ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಿದ ಬಿಜೆಪಿಯ ಮುಂದಿನ ಟಾರ್ಗೆಟ್ ಪ್ರಿಯಾಂಕ್ ಖರ್ಗೆ

| Updated By: Rakesh Nayak Manchi

Updated on: Nov 13, 2022 | 2:41 PM

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಿರುವ ಬಿಜೆಪಿ ನಾಯಕರು ಮುಂದಿನ ಟಾರ್ಗೆ ಟ್ ಕಾಂಗ್ರೆಸ್​ನ ಮತ್ತೋರ್ವ ನಾಯಕ ಪ್ರಿಯಾಂಕ್ ಖರ್ಗೆ. ಇವರಿಗೂ ಸೋಲಿನ ರುಚಿ ತೋರಿಸಲು ಬಿಜೆಪಿ ನಾನಾರೀತಿಯ ಕಸರತ್ತು ಆರಂಭಿಸಿದೆ.

ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಿದ ಬಿಜೆಪಿಯ ಮುಂದಿನ ಟಾರ್ಗೆಟ್ ಪ್ರಿಯಾಂಕ್ ಖರ್ಗೆ
ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಿದ ಬಿಜೆಪಿಯ ಮುಂದಿನ ಟಾರ್ಗೆಟ್ ಪ್ರಿಯಾಂಕ್ ಖರ್ಗೆ
Follow us on

ಕಲಬುರಗಿ: ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಮಾತಿನ ಚಕಾಮಕಿ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆಯಲು ಆರಂಭವಾಗಿದೆ. ಚಿತ್ತಾಪುರ ಕ್ಷೇತ್ರದಲ್ಲಿ ನಾಯಕರ ನಡುವೆ ಮಾತಿನ ಬಾಣಗಳು ಜೋರಾಗಿ ಆರಂಭವಾಗಿವೆ. ಒಬ್ಬರು, ನಮ್ಮ ತಂಟೆಗೆ ಬಂದರೆ ನೀವು ಓಡಾಡಲು ಬಿಡಲ್ಲಾ ಅಂದರೆ, ಇನ್ನೊಬ್ಬರು ನಾನು ಶೂಟ್ ಮಾಡಲು ಸಿದ್ಧ ಅಂತ ಹೇಳಿಕೆ ನೀಡಲಾಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಘರ್ಷಣೆಗೆ ನಾಂದಿ ಹಾಡಿದೆ. ಇಂತಹದೊಂದು ಕಿತ್ತಾಟಕ್ಕೆ ಕಾರಣ ಚಿತ್ತಾಪುರ ಕ್ಷೇತ್ರದಲ್ಲಿ ಸ್ಪರ್ಧಿಸುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಶಾಸಕ ಪ್ರಿಯಾಂಕ್ ಖರ್ಗೆಯನ್ನು ಈ ಬಾರಿ ಸೋಲಿಸಲಬೇಕು ಎಂಬುದು ಬಿಜೆಪಿ ನಾಯಕರ ಟಾರ್ಗೇಟ್ ಆಗಿದೆ. ಅದಕ್ಕಾಗಿ ಅನೇಕ ರೀತಿಯ ಕಸರತ್ತನ್ನು ಕೂಡಾ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ರಾಜ್ಯ ಬಿಜೆಪಿ ಸರ್ಕಾರದ ಅವದಿಯಲ್ಲಿ ನಡೆದಿರುವ ಬಿಟ್ ಕಾಯಿನ್, ಪಿಎಸ್ಐ ನೇಮಕಾತಿ ಹಗರಣ ಸೇರಿದಂತೆ ಅನೇಕ ಹಗರಣಗಳನ್ನು ಹೊರತಗೆದು ಸರ್ಕಾರಕ್ಕೆ ಬಿಗ್ ಶಾಕ್ ನೀಡಿದ್ದು ಇದೇ ನಾಯಕ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಸೋಲಿನ ರುಚಿ ತೋರಿಸಿರುವ ಬಿಜೆಪಿ ನಾಯಕರು, ಈ ಬಾರಿ ಅವರ ಪುತ್ರ ಪ್ರಿಯಾಂಕ್ ಖರ್ಗೆಗೆ ಸೋಲಿನ ರುಚಿ ತೋರಿಸಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು, ಕಾರ್ಯಕರ್ತರ ನಡುವೆ ಘರ್ಷಣೆಗಳು, ಮಾತಿನ ಚಕಮಕಿಗಳು ಆರಂಭವಾಗಿವೆ. ಕೆಲ ದಿನಗಳ ಹಿಂದಷ್ಟೇ ಪ್ರಿಯಾಂಕ್ ಖರ್ಗೆ ನಾಪತ್ತೆಯಾಗಿದ್ದಾರೆ ಅಂತ ಬಿಜೆಪಿ ನಾಯಕರು ಪೋಸ್ಟರ್ ಅಂಟಿಸಿದ್ದರು. ಇದಕ್ಕೆ ಕೈ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು.

