ಕಲಬುರಗಿ: ರಾಜ್ಯದಲ್ಲಿ ಬೆಲೆ (GST) ಏರಿಕೆಯ ಕಾವು ಹೆಚ್ಚಿದ್ದು, ವಾದ ಪ್ರತಿವಾದಗಳು ನಡೆಯುತ್ತಿವೆ. ಹೀಗಾಗಿ ಬೆಲೆ ಏರಿಕೆ ಖಂಡಿಸಿ ನಗರದಲ್ಲಿ ವಿನೂತನ ಪ್ರತಿಭಟನೆ ಮಾಡಲಾಗಿದೆ. ರಸ್ತೆಯಲ್ಲೇ ರೊಟ್ಟಿ ಮಾಡಿ ಮಹಿಳೆಯರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತೀಯ ಮಹಿಳಾ ಒಕ್ಕೂಟದ ನೇತೃತ್ವದಲ್ಲಿ ನಗರದ ಎಸ್ವಿಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಲೆ ಮೇಲೆ ಸಿಲಿಂಡರ್ ಹೊತ್ತು ಮಹಿಳೆಯರು ಆಕ್ರೋಶ ಹೊರಹಾಕಿದರು. ರಾಜ್ಯ ,ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು, ತಕ್ಷಣವೇ ಆಹಾರ ಧಾನ್ಯಗಳ ಮೇಲೆ ಹೇರಲಾದ ಜಿಎಸ್ಟಿ ವಾಪಸ್ ಪಡೆಯುವಂತೆ ಪ್ರತಿಭಟನಾಕಾರರಿಂದ ಒತ್ತಾಯ ಮಾಡಲಾಯಿತು. ಅದೇ ರೀತಿಯಾಗಿ ಜಿಎಸ್ಟಿ ಹೇರಿಕೆ ವಿರೋಧಿಸಿ ಬೆಂಗಳೂರಿನ ಜಿಎಸ್ಟಿ ಕೇಂದ್ರ ಕಚೇರಿ ಮುಂದೆ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಮಾಡಿದೆ. ಮಾಜಿ ಸಚಿವ ರಾಮಲಿಂಗರೆಡ್ಡಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಿದ್ದು, ಸುಮಾರು 150-200 ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಮೊಸರು, ಮಜ್ಜಿಗೆ ಮೇಲೆ ಹಾಕಿರುವ ಜಿಎಸ್ಟಿ ವಿರೋಧಿಸಿ ಧರಣಿ ಮಾಡಲಾಗಿದೆ. ಜಿಎಸ್ ಟಿ ಕಚೇರಿ ಬಳಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ದುಬಾರಿ ಆಗಿರುವ ವಸ್ತುಗಳು:
1) ಪ್ಯಾಕೇಜ್ಡ್ ಫುಡ್: ಪ್ರೀ- ಪ್ಯಾಕ್ಡ್, ಪ್ರೀ- ಲೇಬಲ್ಡ್ ಮೊಸರು, ಲಸ್ಸಿ ಮತ್ತು ಮಜ್ಜಿಗೆ ಮತ್ತಿತರ ಉತ್ಪನ್ನಗಳು. ಜೇನುತುಪ್ಪ, ಉಪ್ಪಿನಕಾಯಿ, ಮಾಂಸ, ಮೀನು, ಪ್ಯಾಕ್ ಮಾಡಿರುವ ಬ್ರಾಂಡ್ ಅಲ್ಲದ ಆಹಾರ ಪದಾರ್ಥ (ಅಕ್ಕಿ, ಗೋಧಿ, ಗೋಧಿ ಹಿಟ್ಟು, ಒಣಕಾಳು ಇತ್ಯಾದಿ)
2) ಬ್ಯಾಂಕ್ ಚೆಕ್ ಬುಕ್: ಬ್ಯಾಂಕ್ ಚೆಕ್ಗಳ (ಬಿಡಿ ಅಥವಾ ಪುಸ್ತಕ ಸ್ವರೂಪದಲ್ಲಿ) ವಿತರಣೆ ಮೇಲೆ ಶೇ 18ರಷ್ಟು ಜಿಎಸ್ಟಿ ಶುಲ್ಕ ಬೀಳಲಿದೆ.
3) ನಕ್ಷೆಗಳು ಮತ್ತು ಚಾರ್ಟ್ಗಳು: ಶೇ 12ರಷ್ಟು ಜಿಎಸ್ಟಿ ಹಾಕಲಾಗುತ್ತದೆ.
4) ಹೋಟೆಲ್ ಕೋಣೆಗಳು: ಒಂದು ದಿನಕ್ಕೆ ₹ 1,000 ರೂಪಾಯಿ ಒಳಗಿನ ಹೋಟೆಲ್ ರೂಮ್ಗೆ ಶೇ 12ರಷ್ಟು ಜಿಎಸ್ಟಿ ವಿಧಿಸಲಾಗಿದೆ. ಈವರೆಗೆ ಈ ಮೊತ್ತದ ಶುಲ್ಕವಿರುವ ಕೋಣೆಗೆ ಜಿಎಸ್ಟಿ ವಿನಾಯ್ತಿಯಿತ್ತು.
