ಕಲಬುರಗಿ: ವ್ಯಾಪಾರದಲ್ಲಿ ಹೆಚ್ಚಿನ ಲಾಭದ ಆಸೆ ಆಮಿಷ, ನಿವೃತ್ತ ನೌಕರನಿಗೆ ಬರೋಬ್ಬರಿ 34 ಲಕ್ಷ ವಂಚನೆ

| Updated By: Ganapathi Sharma

Updated on: Oct 17, 2023 | 5:05 PM

Kalaburagi News: ಪ್ರೇಮಾ ಫರಹತಾಬಾದ್ ಸಂತೋಷ್ ಕೆರೂರ್ ವಿರುದ್ದ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನೆಡಸುತ್ತಿದ್ದಾರೆ. ನಿವೃತ್ತಿ ನಂತರ ಸುಖಮಯ ಜೀವನ ನಡೆಸಬೇಕು ಅಂತಿದ್ದ ವೃದ್ದರಿಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ತೋರಿಸಿ ವಂಚಕರು ವಂಚನೆ ಮಾಡಿದ್ದರಿಂದ, ಇಳಿ ವಯಸ್ಸಿನಲ್ಲಿ ವೃದ್ದ ನಿವೃತ್ತ ನೌಕರ ತೊಂದರೆಗೆ ಸಿಲುಕಿದ್ದಾರೆ.

ಕಲಬುರಗಿ: ವ್ಯಾಪಾರದಲ್ಲಿ ಹೆಚ್ಚಿನ ಲಾಭದ ಆಸೆ ಆಮಿಷ, ನಿವೃತ್ತ ನೌಕರನಿಗೆ ಬರೋಬ್ಬರಿ 34 ಲಕ್ಷ ವಂಚನೆ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ, ಅಕ್ಟೋಬರ್ 17: ಕಲಬುರಗಿ (Kalaburagi) ಜಿಲ್ಲೆಯ ಅನೇಕ ಜನರಿಗೆ ದೂರದ ಎಲ್ಲೋ ಕೂತು, ಪೋನ್ ಕರೆ ಮಾಡಿ ಹತ್ತಾರು ರೀತಿಯ ಆಮಿಷಗಳನ್ನು ತೋರಿಸ ಜನರಿಗೆ ವಂಚಿಸಿರೋ ಅನೇಕ ಪ್ರಕರಣಗಳು ನಡೆದಿವೆ. ಆದರೆ ಇದೀಗ ಕಲಬುರಗಿಯವರೇ, ಕಲಬುರಗಿ ನಗರದ ನಿವೃತ್ತ ನೌಕರನಿಗೆ ಬರೋಬ್ಬರಿ 34 ಲಕ್ಷ ರೂಪಾಯಿ ವಂಚಿಸಿದ್ದಾರೆ (Fraud). ವ್ಯಾಪಾರದಲ್ಲಿ ಹೆಚ್ಚಿನ ಲಾಭ ಮಾಡೋ ಆಸೆ ತೋರಿಸಿ, ಹಂತಹಂತವಾಗಿ ಹಣ ಪಡೆದು ವಂಚಿಸಿದ್ದು, ಇದೀಗ ನ್ಯಾಯಕ್ಕಾಗಿ ನಿವೃತ್ತ ನೌಕರ ಪೊಲೀಸರ ಮೊರೆ ಹೋಗಿದ್ದಾರೆ.

