ಬಿಜೆಪಿ, ಜೆಡಿಎಸ್ ಮೈತ್ರಿ: ಕಲಬುರಗಿಯಲ್ಲಿ JDS ಮುಸ್ಲಿಂ ಮುಖಂಡರು, ಕಾರ್ಯಕರ್ತರ ಸಭೆ ಅಂತ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 01, 2023 | 7:46 PM

ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ನಡೆ ಬಗ್ಗೆ ಚರ್ಚಿಸಲು ಇಂದು ಕಲಬುರಗಿ ನಗರದಲ್ಲಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ಮತ್ತು ಕಾರ್ಯಕರ್ತರ ಸಭೆ ಮಾಡಲಾಗಿದ್ದು, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವದನ್ನು ಅನೇಕ ನಾಯಕರು ಖಂಡಿಸಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ, ಜೆಡಿಎಸ್ ಮೈತ್ರಿ: ಕಲಬುರಗಿಯಲ್ಲಿ JDS ಮುಸ್ಲಿಂ ಮುಖಂಡರು, ಕಾರ್ಯಕರ್ತರ ಸಭೆ ಅಂತ್ಯ
ಕಲ್ಯಾಣ ಕರ್ನಾಟಕದ ಮುಸ್ಲಿಂ ಮುಖಂಡರ ಸಭೆ
Follow us on

ಕಲಬುರಗಿ, ಅಕ್ಟೋಬರ್​ 01: ಜೆಡಿಎಸ್ (JDS) ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ನಡೆ ಬಗ್ಗೆ ಚರ್ಚಿಸಲು ಇಂದು ಕಲಬುರಗಿ ನಗರದಲ್ಲಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತ ನಾಯಕರು ಮತ್ತು ಕಾರ್ಯಕರ್ತರ ಸಭೆ ಇದೀಗ ಮುಕ್ತಾಯವಾಗಿದೆ. ಸಭೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವದನ್ನು ಅನೇಕ ನಾಯಕರು ಖಂಡಿಸಿದ್ದಾರೆ. ಕಲ್ಯಾಣ ಕರ್ನಾಟಕದ ಮುಸ್ಲಿಂ ಮುಖಂಡರ ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿದೆ.

ಅಕ್ಟೋಬರ್ 8ರಂದು ಬೆಂಗಳೂರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅಲ್ಪಸಂಖ್ಯಾತ ಮುಖಂಡರು, ಕಾರ್ಯಕರ್ತರ ಸಭೆ ನಡೆಯಲಿದ್ದು, ಜೆಡಿಎಸ್​ನಲ್ಲಿ ಮುಂದುವರಿಯುವ ಬಗ್ಗೆ ನಿರ್ಧಾರವಾಗಲಿದೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಯಿಂದ ಮುಖಂಡರು ಮುನಿಸಿಕೊಂಡಿದ್ದಾರೆ.

ಮೈತ್ರಿಯಿಂದ ಬಹಳಷ್ಟು ಜನ ನೊಂದಿದ್ದಾರೆ: ಅಧ್ಯಕ್ಷ ನಾಸೀರ್ ಹುಸೇನ್

ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ನಾಸೀರ್ ಹುಸೇನ್​ ಪ್ರತಿಕ್ರಿಯೆ ನೀಡಿದ್ದು, ಮೈತ್ರಿಯಿಂದ ಬಹಳಷ್ಟು ಜನ ನೊಂದಿದ್ದಾರೆ. ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ಜ್ಯಾತ್ಯಾತೀತ ತತ್ವ ನಂಬಿ ನಾವೆಲ್ಲಾ ಜೆಡಿಎಸ್​​ನಲ್ಲಿದ್ದೆವು. ಆದರೆ ದಿಢೀರನೆ ಇದೀಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮನಗರ: ಹೆಚ್​ಡಿಕೆ ಹೇಳಿಕೆಗೆ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಸ್ಲಿಂ ಮುಖಂಡರಿಂದ ತೀವ್ರ ಅಸಮಾಧಾನ

ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಬಿಜೆಪಿ ಕೋಮುವಾದಿ ನೀತಿಯನ್ನು ಖಂಡಿಸುತ್ತಲೇ ಬಂದಿದ್ದರು. ಹಿಜಾಬ್, ಹಲಾಲ್ ಕಟ್ ಸೇರಿ ಅನೇಕ ವಿಷಯಗಳನ್ನು ಖಂಡಿಸಿದ್ದರು. ಇದೀಗ ಅವರೇ ಬಿಜೆಪಿ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ನಮಗೆಲ್ಲಾ ವಿಶ್ವಾಸಕ್ಕೆ ತಗೆದುಕೊಳ್ಳದೆ ಮೈತ್ರಿಗೆ ಮುಂದಾಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜತೆ ಮೈತ್ರಿಗೆ ಇಬ್ರಾಹಿಂ ಅಸಮಾಧಾನ, ಕರೆ ಮಾಡಿ ಮುನಿಸು ಶಮನಕ್ಕೆ ಯತ್ನಿಸಿದ ದೇವೇಗೌಡ

ನಾನು ಮುಸ್ಲಿಂ ರನ್ನು ನಂಬಿ ರಾಜಕೀಯ ಪಕ್ಷ ಕಟ್ಟಿಲ್ಲಾ‌ ಎನ್ನುವ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿಕೆ ಮುಸ್ಲಿಂ ಸಮಾಜದವರಿಗೆ ನೋವು ತಂದಿದೆ. ಆರ್​ಎಸ್​ಎಸ್ ಮತ್ತು ಬಿಜೆಪಿ ಓಲೈಸಲು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬೆನ್ನಲ್ಲೇ ಜೆಡಿಎಸ್​​ನಿಂದ ಮುಸ್ಲಿಂ ಮುಖಂಡರು ದೂರ ಸರಿಯುತ್ತಿರುವ ಬಗ್ಗೆ ‘ಟಿವಿ9’ ಕನ್ನಡ ವಾಹಿನಿಗೆ ನೀಡಿದ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ಮುಸ್ಲಿಂ ಸಮಾಜ ಒಂದನ್ನೇ ನಂಬಿಕೊಂಡು ಕೂತಿಲ್ಲ. ಅದೊಂದು ಸಮುದಾಯವನ್ನು ನೆಚ್ಚಿಕೊಂಡು ರಾಜಕೀಯ ಮಾಡುತ್ತಿಲ್ಲ. ಕರ್ನಾಟಕದ ಆರೂವರೆ ಕೋಟಿ ಜನತೆಯ ಪ್ರತಿನಿಧಿಯಾಗಿ ನಮ್ಮ ಪಕ್ಷವಿದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.