
ಕಲಬುರಗಿ, ನವೆಂಬರ್ 12: ರಾಜ್ಯ ಸರ್ಕಾರ ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ಬರೋಬ್ಬರಿ 428 ಮಂದಿನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕರಾಗಿ ಉಚ್ಚಾಟಿತ ಕಾಂಗ್ರೆಸ್ ಮುಖಂಡ ಲಿಂಗರಾಜ್ ಕಣ್ಣಿ ನೇಮಕ ಮಾಡಿದೆ. ಈ ನಿರ್ಧಾರವೀಗ ತೀರ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಲಿಂಗರಾಜ್ ಕಣ್ಣಿ, ನಿಷೇಧಿತ ಕೋಡೈನ್ ಫಾಸ್ಫೇಟ್ ಡ್ರಗ್ಸ್ ಸರಬರಾಜು ಪ್ರಕರಣದ ಆರೋಪಿಯಾಗಿದ್ದು, ಇದೇ ಕಾರಣಕ್ಕೆ ಅವರು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿತ್ತು. ಆದರೆ ಅದೇ ಡ್ರಗ್ಸ್ ಕೇಸ್ ಆರೋಪಿಯನ್ನು ಕೆಕೆಆರ್‌ಟಿಸಿ ನಿಗಮದ ನೂತನ ನಿರ್ದೇಶಕರಾಗಿ ಈಗ ನೇಮಿಸಲಾಗಿದೆ.
ಈ ಹಿಂದೆ ಕಲಬುರಗಿ ದಕ್ಷಿಣ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿದ್ದ ಲಿಂಗರಾಜ್ ಕಣ್ಣಿ ನಿಷೇಧಿತ ಕೋಡೈನ್ ಫಾಸ್ಫೇಟ್ ಸಮೇತ ಸಿಕ್ಕಿಬಿದ್ದಿದ್ದರು. ಕಣ್ಣಿ ಉಳಿದುಕೊಂಡಿದ್ದ ಲಾಡ್ಜ್‌ನಲ್ಲಿ 120 ಬಾಟಲ್ ಪತ್ತೆಯಾಗಿದ್ದ ಹಿನ್ನೆಲೆ ಎನ್‌ಡಿಪಿಎಸ್, ಡ್ರಗ್ಸ್ ಮತ್ತು ಕಾಸ್ಮೆಟಿಕ್ ಆ್ಯಕ್ಟ್‌ನಡಿ 2025ರ ಜೂ.22ರಂದು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದರು. ಈ ಸಂಬಂಧ ಕಲ್ಯಾಣ್ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಕಣ್ಣಿ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ನಿಗಮ ಮಂಡಳಿ ಪಟ್ಟಿಯಲ್ಲಿ RSS ಕಾರ್ಯಕರ್ತನಿಗೆ ಸ್ಥಾನ! ‘ಕೈ’ ಕಾರ್ಯಕರ್ತರಿಂದ ತೀವ್ರ ಅಸಮಾಧಾನ
ಮೊದಲು ಬಿಜೆಪಿಯಲ್ಲಿದ್ದ ಲಿಂಗರಾಜ್ ಕಣ್ಣಿ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2025ರ ಜುಲೈನಲ್ಲಿ ಮಾದಕ ದ್ರವ್ಯ ಪ್ರಕರಣ ಬೆಳಕಿಗೆ ಬಂದ ತಕ್ಷಣ, ಜಿಲ್ಲಾ ಕಾಂಗ್ರೆಸ್ ಸಮಿತಿಯು ಇವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿತ್ತು. ಮತ್ತೊಂದೆಡೆ ಆರ್ಎಸ್ಎಸ್ ಕಾರ್ಯಕರ್ತನಿಗೆ ರೇಷ್ಮೆ ಅಭಿವೃದ್ಧಿ ನಿಗಮ ನಿರ್ದೇಶಕ ಸ್ಥಾನ ನೀಡಿರುವುದು ಕೂಡ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರದುರ್ಗದ ಲೀಲಾಧರ ಠಾಕೂರ್ಗೆ ನಿಗಮದ ನಿರ್ದೇಶಕ ಸ್ಥಾನ ಒಲಿದಿದ್ದು, ಇವರು ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಆಪ್ತರೂ ಹೌದು. ಲೀಲಾಧರ ಠಾಕೂರ್ ಬಿಜೆಪಿ ನಗರ ಮಂಡಲ ಅಧ್ಯಕ್ಷರಾಗಿ ಸೇವೆ ಕೂಡ ಸಲ್ಲಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:44 pm, Thu, 12 November 26