ಕಲಬುರಗಿ ನಗರದ ಅಣ್ಣಾರಾವ್ ಹತ್ತರಕಿ ಅನ್ನೋ 67 ವರ್ಷದ ವೃದ್ದರೊಬ್ಬರು, ಆರೋಗ್ಯ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ, ನಿವೃತ್ತರಾಗಿದ್ದರು. ತಮ್ಮ ನಿವೃತ್ತಿ ವೇತನದ ಹಣವನ್ನು ಬ್ಯಾಂಕ್​​ನಲ್ಲಿಟ್ಟುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಮನೆಯಲ್ಲಿ ಸುಮ್ಮನೇ ಕೂತು ಕೂತು ಬೇಜಾರಾಗುತ್ತಿದ್ದರಿಂದ, ಏನಾದ್ರು ವ್ಯಾಪಾರ ವಹಿವಾಟು ಮಾಡಬೇಕು ಅಂತ ನಿರ್ಧಾರ ಮಾಡಿಕೊಂಡಿದ್ದರು. ಈ ಬಗ್ಗೆ ಪರಿಚಿತರ ಜೊತೆ ಚರ್ಚೆ ಮಾಡಿದ್ದರು. ಈ ಸಮಯದಲ್ಲಿ ಶಿವಪುತ್ರ ಭುರ್ಜಕರ್ ಅನ್ನೋ ವ್ಯಕ್ತಿ, ತಾನು ಕಲಬುರಗಿ ನಗರದಲ್ಲಿ ಪ್ರೇಮಾ ಫರಹತಾಬಾದ್ ಅನ್ನೋ ಮಹಿಳೆಯಿದ್ದು, ಅವರ ಬಳಿ ತಾನು ಹೋಲಸೆಲ್ ಕಿರಾಣಿ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡ್ತೇನೆ, ಅದರಿಂದ ತನಗೆ ಹೆಚ್ಚಿನ ಲಾಭವಾಗ್ತದೆ ಅಂತ ಹೇಳಿದ್ದರು. ಶಿವಪುತ್ರ ಭುರ್ಜಕರ ಮಾತು ಕೇಳಿ, ಅಣ್ಣಾರಾವ್ ಕೂಡಾ ವ್ಯಾಪಾರ ಆರಂಭಿಸಲು ಮುಂದಾಗಿದ್ದರು.

ಹೋಲ್​​ಸೆಲ್ ವ್ಯಾಪಾರ ಆಮಿಷ ತೋರಿಸಿ ವಂಚನೆ

ಕಲಬುರಗಿ ನಗರದ ಶಹಾಬಜಾರ್ ನಿವಾಸಿಯಾಗಿದ್ದ ಪ್ರೇಮಾ ಫರಹತಾಬಾದ್ ಮತ್ತು ಶಿವಪುತ್ರ ಭುರ್ಜರಕಿ, ಜುಲೈ 7, 2023 ರಂದು ಅಣ್ಣಾರಾವ್ ಮನೆಗೆ ಬಂದಿದ್ದರು. ಆಗ ಪ್ರೇಮಾ, ನಾನು ಕಿರಾಣಿ ಅಂಗಡಿ ವ್ಯವಹಾರ ಮಾಡ್ತೇನೆ. ನೀವು ಒಂದು ಕ್ವಿಂಟಲ್ ಕಿರಾಣಿ ವಸ್ತುಗಳನ್ನು ಖರೀದಿ ಮಾಡಿದರೆ, ನಿಮಗೆ ನಾವು ಒಂದುವರೆ ಕ್ವಿಂಟಲ್ ಕಿರಾಣಿ ವಸ್ತುಗಳನ್ನು ನೀಡುತ್ತೇವೆ. ನೀವು ವ್ಯಾಪಾರ ಮಾಡಿದ್ರೆ, ನಿಮಗೆ ಅರ್ದ ಕ್ವಿಂಟಲ್ ವಸ್ತುಗಳ ಹಣ ಹೆಚ್ಚುವರಿಯಾಗಿ ಸಿಗುತ್ತದೆ ಅಂತ ಹೇಳಿದ್ರು. ಹೀಗಾಗಿ ಆರಂಭದಲ್ಲಿ ಅಣ್ಣಾರಾವ್, ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹತ್ತು ಲಕ್ಷ ಹಣವನ್ನು ನೀಡಿದ್ದರು. ಅಂದು ಪ್ರೇಮಾ, ಹದಿನೈದು ಕಿಲೋ ತೂಕದ ಹತ್ತು ಟಿನ್ ರುಚಿಗೋಲ್ಡ್ ರಿಪೈನ್ಡ್ ಆಯಿಲ್ , ಹತ್ತು ಕ್ವಿಟಲ್ ತೊಗರಿ ಬೇಳೆ, ಹತ್ತು ಕ್ವಿಂಟಲ್ ಸಕ್ಕರೆ ಸೇರಿ 1.39 ಲಕ್ಷ ಮೌಲ್ಯದ ವಸ್ತುಗಳನ್ನು ನೀಡಿದ್ದರು.

