AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Teenage Pregnancy: ಕಲಬುರಗಿಯಲ್ಲಿ ಹೆಚ್ಚಾಯ್ತು ಹದಿಹರೆಯದ ಗರ್ಭಧಾರಣೆ! ಒಂದೇ ವರ್ಷದಲ್ಲಿ 61 ಪ್ರಕರಣಗಳು ದಾಖಲು

ಕಲಬುರಗಿ ಜಿಲ್ಲೆಯಲ್ಲಿ ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಏಪ್ರಿಲ್ 2025 ರಿಂದ ಮಾರ್ಚ್ 2026 ರ ಅವಧಿಯಲ್ಲಿ 61 ಪ್ರಕರಣಗಳು ವರದಿಯಾಗಿವೆ. ಇದು ತಾಯಂದಿರು ಮತ್ತು ಶಿಶುಗಳ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಶಿಕ್ಷಣಕ್ಕೂ ಅಡ್ಡಿಪಡಿಸುತ್ತದೆ. ಆರ್​ಸಿಎಚ್​ನಿಂದ ಬಂದಿರುವ ಈ ದತ್ತಾಂಶವು ಜಿಲ್ಲೆಯಲ್ಲಿ ಬಾಲ್ಯವಿವಾಹವೂ ಹೆಚ್ಚಾಗಿದೆಯೇ ಎಂಬ ಅನುಮಾನ ಹುಟ್ಟಿಸಿದೆ.

Teenage Pregnancy: ಕಲಬುರಗಿಯಲ್ಲಿ ಹೆಚ್ಚಾಯ್ತು ಹದಿಹರೆಯದ ಗರ್ಭಧಾರಣೆ! ಒಂದೇ ವರ್ಷದಲ್ಲಿ 61 ಪ್ರಕರಣಗಳು ದಾಖಲು
ಕಲಬುರಗಿಯಲ್ಲಿ ಹೆಚ್ಚಾಯ್ತು ಹದಿಹರೆಯದ ಗರ್ಭಧಾರಣೆ!
ಭಾವನಾ ಹೆಗಡೆ
|

Updated on: Apr 22, 2026 | 2:58 PM

Share

ಕಲಬುರಗಿ, ಏಪ್ರಿಲ್ 22: ಇತ್ತೀಚಿಗೆ ರಾಜ್ಯದಲ್ಲಿ ಹದಿಹರೆಯದ ಗರ್ಭಧಾರಣೆ (Teenage Pregnancy) ಪ್ರಕರಣಗಳು ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಏಪ್ರಿಲ್ 2025 ರಿಂದ ಮಾರ್ಚ್ 2026 ರವರೆಗೆ ಬರೋಬ್ಬರಿ 61 ಕೇಸ್​ಗಳು ಕಲಬುರಗಿಯದ್ದೇ ಎಂದು ಏಪ್ರಿಲ್ 13ರ ಆರ್​ಸಿಎಚ್ (Reproductive and Child Health) ಪೋರ್ಟಲ್ ದತ್ತಾಂಶದಿಂದ ತಿಳಿದುಬಂದಿದೆ.

ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ?

ಜಿಲ್ಲೆಯ ಆಳಂದ ತಾಲೂಕಿನಲ್ಲಿ ಅತಿ ಹೆಚ್ಚು ಬಾಲಕಿಯರಲ್ಲಿ ಹದಿಹರೆಯದ ಗರ್ಭಧಾರಣೆ ವರದಿಯಾಗಿದ್ದು, 14 ಪ್ರಕರಣಗಳು ಬೆಳಕಿಗೆ ಬಂದಿವೆ. ಅಫಜಲಪುರ ಹಾಗೂ ಚಿತ್ತಾಪುರ ತಾಲೂಕುಗಳಲ್ಲಿ ತಲಾ 11 ಪ್ರಕರಣಗಳು ದಾಖಲಾಗಿದ್ದರೆ, ಸೇಡಂನಲ್ಲಿ 8, ಕಲಬುರಗಿ ಗ್ರಾಮೀಣ ಭಾಗದಲ್ಲಿ 7, ಜೇವರ್ಗಿಯಲ್ಲಿ 6 ಹಾಗೂ ಚಿಂಚೋಳಿ ಮತ್ತು ಕಲಬುರಗಿ ನಗರ ಪ್ರದೇಶಗಳಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ ಎಂದು ದತ್ತಾಂಶ ದೃಢಪಡಿಸಿದೆ.