ಇನ್ನು ಎರಡು ದಿನದ ಹಿಂದೆ ಜಿಲ್ಲೆಯ ವಾಡಿ ಪಟ್ಟಣದಲ್ಲಿ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ, ನನ್ನ ತಂಟೆಗೆ ಬಂದರೆ ಸುಮ್ಮನಿರಲ್ಲ. ನಾನು ಕೊಡುತ್ತಿರುವುದು ಬೆದರಿಕೆ ಅಂತಾದರೂ ತಿಳಿದುಕೊಳ್ಳಿ, ನಾವು ಮನಸು ಮಾಡಿದರೆ, ಒಬ್ಬ ಬಿಜೆಪಿ ನಾಯಕನೂ ಜಿಲ್ಲೆಯಲ್ಲಿ ಓಡಾಡಲು ಆಗಲ್ಲಾ ಅಂತ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೇ ನೀಡಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ನೀವು ಸಾಯಿಸುವದಾದರೆ ನಾನು ಸಾಯಲು ಸಿದ್ಧ, ಜೊತೆಗೆ ನಿಮಗೂ ಶೂಟ್ ಮಾಡಲು ಸಿದ್ಧ ಅಂತ ಪ್ರಿಯಾಂಕ್ ಖರ್ಗೆಗೆ ಎದುರೇಟು ನೀಡಿದ್ದರು.

ನಿಮ್ಮನ್ನು ಶೂಟ್ ಮಾಡಲು ಕೂಡಾ ಸಿದ್ಧ ಅಂತ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹೇಳಿಕೆಗೆ ಕೈ ನಾಯಕರು ಮತ್ತು ಕಾರ್ಯಕರ್ತರು ಕೆಂಡೆಮಂಡಲರಾಗಿದ್ದಾರೆ. ಮಣಿಕಂಠ ರಾಠೋಡ್ ಮೇಲೆ ಕ್ರಮ ಕೈಗೊಳ್ಳಬೇಕು, ಜೊತೆಗೆ ಅವರನ್ನು ಬಂಧಿಸಬೇಕು ಅಂತ ಆಗ್ರಹಿಸಿ ಶನಿವಾರ ಕಲಬುರಗಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಸ್​ಪಿ ಕಚೇರಿಗೆ ಮುತ್ತಿಗೆ ಹಾಕಿ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕ್ರಮ ಕೈಗೊಳ್ಳದೇ ಇದ್ದರೆ ನವಂಬರ್ 14 ರಂದು ಕಲಬುರಗಿ ಜಿಲ್ಲೆಗೆ ಮುಖ್ಯಮಂತ್ರಿಯವರು ಆಗಮಿಸಿದಾಗ ಅವರಿಗೆ ಮುತ್ತಿಗೆ ಹಾಕವು ಎಚ್ಚರಿಕೆಯನ್ನು ನೀಡಿದರು.

ಇನ್ನು ಇದೇ ವಿಷಯದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡರು, ಸರ್ಕಾರವೇ ಪ್ರಿಯಾಂಕ್ ಖರ್ಗೆಯನ್ನು ಕೊಲ್ಲಲು ಸಂಚು ಹಾಕಿದೆ. ಈ ಹಿಂದೆ ಅವರಿಗೆ ನೀಡಿದ ಭದ್ರತೆಯನ್ನು ಕೂಡಾ ಸರ್ಕಾರ ಹಿಂಪಡೆದಿದೆ. ಇದೀಗ ತಮ್ಮ ಮುಖಂಡರ ಮೂಲಕ ಕೊಲೆ ಬೆದರಿಕೆ ಹಾಕುತ್ತಿದೆ ಅಂತ ಬಿಜೆಪಿ ಮತ್ತು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ತಾಪುರದಲ್ಲಿ ಕೈ ಮತ್ತು ಕಮಲದ ನಾಯಕರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ, ಘರ್ಷಣೆಗಳು ಆರಂಭವಾಗಿವೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಾತಿನ ಘರ್ಷಣೆಗಳು ಜೋರಾಗಿಯೇ ನಡೆಯುತ್ತಿದೆ. ಆದರೆ ನಾಯಕರು ತಮ್ಮ ನಾಲಿಗೆಯ ಮೇಲೆ ಹಿಡಿತವಿಟ್ಟುಕೊಂಡರೆ ಅನೇಕ ಅನಾಹುತಗಳನ್ನು ತಪ್ಪಿಸಬಹುದು, ಇಲ್ಲದಿದ್ದರೆ ನಾಯಕರ ಮಾತು ಅನೇಕ ಅನಾಹುತಗಳಿಗೆ ಕಾರಣವಾದರೂ ಅಚ್ಚರಿಯಿಲ್ಲ.

ವರದಿ: ಸಂಜಯ್, ಟಿವಿ9 ಕಲಬುರಗಿ

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Sun, 13 November 22