Textile Park: ಕಲಬುರಗಿಯಲ್ಲಿ ಜವಳಿ ಪಾರ್ಕ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿಯಿಂದ ಟ್ವೀಟ್

|

Updated on: Mar 28, 2023 | 7:47 PM

ಕಲಬುರಗಿ ನಗರದಲ್ಲಿ ನಿರ್ಮಾಣ ಮಾಡಲಾದ ಜವಳಿ ಪಾರ್ಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉದ್ಘಾಟನೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಪಾರ್ಕ್ ರಾಜ್ಯದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.

Textile Park: ಕಲಬುರಗಿಯಲ್ಲಿ ಜವಳಿ ಪಾರ್ಕ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ, ಪ್ರಧಾನಿ ಮೋದಿಯಿಂದ ಟ್ವೀಟ್
ಕಲಬುರಗಿಯಲ್ಲಿ ಜವಳಿ ಪಾರ್ಕ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ
Follow us on

ಕಲಬುರಗಿ: ಕಲಬುರಗಿ ನಗರದಲ್ಲಿ ನಿರ್ಮಾಣ ಮಾಡಲಾದ ಜವಳಿ ಪಾರ್ಕ್ (Kalaburagi Textile Park) ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಉದ್ಘಾಟನೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), “ಪಿಎಂ ಮಿತ್ರ ಮೆಗಾ ಜವಳಿ ಪಾರ್ಕ್ ಸ್ಥಾಪನೆಗಾಗಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಅಭಿನಂದನೆಗಳು. ಈ ಪಾರ್ಕ್ ಕರ್ನಾಟಕದ ಶ್ರೀಮಂತ ಜವಳಿ ಪರಂಪರೆಯನ್ನು ಸಂಭ್ರಮಾಚರಿಸುತ್ತದೆ ಮತ್ತು ರಾಜ್ಯದ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ” ಎಂದರು. ಮತ್ತೊಂದು ಟ್ವೀಟ್ ಮೂಲಕ, “ಕರ್ನಾಟಕಕ್ಕೆ ಮತ್ತು ವಿಶೇಷವಾಗಿ ಕಲಬುರಗಿಗೆ ನಿಜಕ್ಕೂ ವಿಶೇಷ ದಿನ. ಈ ಜವಳಿ ಪಾರ್ಕ್ ಮೂಲಕ ಜಗತ್ತು ಭಾರತದ ಜವಳಿ ವೈವಿಧ್ಯತೆ ಮತ್ತು ನಮ್ಮ ಜನರ ಸೃಜನಶೀಲತೆಯ ದರ್ಶನ ಪಡೆಯುತ್ತದೆ” ಎಂದು ಹೇಳಿ PragatiKaPMMitra ಎಂದು ಹ್ಯಾಶ್ ಟ್ಯಾಗ್ ಮಾಡಿದ್ದಾರೆ.

ಪಿಎಂ ಮಿತ್ರ ಜವಳಿ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಬಸವಣ್ಣನ ನಾಡಿನಲ್ಲಿ ಸದಾ ನೆನಪಾಗೋದು ಕಾಯಕವೈ ಕೈಲಾಸ ಅಂತ ಹೇಳಿದ್ದರು. ಅದೇ ರೀತಿ ನಾವು ಪಿಎಂ ಮಿತ್ರ ಪಾರ್ಕ್ ಮೂಲಕ ಕಾಯಕ ನೀಡುವ ಕೆಲಸ ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದ ಜನರು ವಲಸೆ ಹೋಗುತ್ತಾರೆ. ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಡೆಯುವುದು ಒಂದು ಸವಾಲಾಗಿದೆ. ಛಿದ್ರವಾಗುವ ಬದುಕಿಗೆ ಭದ್ರತೆ ನೀಡುವ ಕೆಲಸ ಮಾಡುತ್ತಿದ್ದೇವೆ. ಕೈಗಾರಿಕೆಗಳು ಹೆಚ್ಚಿನ ಉದ್ಯೋಗ ನೀಡುವ ಅವಶ್ಯಕತೆ ಇದೆ. ಆರ್ಥಿಕ ಬೆಳವಣಿಗೆ ಜೊತೆಗೆ ಕೆಲಸ ಕೊಡುವ ಕಾರ್ಯವಾಗಬೇಕು. ಟೆಕ್ಸ್​ಟೈಲ್ ಪಾರ್ಕ್​ನಿಂದ‌ ಲಕ್ಷಾಂತರ ಜನರ ಬದುಕು ಬದಲಾಗುತ್ತದೆ ಎಂದರು.

