ಬೆಂಗಳೂರು: ಒಂದೆಡೆ, ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಿದೆ. ಶತಾಯಗತಾಯ ಅವರನ್ನ ಸೋಲಿಸಲೇಬೇಕು ಎಂದು ಬಯಸಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇದೀಗ, ನಿರ್ದಿಷ್ಟವಾಗಿ ಮಹಾಲಕ್ಷ್ಮಿ ಲೇಔಟ್ ನತ್ತ ಅಪ್ಪಿತಪ್ಪಿಯೂ ಹೆಜ್ಜೆ ಹಾಕಿಲ್ಲವಂತೆ. ಇದರಿಂದ ಬಿಜೆಪಿ ಅಭ್ಯರ್ಥಿಯಾಗಿ ಬದಲಾಗಿರುವ ಅನರ್ಹ ಶಾಸಕ ಕೆ ಗೋಪಾಲಯ್ಯ ಅವರ ಚುನಾವಣಾ ಹಾದಿ ಸುಗಮವಾಯ್ತು ಬಿಡಿ ಎಂದು ಕ್ಷೇತ್ರದಲ್ಲಿ ಖುದ್ದು ಜೆಡಿಎಸ್ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ.
ಸಾರ್ ಪ್ರಚಾರಕ್ಕೆ ಬನ್ನಿ ಪ್ಲೀಸ್..! ಎಂದು ಜೆಡಿಎಸ್ ವರಿಷ್ಠ ದೇವೇಗೌಡ್ರಿಗೆ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರನ್ನ ಮಹಾಲಕ್ಷ್ಮಿ ಲೇಔಟ್ ಜೆಡಿಎಸ್ ಅಭ್ಯರ್ಥಿ ಅಂಗಾಲಾಚುತ್ತಿದ್ದಾರಂತೆ. ಪ್ರಚಾರಕ್ಕೆ ಬನ್ನಿ ಅಂತಾ ಜೆಡಿಎಸ್ ಕುಮಾರಸ್ವಾಮಿಗೆ ದುಂಬಾಲು ಬಿದ್ದಿದ್ದಾರಂತೆ. ನಾಮಿನೇಷನ್ ದಿನವೇ ನೀವು ಬರಬೇಕಾಗಿತ್ತು. ಆದ್ರೇ ದೇವೇಗೌಡರು ಮಾತ್ರ ಬಂದಿದ್ದರು. ಇನ್ನಾದರೂ ಪ್ರಚಾರಕ್ಕೆ ಬಂದು ಬಿಡಿ ಪ್ಲೀಸ್ ಅಂತಾ ಕುಮಾರಸ್ವಾಮಿಗೆ ನಾಶಿ ಮನವಿ ಮಾಡಿದ್ದಾರಂತೆ.
ನಡು ನೀರಿನಲ್ಲಿ ಕೈಬಿಡಬೇಡಿ, ಪ್ಲೀಸ್..!
ಜೆಡಿಎಸ್ ಕಾರ್ಪೋರೇಟರ್ ಬಿಜೆಪಿ ಅಭ್ಯರ್ಥಿ ಪರ ಬಹಿರಂಗ ಪ್ರಚಾರಕ್ಕೆ ಬರುತ್ತಿದ್ದಂತೆ, ವಾರ್ಡ್ ಅಧ್ಯಕ್ಷರು ಗೋಪಾಲಯ್ಯ ಹಿಂದೆ ಹೋಗಿದ್ದಾರಂತೆ. ಇದರಿಂದ ಗಿರೀಶ್ ನಾಶಿ ಮತ್ತಷ್ಟು ಅಧೀರರಾಗಿದ್ದಾರೆ. ಸರ್ ನೀವು ಬಂದ್ರೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ನನ್ನ ಜೊತೆಗೆ ಬರಬಹುದು. ಇಲ್ಲದೇ ಇದ್ರೇ ಇಲ್ಲಿ ಕಷ್ಟವಾಗುತ್ತೆ. ನಡು ನೀರಿನಲ್ಲಿ ಕೈಬಿಟ್ಟ ಹಾಗೆ ಆಗುತ್ತೆ ಎಂದು ಖುದ್ದು ಅಭ್ಯರ್ಥಿ ಗಿರೀಶ್ ನಾಶಿ ವರಿಷ್ಠರ ಬಳಿ ಆತಂಕ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ, ಜೆಡಿಎಸ್ ಫ್ಲ್ಯಾಗ್, ಬ್ಯಾನರ್ ತೆಗೆದುಹಾಕಿದ ಜೆಡಿಎಸ್ ಅಭ್ಯರ್ಥಿ!
ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ವರಿಷ್ಠರ ನಡೆಯಿಂದ ನೊಂದಿರುವ ಗಿರೀಶ್ ನಾಶಿ ತಮ್ಮ ಮನೆಯ ಹೊರಗಡೆ ಇದ್ದ ಬ್ಯಾನರ್ ತೆಗೆದು ಹಾಕಿದ್ದಾರೆ. ಮನೆಯ ಹೊರಗಡೆ ಜೆಡಿಎಸ್ ಬ್ಯಾನರ್ ಹಾಗೂ ದೇವೇಗೌಡ ಮತ್ತು ಕುಮಾರಸ್ವಾಮಿ ಫೋಟೋಗಳು ಈ ಹಿಂದೆ ರಾರಾಜಿಸ್ತಾ ಇತ್ತು. ಆದ್ರೇ ಈಗ ಅದನ್ನು ತೆಗೆದು ಹಾಕಲಾಗಿದೆ. ಮನೆಯ ಮುಂಭಾಗ ಅವ್ರ ಫೋಟೋ ಬ್ಯಾನರ್ ಗಳನ್ನು ತೆಗೆದುಹಾಕಲಾಗಿದೆ. ಇನ್ನು ಚುನಾವಣಾ ಆಯೋಗದ ಅನುಮತಿ ಇಲ್ಲದೆ ಹಾಕಿರುವುದಕ್ಕೆ ತೆರವು ಮಾಡಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
Published On - 1:05 pm, Wed, 20 November 19