ಕಲಬುರಗಿ ಜನರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ಹಾರಾಟ ಸೇವೆ ಆರಂಭ
ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬಹುದಿನಗಳ ಕನಸು ಇದೀಗ ಈಡೇರುವ ಸಮಯ ಬಂದಿದೆ. ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್ಗೆ ಬೇಕಾದ ಎಲ್ಲಾ ಸೌಲಭ್ಯಗಳು ಸಿದ್ದವಾಗಿದ್ದು, ತಾಂತ್ರಿಕ ತಂಡ ಇಂದು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ನೈಟ್ ಲ್ಯಾಂಡಿಗ್ ಮತ್ತು ಟೇಕಾಪ್ಗೆ ಗ್ರೀನ್ ಸಿಗ್ನಲ್ ನೀಡಿದೆ.
ಕಲಬುರಗಿ: ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬಹುದಿನಗಳ ಕನಸು ಇದೀಗ ಈಡೇರುವ ಸಮಯ ಬಂದಿದೆ. ಕಲಬುರಗಿ ವಿಮಾನ ನಿಲ್ಧಾಣ (Kalaburagi airport) ಆರಂಭವಾಗಿ ಮೂರು ವರ್ಷಗಳಾಗಿದ್ದು ಇಲ್ಲಿವರಗೆ ರಾತ್ರಿ ವಿಮಾನಗಳ ಲ್ಯಾಂಡಿಗ್ ಮತ್ತು ಟೇಕಾಪ್ ವ್ಯವಸ್ಥೆ ಇರಲಿಲ್ಲಾ. ಇದರಿಂದ ರಾತ್ರಿ ಸಮಯದಲ್ಲಿ ವಿಮಾನಗಳ ಹಾರಾಟ ವ್ಯವಸ್ಥೆಗೆ ತೊಂದರೆಯಾಗಿತ್ತು. ಇದೀಗ ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್ಗೆ ಬೇಕಾದ ಎಲ್ಲಾ ಸೌಲಭ್ಯಗಳು ಸಿದ್ದವಾಗಿದ್ದು, ತಾಂತ್ರಿಕ ತಂಡ ಇಂದು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ನೈಟ್ ಲ್ಯಾಂಡಿಗ್ ಮತ್ತು ಟೇಕಾಪ್ಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಇನ್ನೊಂದು ತಿಂಗಳಲ್ಲಿ ವಿಮಾನಗಳು ರಾತ್ರಿ ಸಮಯದಲ್ಲಿ ಲ್ಯಾಂಡಿಗ್ ಮತ್ತು ಟೇಕಾಪ್ ಆಗಲಿವೆ.
ದೆಹಲಿಯಿಂದ ಬಂದಿದ್ದ ಪರಿಣಿತರ ತಂಡ ಇಂದು ರಾತ್ರಿ ಸಮಯದಲ್ಲಿ ಕಲಬುರಗಿ ಏರ್ ಪೋರ್ಟ್ನಲ್ಲಿ ಕಮರ್ಷಿಯಲ್ ಪ್ಲೈಟ್ ಹಾರಾಟಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಪರಿಶೀಲನೆ ನಡೆಸಿತು. ಪರಿಶೀಲನೆ ಬಳಿಕ ಮಾತನಾಡಿದ ಪರಿಣಿತರ ತಂಡ, ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ಸಮಯದಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಪ್ಗೆ ಬೇಕಾದ ಎಲ್ಲಾ ವ್ಯವಸ್ಥೆ ಸರಿಯಾಗಿದ್ದು, ಸೌಲಭ್ಯಗಳು ತೃಪ್ತಿಕರವಾಗಿವೆ ಅಂತ ಕ್ಯಾಪ್ಟನ್ ಅನೂಪ್ ಹೇಳಿದರು.
