
ಬೆಂಗಳೂರು, ನವೆಂಬರ್ 05: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ RSS ಪಥಸಂಚಲನ ವಿಚಾರ ಸಂಬಂಧ ಹೈಕೋರ್ಟ್ ಆದೇಶದ ಮೇರೆಗೆ 2ನೇ ಬಾರಿ ಶಾಂತಿ ಸಭೆ ಬೆಂಗಳೂರಿನ ಅಡ್ವೊಕೇಟ್ ಜನರಲ್ (ಎಜಿ) ಕಚೇರಿಯಲ್ಲಿ ನಡೆಯಿತು. ಅರ್ಜಿದಾರ ಅಶೋಕ್ ಪಾಟೀಲ್, ಹಿರಿಯ ವಕೀಲ ಅರುಣ್ ಶ್ಯಾಮ್, ಕಡ್ಲೂರ್ ಸತ್ಯನಾರಾಯಣಾಚಾರ್ಯ, ಎಜಿ ಶಶಿಕಿರಣ್ ಶೆಟ್ಟಿ, ಕಲಬುರಗಿ ಜಿಲ್ಲಾಡಳಿತದ ಅಧಿಕಾರಿಗಳು ಭಾಗಿಯಾಗಿದ್ದರು. ಇಂದಿನ ಸಭೆಯಲ್ಲಾದ ತೀರ್ಮಾನದ ವರದಿಯನ್ನ ನ.7ರಂದು ಹೈಕೋರ್ಟ್ಗೆ ಎಜಿ ತಿಳಿಸಲಿದ್ದಾರೆ.
ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಅರ್ಜಿದಾರರು ಪ್ರಸ್ತಾವನೆ ಸಲ್ಲಿಸಿದ್ದು, ನ.13 ಅಥವಾ 16ರಂದು ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ ಕೋರಿದ್ದಾರೆ. 850 ಗಣವೇಷಧಾರಿಗಳು ಮಾತ್ರ ಪಥಸಂಚಲನದಲ್ಲಿ ಭಾಗವಹಿಸುತ್ತಾರೆ. 3.1 ಕಿ.ಮೀ. ಪಥಸಂಚಲನ ನಡೆಸಲಾಗುತ್ತೆ. 4 ಸಾಲಿನ ಬದಲು 3 ಸಾಲಿನಲ್ಲಿ ಹೋಗುತ್ತೇವೆ. ಮಧ್ಯಾಹ್ನ 3ರಿಂದ 6.30ರವರೆಗೆ ಪಥಸಂಚಲನಕ್ಕೆ ಅನುಮತಿ ಕೊಡಿ ಎಂದು ಹೇಳಿದ್ದಾರೆ. ಅರ್ಜಿದಾರರು ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ಜಿಲ್ಲಾಡಳಿತ ತೀರ್ಮಾನಿಸಬೇಕಿದ್ದು, ಪಥಸಂಚಲನದಲ್ಲಿ ಸ್ಥಳೀಯರಿಗೆ ಮಾತ್ರ ಅವಕಾಶ ನೀಡುವುದಾಗಿಯೂ ಅರ್ಜಿದಾರರು ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ: ನ. 2ರಂದು ಚಿತ್ತಾಪುರದಲ್ಲಿ ಪಥಸಂಚಲನಕ್ಕೆ ಮುಂದಾಗಿದ್ದ RSSಗೆ ಹಿನ್ನಡೆ
ಚಿತ್ತಾಪುರದಲ್ಲಿ RSS ಪಥಸಂಚಲನದ ವಿಚಾರವಾಗಿ ಹೈಕೋರ್ಟ್ ಸೂಚನೆ ಮೇರೆಗೆ ಅಕ್ಟೋಬರ್ 28ರಂದು ಕಲಬುರಗಿಯಲ್ಲಿ 10 ಸಂಘಟನೆಗಳ ಜತೆ ನಡೆದ ಸಾಂತಿಸಭೆ ವಿಫಲವಾಗಿತ್ತು. ಡಿಸಿ ಫೌಜಿಯಾ, SP ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರ್ಎಸ್ಎಸ್ ಹಾಗೂ ಭೀಮ್ ಆರ್ಮಿ ನಡುವೆ ವಾಗ್ವಾದ ನಡೆದಿದ್ದರಿಂದ ಯಾವುದೇ ನಿರ್ಧಾರ ಆಗಿರಲಲ್ಲಿಲ್ಲ. ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕೋರ್ಟ್ ಅಂತಿಮವಾಗಿ ನವೆಂಬರ್ 5ರಂದು ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಮತ್ತೊಂದು ಶಾಂತಿ ನಡೆಸಲು ಸೂಚಿಸಿ ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 pm, Wed, 5 November 25