ಕಲಬುರಗಿ, ಜುಲೈ 27: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಈಗಾಗಲೇ ಕೆಲವಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಳೆ ಇನ್ನು ಹೆಚ್ಚಾದರೇ ಪ್ರವಾಹ ಪರಿಸ್ಥಿತಿ ವಿಕೋಪಕ್ಕೆ ತಲುಪಲಿದ್ದು, ಅದನ್ನು ನಿರ್ನಹಿಸಲು ಈಗಾಗಲೇ ಕಲಬುರಗಿ (Kalaburagi) ಜಿಲ್ಲಾಡಳಿತ ಸಿದ್ದತೆ ಆರಂಭಿಸಿದೆ. ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ ಅವರು ಸೂಚನೆ ನೀಡಿದರು.
ಕಂದಾಯ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ, ಶಿಕ್ಷಣ, ಜೆಸ್ಕಾಂ, ಪೌರ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹೀಗೆ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ತಂಡದ ರೂಪದಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲಾಡಳಿತ ಕೈಗೊಂಡಿರುವ ಮುಂಜಾಗ್ರತ ಕ್ರಮಗಳು ಕುರಿತು ಮಾಹಿತಿ ಪಡೆದು ಮಾತನಾಡಿದ ಅವರು, ಬುಧವಾರ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮೂಲಕ ನೆರೆ ಹಾವಳಿ ಪರಿಸ್ಥಿತಿ ಸಂದರ್ಭದಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಲು ಅಗತ್ಯ ಸೂಚನೆ ನೀಡಿದ್ದು, ಅದನ್ನು ತಪ್ಪದೆ ಎಲ್ಲರು ಪಾಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಮುಸಲ್ಮಾನಳಾಗಿದ್ದರೆ ಬುರ್ಖಾ ಧರಿಸಿ ಮಾತನಾಡು: KKRTC ಬಸ್ ಚಾಲಕನ ಉದ್ಧಟತನದ ಮಾತಿಗೆ ಆಕ್ರೋಶ
ಮುಂದಿನ ದಿನದಲ್ಲಿ ಮಳೆ ಹೆಚ್ಚಾದಲ್ಲಿ ಸಹಜವಾಗಿ ಮಹಾರಾಷ್ಟ್ರದ ಜಲಾಶಯದಿಂದ ಜಿಲ್ಲೆಯ ಪ್ರಮುಖ ಜೀವನಾಡಿ ಭೀಮಾ ನದಿಗೆ ನೀರು ಹರಿಬಿಡಲಾಗುತ್ತದೆ. ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿರಬೇಕು. ಸೇತುವೆ ಮುಳಗಡೆ ಭೀತಿಯಿದ್ದಲ್ಲಿ ರಸ್ತೆ ಸಂಪರ್ಕ ಸ್ಥಗಿತಗೊಳಿಸಿ ಜನ ಸಂಚಾರ ಮಾಡದಂತೆ ತಡೆಗಟ್ಟಬೇಕು. ಪೊಲೀಸರು, ಗೃಹ ರಕ್ಷಕ ಸಿಬ್ಬಂದಿಯನ್ನು ಸೇತುವೆಗಳಿಗೆ ಮುನ್ನೆಚ್ಚರಿಕೆಯಾಗಿ ನಿಯೋಜಿಸಬೇಕು ಎಂದು ತಿಳಿಸಿದರು.
ನದಿ ದಂಡೆಯಲ್ಲಿ ವಾಸಿಸುವ ಜನರನ್ನು ಸ್ಥಳಾಂತರಕ್ಕೂ ಈಗಲೆ ನೀಲಿ ನಕ್ಷೆ ಸಿದ್ಧಪಡಿಸಿ. ಇನ್ನು ಕಲಬುರಗಿ ನಗರದಲ್ಲಿ ಮಳೆಯಿಂದ ಮನೆಗೆ ನೀರು ನುಗ್ಗುವುದು, ರಸ್ತೆ ಸಂಚಾರ, ಗಿಡ ಮರಗಳು ಉರುಳುವುದು ಸಾಮಾನ್ಯ. ಇಂತಹ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ತಂಡ ರೂಪಿಸಬೇಕು. ಸಹಾಯವಾಣಿ ಸ್ಥಾಪಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಪಾಲಿಕೆ ಆಯುಕ್ತ ಭುವನೇಶ ಕುಮಾರ ಪಾಟೀಲ ಮಾತನಾಡಿ, ಈಗಾಗಲೇ ನಗರದ 3 ವಲಯಗಳಿಗೆ ವಲಯ ಆಯುಕ್ತರ ನೇತೃತ್ವದಲ್ಲಿ ವಾರ್ಡ್‍ವಾರು ಅಧಿಕಾರಿಗಳ ತಂಡ ರಚಿಸಿದೆ. ಹೆಲ್ಪ್‍ಲೈನ್ ಸೆಂಟರ್ ಸ್ಥಾಪಿಸಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ 24 ಗಂಟೆಯಲ್ಲಿಯೆ ಪರಿಹಾರ ನಿಡುವಂತಹ ಕೆಲಸ ಪಾಲಿಕೆ ಮಾಡುತ್ತಿದೆ ಎಂದು ವಿವರಣೆ ನೀಡಿದರು.