ಇದನ್ನೂ ಓದಿ: ಹಿಂದೂ ಮುಸ್ಲಿಂ ಭಾವ್ಯಕ್ಯೆತೆಗೆ ಸಾಕ್ಷಿಯಾದ ರಾಮನವಮಿ: ಇಲ್ಲಿದೆ ನೋಡಿ ಶೋಭಾಯಾತ್ರೆಯ ಝಲಕ್
ಇನ್ನು ಕಳೆದ ಐದು ತಿಂಗಳಿಂದ ವಿಮಾನಗಳ ನೈಟ್ ಲ್ಯಾಂಡಿಗ್ ಮತ್ತು ಟೇಕಾಪ್ಗೆ ಬೇಕಾದ ಸಿದ್ಧತೆಗಳು ಆರಂಭವಾಗಿದ್ದವು. ರನ್ ವೇನಲ್ಲಿ ಲೈಟ್ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಇಟಲಿಯಿಂದ ಲೈಟ್ಗಳನ್ನು ತರಿಸಲಾಗಿದೆ. ಇನ್ನೊಂದೆಡೆ ಮೂಲಭೂತ ಸೌಲಭ್ಯಗಳನ್ನು ಕೂಡಾ ಕಲ್ಪಿಸಲಾಗಿದೆ. ಜೊತೆಗೆ ವಿಮಾನಗಳ ರಾತ್ರಿ ಹಾರಾಟಕ್ಕೆ ಬೇಕಾದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದೆ. ಇಂದು ತಾಂತ್ರಿಕ ತಂಡ ಪರಿಶೀಲನೆ ನಡೆಸಿದ್ದು, ವರದಿಯನ್ನು ಡಿಜಿಸಿಎಗೆ ನೀಡಲಿದೆ. ತಿಂಗಳೊಳಗಾಗಿ ರಾತ್ರಿ ವಿಮಾನ ಹಾರಾಟದ ಅಧಿಕೃತ ಪರವಾನಗಿ ಸಿಗಲಿದೆ ಅಂತ ಕಲಬುರಗಿ ಏರ್ಪೋರ್ಟ್ ನಿರ್ದೇಶಕ ಮಹೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೈಟ್ ಲ್ಯಾಂಡಿಂಗ್ ಏನೆಲ್ಲಾ ಅನಕೂಲತೆಗಳಾಗಲಿವೆ?
ಇನ್ನು ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್ ವ್ಯವಸ್ಥೆಯಿಂದ ಜನರಿಗೆ ಅನೇಕ ಅನುಕೂಲತೆಗಳು ಸಿಗಲಿವೆ. ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಾಗಲಿದ್ದು, ರಾತ್ರಿ ಸಮಯದಲ್ಲಿ ಕೂಡಾ ಜನರು ಪ್ರಯಾಣ ಮಾಡಬಹುದು, ಬಂದಿಳಿಯಬಹುದು. ಸದ್ಯ ಮುಂಜಾನೆ ಏಳರಿಂದ ಸಂಜೆ ಆರರವರಗೆ ಮಾತ್ರ ವಿಮಾನಗಳ ಹಾರಾಟಕ್ಕೆ ಅವಕಾಶವಿತ್ತು. ಇನ್ನು ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್ ನಿಂದ ರೋಗಿಗಳನ್ನು ದಿನದ ಇಪ್ಪತ್ನಾಲ್ಕು ಗಂಟೆ ಕೂಡಾ ಏರ್ ಲಿಪ್ಟ್ ಮಾಡಲು ಅನಕೂಲವಾಗಲಿದೆ. ಈ ಮೊದಲು ಹಗಲೊತ್ತಿನಲ್ಲಿ ಮಾತ್ರ ಏರ್ ಲಿಪ್ಟ್ ಮಾಡಲು ಅವಕಾಶವಿತ್ತು.
ಇದನ್ನೂ ಓದಿ: ಹೆರಿಗೆಯಾದ ಹತ್ತು ದಿನದ ನಂತರ ಬಾಣಂತಿ ಸಾವು; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರ ಆರೋಪ
ಇನ್ನು ಸದ್ಯ ಕಲಬುರಗಿ ವಿಮಾನ ನಿಲ್ದಾಣದಿಂದ ಮೂರು ಮಾರ್ಗದಲ್ಲಿ ಮಾತ್ರ ವಿಮಾನಗಳ ಹಾರಾಟ ಸೇವೆಯಿದೆ. ಕಲಬುರಗಿ ಬೆಂಗಳೂರು, ಕಲಬುರಗಿ ಹಿಂಡನ್, ಕಲಬುರಗಿ ತಿರುಪತಿಗೆ ಸ್ಟಾರ್ ಮತ್ತು ಅಲೈನ್ಸ್ ಕಂಪನಿಗಳು ಸೇವೆ ನೀಡುತ್ತಿವೆ. ಇದರ ಜೊತೆಗೆ ಇನ್ನು ಐದು ವಿಮಾನಗಳ ಕಂಪನಿಗೆ ಇಲ್ಲಿಂದ ಸೇವೆ ಆರಂಭಿಸಲು ಕೂಡಾ ಸಿಬ್ಬಂದಿ ಮನವಿ ಮಾಡಿದ್ದಾರೆ.
ವರದಿ: ಸಂಜಯ್, ಟಿವಿ9, ಕಲಬುರಗಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:40 pm, Sat, 1 April 23