ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ 40 ಪ್ರಕರಣ; ಪ್ರಿಯಾಂಕ್ ಖರ್ಗೆ ಸುಳ್ಳು ಪ್ರಕರಣ ದಾಖಲು ಆರೋಪ

|

Updated on: Apr 20, 2023 | 10:04 AM

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ನಿನ್ನೆ(ಮಾ.19) ನಾಮಪತ್ರ ಸಲ್ಲಿಸಿದ್ದು, ನಾಮಪತ್ರದ ಜೊತೆಗೆ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ. ಇದರಲ್ಲಿ ತನ್ನ ಮೇಲೆ ನಲವತ್ತು ಪ್ರಕರಣಗಳು ಇರುವುದನ್ನ ಮಣಿಕಂಠ ರಾಠೋಡ್ ಉಲ್ಲೇಖಿಸಿದ್ದಾರೆ.

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಮೇಲೆ 40 ಪ್ರಕರಣ; ಪ್ರಿಯಾಂಕ್ ಖರ್ಗೆ ಸುಳ್ಳು ಪ್ರಕರಣ ದಾಖಲು ಆರೋಪ
ಮಣಿಕಂಠ ರಾಠೋಡ್​
Follow us on

ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನೇನು ಕೆಲವೆ ದಿನಗಳಿದ್ದು, ಇಂದು(ಏ.20) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಅದರಂತೆ  ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್(Manikanta Rathod) ನಿನ್ನೆ(19) ನಾಮಪತ್ರ ಸಲ್ಲಿಸಿದ್ದು, ನಾಮಪತ್ರದ ಜೊತೆಗೆ ಅಫಿಡವಿಟ್ ಕೂಡ ಸಲ್ಲಿಸಿದ್ದಾರೆ. ಇದರಲ್ಲಿ ತನ್ನ ಮೇಲೆ ನಲವತ್ತು ಪ್ರಕರಣಗಳು ಇರುವುದನ್ನ ಮಣಿಕಂಠ ರಾಠೋಡ್ ಉಲ್ಲೇಖಿಸಿದ್ದಾರೆ. ಹೌದು ಕಲಬುರಗಿ, ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯ ಮತ್ತು ನೆರೆಯ ತೆಲಂಗಾಣದ ಅನೇಕ ಪೊಲೀಸ್ ಠಾಣೆಗಳಲ್ಲಿ ಮಣಿಕಂಠ ರಾಠೋಡ್ ವಿರುದ್ದ ಪ್ರಕರಣಗಳು ಇದ್ದಾವೆ. ಬಹುತೇಕ ಪ್ರಕರಣಗಳು ಅಕ್ರಮವಾಗಿ ಅಕ್ಕಿ, ಹಾಲಿನ ಪುಡಿ ಸಾಗಾಟದ ಪ್ರಕರಣಗಳ ಜೊತೆಗೆ ಜೀವ ಬೆದರಿಕೆ ಸೇರಿದಂತೆ ಅನೇಕ ಪ್ರಕರಣಗಳು ಕೂಡ ಇವೆ. ಯಾದಗಿರಿ ಜಿಲ್ಲಾ ಕೋರ್ಟ್​ನಿಂದ ಎರಡು ವರ್ಷ ಶಿಕ್ಷೆ ಕೂಡ ವಿಧಿಸಲಾಗಿದ್ದು, ಅದಕ್ಕೆ ತಡೆಯಾಜ್ಞೆಯನ್ನ ಮಣಿಕಂಠ ರಾಠೋಡ್ ಪಡೆದಿದ್ದಾರೆ.

ಇನ್ನು ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿರುವ ಮಣಿಕಂಠ ರಾಠೋಡ್, ತಮ್ಮ ಮೇಲೆ ಪ್ರಿಯಾಂಕ್ ಖರ್ಗೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ನಾನು ಚುನಾವಣೆಗೆ ಅನರ್ಹವಾಗಬೇಕು ಎಂದು ಪ್ರಕರಣಗಳನ್ನು ದಾಖಲಿಸಿದ್ದರು ಎಂದು ಮಣಿಕಂಠ ರಾಠೋಡ್ ಹೇಳಿದ್ದಾರೆ.

ಇದನ್ನೂ ಓದಿ:Karnataka Election Highlights: ವಿಧಾನಸಭೆ ಚುನಾವಣೆ; ಇಡೀ ದಿನದ ರಾಜಕೀಯ ವಿದ್ಯಮಾನಗಳ ಹೈಲೈಟ್ಸ್​

ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರ, ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಇದಕ್ಕೆ ಕಾರಣ, ಚಿತ್ತಾಪುರ ಎಸ್ಸಿ ಮೀಸಲು ಕ್ಷೇತ್ರ, ಹಾಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಕ್ಷೇತ್ರ. ಈಗಾಗಲೇ ಎರಡು ಬಾರಿ ಗೆದ್ದಿರುವ ಪ್ರಿಯಾಂಕ್ ಖರ್ಗೆ, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ಅವರನ್ನ ಸೋಲಿಸಲೇಬೇಕು ಎಂದು ಬಿಜೆಪಿ ನಾಯಕರು ಜಿದ್ದಿಗೆ ಬಿದ್ದಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ವಿಚಾರ ಬಿಜೆಪಿ ನಾಯಕರದ್ದು. ಹೌದು ರಾಜ್ಯ ಸರ್ಕಾರಕ್ಕೆ ಮಗ್ಗಲು ಮುಳ್ಳಾಗಿ ಕಾಡಿದ್ದ ಪ್ರಿಯಾಂಕ್ ಖರ್ಗೆಗೆ ಸೋಲಿನ ರುಚಿ ತೋರಿಸಬೇಕು. ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನನ್ನು ಸೋಲಿಸುವ ಮೂಲಕ, ರಾಷ್ಟ್ರಮಟ್ಟದಲ್ಲಿ ಕೂಡ ಖರ್ಗೆ ಇಮೇಜ್​ಗೆ ಡ್ಯಾಮೇಜ್ ಮಾಡಬೇಕು ಅನ್ನೋದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಹೀಗಾಗಿ ಅನೇಕ ತಂತ್ರಗಳನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಆದ್ರೆ ಇದೀಗ ಬಿಜೆಪಿಗೆ ಆರಂಭದಲ್ಲಿಯೇ ಶಾಕ್ ಉಂಟಾಗಿದೆ. ಹೌದು ಚಿತ್ತಾಪುರ ಬಿಜೆಪಿ ಟಿಕೆಟ್ ವಿಚಾರ, ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ತಾಪುರ ಬಿಜೆಪಿ ಟಿಕೆಟ್​ಗಾಗಿ ಮಾಜಿ ಜಿಲ್ಲಾ ಪಂಚಾಯತ್ ಸಧಸ್ಯ ಅರವಿಂದ್ ಚೌಹಾನ್, ಮಣಿಕಂಠ ರಾಠೋಡ್ ಸೇರಿದಂತೆ ಎಂಟು ಜನರು ಟಿಕೆಟ್​ಗಾಗಿ ಬೇಡಿಕೆ ಇಟ್ಟಿದ್ದರು. ಆದ್ರೆ, ಹೈಕಮಾಂಡ್, ಮಣಿಕಂಠ ರಾಠೋಡ್​ಗೆ ಟಿಕೆಟ್ ನೀಡಿದೆ. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದಡೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಅರವಿಂದ್ ಚೌಹಾನ್ ಗೆ ನಿರಾಸೆಯಾದ್ರೆ, ಮತ್ತೊಂದಡೆ ಮಾಜಿ ಶಾಸಕ ಮತ್ತು ಲಿಂಗಾಯತ ಮುಖಂಡ, ವಿಶ್ವನಾಥ್ ಪಾಟೀಲ್ ಹೆಬ್ಬಾಳ್ ಕೂಡಾ ಟಿಕೆಟ್ ವಿಚಾರಕ್ಕೆ ನಾಯಕರ ವಿರುದ್ದ ಮುನಿಸಿಕೊಂಡಿದ್ದಾರೆ.

ಇದನ್ನೂ ಓದಿ:Madal Virupakshappa: ಕೊನೆಗೂ ಜೈಲಿನಿಂದ ಹೊರಬಂದ ಮಾಡಾಳ್ ವಿರೂಪಾಕ್ಷಪ್ಪ​​, ಮುಂದಿನ ರಾಜಕೀಯ ನಡೆ ಬಗ್ಗೆ ಹೇಳಿದ್ದಿಷ್ಟು

ಇನ್ನು ಕ್ಷೇತ್ರದಲ್ಲಿ ಸಜ್ಜನರನ್ನು ಬಿಟ್ಟು ರೌಡಿ ಶೀಟರ್ ಆಗಿರುವ, ಅನೇಕ ಪ್ರಕರಣಗಳು ಇರೋ ಮಣಿಕಂಠ ರಾಠೋಡ್​ಗೆ ಟಿಕೆಟ್ ನೀಡಿದ್ದಕ್ಕೆ, ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಮತ್ತು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರವಿಂದ್ ಚೌಹಾಣ್​ ಬಿಜೆಪಿಗೆ ಗುಡ್ ಬೈ ಹೇಳಿದ್ದಾರೆ.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:04 am, Thu, 20 April 23