ಜನಿವಾರ ವಿವಾದ: ಕೆಇಎ ಅಧಿಕಾರಿ ಬಾಯಲ್ಲಿ ಹೇಳಿದ್ದು ಸುತ್ತೋಲೆಯಲ್ಲಿ ಯಾಕಿಲ್ಲ?

ಕಳೆದ ವರ್ಷವೂ ಸಹ ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಜನಿವಾರ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯಾದ್ಯಂತ ಭಾರೀ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಈ ವರ್ಷದ ಸಿಇಟಿ ಪರೀಕ್ಷೆಯಲ್ಲೂ ಸಹ ಮತ್ತೆ ಜನಿವಾರ ವಿವಾದ ಮುನ್ನೆಲೆಗೆ ಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಲಕ್ಷ್ಯ, ಎಡವಟ್ಟುಗಳಿಂದಲೇ ಈ ರೀತಿ ಮರುಕಳಿಸುತ್ತಿದೆ. ಅಷ್ಟಕ್ಕೂ ಕೆಇಎ ಎಡವಟ್ಟು ಏನು? ಎನ್ನುವ ಡಿಟೇಲ್ಸ್ ಇಲ್ಲಿದೆ.

ಜನಿವಾರ ವಿವಾದ: ಕೆಇಎ ಅಧಿಕಾರಿ ಬಾಯಲ್ಲಿ ಹೇಳಿದ್ದು ಸುತ್ತೋಲೆಯಲ್ಲಿ ಯಾಕಿಲ್ಲ?
Sacred Thread, KEA

Updated on: Apr 25, 2026 | 4:38 PM

ಬೆಂಗಳೂರು, (ಏಪ್ರಿಲ್ 25): ಸಿಇಟಿ ಪರೀಕ್ಷೆ ವೇಳೆ ಜನಿವಾರ ( Sacred Thread) ಕಟ್ ಮಾಡಿರುವ ವಿವಾದ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾರ್ಥಿಗಳ ಜನಿವಾರ ಕಟ್ ಮಾಡಿದ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್ 299, 302ರಡಿ ಮೊಕದ್ದಮೆ ದಾಖಲಾಗಿದ್ದು, ಈ ದೂರಿನ ಮೇರೆಗೆ ಪರೀಕ್ಷಾ ಪರಿವೀಕ್ಷಕರಾದ ಸರಿತಾ, ಗಿರಿಜಾ ಹಾಗೂ ಸುಧಾಕರ್‌ ಅವರನ್ನು ಬಂಧಿಸಲಾಗಿದೆ. ಅಲ್ಲದೇ ಈ ಮೂವರನ್ನು ಸಹ ಕೆಲಸದಿಂದ ಅಮಾನತು ಮಾಡಲಾಗಿದೆ. ಆದ್ರೆ, ಮೇಲ್ನೋಟಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಲಕ್ಷ್ಯಕ್ಕೆ ಕೆಳ ಹಂತದ ಅಧಿಕಾರಿಗಳು ಶಿಕ್ಷೆಗೆ ಗುರಿಯಾದಂತೆ ಕಾಣುತ್ತಿದೆ. ಕಳೆದ ವರ್ಷ ಇದೇ ವಿವಾದ ಬೆಳಕಿಗೆ ಬಂದಿದ್ದರಿಂದ ಈ ಬಾರಿ ಯಾವುದೇ ಕಾರಣಕ್ಕೂ ಜನಿವಾರ ಹಾಗೂ ಕೊರಳಲ್ಲಿ ಹಾಕುವ ಲಿಂಗುವನ್ನು ತೆಗೆಸುವಂತಿಲ್ಲ ಎಂದು ಕೆಇಎ ಅಧಿಕಾರಿಗಳು ಹೇಳಿದ್ದರು. ಆದ್ರೆ, ಅದು ಬಾಯಿ ಮಾತಿಗೆ ಹೇಳಲಾಗಿದೆ ಹೊರತು ಅಧಿಕೃತವಾಗಿ ಸುತ್ತೋಲೆಯಲ್ಲಿ ಇಲ್ಲ. ಕೆಇಎ ಎಡವಟ್ಟನಿಂದಾಗಿಯೇ ಈ ವರ್ಷವೂ ಸಹ ಜನಿವಾರ ವಿವಾದ ಮರುಕಳಿಸಿದ್ದು, ಇಷ್ಟೆಲ್ಲ ರಾದ್ಧಾಂತ ಕಾರವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿದ್ದೇನು?

ಇನ್ನು ಈ ವರ್ಷದ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕಣಕ್ಕೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ನಗರ ಡಿಸಿಗೆ ಪತ್ರ ಬರೆದಿದೆ.  ವಿದ್ಯಾರ್ಥಿಗಳ ಜನಿವಾರ ತೆಗೆಸದಂತೆ ಸೂಚನೆ ನೀಡಲಾಗಿತ್ತು. ಆದ್ರೂ ಜನಿವಾರ ತೆಗೆಸಿದ್ದು ಉದ್ದೇಶಪೂರ್ವಕ ಘಟನಯಂತೆ ಕಂಡಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮವಹಿಸಿದ ವಿವರ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಹೇಳಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ ವಿವಾದ: CET ಪರೀಕ್ಷೆಗೆ ವಸ್ತ್ರ ಸಂಹಿತೆ ಏನು ಹೇಳುತ್ತೆ?

