Prajwal Revanna: ಲೋಕಸಭೆಯ ಮೂರನೇ ಕಿರಿಯ ಸಂಸದರಾಗಿದ್ದ ಪ್ರಜ್ವಲ್ ರೇವಣ್ಣ ರಾಜಕೀಯ ಜೀವನ
Prajwal Revanna Profile: ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನವನ್ನು ಅಸಿಂಧುಗೊಳಿಸಿ ಆದೇಶಿಸಿದೆ. ಹಾಗಿದ್ದರೆ, ಯಾರು ಈ ಪ್ರಜ್ವಲ್ ರೇವಣ್ಣ, ಅವರ ರಾಜಕೀಯ ಹಿನ್ನೆಲೆ ಏನು? ಎಂಬ ಮಾಹಿತಿ ಇಲ್ಲಿದೆ.
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಸಂಸದ ಸ್ಥಾನವನ್ನು ಅಸಿಂಧುಗೊಳಿಸಿ ಆದೇಶಿಸಿದೆ. ಹಾಗಿದ್ದರೆ, ಪ್ರಜ್ವಲ್ ರೇವಣ್ಣ ಯಾರು? ಹಾಸನ (Hassan) ಕ್ಷೇತ್ರದಿಂದ 17ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಪ್ರಜ್ವಲ್, ಲೋಕಸಭೆಯ ಮೂರನೇ ಕಿರಿಯ ಸಂಸದರೆನಿಸಿದ್ದರು.
ಪ್ರಜ್ವಲ್ ರೇವಣ್ಣ ವೈಯಕ್ತಿಕ ಜೀವನ
ಪ್ರಜ್ವಲ್ ರೇವಣ್ಣ ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರ ಮೊಮ್ಮಗ ಮತ್ತು ಕರ್ನಾಟಕ ಮಾಜಿ ಸಚಿವರ ಹೆಚ್. ಡಿ. ರೇವಣ್ಣ ಅವರ ಪುತ್ರ. ಅಲ್ಲದೆ, ಪ್ರಜ್ವಲ್ ರೇವಣ್ಣ ಅವರ ಚಿಕ್ಕಪ್ಪ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಾಗಿದ್ದಾರೆ.
ಪ್ರಜ್ವಲ್ ರೇವಣ್ಣ ರಾಜಕೀಯ ಜೀವನ
ಬ್ರಿಟಿಷ್ ಆಡಳಿತ ಶೈಲಿಯನ್ನು ಅಭ್ಯಾಸ ಮಾಡಲು ಕಾಮನವೆಲ್ಥ್ ಪಾರ್ಲಿಮೆಂಟರಿ ಅಸೋಸಿಯೇಶನ್‌ನಿಂದ 2015 ರಲ್ಲಿ ಆಯ್ಕೆಯಾದ ಭಾರತದ 10 ಯುವ ರಾಜಕಾರಣಿಗಳಲ್ಲಿ ಪ್ರಜ್ವಲ್ ರೇವಣ್ಣ ಕೂಡ ಒಬ್ಬರಾಗಿದ್ದರು. ಅವರು ಜನತಾ ದಳ (ಜಾತ್ಯತೀತ) ಸದಸ್ಯರಾಗಿದ್ದರೂ, 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೈ ತಪ್ಪಿತ್ತು. ಹೀಗಾಗಿ ಆ ವರ್ಷ ರಾಜಕೀಯ ಪ್ರವೇಶ ಆಗಿರಲಿಲ್ಲ.
ಬದಲಾಗಿ, 2019 ರಲ್ಲಿ ನಡೆದ ಲೋಕಸಭೆ ಚುನಾವಣೆಗೆ ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮೂಲಕ ರಾಜಕೀಯ ಪ್ರವೇಶಕ್ಕೆ ಜೆಡಿಎಸ್ ಅವಕಾಶ ಮಾಡಿಕೊಟ್ಟಿತ್ತು. ಕ್ಷೇತ್ರದ ಹಾಲಿ ಸಂಸದರಾಗಿದ್ದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಅವರು ಪ್ರಜ್ವಲ್ ಚುನಾವಣಾ ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಕುಟುಂಬದ ಭದ್ರಕೋಟೆಯಾದ ಹಾಸನ ಜಿಲ್ಲೆಯನ್ನು ಬಿಟ್ಟುಕೊಟ್ಟು ತುಮಕೂರಿನಿಂದ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಜೆಡಿಎಸ್ MP ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್, ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಆದೇಶ
ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಹಾಸನ ಅಭ್ಯರ್ಥಿಯಾಗಿದ್ದ ಪ್ರಜ್ವಲ್ ರೇವಣ್ಣ ಅವರು ಮಾತ್ರ ಜಯಶಾಲಿಯಾಗಿದ್ದರು.
ಇತ್ತ, ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ದೇವೇಗೌಡರು ಸೋಲು ಅನುಭವಿಸಿದ್ದರು. ತಮ್ಮ ಅಜ್ಜನ ದೇವೇಗೌಡ ಸೋಲಿನಿಂದ ಬೇಸರಗೊಂಡ ಪ್ರಜ್ವಲ್ ಅವರು ರಾಜೀನಾಮೆ ನೀಡಲು ಮುಂದಾದರು. ನಂತರ ಮಧ್ಯಪ್ರವೇಶಿಸಿದ ದೇವೇಗೌಡರು, ಪ್ರಜ್ವಲ್ ರೇವಣ್ಣಗೆ ರಾಜಕೀನಾಮೆ ನೀಡದಂತೆ ಸಲಹೆ ನೀಡಿದ್ದರು. ಅದರಂತೆ, ರಾಜೀನಾಮೆಯಿಂದ ಪ್ರಜ್ವಲ್ ಹಿಂದೆ ಸರಿದಿದ್ದರು.
ಈ ನಡುವೆ, ಪರಜಿತ ಅಭ್ಯರ್ಥಿ ಅರಕಲಗೂಡು ಮಂಜು ಅವರು ಪ್ರಜ್ವಲ್ ರೇವಣ್ಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ನಾಮಪತ್ರ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಕೋರ್ಟ್, ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಇಂದು (ಸೆಪ್ಟೆಂಬರ್ 1) ಆದೇಶ ಹೊರಡಿಸಿದೆ. ಸದ್ಯ, ಪ್ರಜ್ವರ್ ಪರ ವಕೀಲರು ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Fri, 1 September 23