ಮಂಡ್ಯ: ‘ಕೆಆರ್ಎಸ್ ಅಣೆಕಟ್ಟೆ ಬಿರುಕುಬಿಟ್ಟಿಲ್ಲ ಅಂತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ, ಈಗಲಾದರೂ ಸಂಸದೆ ಸುಮಲತಾ ಅಂಬರೀಷ್ ಅವರು ಕ್ಷಮೆ ಕೇಳಲಿ, ಅದರೊಂದಿಗೆ ವಿವಾದಕ್ಕೆ ಇಲ್ಲಿಗೇ ತೆರೆ ಎಳೆಯೋಣ ಎಂದು ಅರಕೆರೆ ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಶಿಸಿದ್ದಾರೆ.
ಕೆಆರ್ಎಸ್ ಒಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸುಮಲತಾ ಅವರಿಂದ ತಪ್ಪಾಗಿರೋದು ಈಗ ಜಗಜ್ಜಾಹೀರಾಗಿದೆ. ಈಗಲಾದರೂ ಬಂದು KRS ಒಡೆದಿಲ್ಲ ಎಂದು ಹೇಳಿ ಕ್ಷಮೆ ಕೇಳಿ. ಕೆಆರ್ ಎಸ್ ಗೆ ಬಂದು ಸುಮಲತಾ ಕಾವೇರಿ ತಾಯಿಗೆ ಪೂಜೆ ಮಾಡಿ ಜನರ ಕ್ಷಮೆ ಕೇಳಲಿ. ಸುಮಲತಾ ಅವರು ಕ್ಷಮೆ ಕೇಳಿದ ಮೇಲೆ ಈ ವಿವಾದ ಮುಗಿಯುತ್ತೆ. ಕೆಆರ್ಎಸ್ ಡ್ಯಾಂ ವಿಚಾರಕ್ಕೆ ಇಲ್ಲಿಗೇ ತೆರೆ ಎಳೆಯೋಣ. ಅದು ಬಿಟ್ಟು ಬೇರೆ ಯಾವುದೋ ವಿಚಾರಕ್ಕೆ ಹೋಗೋದು ಬೇಡ ಎಂದು ಹೇಳುವ ಮೂಲಕ ಜೆಡಿಎಸ್ ದಳಪತಿಗಳು ಹಸಿರು ಬಾವುಟ ಬೀಸುವುದಕ್ಕೆ ಮುಂದಾಗಿದ್ದಾರೆ.
ಸುಮಲತಾ ಅಂಬರೀಷ್ ಕಣ್ಣೀರಿನ ಮಿಸೈಲ್ ಇನ್ನು ಮುಂದೆ ಕೆಲಸಕ್ಕೆ ಬರುವುದಿಲ್ಲ:
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದ್ದು, ನಮ್ಮ ಕ್ಷೇತ್ರದ ಸಂಸದೆ ಆರೋಪಗಳಿಗೆ ಮಾತ್ರ ಪ್ರತಿಕ್ರಿಯಿಸುವೆ. ಕೆಆರ್ಎಸ್ ಡ್ಯಾಂ ಬಗ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದೇನೆ. ನಾನು ಎಂಎಲ್ಎ, ನನಗೆ ಭಸ್ಮ ಆಗ್ಲಿ ಮಣ್ಣಾಗೋಗಲಿ ಎಂದು ನನಗೆ ಹೇಳಿದ್ರಲ್ಲ ಇದು ಸರಿನಾ? ಕೊಳ್ಳೆಗಾಲದ ಮಾಟದ ರೀತಿಯಲ್ಲಿ ಭಸ್ಮ ಆಗಲಿ ನಾನು ಅಂತಾ ಹೇಳ್ತಿರಲ್ಲ ಇದು ಜನ ಸಮ್ಮತನಾ? ಎಂದು ಸಂಸದೆ ಸುಮಲತಾ ಅವರನ್ನು ರವೀಂದ್ರ ಶ್ರೀಕಂಠಯ್ಯ ತರಾಟೆಗೆ ತೆಗೆದುಕೊಂಡರು.
