ಆ ಜಿಲ್ಲೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟಿರೋ ಜಾಗವನ್ನ ಕೂಡಾ ಭೂಗಳ್ಳರು ಬಿಡ್ತಿಲ್ಲ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ (Kalburgi Urban Development Authority) ಲೇಔಟ್ ನಲ್ಲಿನ ಗಾರ್ಡನ್ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ವಿಪರ್ಯಾಸವೆಂದ್ರೆ ಜಿಡಿಎ ಅಧಿಕಾರಿಯೇ ಗಾರ್ಡನ್ ಜಾಗ ಕಬಳಿಸಿರೋ ಗಂಭೀರ ಆರೋಪ ಕೇಳಿ ಬಂದಿದೆ. ಹೌದು. ಉದ್ಯಾನವನಕ್ಕೆ ಮೀಸಲಿಟ್ಟಿರುವ ಸ್ಥಳವದು, ಗಾರ್ಡನ್ ಜಾಗದಲ್ಲೇ ಅಕ್ರಮವಾಗಿ ತಲೆ ಎತ್ತಿರೋ ಮನೆಗಳು ಹೀಗೆ… ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ಯಾನವನ ಜಾಗಕ್ಕೆ ನಿರಂತರವಾಗಿ ಕನ್ನ ಬೀಳ್ತಿದೆ. ಕಲಬುರಗಿ ನಗರದ ವರ್ಧಾ ಲೇಔಟ್ ನಲ್ಲಿ ಮೀಸಲಿಟ್ಟಿರುವ ಉದ್ಯಾನವನ ಜಾಗ ಕಬಳಿಸಲಾಗಿದೆ. ಗಾರ್ಡನ್ ಜಾಗದಲ್ಲೇ ಅಕ್ರಮವಾಗಿ ಮನೆಗಳನ್ನ ನಿರ್ಮಿಸಲಾಗಿದೆ. ಉದ್ಯಾನವನ ಜಾಗದಲ್ಲಿ ನಾಲ್ಕು ಮನೆಗಳನ್ನ ಅಕ್ರಮವಾಗಿ ನಿರ್ಮಿಸಿ ಜನ ವಾಸ ಮಾಡ್ತಿದ್ದಾರೆ!
ಅಂದಹಾಗೆ 1990 ರಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ) ದಿಂದ ಲೇಔಟ್ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಅದರಂತೆಯೇ ಕೂಡಾ ಲೇಔಟ್ ನಕಾಶೆ ಸಿದ್ದಪಡಿಸಿ, ಉದ್ಯಾನವನಕ್ಕೆ ಸ್ಥಳ ಮೀಸಲಿಟ್ಟಿತ್ತು. ಆದ್ರೆ ಗಾರ್ಡನ್ ಸ್ಥಳದಲ್ಲಿಯೇ ನಾಲ್ಕು ಮನೆಗಳು ತಲೆ ಎತ್ತಿವೆ. ವಿಪರ್ಯಾಸವೆಂದ್ರೆ ಕೂಡಾ ಪ್ರಾಧಿಕಾರದ ಎಇಇ ದೀಲಿಪ್ ಜಾಧವ್ ಮೇಲೆ ಗಾರ್ಡನ್ ಜಾಗ ಕಬಳಿಸಿರೋ ಆರೋಪ ಕೇಳಿ ಬಂದಿದೆ. ಆದ್ರೆ ಎಇಇ ಜಾಧವ್ ಮಾತ್ರ ನನಗೂ ಗಾರ್ಡನ್ ಜಾಗದಲ್ಲಿರುವ ಮನೆಗೂ ಸಂಬಂಧವೇ ಇಲ್ಲ, ಆ ಮನೆಯಲ್ಲಿ ನಾನು ಬಾಡಿಗೆಗೆ ಇದ್ದೇನೆ. ದುರುದ್ದೇಶದಿಂದ ನನ್ನ ಮೇಲೆ ಸುಳ್ಳು ದೂರು ನೀಡಲಾಗಿದೆ ಅಂತಾ ಆರೋಪ ತಳ್ಳಿ ಹಾಕಿದ್ದಾರೆ.
ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಕಂದಾಯ ಇಲಾಖೆಯ ನೌಕರರ ಗೃಹ ನಿರ್ಮಾಣ ಸಂಘದಿಂದ ಲೇಔಟ್ ನಿರ್ಮಾಣ ಮಾಡಲಾಗಿದೆ. ನಂದಿಕೂರ್ ಗ್ರಾಮ ಪಂಚಾಯತಿ ಯಿಂದ ಲೇಔಟ್ ನಿರ್ಮಾಣ ಮಾಡಿ ಸೈಟ್ ಗಳನ್ನ ಮಾರಾಟ ಮಾಡಲಾಗಿದೆ. ಬಳಿಕ ೧೯೯೦ ರಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕೂಡಾ) ಲೇಔಟ್ ಗಾಗಿ ಅರ್ಜಿ ಸಲ್ಲಿಸಲಾಗಿದೆ.
ಕೂಡಾ ಪ್ರಕಾರ ಲೇಔಟ್ ನಕಾಶೆ ನಿರ್ಮಾಣ ಮಾಡಲಾಗಿದೆ. ಕೂಡಾ ದಿಂದ ಲೇಔಟ್ ಅಪ್ರೂವಲ್ ಸಿಗೋದಕ್ಕೂ ಮುನ್ನವೇ ಮತ್ತೊಮ್ಮೆ ನಂದಿಕೂರ್ ಗ್ರಾಮ ಪಂಚಾಯತಿ ಯಿಂದ ಮತ್ತೊಮ್ಮೆ ಲೇಔಟ್ ನಕಾಶೆ ಸೃಷ್ಟಿಸಲಾಗಿದೆ. ಸಧ್ಯ ಗಾರ್ಡನ್ ಗೆ ಮೀಸಲಿಟ್ಟಿರುವ ಜಾಗದಲ್ಲಿ ಅಕ್ರಮವಾಗಿ ನಾಲ್ಕು ಮನೆಗಳು ತಲೆ ಎತ್ತಿವೆ. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನ ಕೇಳಿದ್ರೆ, ಕೂಡಾದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಅದನ್ನ ಸರಿಮಾಡುವ ಕೆಲಸ ಮಾಡೋದಾಗಿ ಹೇಳಿದ್ದಾರೆ.
Published On - 7:10 pm, Tue, 20 February 24