ಕಲಬುರಗಿ: ಭೀಮಾ ನದಿ ಪ್ರವಾಹದಿಂದಾಗಿ ಘತ್ತರಗಿ ಹಾಗೂ ಗಾಣಗಾಪುರ ಸೇತುವೆಗಳು ಜಲಾವೃತವಾಗಿರುವಂತಹ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಗ್ರಾಮಗಳಲ್ಲಿ ನಡೆದಿದೆ. ಅಫಜಲಪುರ ಹಾಗೂ ಸಿಂದಗಿ ಪಟ್ಟಣಕ್ಕೆ ಸಂಪರ್ಕ ಕಡಿತವಾಗಿದ್ದು, ಮಹಾರಾಷ್ಟ್ರದಿಂದ ನದಿಗೆ ಭಾರಿ ನೀರು ಹರಿದು ಬರುತ್ತಿದೆ. ಸೊನ್ನ ಬ್ಯಾರೇಜ್ನಿಂದ ಭೀಮಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಆತಂಕ ಶುರುವಾಗಿದೆ. ನೀರು ಹೆಚ್ಚಾದ್ರೆ ಅನೇಕ ಗ್ರಾಮಗಳಿಗೆ ಭೀಮಾ ನದಿ ನೀರು ನುಗ್ಗಲಿದೆ. ಜಿಲ್ಲೆಯ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನ ಅನೇಕ ಗ್ರಾಮದ ಜನರಿಗೆ ಆತಂಕ ಉಂಟಗಿದ್ದು, ನದಿ ಸಮೀಪ ಹೋಗದಂತೆ ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯ
ಇನ್ನೂ ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯವಾಗಿರುವಂತಹ ಘಟನೆ ಯಡ್ರಾಮಿ ತಾಲೂಕಿನ ತೆಲಗಬಾಳ ಗ್ರಾಮದಲ್ಲಿ ನಡೆದಿದೆ. ರಾತ್ರಿ ಏಕಾಏಕಿ ಮನೆ ಗೋಡೆ, ಮೇಲ್ಚಾವಣಿ ಕುಸಿದುಬಿದ್ದಿದೆ. ಮಹಾಂತೇಶ್ ಸಜ್ಜನ್ ಎಂಬುವರಿಗೆ ಸೇರಿದ ಮನೆ ಕುಸಿತವಾಗಿದೆ. ಮನೆಯಲ್ಲಿದ್ದ ಶಿಲ್ಪಾ ಎಂಬುವರಿಗೆ ಗಾಯವಾಗಿದ್ದು, ಉಳಿದವರು ಬಚಾವ್ ಆಗಿದ್ದಾರೆ. ಮೇಲ್ಚಾವಣಿ ಕುಸಿಯುತ್ತಿದ್ದಂತೆ ತಕ್ಷಣ ಕುಟುಂಬಸ್ಥರು ಹೊರಬಂದಿದ್ದಾರೆ.
ಡೋಣಿ ನದಿ ಪ್ರವಾಹದಿಂದ ಸೇತುವೆಗಳು ಜಲಾವೃತ
ವಿಜಯಪುರ: ಡೋಣಿ ನದಿ ಪ್ರವಾಹದಿಂದ ಜಿಲ್ಲೆಯ ತಾಳಿಕೋಟೆ ಬಳಿ ಬ್ರಿಡ್ಜ್ಗಳು ಜಲಾವೃತವಾಗಿದ್ದು, ಹೊಸ ಸೇತುವೆ ಮೇಲೆ ಬಿರುಕುಬಿಟ್ಟಿದ್ದ ಕಾರಣ ನಿರ್ಬಂಧಿಸಲಾಗಿದೆ. ಹಳೇ ಸೇತುವೆ ಮೇಲೆ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಇದೀಗ ಹಳೇ ಸೇತುವೆಯೂ ಜಲಾವೃತ ಹಿನ್ನೆಲೆ ಪರದಾಡುವಂತ್ತಾಗಿದೆ. ಮನಗೂಳಿ-ದೇವಾವುರು ಹೆದ್ದಾರಿಯಲ್ಲಿ ಸಂಚಾರ ಬಂದ್ ಮಾಡಲಾಗಿದೆ. ಡೋಣಿ ನದಿ ಪ್ರವಾಹದಿಂದ ವಿಜಯಪುರ-ತಾಳಿಕೋಟೆ, ಯಾದಗಿರಿ-ರಾಯಚೂರು ಮಾರ್ಗದಲ್ಲಿ ಸಂಚಾರ ಸ್ಥಗಿತವಾಗಿದೆ.
ಚಿತ್ರಮಂದಿರಕ್ಕೆ ನುಗ್ಗಿದ ಮಳೆ ನೀರು:
ನಗರದಲ್ಲಿ ಮಳೆಯ ಅಬ್ಬರದಿಂದಾಗಿ ನಗರದ ಅಪ್ಸರಾ ಚಿತ್ರಮಂದಿರದ ಆವರಣದಲ್ಲಿ ನೀರು ನುಗ್ಗಿದೆ. ಅಪ್ಸರಾ ಚಿತ್ರಮಂದಿರ ಆವರಣ ಈಜುಗೊಲದಂತ್ತಾಗಿದೆ. ನೀರಲ್ಲಿ ಅರ್ಧ ಮಟ್ಟದವರೆಗೂ ಬೈಕ್ಗಳು ಹಾಗೂ ಕಾರ್ ಮುಳುಗಿವೆ. ನೀರು ಹರಿದು ಹೋಗಲು ಮಾರ್ಗವಿಲ್ಲದೇ ಸಮಸ್ಯೆಯಾಗಿದ್ದು, ನಗರದ ತಗ್ಗು ಪ್ರದೇಶಗಳೆಲ್ಲಾ ಬಹುತೇಕ ಜಲಾವೃತವಾಗಿವೆ. ನಿನ್ನೆ ಸುರಿದ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದ್ದು, ಅಲ್ಲಾಪುರ ತಾಂಡಾದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಹತ್ತಾರು ಮನೆಗಳಿಗೆ ನೀರು ನುಗ್ಗಿ ಜನರ ತೀವ್ರ ಪರದಾಡಿದ್ದಾರೆ. ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ನೀರುಪಾಲಾಗಿವೆ. ವಿಜಯಪುರ ನಗರದ ಹೊರವಲಯದಲ್ಲಿರುವ ತಾಂಡಾದಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 am, Sun, 11 September 22