ವಯಸ್ಸಿನ ಆಧಾರದಲ್ಲಿ ನೋಡಿದರೆ, ಆಳಂದ ತಾಲೂಕಿನಲ್ಲಿ ಕೇವಲ 14 ವರ್ಷದ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದರೆ, ಉಳಿದೆಡೆ ಒಟ್ಟಾರೆಯಾಗಿ 15 ವರ್ಷ ವಯಸ್ಸಿನ ಇಬ್ಬರು, 16 ವರ್ಷ ವಯಸ್ಸಿನಲ್ಲಿ 6 ಮಂದಿ ಗರ್ಭಿಣಿಯರಾಗಿದ್ದಾರೆ. ಬಹುಪಾಲು ಅಂದರೆ 52 ಬಾಲಕಿಯರು 17ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ ಎಂದು ಡಾಟಾ ಹೇಳುತ್ತದೆ.

ಟೀನೇಜ್ ಪ್ರೆಗ್ನೆನ್ಸಿಯಿಂದಾಗುವ ದುಷ್ಪರಿಣಾಮಗಳೇನು?

10 ರಿಂದ 19 ವರ್ಷದೊಳಗಿನವರ ಗರ್ಭಧಾರಣೆಯನ್ನು ಟೀನೇಜ್ ಪ್ರೆಗ್ನೆನ್ಸಿ ಎಂದು ಪರಿಗಣಿಸಲಾಗುತ್ತದೆ. ಇವು ಆರೋಗ್ಯದ ದೃಷ್ಟಿಯಿಂದ ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಅವಧಿಪೂರ್ವ ಶಿಶು ಜನನ, ಹುಟ್ಟಿದ ಮಗು ಕಡಿಮೆ ತೂಕವಿರುವುದು ಮತ್ತು ಹೆಚ್ಚಿನ ಶಿಶುಗಳ ಮರಣ ಪ್ರಮಾಣ ಸೇರಿದಂತೆ ಹದಿಹರೆಯದ ಗರ್ಭಧಾರಣೆಯು ಹೆಚ್ಚಿನ ತಾಯಂದಿರ/ನವಜಾತ ಶಿಶುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.

ಇದರಿಂದಾಗಿ ಬಾಲಕಿಯರ ವಿದ್ಯಾಭ್ಯಾಸ ಕುಂಠಿತವಾಗುವುದಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ಮತ್ತು ತೀವ್ರ ಆರೋಗ್ಯ ತೊಡಕುಗಳಿಗೆ ಕಾರಣವಾಗುತ್ತದೆ. ಹದಿಹರೆಯದ ತಾಯಂದಿರು ರಕ್ತಹೀನತೆ, ಪ್ರಿಕ್ಲಾಂಪ್ಸಿಯಾ (ಗರ್ಭಾವಸ್ಥೆಯ 20 ವಾರಗಳ ನಂತರ ಅಥವಾ ಹೆರಿಗೆಯ ನಂತರ ಕಂಡುಬರುವ ಅಧಿಕ ರಕ್ತದೊತ್ತಡದ ಗಂಭೀರ ಸಮಸ್ಯೆ) ಮತ್ತು ಅಕಾಲಿಕ ಜನನಗಳ ಅಪಾಯಗಳನ್ನು ಸಹ ಎದುರಿಸುತ್ತಾರೆ.

ಇದನ್ನೂ ಓದಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ಮುಚ್ಚಿ ಹಾಕಲು ನಡೆದಿತ್ತಾ ಸಂಚು?

ಈ ಒಂದು ವರ್ಷದ ಅವಧಿಯಲ್ಲಿ 14ರಿಂದ 17 ವರ್ಷದೊಳಗಿನ 61 ಪ್ರಕರಣಗಳು ದಾಖಲಾಗಿರುವುದು, ಜಿಲ್ಲೆಯಲ್ಲಿ ಬಾಲ್ಯವಿವಾಹಗಳ ಪ್ರಮಾಣವೂ ಹೆಚ್ಚಿರಬಹುದು ಎಂಬ ಅನುಮಾನ ಹುಟ್ಟಿಸಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತರು ಹಾಗೂ ಶಾಲಾ ಶಿಕ್ಷಕರು, ವಿಶೇಷವಾಗಿ ಹೈಸ್ಕೂಲ್ ಶಿಕ್ಷಕರು ಜಾಗೃತಿಯಿಂದ ಕಾರ್ಯನಿರ್ವಹಿಸಿ ಬಾಲ್ಯವಿವಾಹಗಳನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us