ಮೂರು ಸಾವಿರ ಮಠದ ಭೂ ವಿವಾದ: ದಿಂಗಾಲೇಶ್ವರ ಶ್ರೀಗಳಿಗೆ ಪ್ರಭಾಕರ ಕೋರೆ ಎಚ್ಚರಿಕೆ; ದಾನವಾಗಿ ಕೊಟ್ಟ ಭೂಮಿ ವಾಪಸ್ ನೀಡುವ ಪ್ರಶ್ನೆಯೇ ಇಲ್ಲ- ಕೋರೆ ಸ್ಪಷ್ಟನೆ
ಕೆ.ಎಲ್.ಇ ಸಂಸ್ಥೆಯ ಅಧ್ಯಕ್ಷ ಮಾಜಿ ಸಂಸದ ಡಾ. ಪ್ರಭಾಕರ ಕೋರೆ ಸುದ್ದಿಗೋಷ್ಟಿಯಲ್ಲಿ ಮೂರುಸಾವಿರ ಮಠದ ಭೂವಿವಾದ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿ: ಮೂರು ಸಾವಿರ ಮಠದ ಭೂ ವಿವಾದ ಕುರಿತಾಗಿ ಸ್ಪಷ್ಟನೆ ನೀಡಲು ಕೆ.ಎಲ್.ಇ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಜಿ ಸಂಸದ ಡಾ. ಪ್ರಭಾಕರ ಕೋರೆ ಇಂದು ಸುದ್ದಿಗೋಷ್ಠಿ ನಡೆಸಿದರು. ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕವಟಗಿಮಠ ಸುದ್ದಿಗೋಷ್ಠಿಯಲ್ಲಿ ಜೊತೆಗಿದ್ದರು. ಓರ್ವ ಸ್ವಾಮೀಜಿ ನಮ್ಮ ಸಂಸ್ಥೆ ಬಗ್ಗೆ ತಪ್ಪು ತಿಳಿವಳಿಕೆ ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಪ್ರಭಾಕರ ಕೋರೆ, ವೀರಶೈವ ಮಠಗಳು ಭಕ್ತರ ಮಠಗಳು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಕ್ತರು ಕೊಟ್ಟ ಕಾಣಿಕೆಯಿಂದ ಸ್ಥಾಪಿತವಾದ ಮಠ ಮೂರು ಸಾವಿರ ಮಠ (mooru savira mutt). ಮುಂದಿನ ಸ್ವಾಮೀಜಿ ಯಾರಾಗಬೇಕೆಂಬ ಬಗ್ಗೆ ಜಗಳ ನಡೆಯುತ್ತಿದೆ. ಅದಕ್ಕೆ ನಮ್ಮ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಸಂಸ್ಥೆ ಕೂಡ ದಾನಿಗಳಿಂದ ಬೆಳೆದಿದೆ. ಅನೇಕ ಮಠಗಳು ನಮ್ಮ ಸಂಸ್ಥೆಗೆ ದಾನ ನೀಡಿವೆ ಎಂದು ಹೇಳಿದರು.
ಮೂರು ಸಾವಿರ ಮಠವನ್ನು ಕೆಎಲ್ಇ ಶಿಕ್ಷಣ ಸಂಸ್ಥೆಗೆ ದಾನ ಮಾಡಿ 17 ವರ್ಷವಾಗಿದೆ. ಇಲ್ಲಿಯ ತನಕ ಈ ಸ್ವಾಮೀಜಿ ಎಲ್ಲಿ ಹೋಗಿದ್ದರು? ಕೆಎಲ್ಇಗೆ ಪರಭಾರೆ ಮಾಡಿದರೆಂದು ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಎಷ್ಟೋ ಮಠಗಳ ಆಸ್ತಿ ಪಾಸ್ತಿ ಪರಭಾರೆಯಾಗಿದೆ. ಅದರ ಬಗ್ಗೆ ಇವರಿಗೆ ಕಳಕಳಿ ಇಲ್ಲವೇ. ಚಿತ್ರದುರ್ಗ ಮಠದ ಆಸ್ತಿ ಎಷ್ಟಿತ್ತು ಎಂದು ಅವರಿಗೆ ಗೊತ್ತಿತ್ತಾ? ನಮಗೆ ಮಠದ ಉನ್ನತ ಸಮಿತಿ ಯಾವುದೇ ಆಸ್ತಿ ನೀಡಿಲ್ಲ ಎಂದು ದಿಂಗಾಲೇಶ್ವರ ಶ್ರೀ Sri Dingaleshwara swamiji ವಿರುದ್ಧ ಪರೋಕ್ಷವಾಗಿ ಪ್ರಭಾಕರ ಕೋರೆ Dr Prabhakar Kore ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಿನ ಸ್ವಾಮೀಜಿ ಗಂಗಾಧರ ಸ್ವಾಮೀಜಿಗಳಿಗೆ ಮನವಿ ಮಾಡಿದ್ದೆವು. ನಮ್ಮದೊಂದು ವಿವಾದ ಇರುವ ಭೂಮಿಯಿದೆ. ಅದನ್ನ ಬಿಡಿಸಿಕೊಟ್ಟರೆ ಅಲ್ಲಿ ನೀವು ಕಾಲೇಜು ಕಟ್ಟಬಹುದು ಎಂದು ಹೇಳಿದ್ದರು. ಆಗ ಅದು ಹುಬ್ಬಳ್ಳಿಯ ಅಸುಂಡಿ ಫ್ಯಾಮಿಲಿಯವರ ಹೆಸರಿನಲ್ಲಿತ್ತು. ಒಟ್ಟು 38 ಏಕರೆ ಅವರ ಹೆಸರಿನಲ್ಲಿತ್ತು. ಅದರಲ್ಲಿ 23 ಎಕರೆಯಷ್ಟು ನಮಗೆ ಬಿಟ್ಟು ಕೊಟ್ಟಿದ್ದರು. ಅದಕೆಲ್ಲಾ ಕೆಎಲ್ಇ ಸಂಸ್ಥೆ ಖುರ್ಚು ವೆಚ್ಚ ನೀಡಿತ್ತು. ಹೀಗಾಗಿ ಅಂದಿನ ಸ್ವಾಮೀಜಿ ನಮಗೆ ದಾನದ ರೂಪದಲ್ಲಿ ಭೂಮಿಯನ್ನ ನೀಡಿದ್ದರು. ದಾನವಾಗಿ ಕೊಟ್ಟ ಭೂಮಿ ವಾಪಸ್ ನೀಡುವ ಪ್ರಶ್ನೆಯೇ ಇಲ್ಲ. ಮಠದ ಪೀಠಾಧ್ಯಕ್ಷರು ಯಾರಾಗಬೇಕು ಅಂತ ನಮಗೆ ಸಂಬಂಧವಿಲ್ಲದ ವಿಚಾರ ಎಂದು ಪ್ರಭಾಕರ್ ಕೋರೆ ಮಾತನಾಡಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಒಳ್ಳೆಯದಾಗಲಿ ಎಂದು ಭೂಮಿ ದಾನ ಮಾಡಲಾಗಿತ್ತು. ಕೆಎಲ್ಇ ಸಂಸ್ಥೆಗೆ ದಾನ ನೀಡಿರುವ ಭೂಮಿ ಹಿಂದಿರುಗಿಸಲ್ಲ. ಲಿಂಗಾಯತ ಸಮುದಾಯದ ಬಡ ಮಕ್ಕಳಿಗೆ ನೆರವು ನೀಡಿದೆ ನಮ್ಮ ಸಂಸ್ಥೆ. ಅವರ ಮಕ್ಕಳಿಗೆ ಅವಕಾಶ ಸಿಕ್ಕಿರಲಿಲ್ಲ ಅಂದರೆ ನಾನು ಏನು ಮಾಡಲೂ ಸಾಧ್ಯವಿಲ್ಲ. ಮೂರು ಸಾವಿರ ಮಠಕ್ಕೆ ನಾನೇ ಮಾಲೀಕನೆಂದರೆ ನಂಬುತ್ತೀರಾ? ಆತ, ನಾನೇ ಮುಂದಿನ ಪೀಠಾಧಿಪತಿ ಎಂದರೆ ನಾನೇನು ಮಾಡಲು ಸಾಧ್ಯ? ಕೆಎಲ್ಇ ವಿರುದ್ಧ ಆರೋಪ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ದಿಂಗಾಲೇಶ್ವರ ಶ್ರೀಗಳಿಗೆ ಪ್ರಭಾಕರ ಕೋರೆ ಎಚ್ಚರಿಕೆ ಮಾತನ್ನಾಡಿದ್ದಾರೆ.
ಮೂರುಸಾವಿರ ಮಠ ನಮಗೆ ಭೂಮಿ ದಾನ ಮಾಡಿದೆ. ನಾವು ಈಗಾಗಲೇ ಕಾಮಗಾರಿಯನ್ನು ಮಾಡುತ್ತಿದ್ದೇವೆ. ಮುಂದಿನ ಒಂದೂವರೆ ವರ್ಷದಲ್ಲಿ ಕಾಲೇಜು ಉದ್ಘಾಟನೆ ಮಾಡುತ್ತೇವೆ ಎಂದು ಪ್ರಭಾಕರ ಕೋರೆ ಇದೇ ವೇಳೆ ಹೇಳಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ, ಬಿಜೆಪಿ ಟಿಕೆಟ್ ನೀಡಿದರೆ ನಾನು ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಕೊಟ್ಟರೆ ಯಾರು ಬೇಡ ಎಂದು ಹೇಳುತ್ತಾರೆ? ನನಗೇನು ವಯಸ್ಸಾಗಿದೆಯಾ ಎಂದು ಪ್ರಭಾಕರ್ ಕೋರೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೂರು ಸಾವಿರ ಮಠದ ಆಸ್ತಿ ವಿವಾದ: ಉನ್ನತ ಸಮಿತಿಯ ವಿರುದ್ಧ ಮಾಜಿ ಶಾಸಕರ ಅಸಮಾಧಾನ