ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್, ಸೂರಜ್​ ರೇವಣ್ಣ ಕೇಸ್​ ಸಿಐಡಿಗೆ ವರ್ಗಾವಣೆ

| Updated By: ರಮೇಶ್ ಬಿ. ಜವಳಗೇರಾ

Updated on: Jun 23, 2024 | 12:41 PM

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರ ಕುಟುಂಬಕ್ಕೆ ಮತ್ತೊಂದು ಮುಜುಗರ ಎದುರಾಗಿದೆ. ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಹಾಸನದಲ್ಲಿ ಸೂರಜ್‌ನನ್ನು ಬಂಧಿಸಲಾಗಿದೆ. ಇದೀಗ ಈ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ರೇವಣ್ಣ ಕುಟುಂಬಕ್ಕೆ ಮತ್ತೊಂದು ಶಾಕ್, ಸೂರಜ್​ ರೇವಣ್ಣ ಕೇಸ್​ ಸಿಐಡಿಗೆ ವರ್ಗಾವಣೆ
ಸೂರಜ್ ರೇವಣ್ಣ
Follow us on

ಬೆಂಗಳೂರು/ಹಾಸನ, (ಜೂನ್ 23): ಜೆಡಿಎಸ್​ ವಿಧಾನಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ (Dr Suraj Revanna) ವಿರುದ್ಧ ಸಲಿಂಗ ಕಾಮ, ಅಸಹಜ ಲೈಂಗಿಕ ದೌರ್ಜನ್ಯದ ಆರೋಪದ ಪ್ರಕರಣವನ್ನು ಸಿಐಡಿಗೆ(CID)  ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಬಂಧನವಾಗಿರುವ ಸೂರಜ್‌ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಅವರು ಆದೇಶ ಹೊರಡಿಸಿದ್ದಾರೆ.

ಕಾನೂನು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ ಸೂರಜ್ ರೇವಣ್ಣ ವಿರುದ್ಧದ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಈ ಸಂಬಂಧ ಅವರು ಹಾಸನ ಎಸ್​ಪಿ, ಸಿಐಡಿ ಡಿಜಿಪಿಗೆ ಪತ್ರ ಬರೆದಿದ್ದಾರೆ. ಖುದ್ದು ಸಿಐಡಿ ಕಚೇರಿಗೆ ತೆರಳಿ ಕೇಸ್ ಫೈಲ್ ನೀಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ತನಿಖೆಗೆ ತಯಾರಿ ಮಾಡಿಕೊಳ್ಳಲು ಸಿಐಡಿ ಅಧಿಕಾರಿಗಳಿಗೆ ಸಹ ಸೂಚಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ ಸುಮಾರು ದಿನ ಪರಾರಿಯಾಗಿದ್ದ, ಈಗ ಸೂರಜ್‌ ಒಂದೇ ದಿನದಲ್ಲಿ ಪೊಲೀಸ್‌ ಬಲೆಗೆ ಬಿದ್ದಿದ್ದೇ ರೋಚಕ!

ಗೃಹ ಸಚಿವ ಪರಮೇಶ್ವರ್ ಹೇಳಿದ್ದಿಷ್ಟು

ಇನ್ನು ಸಿಐಡಿ ವರ್ಗಾವಣೆಗೆ ಆದೇಶ ಹೊರಬೀಳುವ ಮೊದಲು ಈ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಕಂಪ್ಲೇಂಟ್ ಬಂದಿದೆ, ಎಸ್​ಐಆರ್ ಸಹ ದಾಖಲಾಗಿದೆ. ಪ್ರಕರಣದ ತನಿಖೆ ಸಿಐಡಿಗೆ ವಹಿಸುತ್ತೇವೆ. ಇಂತಹ ಪ್ರಕರಣಗಳನ್ನ ಸಿಐಡಿಗೆ ಕೊಡಬೇಕಾಗುತ್ತದೆ. ನನಗೇನು ಗೊತ್ತೋ ಅಷ್ಟನ್ನು ಮಾತ್ರ ನಾನು ಹೇಳುತ್ತೇನೆ. ಏನು ಕ್ರಮ ತೆಗೆದುಕೊಳ್ಳಬೇಕೋ ಪೊಲೀಸರು ತಗೋತಾರೆ ಎಂದು ಸ್ಪಷ್ಟಪಡಿಸಿದರು.

