ಕಲಬುರಗಿ, ಮೇ 06: ಸೇಡಂ (Sedam) ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಶಿಕ್ಷಣ ಪ್ರೇಮಿ, ಹಿರಿಯ ಮುತ್ಸದ್ದಿ ಡಾ.ನಾಗರೆಡ್ಡಿ ಪಾಟೀಲ್ (Nagreddy Patil) (79) ಅವರು ಇಂದು (ಮೇ 06) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿಯರು ಇದ್ದಾರೆ. ನಾಗರೆಡ್ಡಿ ಪಾಟೀಲ್ ಅವರ ಪುತ್ರ ಶಿವಶರಣರೆಡ್ಡಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
1983-85ರ ಅವಧಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎರಡೂವರೆ ವರ್ಷ ಶಾಸಕರಾಗಿದ್ದರು. ಆಗ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು. ನಾಗರೆಡ್ಡಿ ಅವರು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಗೌರವ ಅಧ್ಯಕ್ಷರೂ ಆಗಿದ್ದರು.
ಅಂತ್ಯಕ್ರಿಯೆ ಮಧ್ಯಾಹ್ನ 3.30ಕ್ಕೆ ಸೇಡಂ ಪಟ್ಟಣದ ಆಶ್ರಯ ಕಾಲೊನಿ ಪಕ್ಕದ ಸ್ವಂತ ಹೊಲದಲ್ಲಿ ನಡೆಯಲಿದೆ.
ಸೇಡಂನ ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಡಾ. ನಾಗರೆಡ್ಡಿ ಪಾಟೀಲರು ಹಾಗೂ ತಾವು ಮೊದಲ ಬಾರಿ 1983ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದುದನ್ನು ಮುಖ್ಯಮಂತ್ರಿಯವರು ಸ್ಮರಿಸಿದ್ದಾರೆ. ಪಾಟೀಲರು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರು. ಅವರ ನಿಧನದಿಂದ ಒಬ್ಬ ಜನಾನುರಾಗಿ ಮುತ್ಸದ್ದಿ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಬಣ್ಣಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