ಇದನ್ನೂ ಓದಿ: ಬೆಳಗ್ಗೆ ಹೊತ್ತಿನಲ್ಲಿ ಸರಗಳ್ಳತನ: ಕಲಬುರಗಿ ನಗರದಲ್ಲಿ ಪೊಲೀಸರಿಂದ ಮಾರ್ನಿಂಗ್ ಬೀಟ್

ಕೆಲ ದಿನಗಳ ನಂತರ ಮತ್ತೆ ಅಣ್ಣಾರಾವ್ ಅವರ ಮನೆಗೆ ಆಗಮಿಸಿದ್ದ ಪ್ರೇಮಾ ಮತ್ತು ಸಂತೋಷ್ ಕೆರೂರ್ ಅನ್ನೋರು ತಮ್ಮ ಬಳಿ ಎರಡು ಸಾವಿರ ಮುಖಬೆಲೆಯ ಇನ್ನೂರು ಕೋಟಿ ರೂಪಾಯಿ ಹಣವಿದೆ. ಅವುಗಳನ್ನು ಬದಲಾವಣೆ ಮಾಡಿಕೊಳ್ಳಲು ವ್ಯಾಪಾರದಲ್ಲಿ ಹಣ ತೊಡಗಿಸುತ್ತಿದ್ದೇವೆ. ಹೀಗಾಗಿ ಕಡಿಮೆ ಬೆಲೆಗೆ ಕಿರಾಣಿ ವಸ್ತುಗಳನ್ನು ನೀಡ್ತಿದ್ದೇವೆ ಅಂತ ಅಣ್ಣಾರಾವ್ ಗೆ ಮೇಲಿಂದ ಮೇಲೆ ಹೇಳಿ ವಂಚಿಸಿದ್ದ ದುರುಳರು, ಬಣ್ಣದ ಮಾತುಗಳನ್ನು ಹೇಳಿ ಹಂತಹಂತವಾಗಿ ಅಣ್ಣಾರಾವ್ ಬಳಿ 34 ಲಕ್ಷ ಹಣ ಪಡೆದಿದ್ದರು. ಆದ್ರೆ 4.17 ಲಕ್ಷ ಮೌಲ್ಯದ ದಿನಸಿ ವಸ್ತುಗಳನ್ನು ಮಾತ್ರ ನೀಡಿದ್ದರು. ನಂತರ ದಿನಸಿ ವಸ್ತುಗಳನ್ನು ಕೂಡಾ ಪೂರೈಕೆ ಮಾಡುವದನ್ನು ನಿಲ್ಲಿಸಿದ್ದರು. ಹೀಗಾಗಿ ಅಣ್ಣಾರಾವ್, ತಾನು ಕೊಟ್ಟ ಹಣವನ್ನಾದ್ರು ನೀಡಿ, ಇಲ್ಲವೇ ದಿನಸಿ ವಸ್ತುಗಳನ್ನಾದ್ರು ನೀಡಿ ಅಂತ ಕೇಳಿದ್ರು ಕೂಡಾ ಮೋಸಗಾರರು ಸ್ಪಂಧಿಸಿರಲಿಲ್ಲಾ. ಹೀಗಾಗಿ ಅಣ್ಣಾರಾವ್ ಕಲಬುರಗಿ ನಗರದ ಸಿ ಇ ಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಗೆ ಪ್ರೇಮಾ ಮತ್ತು ಸಂತೋಷ್ ಅನ್ನೋರು ವಂಚನೆ ಮಾಡಿದ್ದು, ಹಣ ಮರಳಿ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಸದ್ಯ ಪ್ರೇಮಾ ಫರಹತಾಬಾದ್ ಸಂತೋಷ್ ಕೆರೂರ್ ವಿರುದ್ದ ಸಿ ಇ ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನೆಡಸುತ್ತಿದ್ದಾರೆ. ನಿವೃತ್ತಿ ನಂತರ ಸುಖಮಯ ಜೀವನ ನಡೆಸಬೇಕು ಅಂತಿದ್ದ ವೃದ್ದರಿಗೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ತೋರಿಸಿ ವಂಚಕರು ವಂಚನೆ ಮಾಡಿದ್ದರಿಂದ, ಇಳಿ ವಯಸ್ಸಿನಲ್ಲಿ ವೃದ್ದ ನಿವೃತ್ತ ನೌಕರ ತೊಂದರೆಗೆ ಸಿಲುಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