ಕಲಬುರಗಿ ಜಿಲ್ಲೆಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ; ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲು

| Updated By: preethi shettigar

Updated on: Oct 11, 2021 | 9:56 AM

ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ನಮಗೆ ನಿಖರವಾದ ಮಾಹಿತಿ ಯಾರು ಹೇಳುವುದಿಲ್ಲ. ಅಪಾಯದ ಮುನ್ಸೂಚನೆ ಇದ್ದರೆ ಗ್ರಾಮಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ ಎಂದು ಭೀತಿಗೊಳಗಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಹಲವೆಡೆ ಮತ್ತೆ ಕಂಪಿಸಿದ ಭೂಮಿ; ರಿಕ್ಟರ್ ಮಾಪಕದಲ್ಲಿ 3.4ರಷ್ಟು ತೀವ್ರತೆ ದಾಖಲು
ಪ್ರಾತಿನಿಧಿಕ ಚಿತ್ರ
Follow us on

ಕಲಬುರಗಿ: ಜಿಲ್ಲೆಯ ಹಲವೆಡೆ ಮತ್ತೆ ಭೂಕಂಪನವಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ, ಹಲಚೇರಾ, ತೇಗಲತಿಪ್ಪಿ, ಬೆನಕನಳ್ಳಿ, ಭೂತನೂರ, ಹೊಸಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಪದೇ ಪದೇ ಭೂಮಿ ಕಂಪಿಸುತ್ತಿದ್ದರು ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಹೀಗಾಗಿ ಸಿಟ್ಟಿಗೆದ್ದ ಗ್ರಾಮಸ್ಥರು ಇಂದು (ಅಕ್ಟೋಬರ್ 11) ಹೋರಾಟಕ್ಕೆ ಮುಂದಾಗಿದ್ದಾರೆ.

ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ನಮಗೆ ನಿಖರವಾದ ಮಾಹಿತಿ ಯಾರು ಹೇಳುವುದಿಲ್ಲ. ಅಪಾಯದ ಮುನ್ಸೂಚನೆ ಇದ್ದರೆ ಗ್ರಾಮಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ ಎಂದು ಭೀತಿಗೊಳಗಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆ 3.4 ರಷ್ಟು ಭೂಕಂಪನ ಸಂಭವಿಸಿತ್ತು. ಕಂಪನದ ತೀವ್ರತೆ ಹೆಚ್ಚುತ್ತಿರುವುದರಿಂದ ಕಂಗೆಟ್ಟಿರುವ ಗ್ರಾಮಸ್ಥರು, ಚಿಂಚೋಳಿಯ ಹೊಡೆಭೀರನಹಳ್ಳಿ ಕ್ರಾಸ್​ನಲ್ಲಿ ರಸ್ತೆ ತಡೆದು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಬೆಳಿಗ್ಗೆ 10.30 ಸುಮಾರಿಗೆ ಪ್ರತಿಭಟನೆ ಶುರುವಾಗಲಿದೆ.

ಅಕ್ಟೋಬರ್​ 9 ರಂದು ಕೂಡ ಭೂಮಿ ಕಂಪಿಸಿದೆ
ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಅಕ್ಟೋಬರ್ 9 ಲಘು ಭೂಕಂಪದ ಅನುಭವವಾಗಿತ್ತು. ನಸುಕಿನ ಜಾವ 5.40 ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನದ ಅನುಭವವಾಗಿತ್ತು. ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿದ್ದು, ಆತಂಕದಿಂದ ಮನೆಯಿಂದ ಹೊರಬಂದ ಗ್ರಾಮಸ್ಥರು ಮಳೆಯಲ್ಲಿಯೇ ಕಾಲ ಕಳೆದಿದ್ದರು.

ಅಕ್ಟೋಬರ್​ 8 ರಂದು ಕೂಡಾ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಲಘು ಭೂಕಂಪನವಾಗಿತ್ತು. ಕಳೆದ ಕೆಲ ವರ್ಷಗಳಿಂದ ಭೂಮಿಯಿಂದ ಭಾರೀ ಸದ್ದು ಕೇಳಿ ಬರುತ್ತಿತ್ತು. ಇದೀಗ ಜನರಿಗೆ ಮೇಲಿಂದ ಮೇಲೆ ಲಘು ಭೂಕಂಪನದ ಅನುಭವವಾಗುತ್ತಿದೆ.

ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಗಳ ಜನರು
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೆಲವಡೆ ಲಘು ಭೂಕಂಪನವಾದ ಹಿನ್ನೆಲೆ, ಮನೆಯಿಂದ ಹೊರ ಬಂದಿದ್ದ ಜನರು, ಮಳೆಯಲ್ಲೇ ನಿಲ್ಲಬೇಕಾಯಿತು. ಕಳೆದ ರಾತ್ರಿಯಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಗಡಿಕೇಶ್ವರ, ಹಲಚೇರಾ ಗ್ರಾಮದ ಜನರು ಮಳೆಯಲ್ಲೇ ನೆನೆಯುವಂತಾಯಿತು.

ಈ ಹಿಂದೆ  ಜಿಲ್ಲೆಯಲ್ಲಿ 2.6 ತೀವ್ರತೆ ಕಂಪನ ಆಗಿತ್ತು. ಕಾಳಗಿ‌ ತಾಲೂಕಿನ ಹಲಚೇರಾ ಗ್ರಾಮದ ಕೇಂದ್ರ ಬಿಂದುವಿನಲ್ಲಿ ಭೂಕಂಪನ ನಡೆದಿತ್ತು. ಇಂದು ಕೂಡಾ ಲಘು ಭೂ ಕಂಪನವಾಗಿದೆ. ದೇಶದ ಅನೇಕ ಕಡೆ ಲಘು ಭೂಕಂಪನಗಳು ಆಗುತ್ತಿವೆ. ಅದೇ ರೀತಿ ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಲಘು ಭೂಕಂಪನ ಸಂಭವಿಸುತ್ತಿವೆ. ಕಾಳಗಿ ತಾಲೂಕಿನ ಹ‌ಲಚೇರಾ, ತೇಗಲತಿಪ್ಪಿ, ಹೊಸಳ್ಳಿ ಗ್ರಾಮದಲ್ಲಿ ಕೂಡಾ ಲಘು ಭೂಕಂಪನ ಅನುಭವವಾಗಿದೆ ಎಂದು ಟಿವಿ9 ಡಿಜಿಟಲ್​ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:
ಕಲಬುರಗಿ: ಮತ್ತೆ ಲಘು ಭೂಕಂಪನ; ಆತಂಕದಲ್ಲಿ ಮನೆಯಿಂದ ಹೊರ ಬಂದು ಮಳೆಯಲ್ಲಿಯೇ ಕಾಲ ಕಳೆದ ಗ್ರಾಮಸ್ಥರು

ವಿಜಯಪುರದಲ್ಲಿ ಮತ್ತೆ ನಡುಗಿದ ಭೂಮಿ; ಒಂದು ವಾರದಲ್ಲಿ ಎರಡನೇ ಬಾರಿಗೆ ಭೂಕಂಪನದ ಅನುಭವ

Published On - 9:42 am, Mon, 11 October 21