ಮಕ್ಕಳ ಸಹಾಯವಾಣಿಯ​​ನ್ನು 112 ನಲ್ಲಿ ವಿಲೀನಕ್ಕೆ ಮುಂದಾದ ಕೇಂದ್ರ ಸರ್ಕಾರ: ಆತಂಕದಲ್ಲಿ ಚೈಲ್ಡ್ ಲೈನ್ ಸಿಬ್ಬಂದಿ

| Updated By: ವಿವೇಕ ಬಿರಾದಾರ

Updated on: Jan 02, 2023 | 8:49 PM

ಕೇಂದ್ರ ಸರ್ಕಾರ ಎಲ್ಲ ರೀತಿಯ ತುರ್ತು ಸೇವೆಗೆ 112 ಆರಂಭಿಸಿದ್ದರಿಂದ, 1098 ನ್ನು ಕೂಡ 112 ನಲ್ಲಿ ವಿಲೀನಗೊಳಿಸಲು ಮುಂದಾಗಿದ್ದು, ಇದು ಚೈಲ್ಡ್ ಲೈನ್ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ.

ಮಕ್ಕಳ ಸಹಾಯವಾಣಿಯ​​ನ್ನು 112 ನಲ್ಲಿ ವಿಲೀನಕ್ಕೆ ಮುಂದಾದ ಕೇಂದ್ರ ಸರ್ಕಾರ: ಆತಂಕದಲ್ಲಿ ಚೈಲ್ಡ್ ಲೈನ್ ಸಿಬ್ಬಂದಿ
ಮಕ್ಕಳ ಸಹಾಯವಾಣಿ 1098 ಸಿಬ್ಬಂದಿ
Follow us on

ಕಲಬುರಗಿ: ಮಕ್ಕಳ ಮೇಲಾಗುವ ದೌರ್ಜನ್ಯ, ಬಾಲ್ಯ ವಿವಾಹ, ಮಕ್ಕಳ ಹಕ್ಕುಗಳ ರಕ್ಷಣೆ ಸೇರಿದಂತೆ ಅನೇಕ ಉದ್ದೇಶಗಳನ್ನು ಇಟ್ಟುಕೊಂಡು ಸರ್ಕಾರ ಚೈಲ್ಡ್ ಲೈನ್ (Childline) ಆರಂಭಿಸಿತ್ತು. 1098 ನಂಬರ್​​ಗೆ ಕರೆ ಮಾಡಿದರೆ, ಚೈಲ್ಡ್ ಲೈನ್ ಸಿಬ್ಬಂದಿ ಮಕ್ಕಳ ನೆರವಿಗೆ ಬರುತ್ತಾರೆ. ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಈ ಸೇವೆ ಇದೆ. ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಅನೇಕ ಕಡೆ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯವನ್ನು ನೋಡಿ, ಅನೇಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದಾಗ, ಮಕ್ಕಳ ಸಹಾಯವಾಣಿ ಸಿಬ್ಬಂದಿ, ಅನೇಕ ಮಕ್ಕಳನ್ನು ಕಾಪಾಡಿದ್ದಾರೆ. ಇದೇ ಕೆಲಸವನ್ನು ನಂಬಿಕೊಂಡು ಸಾವಿರಾರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಸರ್ಕಾರ ಎಲ್ಲ ರೀತಿಯ ತುರ್ತು ಸೇವೆಗೆ 112 ಆರಂಭಿಸಿದ್ದರಿಂದ, 1098 ನ್ನು ಕೂಡ 112 ನಲ್ಲಿ ವಿಲೀನಗೊಳಿಸಲು ಮುಂದಾಗಿದೆ. ಇದು ಚೈಲ್ಡ್ ಲೈನ್ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ.

