ಬೆಳಗ್ಗೆ ಹೊತ್ತಿನಲ್ಲಿ ಸರಗಳ್ಳತನ: ಕಲಬುರಗಿ ನಗರದಲ್ಲಿ ಪೊಲೀಸರಿಂದ ಮಾರ್ನಿಂಗ್ ಬೀಟ್
ಸಾಮಾನ್ಯವಾಗಿ ಪೊಲೀಸರು ರಾತ್ರಿ ವೇಳೆ ಬೀಟ್ ನಡೆಸುತ್ತಾರೆ. ಆದರೆ ರಾತ್ರಿ ವೇಳೆ ನಡೆಯುತ್ತಿದ್ದ ಸರಗಳ್ಳತನ ಮತ್ತು ಅಪರಾಧ ಕೃತ್ಯಗಳು ಬೆಳಗ್ಗೆ ಹೊತ್ತಿನಲ್ಲೂ ನಡೆಯುತ್ತಿರುವುದರಿಂದ ಕಲಬುರಗಿ ನಗರದಲ್ಲಿ ಪೊಲೀಸರು ಮಾರ್ನಿಂಗ್ ಬೀಟ್ ಕೂಡ ಆರಂಭಿಸಿದ್ದಾರೆ. ಆ ಮೂಲಕ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಖಾಕಿ ಪಡೆ ಮುಂದಾಗಿದೆ.
ಕಲಬುರಗಿ, ಅ.16: ಸಾಮಾನ್ಯವಾಗಿ ಪೊಲೀಸರು ರಾತ್ರಿ ಸಮಯದಲ್ಲಿ ಕಳ್ಳತನ, ಅಪರಾಧ ಕೃತ್ಯಗಳನ್ನು ತಡೆಯಲು ನೈಟ್ ಬೀಟ್ಗಳನ್ನು ಮಾಡುತ್ತಾರೆ. ಆದರೆ ಕಲಬುರಗಿ (Kalaburagi) ಪೊಲೀಸರು ರಾತ್ರಿ ಬೀಟ್ ಮಾತ್ರವಲ್ಲ, ಬೆಳಗ್ಗೆ ಬೀಟ್ ಕೂಡ ಆರಂಭಿಸಿದ್ದಾರೆ. ಸಾರ್ವಜನಿಕ ಉದ್ಯಾನವನ, ಮಾರ್ಕೇಟ್ ಸೇರಿದಂತೆ ಕೆಲವಡೇ ಮುಂಜಾನೆಯೇ ಪೊಲೀಸರು ಭೇಟಿ ನೀಡಲು ಆರಂಭಿಸಿದ್ದಾರೆ. ಆ ಮೂಲಕ ಕಲಬುರಗಿ ನಗರದಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ ಮತ್ತು ಅಪರಾಧ ಕೃತ್ಯಗಳನ್ನು ತಡೆಯಲು ಖಾಕಿ ಪಡೆ ಮುಂದಾಗಿದೆ.
ಕಲಬುರಗಿ ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲಿಕ್ಕಾಗಿಯೇ ನಗರ ಪೊಲೀಸ್ ಆಯುಕ್ತಾಲಯವನ್ನು ಅನೇಕ ವರ್ಷಗಳ ಹಿಂದೆ ಆರಂಭಿಸಲಾಗಿದೆ. ಆದರೂ ಅಪರಾಧಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.
ನಗರದಲ್ಲಿ ಪ್ರತಿನಿತ್ಯ ಅನೇಕ ಕಡೆ ಮನೆಗಳ್ಳತನ, ಸರಗಳ್ಳತನ, ದರೋಡೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ರಾತ್ರಿ ಸಮಯದಲ್ಲಿ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳು ಇದೀಗ ಮುಂಜಾನೆ ಕೂಡಾ ನಡೆಯುತ್ತಿವೆ. ಹೀಗಾಗಿ ಮಂಜಾನೆ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನು ತಡೆಯಲು ಕಲಬುರಗಿ ಪೊಲೀಸರು ಮಾರ್ನಿಂಗ್ ಬೀಟ್ ಆರಂಭಿಸಿದ್ದಾರೆ.
