ಕಲಬುರಗಿ: ಕರ್ನಾಟಕ ಅಮೃತ ಮಹೋತ್ಸವ(Karnataka Amrut Mahotsav) ಪ್ರಯುಕ್ತ ಕಲಬುರಗಿ ನಗರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಆಗಮಿಸಿದ್ದಾರೆ. ಆದ್ರೆ ಸಿಎಂ ಆಗಮನದ ವೇಳೆ ಎಸ್ ಟಿ ಹೋರಾಟ ಸಮಿತಿ ಸದಸ್ಯರು ಕಪ್ಪುಬಾವುಟ ಪ್ರದರ್ಶನ ಮಾಡಿದ್ದಾರೆ.
ಸರದಾರ್ ಪಟೇಲರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಒಳ ನುಸುಳಿದ ಪ್ರತಿಭಟನಾಕಾರರು ಕಪ್ಪು ಪಟ್ಟಿ ಪ್ರದರ್ಶಿಸಿ ಮುಖ್ಯಮಂತ್ರಿಗಳಿಗೆ ದಿಕ್ಕಾರ ಕೂಗಿದರು. ಪ್ರತಿಭಟನಾಕಾರರ ಜೇಬಿನಲ್ಲಿ ಕಪ್ಪು ಪಟ್ಟಿ ಇರಿಸಿಕೊಂಡು ಆಗಮಿಸಿ ಪ್ರತಿಭಟನಾಕಾರರು ಸಾರ್ವಜನಿಕರ ಮಧ್ಯೆದಲ್ಲಿಯೇ ನಿಂತುಕೊಂಡಿದ್ದರು. ಮುಖ್ಯಮಂತ್ರಿ ಅವರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೆಳಗೆ ಇಳಿಯುವ ಸಂದರ್ಭದಲ್ಲಿ ಒಬ್ಬರಾಗಿ ಕಪ್ಪು ಪಟ್ಟಿ ಪ್ರದರ್ಶಿಸಲು ಶುರುಮಾಡಿದರು. ತಕ್ಷಣವೇ ಕಾರ್ಯ ಪ್ರವೃತರಾದ ಪೊಲೀಸರು ಸಮಾರು 25ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ಘಟನೆಯಿಂದಾಗಿ ಮುಖ್ಯಮಂತ್ರಿಗಳು ವೇದಿಕೆಯತ್ತ ಆಗಮಿಸದೇ ನೇರವಾಗಿ ಪೊಲೀಸ್ ಪರೇಡ್ ಮೈದಾನಕ್ಕೆ ತೆರಳಿದರು.
ಎಸ್ ವಿಪಿ ವೃತ್ತದಲ್ಲಿ ಮುಖ್ಯಮಂತ್ರಿಗಳ ಭಾಷಣಕ್ಕಾಗಿ ವೇದಿಕೆ ನಿರ್ಮಿಸಲಾಗಿತ್ತು. ಮುಂಭಾಗದಲ್ಲಿ ಸಾರ್ವಜನಿಕರ ಆಸನಕ್ಕಾಗಿ ಖರ್ಚಿಗಳನ್ನು ಹಾಕಲಾಗಿತ್ತು. ಸಿಎಂ ಅವರು ವೇದಿಕೆಗೆ ಬಂದು ಕಲ್ಯಾಣ ಕರ್ಣಾಟಕ ಉತ್ಸವ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಬೇಕಿತ್ತು. ಆದರೆ, ಈ ಘಟನೆಯಿಂದ ಸಿಎಂ ಅವರು ಬೇಸರಗೊಂಡು ವೇದಿಯತ್ತ ಆಗಮಿಸದೇ ಪೊಲೀಸ್ ಮೈದಾನದತ್ತ ಹೆಜ್ಜೆ ಹಾಕಿದರು.
ಇನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ಅಮೃತ ಮಹೋತ್ಸವ ದಿನಾಚಾರಣೆ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ್ರು. ಬಳಿಕ ವಿವಿಧ ತುಕಡಿಗಳಿಂದ ಸಿಎಂಗೆ ಗೌರವ ವಂದನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಷಣ ಮಾಡಿದ್ದಾರೆ. ಈ ವೇಳೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಶುಭಾಶಯ ತಿಳಿಸಿದ್ದಾರೆ.
