಈಕೆ ಆರೋಪಿ ರಾಧ ಮಗುವನ್ನು ಸೇಲ್ ಮಾಡುವಾಗ ಜೊತೆಗೆ ಹೋಗುವುದು ಮತ್ತು ಮಗುವನ್ನು ಸೇಲ್ ಮಾಡಿದ ನಂತರ ಹಣವನ್ನು ಪಡೆಯುವ ಕೆಲಸ ಮಾಡುತ್ತಿದ್ದಳು.

ಸುಹಾಸಿನಿ: ಈಕೆ ಮಕ್ಕಳು ಯಾರಿಗೆ ಬೇಕು ಮತ್ತು ಮಕ್ಕಳನ್ನು ಯಾರು ಕೊಡಲು ಒಪ್ಪುತ್ತಾರೆ ಅವರ ಕೇರ್ ಟೇಕ್ ಮಾಡೋದು

ರಾಧ: ತಮಿಳುನಾಡು ಗ್ಯಾಂಗ್ ನ ಲೀಡರ್. ತನ್ನ ಟೀಂನ ಹೇಮಲತಾ ಮತ್ತು ಶರಣ್ಯನ ಕಳುಹಿಸಿ ಮಗುವನ್ನು ಕೊಟ್ಟು ಹಣ ಪಡೆಯೋ ಕೆಲಸ ಮಾಡಿಸುತ್ತಾ ಇದ್ದಳು.

ಕಣ್ಣನ್ ರಾಮಸ್ವಾಮಿ : ಈತ ಸಹ ಓರ್ವ ಏಜೆಂಟ್, ಬೆಂಗಳೂರಿನ ಮಹಾಲಕ್ಷ್ಮಿ ಜೊತೆ ಸಂಪರ್ಕ. ಬೆಂಗಳೂರಿನಲ್ಲಿ ಮಗು ಸಿಕ್ಕರೆ ತಮಿಳುನಾಡಿಗೆ ತಗೊಂಡು ಹೋಗುವ ಕೆಲಸ ಮಾಡುತ್ತಿದ್ದ.

ಮಹಾಲಕ್ಷ್ಮಿ: ಕರ್ನಾಟಕದಲ್ಲಿ ಗ್ಯಾಂಗ್ ನ ಲೀಡರ್ . ಮಗು ಯಾರಿಗೆ ಬೇಕು ಎಂದು ಮಾಹಿತಿ ಪಡೆದು ನಂತ್ರ ಆ ಮಾಹಿತಿಯನ್ನು ತಮಿಳುನಾಡಿದ ಗ್ಯಾಂಗ್ ಹೇಳ್ತಾಳೆ. ಆಗ ತಮಿಳುನಾಡಿನ ಗ್ಯಾಂಗ್ ಕೆಲಸ ಶುರು ಮಾಡುತ್ತೆ.

ಗೋಮತಿ: ತಮಿಳುನಾಡಿನಿಂದ ಮಗು ಮತ್ತು ಮಗುವಿನ ತಾಯಿಯನ್ನು ಕರೆದುಕೊಂಡು ಬರುವವಳು.

ಹೇಮಲತಾ: ರಾಧ ಹೇಳಿದಂತೆ ಮಗುವನ್ನು ತಂದು ಕೊಡುವ ಕೆಲಸ. ರಾಧ ಹೇಳಿದ್ದ ಕೆಲಸ ಮಾಡ್ತಾಳೆ.

ಒಟ್ನಲ್ಲಿ ಈ ಮಕ್ಕಳ ಮಾರಾಟದ ಜಾಲದಲ್ಲಿ ಇನ್ನು ಹಲವರು ಇರೋ ಅನುಮಾನ ಪೊಲೀಸರಿಗೆ ಇದೆ.‌ ಜೊತೆಗೆ ಕೆಲ ಆಸ್ಪತ್ರೆ ವೈದ್ಯರು ಇದರಲ್ಲಿ ಭಾಗಿಯಾಗಿರೋ ಅನುಮಾನ‌ ಇದ್ದು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ಮಾಡ್ತಾ ಇದ್ದಾರೆ. ತನಿಖೆ ಬಳಿಕ ಮತ್ತಷ್ಟು ಭಯಾನಕ ವಿಚಾರಗಳು ಹೊರಬೀಳಲಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