ಕಲಬುರಗಿಯಲ್ಲಿ ಸರ್ವಧರ್ಮ ಸೌಹಾರ್ದಯುತವಾಗಿ ನಡೆಯುತ್ತೆ ರೊಟ್ಟಿ, ಬಜ್ಜಿ ಪಲ್ಯ ಜಾತ್ರೆ
ಜೇವರ್ಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿರುವ ವಿಶ್ವರಾದ್ಯರ ತಪೋವನದ ಮಠದಲ್ಲಿ ನಡೆಯುತ್ತೆ ಸರ್ವಧರ್ಮ ಸೌಹಾರ್ದಯುತ ಜಾತ್ರೆ
ಕರ್ನಾಟಕದ ಅನೇಕ ಮಠಗಳಲ್ಲಿ ಸರ್ವಧರ್ಮಗಳ ಸಮನ್ವಯವನ್ನು ಬೆಸೆಯುವ ಕಾರ್ಯಗಳು ನಡೆಯುತ್ತಿವೆ. ಅನೇಕ ಮಠಗಳಲ್ಲಿ ನಡೆಯುವ ಸಹಪಂಕ್ತಿ ಭೋಜನಗಳು ಜಾತಿ ವ್ಯವಸ್ಥೆಯನ್ನು ಮೀರಿ, ಎಲ್ಲರು ಸಮಾನರು ಅನ್ನೋದನ್ನು ಸಾರುತ್ತವೆ. ಇಂತಹದೆ ಕೆಲಸವನ್ನು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿರುವ ವಿಶ್ವರಾದ್ಯರ ತಪೋವನದ ಮಠದಲ್ಲಿ ನಡೆಯುತ್ತದೆ. ಇಲ್ಲಿ ನಡೆಯುವ ಜಾತ್ರೆಯು ಸರ್ವಧರ್ಮಗಳ ಸಂಗಮಕ್ಕೆ ಸಾಕ್ಷಿಯಾಗುತ್ತಿದೆ.
ಅದ್ದೂರಿಯಾಗಿ ನಡೆದ ಶಾಖಾಪುರ ಜಾತ್ರೆ
ಶಾಖಾಪುರ ವಿಶ್ವರಾಧ್ಯ ತಪೋವನ ಶಾಖಾ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸರ್ವಧರ್ಮ ಸೌಹಾರ್ದತೆ ಸಾರುವ ಲಿಂಗೈಕ್ಯ ಶ್ರೀ ಸಿದ್ದರಾಮ ಶಿವಯೋಗಿಗಳ ಜಾತ್ರೆ ನಡೆಸಲಾಯಿತು. ಈ ವರ್ಷ ಲಿಂಗೈಕ್ಯ ಶ್ರೀ ಸಿದ್ದರಾಮ ಶಿವಯೋಗಿಗಳ 72 ನೇ ಪುಣ್ಯಸ್ಮರಣೆ ಕಾರ್ಯ ನಡೆಯಿತು. ನಿನ್ನೆ (ಅ.15) ರಾತ್ರಿಯಿಂದ ಆರಂಭವಾಗಿರುವ ಜಾತ್ರೆ ಇಂದು ರಾತ್ರಿವರಗೆ ನಡೆಯುತ್ತದೆ. ವಿಶ್ವರಾಧ್ಯ ತಪೋವನ ಶಾಖಾ ಮಠದ ಪೀಠಾಧೀಪತಿ ಶ್ರೀ ಸಿದ್ದರಾಮ ಶಿವಾಚಾರ್ಯರು ನೇತೃತ್ವದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಾತ್ರೆಯಲ್ಲಿ ನಾಡಿನ ಅನೇಕ ಮಠಾದೀಶರು, ಅನುಭಾವಿಗಳು ಭಾಗಿಯಾಗಿದ್ದು, ಭಕ್ತರಿಗೆ ಜ್ಞಾನಮೃತವನ್ನು ಉಣಬಡಿಸಿದರು.