ಚೈಲ್ಡ್ ಲೈನ್ ಸಿಬ್ಬಂದಿಗೆ ಆತಂಕ ಹೆಚ್ಚಿಸಿದ ವಿಲೀನ

ಹೌದು ಕೇಂದ್ರ ಸರ್ಕಾರ ಚೈಲ್ಡ್ ಲೈನ್​ನ್ನು ತುರ್ತು ಸೇವೆಯ 112 ನಲ್ಲಿ ವಿಲೀನ ಮಾಡಲು ನಿರ್ಧಾರ ಕೈಗೊಂಡಿದೆಯಂತೆ. ಕೆಲವೇ ತಿಂಗಳಲ್ಲಿ ಈ ವಿಲೀನ ಪಕ್ರಿಯೆ ಆರಂಭವಾಗಲಿದೆಯಂತೆ. ಇದು ಈಗಾಗಲೇ ದೇಶಾದ್ಯಂತ ಕೆಲಸ ಮಾಡುತ್ತಿರುವ ಚೈಲ್ಡ್ ಲೈನ್ ಸಿಬ್ಬಂದಿಯ ಆತಂಕವನ್ನು ಹೆಚ್ಚಿಸಿದೆ. ಇದಕ್ಕೆ ಕಾರಣ, 112 ನಲ್ಲಿ 1098 ವಿಲೀನವಾದರೆ, ಚೈಡ್​ ಲೈನ್​ ಸಿಬ್ಬಂದಿಯನ್ನು 112ರಲ್ಲಿ ಬಳಸಿಕೊಳ್ಳುತ್ತಾರೋ ಇಲ್ಲವೋ ಅನ್ನೋ ಬಗ್ಗೆ ಸ್ಪಷ್ಟತೆ ಇಲ್ಲ. ಹೌದು 112 ನ್ನು ಪೊಲೀಸರು ನಿರ್ವಹಿಸುತ್ತಿದ್ದಾರೆ. ಆದರೆ ಇದೀಗ 1098 ನ್ನು ಕೂಡ ಅದರಲ್ಲಿ ವಿಲೀನಗೊಳಿಸಿದರೆ, ತಮ್ಮ ಸೇವೆಯನ್ನು ಸರ್ಕಾರ ಕೈ ಬಿಡಬಹುದು, ಆವಾಗ ತಾವು ಬೀದಿ ಪಾಲಾಗುತ್ತೇವೆ ಅನ್ನೋ ಆತಂಕ ಸಿಬ್ಬಂದಿಯನ್ನು ಕಾಡುತ್ತಿದೆ. ಹೀಗಾಗಿ ಸರ್ಕಾರ 1098 ನ್ನು 112 ನಲ್ಲಿ ವಿಲೀನಗೊಳಿಸಿದರು ಕೂಡ ತಮ್ಮ ಸೇವೆಯನ್ನು ಮುಂದುವರಿಸಬೇಕು ಎಂದು ಚೈಲ್ಡ್ ಲೈನ್ ಸಿಬ್ಬಂದಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ:  ರಾಹುಲ್‌ ಗಾಂಧಿ ಪಿಎ ಎಂದು ಹೇಳಿಕೊಂಡು ವಂಚನೆಗೆ ಯತ್ನ: ಸೈಬರ್ ಕ್ರೈಂಗೆ ದೂರು ನೀಡಿದ U.T.ಖಾದರ್‌

ಕಲಬುರಗಿ ಜಿಲ್ಲಾ ಚೈಲ್ಡ್ ಲೈನ್ ಸಂಯೋಜಕ ಬಸವರಾಜ್ ತೆಂಗಳಿ:-

ಸರ್ಕಾರ ಚೈಲ್ಡ್ ಲೈನ್​ನ್ನು ತುರ್ತು ಸಹಾಯವಾಣಿ 112 ನಲ್ಲಿ ವಿಲೀನ ಮಾಡಲು ಮುಂದಾಗಿದೆ. ಆದರೆ ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಮುಂದೇ ಕೂಡ ನಮ್ಮ ಸೇವೆಯನ್ನು ಪರಿಗಣಿಸಿ, ಅಲ್ಲಿ ಕೂಡ ಕೆಲಸ ಮಾಡಲು ನಮಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಅನೇಕ ವರ್ಷಗಳಿಂದ ಚೈಲ್ಡ್ ಲೈನ್​ನಲ್ಲಿ ಕೆಲಸ ಮಾಡುತ್ತಿರುವ ನಾವು ಬೀದಿಗೆ ಬೀಳಬೇಕಾಗುತ್ತದೆ ಎಂದು ಒತ್ತಾಯಿಸಿದ್ದಾರೆ.