ಅಸಹಜ ಲೈಂಗಿಕ ದೌರ್ಜನ್ಯ (Sexual assault) ಆರೋಪದಲ್ಲಿ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ಸಹೋದರ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ (Suraj Revanna) ಅವರನ್ನು ಹಾಸನದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಸಂತ್ರಸ್ತ ನೀಡಿದ್ದ ದೂರು ಆಧರಿಸಿ ಹೊಳೆನರಸೀಪುರ ಗ್ರಾಮಾಂತ ಪೊಲೀಸ್​ ಠಾಣೆಯಲ್ಲಿ ಸೆಕ್ಷನ್​​ 377 (ಅಸ್ವಾಭಾವಿಕ ಅಪರಾಧ), 342 (ತಪ್ಪಾದ ಬಂಧನಕ್ಕೆ ಶಿಕ್ಷೆ) ಹಾಗೂ 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಜಿಪಿ ಕಚೇರಿಯಲ್ಲಿ ದೂರು ನೀಡಿದ್ದ ಸಂತ್ರಸ್ತ ಹಾಸನ ಎಸ್ಪಿಗೂ ದೂರಿನ ಪ್ರತಿಯನ್ನು ಮೇಲ್ ಮಾಡಿದ್ದರು.

ತಮ್ಮ ಆಪ್ತ ಸಂತ್ರಸ್ತನ ವಿರುದ್ದ ನೀಡಿದ್ದ ದೂರಿಗೆ ಸಾಕ್ಷಿ ನೀಡಲು ಹಾಸನದ ಸೆನ್ ಪೊಲೀಸ್ ಠಾಣೆಗೆ ಸಂಜೆ 7.30ಕ್ಕೆ ಬಂದಿದ್ದ ಸೂರಜ್‌ ರೇವಣ್ಣನನ್ನು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು, ಸುದೀರ್ಘ ವಿಚಾರಣೆಗೊಳಪಡಿಸಿದರು. ರಾತ್ರಿ 10 ಗಂಟೆಗೆ ಸೂರಜ್‌ ರೇವಣ್ಣಗೆ ಊಟ ನೀಡಿದ ಬಳಿಕ ಇಂದು (ಜೂನ್ 23) ಮುಂಜಾನೆ 4 ಗಂಟೆಯವರೆಗೂ ತನಿಖೆ ನಡೆಸಿ ನಂತರ ಮಲಗಲು ವ್ಯವಸ್ಥೆ ಮಾಡಿದ್ದರು. ಇದಾದ ಬಳಿಕ ಇಂದು ಬೆಳಗ್ಗೆ ಸೂರಜ್‌ ರೇವಣ್ಣ ಅವರನ್ನು ಪೊಲೀಸರು ಅಧಿಕೃತವಾಗಿ ಬಂಧಿಸಿದ್ದರು.

ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ

ಸೂರಜ್‌ ರೇವಣ್ಣ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506 ಅಡಿ ಕೇಸ್ ದಾಖಲಾಗಿದ್ದು, ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ವರ್ಗಾವಣೆ ಸಾಧ್ಯತೆ ಇದೆ. ಸೂರಜ್ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಜನಪ್ರತಿನಿಧಿ ಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಕೂಡ ವರ್ಗಾವಣೆಯಾಗಲಿದೆ. ಒಂದುವೇಳೆ ಪ್ರಕರಣ ವರ್ಗಾವಣೆಯಾದರೆ ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ. ಕೇಸ್ ವರ್ಗಾವಣೆ ಬಗ್ಗೆ ಪೊಲೀಸರು ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:10 pm, Sun, 23 June 24