ನಾನು ಎಲ್ಲೂ ಅಂಬರೀಶ್ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದರು ಎಂದಿಲ್ಲ. ಅಂಬರೀಶ್ ಬೆಂಬಲಿಗರು ಮಾಡುತ್ತಿದ್ರು ಎಂದಿದ್ದೇನೆ ಅಷ್ಟೇ. ಮಂಡ್ಯ ಜಿಲ್ಲೆಯ ಜನರು ಒಮ್ಮೆ ಕಣ್ಣೀರಿಗೆ ಮರುಳಾಗಿದ್ದಾರೆ. ಆದರೆ ಮತ್ತೆ ಮತ್ತೆ ಕಣ್ಣೀರು ಹಾಕಿದರೆ ಮಂಡ್ಯ ಜನ ಮರುಳಾಗಲ್ಲ. ಕಣ್ಣೀರಿನ ಮಿಸೈಲ್ ಇನ್ನು ಮುಂದೆ ಕೆಲಸಕ್ಕೆ ಬರುವುದಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.
ಇದೇ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ರಾಕ್ಲೈನ್ ವೆಂಕಟೇಶ್ ಹೇಳಿಕೆಗೆಳಿಗೆ ತಿರುಗೇಟು ನೀಡಿದ್ದು, ಯಾರದೋ ಹೇಳಿಕೆಗಳಿಗೆ ನಾನ್ಯಾಕೆ ಪ್ರತಿಕ್ರಿಯಿಸಲಿ. ಪಾಪ ಅವರು ಈಗ ಗಾಬರಿಯಾದಂತೆ ಕಾಣುತ್ತಾರೆ ಎಂದು ಛೇಡಿಸಿದ್ದಾರೆ.
ಯಾರೂ ಅನಗತ್ಯ ಹೇಳಿಕೆ ನೀಡದಂತೆ ಹೆಚ್.ಡಿ. ದೇವೇಗೌಡರಿಂದ ಸೂಚನೆ:
ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಟಾಕ್‌ವಾರ್ ಡ್ಯಾಮೇಜ್ ಕಂಟ್ರೋಲ್‌ಗೆ ಜೆಡಿಎಸ್ ದಳಪತಿಗಳು ಮುಂದಾದಂತೆ ಇದೆ. ಈ ಬಗ್ಗೆ ಯಾರೂ ಅನಗತ್ಯ ಹೇಳಿಕೆ ನೀಡದಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರಿಂದ ಸೂಚನೆ ಬಂದಿದೆ. ಈ ರೀತಿ ಹೇಳಿಕೆಯಿಂದ ಜನರಿಗೆ ಬೇರೆ ರೀತಿ ಸಂದೇಶ ರವಾನೆಯಾಗುತ್ತದೆ. ಇದರಿಂದ JDS ಪಕ್ಷಕ್ಕೆ ಮತ್ತಷ್ಟು ಡ್ಯಾಮೇಜ್ ಆಗುತ್ತದೆ. ಇದೇ ವಿಚಾರ ರಾಜಕೀಯವಾಗಿ ಬಳಸಿಕೊಂಡು ಹಿನ್ನಡೆಯಾಗುತ್ತದೆ. ವಿರೋಧಿಗಳು ಪಕ್ಷಕ್ಕೆ ಹಿನ್ನಡೆ ಮಾಡುವ ಕೆಲಸ ಮಾಡ್ತಾರೆ. ಮುಂದಿನ ಸ್ಥಳೀಯ ಚುನಾವಣೆ ಮೇಲೆ ಇದು ಪ್ರಭಾವ ಬೀರುತ್ತದೆ. ಹೀಗಾಗಿ ಸ್ವಲ್ಪ ದಿನ ಈ ವಿಚಾರವಾಗಿ ಹೇಳಿಕೆ ಬೇಡ ಎಂದು ಜೆಡಿಎಸ್ ವರಿಷ್ಠ ದೇವೇಗೌಡರಿಂದ ಸೂಚನೆ ರವಾನೆಯಾಗಿದೆ. ಇದಕ್ಕೆ ಸಮ್ಮತಿ ಸೂಚಿಸುವತೆ ಸದ್ಯ ತಟಸ್ಥವಾಗಿರಲು ಹೆಚ್.ಡಿ.ಕುಮಾರಸ್ವಾಮಿ ಸಹ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ವಿಷಯದಲ್ಲಿ ನಾನು ಯಾವುದೇ ತಪ್ಪು ಮಾತಾಡಿಲ್ಲ, ನಾನ್ಯಾಕೆ ಕ್ಷಮೆ ಕೇಳಲಿ: ರಾಕ್ಲೈನ್ ವೆಂಕಟೇಶ್
(jds mla ravindra srikantaiah wants apology from mp sumalatha ambareesh to end krs dam row)
Published On - 12:18 pm, Sat, 10 July 21