ಪ್ರವಾಹ ಪರಿಸ್ಥಿತಿ ಗಂಭೀರತೆ ಅರಿತುಕೊಂಡು ಶಾಲಾ ಕಟ್ಟಡ, ಅಂಗನವಾಡಿ ಕೇಂದ್ರದಲ್ಲಿ ಕಾಳಜಿ ಕೇಂದ್ರ ತೆರೆದು ನಿರಾಶ್ರಿತರಿಗೆ ಆಶ್ರಯ ಒದಗಿಸಬೇಕು. ಸಾಂಕ್ರಾಮಿಕ ಸೋಂಕು ಹರಡದಂತೆ ಆರೋಗ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕು. ಮುನ್ನಚ್ಚೆರಿಕೆ ಕ್ರಮ ಕೈಗೊಂಡಲ್ಲಿ ಮಾತ್ರ ಮಾನವ ಹಾನಿ ತಪ್ಪಿಸಲು ಸಾಧ್ಯ. ಹೀಗಾಗಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಅದರ ನಿಯಂತ್ರಿಸಲು ತಯ್ಯಾರಾಗಿರಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಜೂನ್ ಮತ್ತು ಜುಲೈ ಮಾಹೆಯಲ್ಲಿ ವಾಡಿಕೆಯಂತೆ 225 ಮಿ.ಮಿ ಮಳೆಯಾಗಬೇಕಿತ್ತು. 303 ಮಿ.ಮಿ. ಮಳೆಯಾಗಿದ್ದು, ಇದು ಶೇ.35ರಷ್ಟು ಹೆಚ್ಚಳವಾಗಿದೆ. ವಾಡಿಕೆಗಿಂತ ಹೆಚ್ಚಿಗೆ ಮಳೆಯಾಗಿದ್ದರು, ಯಾವುದೇ ಜಲಾಶಯಗಳು ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹ ಭೀತಿ ಇಲ್ಲ ಎಂದ ಅವರು, ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲೆಯ ಕಲಬುರಗಿ, ಅಫಜಲಪೂರ, ಚಿತ್ತಾಪೂರ, ಶಹಾಬಾದ, ಕಾಳಗಿ ತಾಲೂಕಿನ ಭೀಮಾ, ಕಾಗಿಣಾ ನದಿ ದಡದಲ್ಲಿ ಪ್ರವಾಹಕ್ಕೆ ತುತ್ತಾಗುವ 159 ಗ್ರಾಮಗಳನ್ನು ಗುರುತಿಸಿದೆ.
ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಜನ ಮತ್ತು ಜಾನುವಾರುಗಳ ಸ್ಥಳಾಂತರ ಸೇರಿದಂತೆ ಅಗತ್ಯ ಮುನ್ನಚ್ಚರಿಕೆ ಕ್ರಮಕೈಗೊಳ್ಳಲು 27 ಜನ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಜವಾಬ್ದಾರಿ ನೀಡಲಾಗಿದೆ.
ಮಳೆಯಿಂದ ಜಿಲ್ಲೆಯಲ್ಲಿ 283 ಮನೆಗಳು ಭಾಗಶಃ ಹಾನಿಯಾಗಿವೆ. ಒಂದು ಮಾನವ ಹಾನಿಯಾಗಿದ್ದು, ಪ್ರಾಣಿ ಹಾನಿ ಕುರಿತು ಯಾವುದೇ ವರದಿಯಾಗಿಲ್ಲ. ಮಳೆಯಿಂದ ಉರುಳಿದ 281 ವಿದ್ಯುತ್ ಕಂಬ, 35 ಟ್ರಾನ್ಸ್‍ಫಾರ್ಮರ್‍ಗಳನ್ನು ಬದಲಾಯಿಸಿದೆ. ವಿಪತ್ತು ನಿರ್ವಹಣೆ ಕಾರ್ಯಕ್ಕೆ ಯಾವುದೇ ಅನುದಾನ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.
ಜಂಟಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 8.87 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇದೂವರೆಗೆ 5.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಉಳಿದಂತೆ ಬೀಜ, ರಸಗೊಬ್ಬರ ಕೊರತೆ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು. ಸೊನ್ನ ಬ್ಯಾರೇಜ್ ಶೇ.33ರಷ್ಟು ಮಾತ್ರ ಭರ್ತಿಯಾಗಿದೆ ಎಂದು ಎ.ಇ.ಇ. ಸಂತೋಷ ಕುಮಾರ ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:57 pm, Thu, 27 July 23