5) ಆಸ್ಪತ್ರೆ ಬೆಡ್ಗಳು: ರೂಮ್ ಬಾಡಿಗೆ (ಐಸಿಯು ಹೊರತುಪಡಿಸಿ) ದಿನಕ್ಕೆ 5 ಸಾವಿರ ರೂಪಾಯಿ ಮೇಲ್ಪಟ್ಟು ಶುಲ್ಕ ವಿಧಿಸುವ ಆಸ್ಪತ್ರೆಗಳಲ್ಲಿ ಶೇ 5ರ ಜಿಎಸ್ಟಿ ಇದೆ. ಇದಕ್ಕೆ ಐಟಿಸಿ (Input Tax Credit – ITC) ಸಿಗುವುದಿಲ್ಲ.
6) ಎಲ್ಇಡಿ ಬಲ್ಪ್: ಎಲ್ಇಡಿ ದೀಪಗಳು, ಸಲಕರಣೆಗಳು, ಎಲ್ಇಡಿ ಲ್ಯಾಂಪ್ಗಳ ಮೇಲೆ ಶೇ 6ರಷ್ಟು ಜಿಎಸ್ಟಿ ಹೆಚ್ಚಾಗಲಿದೆ. ಈವರೆಗೆ ಶೇ 12ರಷ್ಟು ತೆರಿಗೆಯಿತ್ತು. ಈ ಪ್ರಮಾಣವು ಇನ್ನು ಮುಂದೆ ಶೇ 18ಕ್ಕೆ ಏರಿಕೆಯಾಗಲಿದೆ.
7) ಬ್ಲೇಡ್, ಚಾಕು: ಚಾಕುಗಳು ಜತೆಗೆ ಕತ್ತರಿಸಿದ ಬ್ಲೇಡ್ಗಳು, ಪೇಪರ್ ಕತ್ತರಿಗಳು, ಪೆನ್ಸಿಲ್ ಶಾರ್ಪ್ನರ್ಗಳು ಮತ್ತು ಬ್ಲೇಡ್ಗಳು, ಸ್ಕಿಮ್ಮರ್ಸ್, ಕೇಕ್ ಸರ್ವರ್ಸ್ ಮುಂತಾದವುಗಳಿಗೆ ಶೇ 12ರಿಂದ 18ರಷ್ಟು ತೆರಿಗೆ ಹಾಕಲಾಗುತ್ತದೆ.
8) ಪಂಪ್ಸ್ ಮತ್ತು ಮಶೀನ್ಗಳು: ಸಬ್ ಮರ್ಸಿಬಲ್ ಪಂಪ್ಗಳು, ಬೈಸಿಕಲ್ ಪಂಪ್ಗಳು ಸೇರಿದಂತೆ ಇತರ ಮಶೀನ್ಗಳ ಮೇಲಿನ ಜಿಎಸ್ಟಿಯನ್ನು ಶೇ 12ರಿಂದ ಶೇ 18ಕ್ಕೆ ಏರಿಸಲಾಗಿದೆ.
ಇವೆಲ್ಲ ಅಗ್ಗ ಆಗುತ್ತವೆ
1) ರೋಪ್ವೇ ರೈಡ್ಗಳು: ರೋಪ್ವೇಗಳ ಮೂಲಕ ಸರಕುಗಳು ಮತ್ತು ಪ್ರಯಾಣಿಕರನ್ನು ಒಯ್ಯುವ ದರವನ್ನು ಶೇ 18ರಿಂದ ಶೇ 5ಕ್ಕೆ ಇಳಿಸಿದ್ದು, ಜತೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೇವೆ ದೊರೆಯುತ್ತದೆ.
2) ಸರಕು ಸಾಗಣೆ ಬಾಡಿಗೆ: ಸರಕು ಸಾಗಣೆಯ ಜತೆಗೆ ತೈಲ ಮತ್ತು ಆಪರೇಟರ್ಸ್ ವೆಚ್ಚದ ಜಿಎಸ್ಟಿ ಶೇ 18ರಿಂದ ಶೇ 12ಕ್ಕೆ ಇಳಿದಿದೆ.
3) ಅರ್ಥೋಪೆಡಿಕ್ ಅಪ್ಲೈಯನ್ಸಸ್: ಸ್ಪ್ಲಿಂಟ್ಸ್ ಮತ್ತು ದೇಹದ ಇತರ ಕೃತಕ ಭಾಗಗಳಿಗಾಗಿ ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ.
4) ರಕ್ಷಣಾ ವಸ್ತುಗಳು: ಖಾಸಗಿ ಮಾರಾಟಗಾರರು/ಸಂಸ್ಥೆಗಳು ಆಮದು ಮಾಡಿಕೊಳ್ಳುವ ನಿರ್ದಿಷ್ಟ ವಸ್ತುಗಳ ಮೇಲೆ ಐಜಿಎಸ್ಟಿಯನ್ನು ವಿನಾಯಿತಿ ನೀಡಲಾಗಿದೆ.
Published On - 1:33 pm, Wed, 20 July 22