ಜಾತ್ರೆಯ ವಿಶೇಷ ರೊಟ್ಟಿ, ಬಜ್ಜಿ ಪಲ್ಯ
ಶಾಖಾಪುರದ ತಪೋವನ ಮಠದ ಜಾತ್ರೆಯ ವಿಶೇಷ ರೊಟ್ಟಿ ಮತ್ತು ಬಜ್ಜಿ ಪಲ್ಯ. ಶಾಖಾಪುರದ ಮಠದಲ್ಲಿ ಜಾತ್ರೆ ಅಂಗವಾಗಿ ರೊಟ್ಟಿ ಜಾತ್ರೆ ನಡೆಯುತ್ತದೆ. ಖಡಕ್ ರೊಟ್ಟಿ, ಎಲ್ಲಾ ತರಹದ ಕಾಳು, ತರಕಾರಿಗಳಿಂದ ಬಜ್ಜಿ ಪಲ್ಯ ಸಿದ್ದಪಡಿಸುತ್ತಾರೆ. 24 ಗಂಟೆಗಳ ಕಾಲ ನಡೆಯುವ ರೊಟ್ಟಿ, ಬಜ್ಜಿ ಪಲ್ಯ ಜಾತ್ರೆಯಲ್ಲಿ ಕಲಬುರಗಿ ಸೇರಿದಂತೆ ಅಕ್ಕ ಪಕ್ಕದ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ರೊಟ್ಡಿ, ಭಜ್ಜಿ ಪಲ್ಯ ಪ್ರಸಾದ ಸವಿದು ವಿಶ್ವರಾಧ್ಯ, ಸಿದ್ದರಾಮ ಶಿವಯೋಗಿಗಳ ಕೃಪೆಗೆ ಪಾತ್ರರಾಗುತ್ತಾರೆ.
ಮಠ ಹಾಗೂ ಭಕ್ತರಿಂದ ಜರುಗುವ ಈ ವಿಶೇಷ ರೊಟ್ಟಿ ಜಾತ್ರೆಯಲ್ಲಿ ಈ ವರ್ಷ 32 ಕ್ವಿಂಟಲ್ ಸಜ್ಜೆ ರೊಟ್ಟಿ, 10 ಕ್ವಿಂಟಲ್ ಬಿಳಿ ಜೊಳ ರೊಟ್ಟಿಗಳನ್ನ ಸಿದ್ದಪಡಿಸಲಾಗಿತ್ತು. ರೊಟ್ಟಿ ಜಾತ್ರೆ ನಿಮಿತ್ತ ಹದಿನೈದು ದಿನಗಳ ಮುಂಚೆಯಿಂದಲೇ ಶಾಖಾಪುರ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಮಹಿಳೆಯರು ಲಕ್ಷಾಂತರ ರೊಟ್ಟಿಗಳನ್ನು ತಯಾರಿಸಿ, ಮಠಕ್ಕೆ ತಂದು ಕೊಡುತ್ತಾರೆ. ಅಲ್ಲದೆ ಬೇರೆ ಬೇರೆ ಭಾಗದ ಭಕ್ತರು ಕೂಡ ಜಾತ್ರೆಗಾಗಿಯೇ ಸಾವಿರ ರೊಟ್ಟಿಗಳನ್ನ ಸಿದ್ದಪಡಿಸಿಕೊಂಡು ಜಾತ್ರೆಗೆ ತರುತ್ತಾರೆ. ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿರುವ ಈ ರೊಟ್ಟಿ ಜಾತ್ರೆಯಲ್ಲಿ ಪಂಕ್ತಿ ಭೇದ ಇಲ್ಲದೆ ಭಕ್ತರು ದಾಸೋಹ ಮನೆಯಲ್ಲಿ ನೆಲದ ಮೇಲೆ ಕುಳಿತು ರೊಟ್ಟಿ, ಬಜ್ಜಿ ಪಲ್ಯ ಪ್ರಸಾದ ಸವಿಯುತ್ತಾರೆ. ವರ್ಷದಿಂದ ವರ್ಷಕ್ಕೆ ಈ ರೊಟ್ಟಿ ಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಸಂಜಯ ಚಿಕ್ಕಮಠ, ಕಲಬುರಗಿ
Published On - 5:12 pm, Sun, 16 October 22