ಏನಿದು ಮಾರ್ನಿಂಗ್ ಬೀಟ್?
ನೈಟ್ ಬೀಟ್ ಮಾಡುವ ಪೊಲೀಸರು, ಮುಂಜಾನೆ ಆರು ಗಂಟೆವರಗೆ ನಗರದ ಅನೇಕ ಕಡೆ ಸಂಚರಿಸುತ್ತಾರೆ. ರಾತ್ರಿ ಸಮಯದಲ್ಲಿ ಅಪರಾಧ ಕೃತ್ಯಗಳು ನಡೆಯದಂತೆ ಕಣ್ಣೀಟ್ಟಿರುತ್ತಾರೆ. ಆದರೆ ಕಲಬುರಗಿ ನಗರದಲ್ಲಿ ವಾಕಿಂಗ್ಗೆ ಹೋಗುವ ಮಹಿಳೆಯರನ್ನು ಗುರಿಯಾಗಿಸಿ, ಸರಗಳ್ಳತನ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.
ಇದನ್ನೂ ಓದಿ: ಕಲಬುರಗಿ ನಗರ ಪೊಲೀಸರ ಭರ್ಜರಿ ಕಾರ್ಯಾಚಾರಣೆ: 17.88 ಲಕ್ಷ ಮೌಲ್ಯದ 298 ಗ್ರಾಂ ಚಿನ್ನಾಭರಣ ಜಪ್ತಿ
ಮುಂಜಾನೆ ಸಮಯದಲ್ಲಿ ತರಕಾರಿ ಖರೀದಿ ಸೇರಿದಂತೆ ಕೆಲವಡೇ ಸಾರ್ವಜನಿಕರು ಸೇರುವ ಹೆಚ್ಚಿನ ಸ್ಥಳಗಳಲ್ಲಿ ಕೂಡಾ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಇವುಗಳನ್ನು ತಡೆಯಲು ಇದೀಗ ಕಲಬುರಗಿ ಪೊಲೀಸರು ಮಾರ್ನಿಂಗ್ ಬೀಟ್ ಆರಂಭಿಸಿದ್ದಾರೆ.
ಪ್ರತಿ ಠಾಣೆಯಲ್ಲಿನ ಕೆಲ ಪೊಲೀಸ್ ಸಿಬ್ಬಂದಿ ಮುಂಜಾನೆ ಆರು ಗಂಟೆಗೆ ಬೀಟ್ ಆರಂಭಿಸುತ್ತಾರೆ. ಸಾರ್ವಜನಿಕ ಉದ್ಯಾನ, ಮಾರ್ಕೇಟ್ ಸೇರಿದಂತೆ ಕೆಲವಡೆ ಸಂಚರಿಸುತ್ತಾರೆ. ಸರಗಳ್ಳರು, ಮೊಬೈಲ್ ಕಳ್ಳರ ಮೇಲೆ ಕಣ್ಣಿಟ್ಟು, ಅಪರಾಧ ಕೃತ್ಯಗಳು ನಡೆಯದಂತೆ ನೋಡಿಕೊಳ್ಳುವ ಕೆಲಸವನ್ನು ಮಾರ್ನಿಂಗ್ ಬೀಟ್ ಪೊಲೀಸರು ಮಾಡುತ್ತಾರೆ.
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಆರ್ ಚೇತನ್, ಕಲಬುರಗಿ ನಗರದಲ್ಲಿ ಮುಂಜಾನೆ ಕೂಡಾ ಸರಗಳ್ಳತನ ಮತ್ತು ಅಪರಾಧ ಕೃತ್ಯಗಳು ನಡೆಯುತ್ತಿವೆ. ಅವುಗಳನ್ನು ತಡೆಯಲು ಮಾರ್ನಿಂಗ್ ಬೀಟ್ ಆರಂಭಿಸಲಾಗಿದೆ. ನಗರದಲ್ಲಿ ಎಲ್ಲಾ ರೀತಿಯ ಅಪರಾಧ ಕೃತ್ಯಗಳನ್ನು ತಡೆಯಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