ಇನ್ನು ದೇಶದ 29 ರಾಜ್ಯಗಳ, 602 ನಗರಗಳಲ್ಲಿ, 1080 ಕಡೆ ಚೈಲ್ಡ್ ಲೈನ್ ಕಾರ್ಯನಿರ್ವಹಿಸುತ್ತದೆ. ಈ ಮೊದಲು ಕೇಂದ್ರ ಸರ್ಕಾರ ಆಯಾ ಜಿಲ್ಲೆಗಳಲ್ಲಿ ಮಕ್ಕಳ ಪರವಾಗಿ ಕೆಲಸ ಮಾಡುವ ವಿವಿಧ ಸಂಸ್ಥೆಗಳನ್ನು ಬಾಗಿದಾರರನ್ನಾಗಿ ಮಾಡಿಕೊಂಡು, ಅವುಗಳ ಮೂಲಕ 1098 ನ್ನು ನಡೆಸುತ್ತಿತ್ತು. ಪ್ರತಿಯೊಂದು ಸಂಸ್ಥೆಗೂ ಪ್ರತಿ ತಿಂಗಳು ಇಂತಿಷ್ಟು ಹಣ ಅಂತ ನೀಡಲಾಗುತ್ತಿತ್ತು. ಕರ್ನಾಟಕದಲ್ಲಿಯೇ 500ಕ್ಕೂ ಹೆಚ್ಚು ಜನರು, ಚೈಲ್ಡ್ ಲೈನ್​ನಲ್ಲಿ ಕೆಲಸ ಮಾಡುತ್ತಾರೆ. ಅವರು ಪ್ರತಿ ತಿಂಗಳು 5 ರಿಂದ 20 ಸಾವಿರವರಗೆ ಸರ್ಕಾರದಿಂದ ಸಿಗುವ ವೇತನದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ಕೇಂದ್ರ ಸರ್ಕಾರ 112 ನಲ್ಲಿ ವಿಲೀನಕ್ಕೆ ಮುಂದಾಗಿದ್ದರಿಂದ, ಮುಂದೇನು ಮಾಡೋದು ಅನ್ನೋ ದೊಡ್ಡ ಚಿಂತೆ ಸಿಬ್ಬಂದಿಯನ್ನು ಕಾಡುತ್ತಿದೆಯಂತೆ.

ಇದನ್ನೂ ಓದಿ:  ಚಿತ್ರದುರ್ಗ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ: ಮತ್ತೆ ವಿಚಾರಣೆ ನಡೆಸಲು ಹೈಕೋರ್ಟ್​ ತೀರ್ಮಾನ

ಚೈಲ್ಡ್ ಲೈನ್ ಹಿನ್ನೆಲೆ

1996 ರಲ್ಲಿ ಟಾಟಾ ಇನ್ಸಟಿಟ್ಯೂಟ್ ಆಪ್ ಸೋಶಿಯಲ್ ಸೈನ್ಸ್, ಮುಂಬೈನವರು, ಕೊಳಚೆ ಪ್ರದೇಶದಲ್ಲಿರುವ ಮಕ್ಕಳ ಸರ್ವೇಮಾಡಿ, ಅವರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಮಹರಾಷ್ಟ್ರ ಸರ್ಕಾರಕ್ಕೆ ವರದಿಯನ್ನು ನೀಡಿತ್ತಂತೆ. ಆಗ ಮಹರಾಷ್ಟ್ರ ಸರ್ಕಾರ ಚೈಲ್ಡ್ ಲೈನ್​ನ್ನು ಮೊದಲು ಆರಂಭಿಸಿತ್ತಂತೆ. 2000ನೇ ಇಸ್ವಿಯಲ್ಲಿ ಕೇಂದ್ರ ಸರ್ಕಾರ, ಈ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಿತ್ತು. ಆರಂಭದಲ್ಲಿ ಇದು ಚೈಲ್ಡ್ ಲೈನ್ ಇಂಡಿಯಾ ಪೌಂಡೇಶನ್ ಸಂಸ್ಥೆಯು ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು ಈ ಯೋಜನೆಯನ್ನು ಜಾರಿಗೊಳಿಸಿತ್ತಂತೆ. ಆದರೆ 2021 ರಲ್ಲಿ ಕೇಂದ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಈ ಯೋಜನೆಯು, ಮಿಷನ್ ವಾತ್ಸಲ್ಯ್ ಎಂಬ ಕೇಂದ್ರದ ಯೋಜನೆಯಡಿ ವಿಲೀನವಾಗಿತ್ತಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:37 pm, Mon, 2 January 23