ಉಡುಪಿ: ಕಾರ್ಗತ್ತಲ ರಾತ್ರಿಯಲ್ಲಿ ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿ, ಸ್ವಲ್ಪದರಲ್ಲೇ ತಪ್ಪಿತು ರೈಲು ದುರಂತ

ಟ್ರ್ಯಾಕ್ ನಿರ್ವಹಣಾ ಸಿಬ್ಬಂದಿಯೊಬ್ಬರ ಸಮಯಪ್ರಜ್ಞೆಯಿಂದ ಉಡುಪಿ ಬಳಿ ಸಂಭಾವ್ಯ ರೈಲು ದುರಂತ ತಪ್ಪಿದೆ. ಎಲ್‌ಟಿಟಿ-ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುವುದಕ್ಕೂ ಕೆಲವೇ ಕ್ಷಣಗಳ ಮುನ್ನ ಸಮಸ್ಯೆ ಪತ್ತೆ ಹಚ್ಚಿದ ಸಿಬ್ಬಂದಿ ಉಡುಪಿಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದರು. ಘಟನೆಯ ವಿವರ ಇಲ್ಲಿದೆ.

ಉಡುಪಿ: ಕಾರ್ಗತ್ತಲ ರಾತ್ರಿಯಲ್ಲಿ ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿ, ಸ್ವಲ್ಪದರಲ್ಲೇ ತಪ್ಪಿತು ರೈಲು ದುರಂತ
ರಾತ್ರಿಯಲ್ಲಿ ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿ, ಸ್ವಲ್ಪದರಲ್ಲೇ ತಪ್ಪಿತು ರೈಲು ದುರಂತ
Follow us
Ganapathi Sharma
|

Updated on:May 27, 2024 | 10:56 AM

ಉಡುಪಿ, ಮೇ 27: ಹಳಿಯಲ್ಲಿ ಕಂಡುಬಂದ ಲೋಪವನ್ನು (Railway Track Defct) ಸಕಾಲದಲ್ಲಿ ಪತ್ತೆಹಚ್ಚಿದ ಸಿಬ್ಬಂದಿಯೊಬ್ಬರು ತಕ್ಷಣವೇ ಅಧಿಕಾರಿಗಳ ಗಮನಕ್ಕೆ ತಂದ ಕಾರಣ ಸಂಭಾವ್ಯ ಭಾರಿ ರೈಲು ದುರಂತವೊಂದು ತಪ್ಪಿದೆ. ಶನಿವಾರ ತಡರಾತ್ರಿ 2.25ರ ಸುಮಾರಿಗೆ ಉಡುಪಿಯ (Udupi) ಇನ್ನಂಜೆ ಮತ್ತು ಪಡುಬಿದ್ರಿ ನಡುವಿನ ರೈಲ್ವೇ ಹಳಿಯಲ್ಲಿ (Railway Track) ಲೋಪ ಕಂಡುಬಂದಿತ್ತು. ಕಾರ್ಗತ್ತಲ ರಾತ್ರಿಯಲ್ಲಿ ಹೈಪವರ್ ಟಾರ್ಚ್ ಸಹಾಯದಿಂದ ಇದನ್ನು ಗಮನಿಸಿದ ಟ್ರ್ಯಾಕ್ ನಿರ್ವಹಣಾ ಸಿಬ್ಬಂದಿ ಪ್ರದೀಪ್ ಶೆಟ್ಟಿ ತಕ್ಷಣವೇ ಉಡುಪಿಯ ಆರ್‌ಎಂಇಗೆ ಸಮಸ್ಯೆಯ ಬಗ್ಗೆ ಮಾಹಿತಿ ರವಾನಿಸಿದ್ದಾರೆ.

ತಕ್ಷಣವೇ ಉಡುಪಿಯಿಂದ ಟ್ರ್ಯಾಕ್ ನಿರ್ವಹಣಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು ಮತ್ತು ಸಮಸ್ಯೆಯನ್ನು ಸರಿಪಡಿಸಲಾಯಿತು.

