ಬೀದರ್: ಜಾತ್ರೆಯ ವೈಭವ ಅಂದ್ರೆ ಬಣ್ಣಗಳ ನೋಟ ಮನಸೂರೆಗೊಳ್ಳುತ್ತೆ. ಭಕ್ತರಂತು ಕಲರ್ ಕಲರ್ ಡ್ರೆಸ್ಗಳಲ್ಲಿ ಮಿಂಚ್ತಿರ್ತಾರೆ. ಆದ್ರೆ ಈ ಜಾತ್ರೆಯಲ್ಲಿ ಮಾತ್ರ ಭಕ್ತರಿಂದ ಹಿಡಿದು ದೇವರವರೆಗೂ ಎಲ್ಲವೂ ಹಳದಿಮಯವಾಗಿರುತ್ತೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಪೂರ ಗ್ರಾಮದಲ್ಲಿ ಮೈಲಾರ್ ಮಲ್ಲಣ್ಣನ ಜಾತ್ರೆ ವೈಭವ ರಂಗೇರಿತ್ತು. ಒಂದು ತಿಂಗಳುಗಳ ಕಾಲ ಈ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತಿದೆ. ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರದಿಂದ ಸಾವಿರಾರು ಸಂಖ್ಯೆಯಲ್ಲಿ ಬರೋ ಭಕ್ತರು ದೇವಸ್ಥಾನದ ಆವರಣದಲ್ಲಿಯೇ ಅಡುಗೆ ಮಾಡಿಕೊಂಡು ದೇವರ ದರ್ಶನ ಮಾಡುತ್ತಾರೆ. ಹಾಗೇ ದೇವರಿಗೆ ಹರಕೆ ರೂಪದಲ್ಲಿ ತೆಂಗಿನಕಾಯಿ ಹೋಳು ಮತ್ತು ಭಂಡಾರವನ್ನು ಮಿಶ್ರಣ ಮಾಡಿ ಹಾರಿಸುತ್ತಾರೆ.
ಇನ್ನು ಈ ಭಾಗದಲ್ಲಿ ಒಂದು ತಿಂಗಳ ಕಾಲ ನಡೆಯುವ ಏಕೈಕ ಜಾತ್ರೆ ಇದಾಗಿರೋದ್ರಿಂದ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಛಟ್ಟಿ ಅಮಾವಾಸ್ಯೆಯಿಂದ ಆರಂಭವಾಗುವ ಜಾತ್ರೆ ಎಳ್ಳು ಅಮಾವಾಸ್ಯೆಯವರೆಗೂ ನಡೆಯುತ್ತೆ. ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ರಾಕ್ಷಸರನ್ನು ಸಂಹಾರ ಮಾಡಲು ಮಲ್ಲಣ್ಣನ ರೂಪದಲ್ಲಿ ಶಿವ 11ನೇ ರೂಪ ತಾಳಿ ಮೈಲಾರದಲ್ಲಿ ನೆಲೆಸಿದ ಎನ್ನುವ ಪ್ರತೀತಿ ಇದೆ. ಹೀಗಾಗಿ ಪ್ರತೀವರ್ಷ ಲಕ್ಷಾಂತರ ಮಂದಿ ಭಕ್ತರು ಬಂದು ದೇವರ ಕೃಪೆಗೆ ಪಾತ್ರರಾಗ್ತಾರೆ.