ಇದನ್ನೂ ಓದಿ: ಯಡಿಯೂರಪ್ಪ ಮನೆಗೆ ಕಲ್ಲು ತೂರಾಟ ಕಾಂಗ್ರೆಸ್ ಪ್ರಚೋದನೆ; ಸಿಎಂ ಬಸವರಾಜ ಬೊಮ್ಮಾಯಿ

ಜಗತ್ತಿನ ಅನೇಕ ಆರ್ಥಿಕತೆಗಳು ಉದ್ಯೋಗ ಸೃಷ್ಟಿ ಮಾಡಲಿಕ್ಕಾಗದೇ ಮುಳಗುತ್ತಿವೆ. ರಾಜ್ಯದಲ್ಲಿ ಮೊದಲ ಬಾರಿಗೆ ಉದ್ಯೋಗ ನೀತಿ ಜಾರಿಗೊಳಿಸಿದ್ದೇವೆ ಎಂದು ಹೇಳಿದ ಬೊಮ್ಮಾಯಿ, ಆರ್ಥಿಕ ಬೆಳವಣಿಗೆ ಜೊತೆಗೆ ಜನರಿಗೆ ಕೆಲಸ ಕೊಡುವ ಕಾರ್ಯವಾಗಬೇಕು. ಟೆಕ್ಸಟೈಲ್ ಪಾರ್ಕ್​ನಿಂದ‌ ಲಕ್ಷಾಂತರ ಜನರ ಬದಕು ಬದಲಾಗುತ್ತದೆ. ಈ ಪಾರ್ಕ್​ನಲ್ಲಿ ಕೆಲಸ ಪಡೆದವರು ಮೋದಿ ಅವರಿಗೆ ಧನ್ಯವಾದ ಹೇಳಬೇಕು ಎಂದರು. ಅಲ್ಲದೆ, 371 ಜೆ ಆದಮೇಲೆ ಕಲ್ಯಾಣ ಕರ್ನಾಟಕ ಬಾಗಕ್ಕೆ ಬಂದಿರುವ ದೊಡ್ಡ ಯೋಜನೆ ಪಿಎಂ ಮಿತ್ರ ಪಾರ್ಕ್ ಆಗಿದೆ. ಈ ಭಾಗದ ಆರ್ಥಿಕ ಪ್ರಗತಿಗೆ ಇದು ದೊಡ್ಡ ಶಕ್ತಿ ತುಂಬುತ್ತದೆ ಎಂದರು.

ರಾಯಚೂರು, ವಿಜಯಪುರ ಜಿಲ್ಲೆಯಲ್ಲಿ ಟೆಕ್ಸ್​​ಟೈಲ್ ಪಾರ್ಕ್

ರಾಯಚೂರು, ವಿಜಯಪುರ ಜಿಲ್ಲೆಯಲ್ಲಿ ಟೆಕ್ಸ್​​ಟೈಲ್ ಪಾರ್ಕ್ ಆರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಅಲ್ಲದೆ, ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಟೆಕ್ಸ್​​​ಟೈಲ್ ಪಾರ್ಕ್ ಆರಂಭಿಸಲಾಗುವುದು. ಹಿಂದಿನ ಸರ್ಕಾರದ ಧೋರಣೆಯಿಂದ ಅನೇಕ ಕಡೆ ಜವಳಿ ಮಿಲ್ ಬಂದಾಗಿವೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ: Narendra Modi: ಕಠಿಣ ಹೋರಾಟಕ್ಕೆ ಸಿದ್ಧರಾಗಿ: ಸಂಸದೀಯ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಮೋದಿ ಕರೆ

ಲಂಬಾಣಿ ಸಮುದಾಯದವರಿಗೆ ಸುಳ್ಳು ಸಂದೇಶ ರವಾನಿಸಿದ್ದಾರೆ

ಎಸ್​ಟಿ ಪಟ್ಟಿಯಿಂದ ತೆಗೆಯುತ್ತಾರೆಂದು ಲಂಬಾಣಿ ಸಮುದಾಯದವರಿಗೆ ಸುಳ್ಳು ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ ಬೊಮ್ಮಾಯಿ, ತಪ್ಪಾಗಿ ಅರ್ಥೈಸಿಕೊಂಡು ಸಮುದಾಯದ ಜನರಿಂದ ಹೋರಾಟ ನಡೆಯುತ್ತಿದೆ ಎಂದರು. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಕಲ್ಲು ಹೊಡೆದಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಳ್ಳು ಹೇಳುವುದನ್ನು ಬಿಡಬೇಕು. ಅಲ್ಲಿ ಸಿಕ್ಕಿರುವವರು ಕಾಂಗ್ರೆಸ್ ನಾಯಕರು. ಕಾಂಗ್ರೆಸ್ಸಿಗರು ರಾತ್ರಿ ಸಭೆ ಮಾಡಿ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದರು.

ಚುನಾವಣೆಗಾಗಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಅನ್ನೋ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚು, ಅವರು ಮಾಡದಿದ್ದನ್ನು ನಾವು ಮಾಡಿದ್ದೇವೆ ಎಂದರು. ವಲಸಿಗರು ಕಾಂಗ್ರೆಸ್​​ಗೆ ಬರುತ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿ, ಚಲುವರಾಯಸ್ವಾಮಿ ವಲಸೆ ವ್ಯಕ್ತಿ, ಆತನ ಮಾತು ನಂಬಲು ಆಗುತ್ತಾ ಎಂದು ಪ್ರಶ್ನಿಸಿದರು. ಹಳೇ ಮೈಸೂರು ಬಾಗದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಇಲ್ಲ, ಯಾರ ಜೊತೆಯೂ ಹೊಂದಾಣಿಕೆಯಿಲ್ಲ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Tue, 28 March 23