ಆರೇ ವರ್ಷಕ್ಕೇ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್‌! ಸ್ತಬ್ಧವಾಯ್ತು ಕಲಬುರಗಿ ವಿಮಾನ ನಿಲ್ದಾಣ

Kalaburagi Bengaluru Flight: ಕಲಬುರಗಿಯಲ್ಲಿ ಆರ್‌ಎಸ್‌ಎಸ್‌-ಭೀಮ್‌ ಆರ್ಮಿ ಪಥ ಸಂಚಲನದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರ ಮಧ್ಯೆ ಕಲಬುರಗಿ-ಬೆಂಗಳೂರು ಮಧ್ಯೆ ಹಾರಾಡುತ್ತಿದ್ದ ಏಕೈಕ ವಿಮಾನ ಹಾರಾಟ ಏಕಾಏಕಿ ಸ್ಥಗಿತಗೊಂಡಿದೆ. ಪ್ರಯಾಣಿಕರ ಕೊರತೆ ಎಂದು ಹೇಳಲಾಗುತ್ತಿದ್ದರೂ ಅಸಲಿ ಕಾರಣ ಬೇರೆಯದ್ದೇ ಇದೆ ಎಂದೂ ಹೇಳಲಾಗುತ್ತಿದೆ.

ಆರೇ ವರ್ಷಕ್ಕೇ ಕಲಬುರಗಿ ಬೆಂಗಳೂರು ವಿಮಾನ ಸಂಚಾರ ಬಂದ್‌! ಸ್ತಬ್ಧವಾಯ್ತು ಕಲಬುರಗಿ ವಿಮಾನ ನಿಲ್ದಾಣ
ಕಲಬುರಗಿ ವಿಮಾನ ನಿಲ್ದಾಣ
Edited By:

Updated on: Nov 03, 2025 | 7:25 AM

ಕಲಬುರಗಿ, ನವೆಂಬರ್ 3: ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಎಂದು ಕರೆಯಸಿಕೊಳ್ಳುವ ಜಿಲ್ಲೆ ಕಲಬುರಗಿ (Kalaburagi). ಇದೀಗ ಕಲಬುರಗಿಯ ವಿಮಾನ ನಿಲ್ದಾಣಕ್ಕೆ (Kalaburagi Airport) ಸೂತಕದ ಛಾಯೆ ಆವರಿಸಿದೆ. ಆರಂಭವಾಗಿ ಆರೇ ವರ್ಷಕ್ಕೆ ವಿಮಾನ ಹಾರಾಟವಿಲ್ಲದೆ ವಿಮಾನ ನಿಲ್ದಾಣವೇ ಬಂದ್ ಆಗಿದೆ. ಹೀಗಾಗಿ ಆ ಭಾಗದ ಜನರ ದಶಕದ ಕನಸು ಆರೇ ವರ್ಷಕ್ಕೆ ಮಣ್ಣುಪಾಲಾದಂತಾಗಿದೆ. ಕಲಬುರಗಿಯಿಂದ ಬೆಂಗಳೂರು ಸಂಪರ್ಕಿಸುತ್ತಿದ್ದ ಏಕೈಕ ವಿಮಾನ ಹಾರಾಟವನ್ನು ಸ್ಟಾರ್ ಏರ್‌ ಸಂಸ್ಥೆ ನಿಲ್ಲಿಸಿದೆ. ಅಕ್ಟೋಬರ್‌ 15ರಿಂದ ಸೇವೆ ಸ್ಥಗಿತಗೊಳಿಸಿದೆ. ಈಗ ಒಂದೇ ಒಂದು ವಿಮಾನವೂ ಸಹ ಕಲಬುರಗಿ ವಿಮಾನ ನಿಲ್ದಾಣದಿಂದ ಹಾರಾಡುತ್ತಿಲ್ಲ. ಆರಂಭವಾದ ಆರೇ ವರ್ಷಕ್ಕೆ ವಿಮಾನ ನಿಲ್ದಾಣಕ್ಕೆ ಗ್ರಹಣ ಬಡಿದಿದೆ. ಆದರೆ, ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮಾತ್ರ ಇಂಡಿಗೋ ವಿಮಾನ ಹಾರಾಟ ನಡೆಸುತ್ತೆ ಎನ್ನುತ್ತಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣ: 2019ರಲ್ಲಿ ಶುರುವಾಗಿದ್ದ ವಿಮಾನ ಸಂಚಾರ