ಅಪಾಯದಿಂದ ಪಾರಾದ ನೇತ್ರಾವತಿ, ಪಂಚಗಂಗಾ ಎಕ್ಸ್‌ಪ್ರೆಸ್‌

ರೈಲು ಹಳಿಯಲ್ಲಿ ಲೋಪ ಕಂಡುಬಂದ ಕೆಲವೇ ಕ್ಷಣಗಳಲ್ಲಿ ಆ ಮಾರ್ಗವಾಗಿ ಎಲ್‌ಟಿಟಿ-ತಿರುವನಂತಪುರ ಸೆಂಟ್ರಲ್ ನೇತ್ರಾವತಿ ಎಕ್ಸ್‌ಪ್ರೆಸ್ ಹಾಗೂ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ಸಂಚರಿಸುವುದರಲ್ಲಿತ್ತು. ಮುಂಜಾನೆ 3 ಗಂಟೆಗೆ ನೇತ್ರಾವತಿ ಎಕ್ಸ್‌ಪ್ರೆಸ್ ಮಂಗಳೂರು ಜಂಕ್ಷನ್ ಕಡೆಗೆ ತೆರಳಬೇಕಿತ್ತು. ಪಂಚಗಂಗಾ ಎಕ್ಸ್‌ಪ್ರೆಸ್ ಮುಂಜಾನೆ 4 ಗಂಟೆಯ ಸುಮಾರಿಗೆ ಹಾದು ಹೋಗಬೇಕಿತ್ತು. ಹಳಿ ದೋಷ ಸರಿಪಡಿಸುವವರೆಗೂ ಎರಡೂ ರೈಲುಗಳನ್ನು ನಂದಿಕೂರು ಮತ್ತು ಸುರತ್ಕಲ್ ನಿಲ್ದಾಣಗಳಲ್ಲಿ ನಿಲ್ಲಿಸಲಾಯಿತು.

ಹಳಿ ದುರಸ್ತಿ ಕಾರ್ಯ ಸುಮಾರು ಮೂರು ಗಂಟೆಗಳನ್ನು ತೆಗೆದುಕೊಂಡಿತು. ಈ ಮಾರ್ಗದ ಮೂಲಕ ಹಾದು ಹೋಗಬೇಕಿದ್ದ ಇತರ ರೈಲುಗಳನ್ನು ಸುರತ್ಕಲ್ ಮತ್ತು ಉಡುಪಿ ರೈಲು ನಿಲ್ದಾಣಗಳಲ್ಲಿ ತಡೆಹಿಡಿಯಲಾಯಿತು. ದುರಸ್ತಿಯ ನಂತರ ದೋಷ ಇದ್ದ ಜಾಗದಲ್ಲಿ ತಾತ್ಕಾಲಿಕ ಅವಧಿಗೆ ಗಂಟೆಗೆ 20 ಕಿಲೋಮೀಟರ್ ವೇಗದ ಮಿತಿಯೊಂದಿಗೆ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಕೊಂಕಣ ರೈಲ್ವೇ ವಿಭಾಗದ ಮಂಗಳೂರು ವಿಭಾಗದ ಪಿಆರ್‌ಒ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ: ಉಡುಪಿ ಗ್ಯಾಂಗ್​ ವಾರ್​: 3 ಪೊಲೀಸರಿಗೆ ಶರಣು, ಬೆಂಗಳೂರಿಗೂ ಹಬ್ಬಿದೆ ಆರೋಪಿಗಳ ಲಿಂಕ್​

ಟ್ರ್ಯಾಕ್ ಗ್ಯಾಂಗ್‌ಮ್ಯಾನ್ ಪ್ರದೀಪ್ ಶೆಟ್ಟಿ ಸಮಯ ಪ್ರಜ್ಞಗೆ ಇದೀಗ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪ್ರದೀಪ್ ಶೆಟ್ಟಿಗೆ ಕೊಂಕಣ ರೈಲ್ವೆಯ ಸಿಎಂಡಿ ಸಂತೋಷ್ ಕುಮಾರ್ ಝಾ 25,000 ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು. ಕೊಂಕಣ ರೈಲ್ವೆಯ ಉಡುಪಿ ವಿಭಾಗದ ಹಿರಿಯ ಇಂಜಿನಿಯರ್ ಗೋಪಾಲಕೃಷ್ಣ ಅವರು ಸ್ಥಳದಲ್ಲಿಯೇ ಚೆಕ್ ಅನ್ನು ಪ್ರದೀಪ್​​ಗೆ ಹಸ್ತಾಂತರಿಸಿದರು. ಪ್ರದೀಪ್ ಅವರನ್ನು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು ಎಂದು ಕೊಂಕಣ ರೈಲ್ವೆ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:56 am, Mon, 27 May 24