ಬೆಂಗಳೂರು: JP ಅವರಿಗೆ ಪ್ರಧಾನಿ ಹುದ್ದೆ ಮನೆಯ ಬಾಗಿಲಿಗೆ ಬಂದಿತ್ತು. ಅದೃಷ್ಟ ಅವರ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಿದ್ರೂ ಜಯಪ್ರಕಾಶ್ ನಾರಾಯಣ್ ಪ್ರಧಾನಿ ಹುದ್ದೆ ನಿರಾಕರಿಸಿದ್ದರು. ಆದರೆ ಇಂದಿನ ದಿನಗಳಲ್ಲಿ ಟಿಕೆಟ್ ಸಿಗದಿದ್ದರೆ ಜನ ಪಕ್ಷ ಬಿಡ್ತಾರೆ. MLA, ಜಿ.ಪಂ. ಟಿಕೆಟ್ ಸಿಗದಿದ್ದರೂ ಪಕ್ಷ ಬಿಡುತ್ತಾರೆ ಎಂದು ಮಾಜಿ ಶಾಸಕ YSV ದತ್ತಾ ಹೇಳಿದ್ದಾರೆ.
ಜಯಪ್ರಕಾಶ್ ನಾರಾಯಣರವರ 118ನೇ ಜಯಂತಿ ಹಿನ್ನೆಲೆಯಲ್ಲಿ ನಗರದ ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ದತ್ತಾ ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದ್ರೆ ಇಂದಿರಾ ಎಂದು ಹೇಳುತ್ತಿದ್ದ ಕಾಲವಿತ್ತು. ಹೀಗೆ ಹೇಳುತ್ತಿದ್ದ ಕಾಲದಲ್ಲೂ ಜೆಪಿಯವರು ಹೋರಾಡಿದ್ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಹೋರಾಟ ನಡೆಸಿದ್ದರು. ಅಂದಿನ ಇಂದಿರಾ ಗಾಂಧಿಯ ದಿನಗಳು ಈಗ ಮತ್ತೆ ಕಾಣ್ತಿದೆ. ದೇಶಕ್ಕೆ ಒಬ್ಬನೇ ನಾಯಕ, ಒಂದೇ ಕಾನೂನು ಅಂತಿದ್ದಾರೆ. ಅಂದು ಇದ್ದ ಎಮರ್ಜೆನ್ಸಿ ಮತ್ತೆ ಈಗ ಬರುತ್ತಿದೆ ಅನ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳದೆ ದತ್ತಾ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಒಂದು ದೇಶ, ಒಂದು ಕಾನೂನು, ಒಂದು ದೇಶ ಒಂದು ಬಣ್ಣ. ಒಂದು ದೇಶ ಒಂದು ರೇಷನ್ ಕಾರ್ಡ್ ಎಂದು ಪ್ರಧಾನಿ ಹೇಳ್ತಿದ್ದಾರೆ. ಈ ರೀತಿಯಾಗಿ ಹೇಳುವುದರ ಹಿಂದೆ ಬೇರೆ ಅಜೆಂಡಾ ಇದೆ. ಇಂದಿರಾಗಾಂಧಿ ಕಾಲದಲ್ಲಿ ಎಲ್ಲ ವಿಚಾರ ಬಹಿರಂಗವಾಗುತ್ತಿತ್ತು. ಆದರೆ, ಈಗಿರುವವರು ಅಂತರಂಗದಲ್ಲಿಯೇ ಎಲ್ಲವನ್ನು ಮಾಡುತ್ತಿದ್ದಾರೆ. ಒಂದೇ ಒಂದೇ ಅನ್ನೋದು ಈ ದೇಶಕ್ಕೆ ಬಹಳ ಅಪಾಯಕಾರಿ ಎಂದು ಮಾಜಿ ಶಾಸಕ YSVದತ್ತಾ ಹೇಳಿದ್ದಾರೆ.