ಬಳ್ಳಾರಿ: ಜ್ಯುಬಿಲೆಂಟ್ ನಂಜು ರಾಜ್ಯವನ್ನ ಕಾಡಿದ್ದಾಯ್ತು, ಈಗ ಜಿಂದಾಲ್ನಲ್ಲಿ ಹರಡಿರುವ ಕೊರೊನಾ ಸೋಂಕು ಗಣಿನಾಡು ಬಳ್ಳಾರಿಯನ್ನ ಗಢಗಢ ನಡುಗಿಸುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದ್ರು ಯಾರು ಊಹಿಸಲಾಗದಂಥ ಕಂಟಕ ಎದುರಾಗೋದು ಗ್ಯಾರಂಟಿ. ಹೀಗಿರುವಾಗಲೇ ಗಣಿನಾಡಿಗೆ ನಿನ್ನೆ ಸಚಿವರ ಪಡೆಯೇ ದೌಡಾಯಿಸಿತ್ತು.
ಅದೇನಾಯ್ತೋ ಏನೋ ಅದೆಲ್ಲಿಂದ ಮಹಾಮಾರಿ ವಕ್ಕರಿಸುತ್ತಿದೆಯೋ ಗೊತ್ತಿಲ್ಲ. ಕೆಲ ದಿನಗಳಿಂದ ಕರುನಾಡಿನ ಜನ ಅಕ್ಷರಶಃ ನಲುಗಿದ್ದಾರೆ, ಭಯಗೊಂಡಿದ್ದಾರೆ. ದಿನಕ್ಕೆ ಒಂದೋ, ಎರಡೋ ಕೇಸ್ ದಾಖಲಾಗುತ್ತಿದ್ದ ಕಡೆ ಇದೀಗ ಮಿನಿಮಮ್ ಸೆಂಚ್ಯೂರಿ ಗ್ಯಾರಂಟಿ. ಅದ್ರಲ್ಲೂ ಗಣಿನಾಡು ಬಳ್ಳಾರಿಯಲ್ಲಿ ರಣಭೀಕರ ವಾತಾವರಣ ನಿರ್ಮಾಣವಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಹತ್ತಾರು ಸಾವಿರ ಕಾರ್ಮಿಕರಿಗೆ ಸೋಂಕು ಹರಡುವ ಭೀತಿ ಎದುರಾಗಿದೆ.
ಜಿಂದಾಲ್ನ 97 ಉದ್ಯೋಗಿಗಳಿಗೆ ಕೊರೊನಾ ಸೋಂಕು!
ಜಿಂದಾಲ್ ಕಂಪನಿ ತಾತ್ಕಾಲಿಕವಾಗಿ ಬಂದ್ ಮಾಡಲು ಒತ್ತಾಯ!
ಜಿಂದಾಲ್ ಕಂಪನಿಯಲ್ಲಿ ಸೋಂಕಿತರ ಸಂಖ್ಯೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಂಪನಿಗೆ ರಜೆ ನೀಡುವಂತೆ ಒತ್ತಾಯ ಕೇಳಿಬರ್ತಿದೆ. ಆದರೆ ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಪರಿಸ್ಥಿತಿ ಹೀಗೆ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಬಳ್ಳಾರಿಗೆ ದೌಡಾಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ಜಿಂದಾಲ್ ಆಡಳಿತ ಮಂಡಳಿ ಅಧಿಕಾರಿಗಳು ಈ ಸಭೆಯಲ್ಲಿ ತಾವು ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವರದಿ ಮಂಡಿಸಿದೆ.
ಒಟ್ನಲ್ಲಿ ಡೆಡ್ಲಿ ಕೊರೊನಾ ಸೋಂಕು ಕರುನಾಡನ್ನು ಕಾಡಲು ಶುರುಮಾಡಿದೆ. ನಿನ್ನೆ ಕೂಡ ಸೋಂಕಿತರ ಸಂಖ್ಯೆ ದ್ವಿಶತಕ ಬಾರಿಸಿದ್ದು, ಮುಂಬರುವ ದಿನಗಳು ಇನ್ನೂ ಭಯಾನಕವಾಗಿರಲಿವೆ. ಜನರು ಇದನ್ನು ಅರ್ಥ ಮಾಡಿಕೊಂಡು ಸರ್ಕಾರದ ನಿಯಮಗಳನ್ನ ಚಾಚೂ ತಪ್ಪದೆ ಪಾಲಿಸಬೇಕಿದೆ.
Published On - 7:44 am, Sat, 13 June 20