ಕೆಕೆಆರ್ಡಿಬಿಗೆ 3 ಸಾವಿರ ಕೋಟಿ ಹಣ ಬಿಡುಗಡೆ
ಕನ್ನಡದ ನೆಲ, ಜಲ ಸಂಗಮಗೊಂಡಿವೆ. ಕರ್ನಾಟಕ ಪ್ರಗತಿಯ ಹಾದಿಯಲ್ಲಿ ಮುಂದೆ ಹೋಗುತ್ತಿದೆ. ಹಿಂದುಳಿದ ಕಲ್ಯಾಣ ಕರ್ನಾಟಕ ಕೂಡ ಪ್ರಗತಿ ಸಾಧಿಸಬೇಕು. ನವ ಕರ್ನಾಟಕ ನಿರ್ಮಾಣದಲ್ಲಿ ಈ ಕಲ್ಯಾಣ ಕರ್ನಾಟಕ ಭಾಗದ ಪಾತ್ರ ಪಾತ್ರ ಹಿರಿದಾಗಬೇಕು. ಕೆಕೆಆರ್ಡಿಬಿಗೆ 3 ಸಾವಿರ ಕೋಟಿ ಹಣವನ್ನು ನೀಡಲಾಗಿದೆ. ನಮ್ಮದು ಕ್ರಿಯಾಶೀಲ ಸರ್ಕಾರ. ಪ್ರಾದೇಶಿಕ ಅಸಮತೋಲನವನ್ನು ಬುಡಸಮೇತ ಕೀಳುವ ಕೆಲಸ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ 2,100 ಶಾಲಾ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಹಾಗೂ 68 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಂಜೂರು ಮಾಡಲಾಗಿದೆ. 2,500 ಅಂಗನವಾಡಿ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದೇವೆ. ಆ.15ರೊಳಗೆ ಎಲ್ಲ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗುತ್ತೆ.
ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಕಲಬುರಗಿಯಲ್ಲಿ ಕೇಂದ್ರದಿಂದ ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣ ಮಾಡಲಾಗುತ್ತೆ. ಇದರಿಂದ 25 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ರಾಯಚೂರು, ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತೆ. ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಿದ್ರೆ ಅಭಿವೃದ್ಧಿಗೆ ವೇಗ ಸಿಗುತ್ತೆ. ಗುಣಮಟ್ಟದ ಶಿಕ್ಷಣಕ್ಕಾಗಿ ಕಲ್ಯಾಣ ಕರ್ನಾಟಕದಲ್ಲಿ ಸ್ಮಾರ್ಟ್ ಕ್ಲಾಸ್ಗಳನ್ನ ಆರಂಭಿಸ್ತೇವೆ ಎಂದು ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದಲ್ಲಿ ಸಿಎಂ ಭಾಷಣ ಮಾಡಿದ್ರು.
ಭಾರತ ಸ್ವತಂತ್ರ ಇತಿಹಾಸದಷ್ಟೇ ವಿಮೋಚನಾ ಹೋರಾಟ ಕೂಡಾ ನಡೆದಿದೆ. ಸರ್ದಾರ್ ವಲ್ಲಭ ಭಾಯ್ ಪಟೇಲ್ ರ ದಿಟ್ಟ ಕ್ರಮದಿಂದ ಈ ಭಾಗಕ್ಕೆ ಸ್ವತಂತ್ರ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ಸ್ವಾತಂತ್ರಕ್ಕಾಗಿ ಹೋರಾಡಿದವರನ್ನು ಸ್ಮರಿಸಲೇಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಪುಲ ನೈಸರ್ಗಿಕ ಸಂಪತ್ತು ಇದೆ. ಕೊರತೆ ಇದ್ದದ್ದು ಕೇವಲ ಅವಕಾಶ. ಆದ್ರೆ ಆ ಅವಕಾಶವನ್ನು ತಮ್ಮ ಸರ್ಕಾರ ನೀಡುತ್ತಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