ಪ್ರಜ್ವಲ್ ರೇವಣ್ಣ ಅನರ್ಹ; ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದ ಜೆಡಿಎಸ್ ಶಾಸಕ ಎ ಮಂಜು

| Updated By: Ganapathi Sharma

Updated on: Sep 01, 2023 | 4:13 PM

ಪ್ರಜ್ವಲ್ ವಿರುದ್ಧ ಕೇಸ್ ದಾಖಲಿಸಿದ್ದ ವಿಚಾರವಾಗಿ ಅಂದೇ ಮಾಹಿತಿ ನೀಡಿದ್ದೆ. ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ವೇಳೆಯೂ ಹೇಳಿದ್ದೆ. ಕೇಸ್ ವಿಚಾರ ಬೇರೆ, ನೀನು ಪಕ್ಷಕ್ಕೆ ಸೇರು ಎಂದು ಹೇಳಿದ್ದರು. ನಮ್ಮ ಮಕ್ಕಳು, ಮೊಕ್ಕಳ ಜೊತೆ ನೀನು ಸೇರು ಎಂದು ಹೇಳಿದ್ದರು ಎಂದು ಜೆಡಿಎಸ್ ಶಾಸಕ ಎ.ಮಂಜು ಪ್ರತಿಕ್ರಿಯಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅನರ್ಹ; ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದ ಜೆಡಿಎಸ್ ಶಾಸಕ ಎ ಮಂಜು
ಎ ಮಂಜು
Follow us on

ಬೆಂಗಳೂರು, ಸೆಪ್ಟೆಂಬರ್ 1: ಹಾಸನದ (Hassan) ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಕರ್ನಾಟಕ ಹೈಕೋರ್ಟ್ ಅನರ್ಹಗೊಳಿಸಿರುವ ವಿಚಾರವಾಗಿ ಜೆಡಿಎಸ್ ಶಾಸಕ, ದೂರುದಾರರೂ ಆಗಿರುವ ಎ.ಮಂಜು ಪ್ರತಿಕ್ರಿಯಿಸಿದ್ದು, ನಮ್ಮ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಹೇಳಿದ್ದಾರೆ. ಹೈಕೋರ್ಟ್​ ತೀರ್ಪನ್ನು ಸ್ವಾಗತಿಸುವೆ, ಖುಷಿ ಸಿಕ್ಕಿದೆ. ಸುಳ್ಳು ಮಾಹಿತಿ ನೀಡಿದ್ದರಿಂದ ಹೈಕೋರ್ಟ್ ಅವರನ್ನು ಅನರ್ಹಗೊಳಿಸಿದೆ ಎಂದು ‘ಟಿವಿ9’ಗೆ ಮಂಜು ತಿಳಿಸಿದ್ದಾರೆ.

ಅವರು ಸರಿಯಿದ್ದೇವೆ ಅನ್ನುವುದಾದರೆ ಕಾನೂನು ಹೋರಾಟ ಮಾಡಲಿ. ಸುಪ್ರೀಂ ಕೋರ್ಟ್​ನಲ್ಲಿ ಕಾನೂನು ಹೋರಾಟಮಾಡಿ ಸಮರ್ಥಿಸಿಕೊಳ್ಳಲಿ. ಸುಳ್ಳು ಮಾಹಿತಿ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರೆ ಶಿಕ್ಷೆ ಅನುಭವಿಸಲಿ. ಯಾರೇ ಆದರೂ ಸರಿ, ಚುನಾವಣಾ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು. ಬದಲಾದ ಸನ್ನಿವೇಶದಲ್ಲಿ ನಾನು ಜೆಡಿಎಸ್​ ಶಾಸಕನಾಗಿದ್ದೇನೆ. ಹಾಗೆಂದು ಜೆಡಿಎಸ್ ಸೇರುವಾಗ ಯಾವುದೇ ಷರತ್ತು ವಿಧಿಸಿರಲಿಲ್ಲ. ಪ್ರಜ್ವಲ್ ವಿರುದ್ಧ ಕೇಸ್ ದಾಖಲಿಸಿದ್ದ ವಿಚಾರವಾಗಿ ಅಂದೇ ಮಾಹಿತಿ ನೀಡಿದ್ದೆ. ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಮಾತುಕತೆ ವೇಳೆಯೂ ಹೇಳಿದ್ದೆ. ಕೇಸ್ ವಿಚಾರ ಬೇರೆ, ನೀನು ಪಕ್ಷಕ್ಕೆ ಸೇರು ಎಂದು ಹೇಳಿದ್ದರು. ನಮ್ಮ ಮಕ್ಕಳು, ಮೊಕ್ಕಳ ಜೊತೆ ನೀನು ಸೇರು ಎಂದು ಹೇಳಿದ್ದರು. ದೇವೇಗೌಡರ ಸೂಚನೆಯಂತೆ ಜೆಡಿಎಸ್ ಸೇರಿ ಶಾಸಕನಾಗಿದ್ದೇನೆ. ಒಂದು ವೇಳೆ ಅವರು ನನ್ನ ಸಲಹೆ ಕೇಳಿದರೆ ಸಹಕಾರ ನೀಡುವೆ ಎಂದು ಮಂಜು ಹೇಳಿದ್ದಾರೆ.

ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಹೈಕೋರ್ಟ್ ಅನರ್ಹಗೊಳಿಸಿರುವ ಬಗ್ಗೆ ಅರ್ಜಿದಾರರ ಪರ ವಕೀಲೆ ಪ್ರಮೀಳಾ ನೇಸರ್ಗಿ ಪ್ರತಿಕ್ರಿಯೆ ನೀಡಿದ್ದು, ಅಕ್ರಮಕ್ಕೆ ಸಹಕರಿಸಿದ ಹೆಚ್​ಡಿ ರೇವಣ್ಣ ಅವರಿಗೂ ಹೈಕೋರ್ಟ್​ ನೋಟಿಸ್ ನೀಡಿದೆ. ಪ್ರಜ್ವಲ್ ರೇವಣ್ಣ ಕೌಂಟರ್​ ಕೇಸ್ ಹಾಕಿದ್ದರಿಂದ ಮಂಜು ಅವರಿಗೆ ನೋಟಿಸ್​ ನೀಡಲಾಗಿದೆ. ನಿಮ್ಮನ್ನು ಏಕೆ ಅನರ್ಹಗೊಳಿಸಬಾರದು ಎಂದು ಪ್ರಶ್ನಿಸಿ ಕೋರ್ಟ್ ನೋಟಿಸ್​ ನೀಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ MP ಪ್ರಜ್ವಲ್​ ರೇವಣ್ಣಗೆ ಬಿಗ್ ಶಾಕ್​​​, ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಆದೇಶ

ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನೀಡಿದ್ದ ಅಫಿಡವಿಟ್​​ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ಆಧಾರದಲ್ಲಿ ಇದೀಗ ಹೈಕೋರ್ಟ್ ಅವರನ್ನು ಹಾಸನ ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಸಂದರ್ಭದಲ್ಲಿ ಈ ವಿದ್ಯಮಾನ ನಡೆದಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