ಕಲಬುರಗಿ: ಶಾಲೆಗೆ ಹೋಗುತ್ತಿದ್ದ ಬಾಲಕನನ್ನು (School Boy Kidnap Case) ಆಟೋದೊಳಗೆ ಬಲವಂತವಾಗಿ ತುಂಬಿಸಿ ಅಪಹರಿಸಿದ್ದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಕಲಬುರಗಿಯ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರುಣ್ ಭಜಂತ್ರಿ ಮತ್ತು ಲಕ್ಷ್ಮಣ ಭಜಂತ್ರಿ ಬಂಧಿತ ಆರೋಪಿಗಳಾಗಿದ್ದು, ಕಲಬುರಗಿ ನಗರದ ಸಂತ್ರಸವಾಡಿ ನಿವಾಸಿಗಳಾಗಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕನ ಮಗ ಸುರ್ಶನನನ್ನು ಸಿದ್ದೇಶ್ವರ ಕಾಲೋನಿಯಲ್ಲಿ ಜನವರಿ 4ರಂದು ಕಿಡ್ನಾಪಲ್ ಮಾಡಿ 10 ಲಕ್ಷಕ್ಕೆ ಡಿಮ್ಯಾಂಡ್ ಇಡಲಾಗಿತ್ತು. ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆಗೆ ನಡೆಸಿ ಬಾಲಕನ್ನು ರಕ್ಷಿಸಿ ನಿನ್ನೆ ತಡರಾತ್ರಿ ಬಂಧಿಸಿದ್ದಾರೆ.
ಏನಿದು ಪ್ರಕರಣ?
ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿರುವ ಗುರುನಾಥ್ ರಾಠೋಡ್ ಅನ್ನೋರು, ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೂರು ಜನ ಮಕ್ಕಳಿದ್ದು, ಹಿರಿಯ ಮಗ, ಕಲಬುರಗಿ ನಗರದ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಜನವರಿ 4ರಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ಗುರುನಾಥ್ ಅವರ ಪುತ್ರ ಸುದರ್ಶನ ಶಾಲೆಗೆ ಹೋಗಲು ಮನೆಯಿಂದ ಹೊರಬಂದಿದ್ದ. ಮನೆಯಿಂದ ಹೊರಬಂದು ಶಾಲಾ ಬಸ್ಗಾಗಿ ಕಾಯುತ್ತಿದ್ದಾಗ ಆಟೋದಲ್ಲಿ ಬಂದಿದ್ದ ದುರುಳರು, ಇಎಸ್ಐ ಆಸ್ಪತ್ರೆಯ ವಿಳಾಸ ಕೇಳುವ ನೆಪದಲ್ಲಿ ಬಾಲಕನನ್ನು ಮಾತನಾಡಿಸಿ ಆಟೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು.
ಆಟೋದಲ್ಲಿ ಬಾಲಕನನ್ನು ಕರೆದುಕೊಂಡು ಹೋದ ದುಷ್ಕರ್ಮಿಗಳು, ಕೆಲ ಹೊತ್ತಿನ ನಂತರ, ಶಿಕ್ಷಕ ಗುರುನಾಥ್ ಅವರ ಮೊಬೈಲ್ ಗೆ ಕರೆ ಮಾಡಿ, ಹತ್ತು ಲಕ್ಷ ಹಣವನ್ನು ನೀಡಬೇಕು. ಪೊಲೀಸರಿಗೆ ಮಾಹಿತಿ ನೀಡಿದರೆ, ನಿಮ್ಮ ಮಗ ಜೀವಂತ ಉಳಿಯಲ್ಲಾ ಅಂತ ಬೆದರಿಕೆ ಹಾಕಿದ್ದರು. ಈ ಬಗ್ಗೆ ಗುರುನಾಥ್ ಅವರು ಕಲಬುರಗಿ ನಗರದಲ್ಲಿರುವ ವಿಶ್ವವಿದ್ಯಾಲಯ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಈ ವಿಚಾರ ತಿಳಿಯುತ್ತಿದ್ದಂತೆ ಆರೋಪಿಗಳು ಬಾಲಕನನ್ನು ಪಾಳಾ ಗ್ರಾಮದ ಹೊರವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು. ಇತ್ತ ಬಾಲಕ ಓಡೋಡಿ ಬರ್ತಾಯಿರೋದನ್ನು ನೋಡಿದ್ದ ಕೃಷಿಕನೋರ್ವ, ಶಾಲಾ ಸಮವಸ್ತ್ರದಲ್ಲಿದ್ದ ಬಾಲಕನನ್ನು ನೋಡಿ, ಶಿಕ್ಷಕ ಗುರುನಾಥ್ ಗೆ ಕರೆ ಮಾಡಿ, ತಮ್ಮ ಮಗ ಇರೋ ಬಗ್ಗೆ ಹೇಳಿದ್ದ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು, ಬಾಲಕನನ್ನು ರಕ್ಷಿಸಿ, ಹೆತ್ತವರಿಗೆ ಒಪ್ಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 am, Fri, 6 January 23