2008ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದ್ದರು. 2019ರಲ್ಲಿ ಇಲ್ಲಿಂದ ಬೆಂಗಳೂರಿಗೆ ಮೊದಲ ವಿಮಾನ ಹಾರಾಟ ನಡೆಸಿತ್ತು. ನಿತ್ಯ 2 ಫ್ಲೈಟ್ ಸೇರಿ ತಿರುಪತಿಗೂ ಸಹ ಇಲ್ಲಿಂದಲೇ ಸ್ಟಾರ್ ಏರ್ ಸಂಸ್ಥೆ ವಿಮಾನಯಾನ ಸೇವೆ ಆರಂಭಿಸಿತ್ತು. ಪ್ರಯಾಣಿಕರಿಂದ ಒಳ್ಳೆಯ ಪ್ರತಿಕ್ತಿಯೆ ಕೂಡ ಸಿಕ್ಕಿತ್ತು. ಹೀಗಾಗಿ ಕಲಬುರಗಿಯಿಂದ ಬೆಂಗಳೂರಿಗೆ 50 ಸೀಟ್ ಬದಲು 80 ಸೀಟ್ ಸಾಮರ್ಥ್ಯದ ವಿಮಾನ ಸೇವೆ ಆರಂಭಿಸಲಾಗಿತ್ತು. ಆದರೆ ಇದೀಗ ಪ್ರಯಾಣಿಕರ ಸಂಖ್ಯೆ ಕಡಿಮೆ ಎಂಬ ನೆಪ ಹೇಳಿ ಕೆಲ ತಿಂಗಳ ಹಿಂದೆ ತಿರುಪತಿ ಫ್ಲೈಟ್ ರದ್ದು ಪಡಿಸಲಾಗಿದೆ. ಇದೀಗ ಬೆಂಗಳೂರಿಗೆ ಸಂಚರಿಸುವ ಸ್ಟಾರ್ ಏರ್ ಫ್ಲೈಟ್ ಅನ್ನೂ ಏಕಾಏಕಿ ಬಂದ್ ಮಾಡಲಾಗಿದೆ. ಇದರಿಂದ ಈ ಭಾಗದ ಉದ್ಯಮ, ಶಿಕ್ಷಣ ಹಾಗೂ ಕೈಗಾರಿಕೆಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಇಲ್ಲಿನ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಕಲಬುರಗಿ ಬೆಂಗಳೂರು ಸ್ಟಾರ್ ಏರ್ ಫ್ಲೈಟ್ ಸಂಚಾರ ರದ್ದಾದ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸ್ಟಾರ್ ಏರ್ ಸಂಸ್ಥೆ ವಿಮಾನ ಸೇವೆ ಬಂದ್ ಮಾಡಿದೆ. ಹೀಗಾಗಿ ಇಂಡಿಗೋ ಏರ್​ಲೈನ್ಸ್​​​ನವರು ಸೇವೆ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿಗೆ ಕಲಬುರಗಿಯಿಂದ ದೆಹಲಿಗೆ ಪಾದಯಾತ್ರೆಯಲ್ಲೇ ಆಗಮಿಸಿದ ಕಟ್ಟಾ ಅಭಿಮಾನಿಗಳು!

ಮತ್ತೊಂದೆಡೆ, ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಇರುವುದರಿಂದ ಹೀಗಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಅದರಲ್ಲೂ ಖರ್ಗೆ ತವರು ಜಿಲ್ಲೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯದ ಮಧ್ಯೆ ಅಸಹಕಾರ ಶುರುವಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಇಂಡಿಗೋ ವಿಮಾನ ಸಂಚಾರ ಆಂಭವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರಿಂದ, ಮುಂದೇನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