ಬೆಂಗಳೂರು, ಮೇ 28: ಸೆಂಟ್ರಲ್ ರೈಲ್ವೆ (Central Railway) ಕಾರ್ಯಾಚರಣೆಯ ನಿರ್ಬಂಧಗಳ ಕಾರಣದಿಂದ ಎಸ್‌ಎಂವಿಟಿ ಬೆಂಗಳೂರು ಮತ್ತು ಕಲಬುರಗಿ ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ರದ್ದುಗೊಳಿಸುವುದಾಗಿ ನೈಋತ್ಯ ರೈಲ್ವೆ (South Western Railway) ತಿಳಿಸಿದೆ. ಬೇಸಗೆ ರಜೆ ಅವಧಿಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಉದ್ದೇಶದೊಂದಿಗೆ ಈ ವಿಶೇಷ ರೈಲು ಆರಂಭಿಸಲಾಗಿತ್ತು.
ಎಸ್‌ಎಂವಿಟಿ ಬೆಂಗಳೂರಿನಿಂದ (ರೈಲು ಸಂಖ್ಯೆ 06261) ಮೇ 29 ಮತ್ತು ಜೂನ್ 27 ರ ನಡುವೆ ಮತ್ತು ಕಲಬುರಗಿಯಿಂದ (ರೈಲು ಸಂಖ್ಯೆ 06262) ಮೇ 30 ಮತ್ತು ಜೂನ್ 28 ರ ನಡುವೆ ಸಂಚರಿಸಲಿರುವ ವಿಶೇಷ ರೈಲುಗಳು ರದ್ದಾಗಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ನಲ್ಲಿ ಪ್ಲಾಟ್ಫಾರ್ಮ್ ವಿಸ್ತರಣೆಗಾಗಿ 36 ಗಂಟೆಗಳ ಸಂಚಾರ ನಿರ್ಬಂಧದ ಕಾರಣ ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಮೇ 31 ಮತ್ತು ಜೂನ್ 2 ರ ನಡುವೆ 69 ದೂರ ಸಂಚಾರದ ರೈಲುಗಳು ರದ್ದಾಗಿವೆ. 24 ಕೋಚ್ ಸಾಮರ್ಥ್ಯದ ರೈಲುಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕೆ ಸಂಬಂಧಿಸಿದ ವಿಸ್ತರಣಾ ಕಾಮಗಾರಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ನಲ್ಲಿ ನಡೆಯುತ್ತಿದೆ. ಇದು ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಇತರ ರೈಲುಗಳ ಸಂಚಾರದ ಮೇಲೂ ಪರಿಣಾಮ ಬೀರಿದೆ.
ದಕ್ಷಿಣ ರೈಲ್ವೆಯು ಸದ್ಯ ಉಪನಗರ ರೈಲುಗಳನ್ನು ಭಾಗಶಃ ರದ್ದುಗೊಳಿಸಿದೆ. ಚೆನ್ನೈ ಬೀಚ್ – ಚೆಂಗಲ್‌ಪೇಟ್ ಎಮು ಮೂಲಕ ಸಂಚರಿಸುವವರು ಚೆನ್ನೈ ಬೀಚ್‌ನಿಂದ ಹೊರಡುವುದು ಸಿಂಗಪೆರುಮಾಳ್ ಕೋಯಿಲ್‌ವರೆಗೆ ಮಾತ್ರ ಸಂಚರಿಸಬಹುದಾಗಿದೆ.
ಇದನ್ನೂ ಓದಿ: ಉಡುಪಿ: ಕಾರ್ಗತ್ತಲ ರಾತ್ರಿಯಲ್ಲಿ ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿ, ಸ್ವಲ್ಪದರಲ್ಲೇ ತಪ್ಪಿತು ರೈಲು ದುರಂತ
ದಕ್ಷಿಣ ರೈಲ್ವೆಯು ಭಾನುವಾರ ರಾತ್ರಿ ತಿರುಚ್ಚಿಯಿಂದ ಕುಂಭಕೋಣಂ ಮತ್ತು ಮೈಲಾಡುತುರೈ ಮೂಲಕ ತಾಂಬರಂಗೆ ಮೆಮು ವಿಶೇಷ ರೈಲನ್ನು ಓಡಿಸಲಿದೆ. ಆದರೆ, ಇದರಲ್ಲಿ ಟಿಕೆಟ್ ಕಾಯ್ದಿರಿಸುವ ಸೌಲಭ್ಯ ಇರುವುದಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