ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ (PSI Recruitment) ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಆರೋಪ ವಿಚಾರಕ್ಕೆ ಸಂಬಂಧಿಸಿ ಸಿಐಡಿ ಪೊಲೀಸರು (CID Police) ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಕರಣದ ಕಿಂಗ್ಪಿನ್ ಕಾಶಿನಾಥ್, ಮಂಜುನಾಥ ಮೇಳಕುಂದಿ, ದಿವ್ಯಾ ಹಾಗರಗಿ, ಇಬ್ಬರು ಕೊಠಡಿ ಮೇಲ್ವಿಚಾರಕಿಯರು ನಾಪತ್ತೆಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಕೇಸ್ ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಎಲ್ಲರೂ ಒಂದೇ ಕಡೆ ಇರುವ ಬಗ್ಗೆ ಅನುಮಾನ ಇದೆ. ಕಳೆದ ಕೆಲ ದಿನಗಳಿಂದ ಸಿಐಡಿ ಪೊಲೀಸರು ಐವರಿಗಾಗಿ ಬಲೆ ಬೀಸಿದ್ದಾರೆ.
ಆರೋಪಿ ಮಂಜುನಾಥ ಮೇಳಕುಂದಿ ಕಲಬುರಗಿ ನೀರಾವರಿ ಇಲಾಖೆಯು ಸಹಾಯಕ ಇಂಜನೀಯರ್. ಈತ ವಿರೇಶ್ ಅನ್ನೋ ಅಭ್ಯರ್ಥಿಯಿಂದ ಬರೋಬ್ಬರಿ 39 ಲಕ್ಷ ಹಣ ಪಡೆದಿದ್ದಾನಂತೆ. ವಿರೇಶ್, ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ. ಇಡೀ ಪ್ರಕರಣ ಬೆಳಕಿಗೆ ಬಂದಿದ್ದೆ ವಿರೇಶ್ ಅನ್ನೋ ಅಭ್ಯರ್ಥಿ ಬಂಧನದ ನಂತರ. ವಿರೇಶ್, ಕಲಬುರಗಿ ಜಿಲ್ಲೆಯ ಸೇಡಂ ನಿವಾಸಿ. ವಿಚಾರಣೆ ವೇಳೆ ತಾನು ಮಂಜುನಾಥ ಎಂಬುವವನಿಗೆ 39 ಲಕ್ಷ ಹಣ ನೀಡಿರೋದಾಗಿ ವಿರೇಶ್ ಒಪ್ಪಿಕೊಂಡಿದ್ದಾನೆ.
ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿದ ಸಿಐಡಿ ಅಧಿಕಾರಿಗಳು, ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ 50 ಅಭ್ಯರ್ಥಿಗಳಿಗೆ ನೋಟಿಸ್ ನೀಡಿದ್ದಾರೆ. ಇಂದು ವಿಚಾರಣೆಗೆ ಹಾಜರಾಗುವಂತೆ ಸಿಆರ್ಪಿಸಿ ಕಲಂ 91ರಡಿ ನೋಟಿಸ್ ನೀಡಿದ್ದಾರೆ. ಬೆಂಗಳೂರಿನ ಸಿಐಡಿ ಕಚೇರಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಹಾಲ್ಟಿಕೆಟ್, ಒಎಂಆರ್ ಶೀಟ್ನ ಕಾರ್ಬನ್ ಪ್ರತಿ ತರಬೇಕು ಎಂದಿದ್ದಾರೆ. ಹಂತ ಹಂತವಾಗಿ ವಿಚಾರಣೆ ನಡೆಸಲಿರುವ ಸಿಐಡಿ ಅಧಿಕಾರಿಗಳು, ಆಯ್ಕೆಯಾಗಿರುವ 545 ಅಭ್ಯರ್ಥಿಗಳನ್ನೂ ವಿಚಾರಣೆ ಮಾಡುವ ಸಾಧ್ಯತೆಯಿದೆ.
ಬಿಜೆಪಿ ನಾಯಕರ ಕೊರಳಿಗೆ ಸುತ್ತಿಕೊಳ್ಳುತ್ತಾ?:
ಈ ಅಕ್ರಮ ಬಿಜೆಪಿಯ ಅನೇಕ ನಾಯಕರ ಕೊರಳಿಗೆ ಸುತ್ತಿಕೊಳ್ಳುತ್ತಾ? ಎಂಬ ಪ್ರಶ್ನೆ ಮೂಡಿದೆ. ಜ್ಞಾನಜ್ಯೋತಿ ಶಾಲೆಗೆ PSI ಪರೀಕ್ಷಾ ಕೇಂದ್ರ ಅನುಮತಿ ಪತ್ರ ಪತ್ರವನ್ನು ಕೆಲ ಜನಪ್ರತಿನಿಧಿಗಳು ನೀಡಿರುವ ಶಂಕೆ ಇದೆ. ಅದರ ಬಗ್ಗೆಯೂ ತನಿಖೆಯಾಗಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ
Virgin Food Addiction: ‘ಕನ್ಯೆಯರು ಖಾದ್ಯಗಳಿಗೆ ವ್ಯಸನಿಗಳಾಗಲಿ’ ಎಂದ ಫಾಸ್ಟ್ ಫುಡ್ ಕಂಪೆನಿ ಎಂಡಿ ವಜಾ
ರಷ್ಯಾದಿಂದ ಹೊಸ ಕ್ಷಿಪಣಿ ಪರೀಕ್ಷೆ; ಶತ್ರು ರಾಷ್ಟ್ರಗಳು ಬೆದರಿಕೆಯೊಡ್ಡುವ ಮುನ್ನ ಎರಡು ಬಾರಿ ಯೋಚಿಸಿ ಎಂದ ಪುಟಿನ್
Published On - 8:41 am, Thu, 21 April 22