ಆದ್ರೆ, ಸಿಇಟಿ ಪರೀಕ್ಷೆ ವೇಳೆ ಯಾವುದನ್ನು ತರಬೇಕು? ಯಾವುದನ್ನು ನಿಷೇಧಿಸಲಾಗಿದೆ ಎನ್ನುವ ಬಗ್ಗೆ ಸುತ್ತೋಲೆ ಹೊರಡಿಸುವ ಕೆಇಎ, ಜನಿವಾರ ಹಾಗೂ ಕೊರಳಲ್ಲಿ ಹಾಕುವ ಲಿಂಗುವನ್ನು ತೆಗೆಸುವಂತಿಲ್ಲ ಎನ್ನುವ ಅಂಶವನ್ನು ಏಕೆ ಸುತ್ತೋಲೆಯಲ್ಲಿ ಉಲ್ಲೇಖಿಸಿಲ್ಲ? ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದಿವ್ಯ ನಿರ್ಲಕ್ಷ್ಯವಲ್ಲದೇ ಮತ್ತೇನು ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಬಾಯಲ್ಲಿ ಹೇಳಿದ್ದು ಸುತ್ತೋಲೆಯಲ್ಲಿ ಯಾಕಿಲ್ಲ?

ಹೌದು…ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದಿವ್ಯ ನಿರ್ಲಕ್ಕ್ಷ್ಯದಿಂದಲೇ ಜನಿವಾರ ವಿವಾದ ಮತ್ತೆ ಮರುಕಳಿಸಿದೆ. ಕೇವಲ ಬಾಯಿಗೆ ಮಾತಲ್ಲಿ ಹೇಳೋದು, ಸೂಚನೆ ಕೊಡುವುದಲ್ಲ. ಅಧಿಕೃತವಾಗಿ ಪ್ರಕಟಿಸುವ ಸುತ್ತೋಲೆಯಲ್ಲಿ ಪರೀಕ್ಷಾರ್ಥಿಗಳ ಜನಿವಾರ, ಕೊರಳಲ್ಲಿ ಹಾಕುವ ಲಿಂಗುವನ್ನು ತೆಗೆಯುವಂತಿಲ್ಲ ಎಂಬ ಅಂಶವನ್ನು ಕೆಇಎ ಉಲ್ಲೇಖಿಸಬಹುದಿತ್ತು. ಆ ವಸ್ತು ನಿಷೇಧ, ಇದು ನಿಷೇಧ ಅಂತೆಲ್ಲಾ ನೂರೆಂಟು ಕಟ್ಟಪ್ಪಣೆಗಳನ್ನು ಹಾಕಿ ಸುತ್ತೋಲೆಯಲ್ಲಿನ್ನು ಹೊರಡಿಸುವ ಕೆಇಎ, ಜನಿವಾರ-ಕೊರಳಿನ ಲಿಂಗು ಬಗ್ಗೆ ಏಕೆ ಉಲ್ಲೇಖಿಸಿಲ್ಲ ಎನ್ನುವುದೇ ಪ್ರಶ್ನೆ.

ಇದನ್ನೂ ಓದಿ: ಪೊಲೀಸ್​ ಠಾಣೆ ಮೆಟ್ಟಿಲೇರಿದ ಜನಿವಾರ ದಂಗಲ್: ವಿವಾದ ಬೆನ್ನಲ್ಲೇ ಮೂವರು ವಶಕ್ಕೆ

ಕಳೆದ ವರ್ಷ ಇದೇ ವಿಚಾರಕ್ಕೆ ದೊಡ್ಡ ರದ್ದಾಂತವಾಗಿತ್ತು.ರಾಜಕೀಯ ಕೆಸರೆರೆಚಾಟಕ್ಕೂ ಕಾರಣವಾಗಿತ್ತು. ಆದರೂ ಕೆಇಎ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಜನಿವಾರ ಪ್ರಕರಣ ಈ ವರ್ಷವೂ ಸಹ ಮುನ್ನೆಲೆಗೆ ಬಂದಿದ್ದು, ಇದು ಕೆಇಎ ಕಾರ್ಯವೈಖರಿಯ ಹಿಡಿದ ಕನ್ನಡಿಯಾಗಿದೆ. ಅಲ್ಲದೇ ಪ್ರತಿ ವರ್ಷವೂ ಹುಟ್ಟಿಕೊಳ್ಳುವ ಈ ರೀತಿಯ ವಿವಾದಗಳಿಗೆ ಕೆಇಎ ಕಾರಣ. ಹೀಗಾಗಿ ಸರ್ಕಾರ, ಕೇವಲ ಕೆಳ ಹಂತದ ಅಧಿಕಾರಿಗಳು ಅಥವಾ ಪರೀಕ್ಷಾ ಕೇಂದ್ರ ಆಫೀರ್ಸ್​ ಮೇಲೆ ಕ್ರಮಕೈಗೊಂಡು ಕೈತೊಳೆದುಕೊಂಡರೆ ಸಾಲದು, ಯಾವುದೇ ಕಟ್ಟು ನಿಟ್ಟಿನ ಅಧಿಕೃತ ಸುತ್ತೋಲೆಯಲ್ಲಿ ತಿಳಿಸದೇ ನಿರ್ಲಕ್ಷ್ಯ ತೋರಿದ ಸಂಬಂಧಿಸಿದ ಕೆಇಎ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ಮನೆ ಯಜಮಾನನಿಗೆ ಬಿಸಿ ಮುಟ್ಟಿದಾಗ ಮಾತ್ರ ಈ ರೀತಿಯ ಪ್ರಕರಣ, ವಿವಾದಗಳು ಮತ್ತೆ ಮತ್ತೆ ಮರುಕಳುಹಿಸುವುದಿಲ್ಲ. ಹಾಗೇ ಯಾರದ್ದೋ ನಿರ್ಲಕ್ಷ್ಯಕ್ಕೆ ಇನ್ನಾರೋ ಶಿಕ್ಷೆಗೆ ಗುರಿಯಾಗುವುದು ತಪ್ಪಿದಂತಾಗುತ್ತೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us